ವ್ಯಾಸ ಪೂರ್ಣಿಮಾ

ವ್ಯಾಸ ಪೂರ್ಣಿಮಾ
Updated on: 

ಸನಾತನ ಗುರು ಪರಂಪರೆಯನ್ನು ಸ್ಮರಿಸಿ ವಂದಿಸುವ ದಿನ ಆಷಾಢ ಹುಣ್ಣಿಮೆ, ಗುರು ಪೂರ್ಣಿಮೆ. ಇದನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ.
ಗುರುಪೂರ್ಣಿಮೆಯಂದು ಗುರುವಿಗೆ ವಿಶೇಷ ನಮನ ಸಲ್ಲಿಸುವುದರೊಂದಿಗೆ ಸಾಧಿಸಬೇಕಾಗಿರುವ ಗುರಿಯತ್ತ ಪುನಶ್ಚೇತನಗೊಳ್ಳುವುದು ಮುಖ್ಯ. ಆದ್ದರಿಂದಲೇ ಚಾತುರ್ಮಾಸದ ವ್ರತವನ್ನು ಈ ದಿವಸದಂದು ಪ್ರಾರಂಭಿಸುತ್ತಾರೆ.
ಭಾರತದ ಪ್ರಾಚೀನ ಗುರುಶಿಷ್ಯ ಪರಂಪರೆ ಜಗತ್ತನ್ನು ಸುಶೋಭಿತಗೊಳಿಸಿತ್ತು. ಭೌತಿಕ ವಿಜ್ಞಾನಿಗಳ ನಿಷ್ಕರ್ಷೆಗೆ ಸಿಗದಂಥ ಅದ್ಭುತ ಜ್ಞಾನ, ವಿಜ್ಞಾನದ ಕಿರಣಗಳನ್ನು ಕಂಡುಕೊಂಡು ವಿಶ್ವಧರ್ಮ, ವಿಶ್ವ ಬಂಧುತ್ವಗಳನ್ನು ಇವರ ಏಕತ್ವದ ಅನುಭೂತಿಯ ಆಧಾರದ ಮೇಲೆ ಘೋಷಿಸಿದ್ದರು.
ಶಿಷ್ಯನಾದವನು ಗುರುವಿನಲ್ಲಿ ಇಡುವ ವಿಶ್ವಾಸ, ಪ್ರೀತಿ, ಗೌರವ, ಶ್ರದ್ಧೆ, ಸಮರ್ಪಣಾಭಾವ, ನಿಸ್ವಾರ್ಥ ಸೇವಾ ಪ್ರವೃತ್ತಿ, ನಿಷ್ಕಲ್ಮಶ ಭಾವಗಳಿಗನುಗುಣವಾಗಿ ಗುರು ಕರುಣೆಯಿಂದ ತನ್ನ ಅಧ್ಯಾತ್ಮ ಶಕ್ತಿಯನ್ನು ಶಿಷ್ಯರಿಗೆ ಧಾರೆ ಎರೆಯುತ್ತಾನೆ.
ಬ್ರಹ್ಮನಿಂದ ಉಗಮಿಸಿ ಮನುಷ್ಯನ ಸಂಪರ್ಕವಿಲ್ಲದ್ದರಿಂದ ವೇದಗಳನ್ನು ಅಪೌರುಷೇಯ ಎಂದು ಕರೆಯುತ್ತೇವೆ. ಬ್ರಹ್ಮನು ವಾಚಿಸಿದೆಲ್ಲ ವಿಪರೀತ ರಾಶಿಯಾಯಿತು. ಸಾಮಾನ್ಯರಿಗೆ ಅದನ್ನು ಕಲಿಯುವುದಕ್ಕಾಗಲಿ, ಆಚರಿಸುವುದಕ್ಕಾಗಲೀ ಅಸಾಧ್ಯವಾಯಿತು. ದಕ್ಕಿದಷ್ಟನ್ನು ಗ್ರಹಿಸಿ ಮಂತ್ರದೃಷ್ಟರೆನಿಸಿಕೊಂಡರು. ಎಲ್ಲಾ ವೇದ ರಾಶಿಗಳನ್ನು ಜೀರ್ಣಿಸಿಕೊಂಡ ಒಬ್ಬನೇ ಋಷಿ ಯಾರೂ ಇಲ್ಲವಾದರು.
ಇಷ್ಟು ಅಗಾಧವಾದ ವೇದ ಸಾರವನ್ನು ವರ್ಗೀಕರಿಸಿ ಸಂಕೀರ್ಣವಾಗಿ ಹೆಣೆದು, ಸಾಮಾನ್ಯರಿಗೂ ಅದರ ಜ್ಞಾನ ತಲುಪಿಸುವ ಸಲುವಾಗಿ ಮಹಾವಿಷ್ಣು ವ್ಯಾಸಮಹರ್ಷಿಗಳ ರೂಪದಲ್ಲಿ ಭುವಿಯಲ್ಲಿ ಅವತರಿಸಿದನು. ಅಂತೆಯೇ ವ್ಯಾಸರು ಈ ಜ್ಞಾನನಿಧಿಯನ್ನು ನಾಲ್ಕು ವೇದಗಳಾಗಿ ವಿಂಗಡಿಸಿದರು. ಅದೇ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ. ಪ್ರತಿ ವೇದದಲ್ಲೂ ಮೂರು ಭಾಗಗಳನ್ನು ನಿರೂಪಿಸಿದರು. ಸಂಹಿತ, ಬ್ರಾಹ್ಮಣ ಮತ್ತು ಅರಣ್ಯಕ ಎಂದು ಕೊನೆಯದಾದ ಅರಣ್ಯಕದಲ್ಲಿ ಉಪನಿಷತ್ತುಗಳು ಸೇರಿವೆ.
ಉಪನಿಷತ್ತುಗಳು ವೇದದಲ್ಲಿನ ಸಾರವನ್ನು ತಿಳಿಸುತ್ತವೆ. ವೇದ 2 ಶೀರ್ಷಿಕೆಗಳನ್ನು ಹೊಂದಿದೆ. ಒಂದು ಜ್ಞಾನಕಾಂಡ ಮತ್ತೊಂದು ಕರ್ಮಕಾಂಡ. ಈ ಜ್ಞಾನಕಾಂಡಕ್ಕೆ ಸೇರಿದ ವೇದಗಳ ಅಂತಿಮ ಸಾರಾಂಶವನ್ನು ನಮಗೆ ನೀಡುತ್ತಿರುವುದರಿಂದ ಉಪನಿಷತ್ತುಗಳನ್ನು 'ವೇದಾಂತ' ಎಂದು ಕರೆಯುತ್ತಾರೆ. ಇಷ್ಟು ಕ್ರಮಬದ್ಧ ಕೆಲಸವನ್ನು ಮಾಡಿದ ಭಗವಾನ್ ವ್ಯಾಸರು ದೂರಾಲೋಚನೆಯುಳ್ಳವರಾಗಿ ಒಂದೊಂದು ವೇದಕ್ಕೂ ಒಬ್ಬೊಬ್ಬ ಅಧಿದೇವತೆ, ಋಷಿಯನ್ನು ನೇಮಿಸಿ, ತಮ್ಮ ತಮ್ಮ ವೇದಗಳ ಸಂರಕ್ಷಣೆ ಮಾಡುವಂತೆ ಆದೇಶಿಸಿದರು.
ಹಾಗಾಗಿ ಋಗ್ವೇದಕ್ಕೆ ಪೈಲ ಋಷಿ, ಯಜುರ್ವೇದಕ್ಕೆ ವೈಶಂಪಾಯನ, ಸಾಮವೇದಕ್ಕೆ ಜೈಮಿನಿ ಋಷಿಗಳನ್ನು ಮತ್ತು ಅಥರ್ವ ವೇದಕ್ಕೆ ಸುಮಂತು ಋಷಿಗಳನ್ನು ಸಂಸ್ಥಾಪಿಸಿದರು. ಇದರಿಂದ ವ್ಯಾಸರನ್ನು ವೇದವ್ಯಾಸರು ಎಂದು ಕರೆಯುತ್ತಾರೆ. ನಮ್ಮ ಪ್ರಾಚೀನ ಗುರು-ಶಿಷ್ಯ ಅಧ್ಯಾತ್ಮ ವಾಹಿನಿಯನ್ನು ಸ್ಮರಿಸಿ, ಕೃತಜ್ಞತಾಪೂರ್ವಕವಾಗಿ ಗುರುವನ್ನು ನಮಿಸುತ್ತ ದೇವ ಸಂಸ್ಕೃತಿಯನ್ನು ಪರುತ್ಥಾನಗೊಳಿಸುವ, ದೇವ ಮಾನವರಾಗುವ ಕ್ರಿಯೆಗೆ ಇಂದೇ ನಾಂದಿ ಹಾಡುವಂತಾಗಲಿ. ಈ ಬಾರಿ ಜು. 22 ಸೋಮವಾರದಂದು ವ್ಯಾಸಪೂರ್ಣಿಮೆ ಬಂದಿದೆ.

- ಗುರುರಾಜ ಪೋಶೆಟ್ಟಿಹಳ್ಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com