ಮಾನವ ಶರೀರ ಒಂದು ಸಣ್ಣ ಜೀವಕೋಶದ ಪ್ರತಿಬಿಂಬ. ಈ ಜೀವಕೋಶ ತಾಯಿಯ ಗರ್ಭದಲ್ಲಿ ಸೃಷ್ಟಿಯಾಗುತ್ತದೆ ಮತ್ತು ಅನೇಕ ಅಂಗಾಂಗಗಳನ್ನು ಸೃಷ್ಟಿಸಿಕೊಳ್ಳುತ್ತ ಶಿಶುವಿನ ರೂಪ ಪಡೆಯುತ್ತದೆ. ವಯಸ್ಸಾಗುವ ಪ್ರಕ್ರಿಯೆ ಈ ಜೀವಕೋಶದ ಅನೇಕ ಹಂತಗಳಲ್ಲಿ ನಡೆಯುತ್ತದೆ. ಅತ್ಯಂತ ಪ್ರಾಥಮಿಕ ಲಕ್ಷಣ ಎಂದರೆ ದೇಹದ ತೂಕ ಹೆಚ್ಚಾಗುವುದು. ಬೊಜ್ಜು, ಖಿನ್ನತೆ, ಹೃದಯದ ತೊಂದರೆ ಇವೆಲ್ಲ ವಯಸ್ಸಾಗುವಿಕೆಯ ಲಕ್ಷಣಗಳೇ.
ಶಿಶು ಜನಿಸಿದ ಕ್ಷಣವೇ ದೇಹದಲ್ಲಿ ವಯಸ್ಸಾಗುವಿಕೆಯ ಪ್ರಕ್ರಿಯೆಯೂ ಶುರವಾಗಿರುತ್ತದೆ. ನಾವು ತೆಗೆದುಕೊಳ್ಳುವ ಉಸಿರಿನಿಂದಲೇ ಇದು ಶುರುವಾಗುತ್ತದೆ. ಪ್ರತಿ ಉಸಿರೂ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಕ್ರಿಯೆಯಲ್ಲಿ ಸಮಾನ ಮತ್ತು ವಿರುದ್ಧವಾದ ಪ್ರತಿಕ್ರಿಯೆಗಳೂ ನಡೆಯುವುದರಿಂದ ವಿಷಕಾರಿ ಅಂಶಗಳೂ (ಟಾಕ್ಸಿನ್ಗಳು) ಹುಟ್ಟಿಕೊಳ್ಳುತ್ತವೆ. ಇದನ್ನೇ ನಾವು ಆಯುರ್ವೇದದಲ್ಲಿ 'ಆಮಾ' ಎನ್ನುವುದು. ಚರ್ಮ ಸಂಕೋಚನ ಗುಣ ಕಳೆದುಕೊಳ್ಳುವುದು, ಸುಕ್ಕುಗಟ್ಟುವುದು, ಪಂಚೇಂದ್ರಿಯಗಳು ತಮ್ಮ ಸಂವೇದನಾಶೀಲತೆ ಕಳೆದುಕೊಳ್ಳುವುದು ಇತ್ಯಾದಿಗಳು ಸಂಭವಿಸುವುದು ಇದೇ ಉಸಿರಾಟದ ಪ್ರಕ್ರಿಯೆಯ ಪರಿಣಾಮವಾಗಿಯೇ.
ನಿಮ್ಮ ಆರೋಗ್ಯ ಎಷ್ಟು ಚೆನ್ನಾಗಿದೆ ಎಂಬುದನ್ನು ನೀವೇ ಅರಿತುಕೊಳ್ಳಬಹುದು. ಅದಕ್ಕಿರುವ ಸುಲಭ ದಾರಿ ಎಂದರೆ ಪ್ರತಿ ನಿಮಿಷದಲ್ಲಿ ನೀವು ಎಷ್ಟು ಸಲ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುತ್ತೀರಿ ಎಂದು ಕಂಡುಕೊಳ್ಳುವುದು. ವೇದಕಾಲದ ಋಷಿ-ಮುನಿಗಳ ಪ್ರಕಾರ, ಪ್ರತಿ ನಿಮಿಷಕ್ಕೆ ತೆಗೆದುಕೊಳ್ಳುವ ಉಸಿರಿನ ಪ್ರಮಾಣ 10ಕ್ಕಿಂತ ಕಡಿಮೆ ಇದೆ ಎಂದಾದರೆ ನೀವು ಸಂಪೂರ್ಣ ಆರೋಗ್ಯವಂತರು. 15ಕ್ಕಿಂತ ಕಡಿಮೆ ಆದರೆ ದುಃಖ, ಅನಾರೋಗ್ಯಗಳಿವೆ ಹಾಗೂ ವಯಸ್ಸಾಗುವ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ ಎಂದರ್ಥ. ಜೀವಕೋಶಗಳು ಭಾರಿ ಪ್ರಮಾಣದ ಆಮ್ಲಜನಕಕ್ಕೆ ಅಥವಾ ದಿಢೀರ್ ಬಿಸಿಗೆ ತೆರೆದುಕೊಂಡಾಗ ಒಂದಷ್ಟು ಬಿರುಸಿನ ಚಟುವಟಿಕೆಗಳು ದೇಹದ ಒಳಗೇ ನಡೆಯುತ್ತವೆ. ತಕ್ಷಣದಲ್ಲಿ ನಮಗೆ ಏನೂ ಅನ್ನಿಸುವುದಿಲ್ಲ, ವಾಸ್ತವದಲ್ಲಿ ನಮಗೇ ಗೊತ್ತಿಲ್ಲದಂತೆ ನಮ್ಮ ಆಯಸ್ಸು ಕಡಿಮೆಯಾಗುತ್ತಿರುತ್ತದೆ.
ವಯಸ್ಸಾಗುವ ಪ್ರಕ್ರಿಯೆಯ ವೇಗಕ್ಕೆ ಕಡಿವಾಣ ಹಾಕಲು ಪ್ರಾಣಾಯಾಮ ಅತ್ಯುತ್ತಮ ಮಾರ್ಗ. ಆದರೆ ಅದನ್ನು ಗುರುಮುಖೇನ ಕಲಿತುಕೊಳ್ಳಬೇಕು. ಗುರು-ಶಿಷ್ಯರ ನೇರ ಸಂಪರ್ಕದಲ್ಲಿ ಇದನ್ನು ಕಲಿತುಕೊಳ್ಳಬೇಕೇ ವಿನಾ ಸಾಮೂಹಿಕವಾಗಿ ಕಲಿತು ಪ್ರಯೋಗಿಸುವುದು ಅಷ್ಟು ಪ್ರಯೋಜನಕಾರಿ ಆಗಲಾರದು.
- ಯೋಗಿ ಅಶ್ವಿನಿ