

ಪ್ರತಿವರ್ಷ ಚಾತುರ್ಮಾಸ್ಯ ವ್ರತ ಆರಂಭವಾಗುವುದು ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ ದಿನ. ಅಂದು ವೇದವ್ಯಾಸ ಮುನಿಗಳನ್ನು ಆರಾಧಿಸಿ ಪೀಠಾಧಿಪತಿ, ಯತಿಗಳು, ಸಾಧು-ಸನ್ಯಾಸಿಗಳು, ಬ್ರಹ್ಮಚಾರಿಗಳು ಈ ವ್ರತವನ್ನು ಪ್ರಾರಂಭಿಸುತ್ತಾರೆ.
ಚಾತುರ್ಮಾಸ್ಯ, ನಾಲ್ಕು ತಿಂಗಳ ವ್ರತ. ಆದರೆ ಪಕ್ಷೋ ವೈ ಮಾಸ ಎಂಬ ಶ್ರುತಿವಾಕ್ಯಕ್ಕೆ ಅನುಗುಣವಾಗಿ ಒಂದು ಪಕ್ಷವನ್ನೇ ಒಂದು ತಿಂಗಳೆಂದು ಭಾವಿಸಿದಾಗ ಇದು ನಾಲ್ಕು ಪಕ್ಷಗಳೆಂಬ ಅರ್ಥವನ್ನು ಕೊಡುತ್ತದೆ.
ಹಿನ್ನೆಲೆ ಏನು?
ಸಾಧು, ಸನ್ಯಾಸಿಗಳು ಒಂದೇ ಸ್ಥಳದಲ್ಲಿ ಅಂದರೆ ಒಂದೇ ಊರಿನಲ್ಲಿ ಮೂರು ದಿನಕ್ಕಿಂತ ಹೆಚ್ಚು ವಾಸವಾಗಿರಬಾರದು ಎಂಬ ನಿಯಮವಿದೆ. ಕಾರಣ ಹೆಚ್ಚು ದಿನ ಅಲ್ಲಿ ವಾಸವಾಗಿದ್ದರೆ ಅಲ್ಲಿನ ಜನರ ಮೇಲೆ ಮೋಹ ಬೆಳೆದು ಅದೇ ಜಾಗದಲ್ಲಿ ಇರುವ ಆಸೆ ಬರುವುದು ಎಂದು. ಆದ್ದರಿಂದ ಸನ್ಯಾಸಿಗಳು ಯಾವಾಗಲೂ ಸಂಚಾರದಲ್ಲಿರಬೇಕು. ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸಬೇಕು.
ಚಾತುರ್ಮಾಸ್ಯದಲ್ಲಿ ಅಹಿಂಸಾ ತತ್ವದ ನೆರಳೂ ಪ್ರಧಾನ. ಮಳೆಗಾಲದಲ್ಲಿ ಭೂಮಿ ಕೆಸರಾಗಿ ಕ್ರಿಮಿ ಕೀಟ, ಹುಳ, ಹುಪ್ಪಟೆ, ಹಾವು ಹುಟ್ಟಿಕೊಳ್ಳುತ್ತವೆ. ಆ ಸಮಯದಲ್ಲಿ ಸನ್ಯಾಸಿಗಳು ಸಂಚರಿಸಿದರೆ ಅವುಗಳಿಗೆ ಹಿಂಸೆ ಮಾಡಿದ ಹಾಗೆ ಆಗುವುದು ಹಾಗೂ ಆ ಸಮಯದಲ್ಲಿ ಮಳೆ ಗಾಳಿ ಹೆಚ್ಚು ಇರುವುದರಿಂದ ಸಂಚರಿಸುವುದು ಕಷ್ಟ ಎನ್ನುವ ಕಾರಣಕ್ಕೆ ಒಂದೇ ಸ್ಥಳದಲ್ಲಿ ವಾಸ್ತವ್ಯ ಹೂಡುವುದು ಕೂಡ ಚಾತುರ್ಮಾಸ್ಯದ ಉದ್ದೇಶ. ಆಗ ಸಾಧುಗಳು ಮಠ, ಆಶ್ರಮ, ಮಂದಿರಗಳಲ್ಲಿ ಇದ್ದು, ಅಧ್ಯಾತ್ಮ ಸಾಧನೆ ಮಾಡಿ ಸ್ವಾತ್ಮಧ್ಯಾನ, ಪಾರಾಯಣ ಮಾಡಿ ಬಂದ ಭಕ್ತರಿಗೆ ಪ್ರವಚನ ನೀಡಬೇಕು.
ವರಾಹ ಪುರಾಣ
ಚಾತುರ್ಮಾಸ್ಯ ರಹಸ್ಯವು ವರಾಹ ಪುರಾಣದಲ್ಲಿ ಉಲ್ಲೇಖವಾಗಿದೆ. ಮಹಾವಿಷ್ಣುವಿಗೆ ಒಮ್ಮೆ ಭೂದೇವಿ ಪ್ರಶ್ನಿಸುತ್ತಾಳೆ. ಕಲಿಯುಗದಲ್ಲಿ ಜನರಿಗೆ ಕಷ್ಟ ಹೆಚ್ಚಿರುವುದರಿಂದ ಅದನ್ನು ಎದುರಿಸುವ ಬಗೆ ಹೇಗೆ ಹಾಗೂ ಪುಣ್ಯ ಸಂಪಾದನೆಗೆ ಕರ್ಮಗಳನ್ನು ಕಳೆದುಕೊಳ್ಳುವುದು ಹೇಗೆ ಎಂದು ಕೇಳುತ್ತಾಳೆ.
ಆಗ ಮಹಾವಿಷ್ಣು ಚಾತುರ್ಮಾಸ್ಯ ಸಮಯದಲ್ಲಿ ದಾನ, ಜಪ, ಧ್ಯಾನ ಹಾಗೂ ನಾನಾ ವಿಧದ ಹೋಮ ಮಾಡುವುದರಿಂದ ಅಧಿಕ ಪ್ರಯೋಜನ ಹೊಂದಬಹುದು ಎಂದು ಹೇಳಿರುವನು.
ಇನ್ನೊಂದು ಕಾರಣ
ಮಹಾವಿಷ್ಣು ಆಷಾಢ ಶುದ್ಧ ಏಕಾದಶಿಯಿಂದ ಕಾರ್ತಿಕ ಶುದ್ಧ ಉತ್ಥಾನ ದ್ವಾದಶಿಯವರಿಗೆ ಅಂತರ್ಮುಖಿಯಾಗಿ ದಿವ್ಯ ನಿದ್ರೆಯಲ್ಲಿ ಮಗ್ನನಾಗಿರುತ್ತಾನೆ. ಆ ಸಮಯದಲ್ಲಿ ಯತಿಗಳು ಅಂತರ್ಮುಖಿಯಾಗಿ ತಮ್ಮ ಸಾಧನೆಯಲ್ಲಿ ಹೆಚ್ಚು ಸಮಯ ಕಳೆಯಬೇಕು.
ಆದ್ದರಿಂದ ಸಾತ್ವಿಕ ಶಕ್ತಿಯ ಸಂಚಾರ ಎಲ್ಲೆಡೆ ಆಗಲು ಸಾಧ್ಯ. ಅಂತಃಕರಣ ಶುದ್ಧಿಗಾಗಿ ಸುಖ, ಭೋಗಗಳನ್ನು ತ್ಯಜಿಸಿ ವೈರಾಗ್ಯದ ಮೂಲಕ ಭಗವದ್ಭಕ್ತಿ ಹೊಂದಿ ಜ್ಞಾನ ಗಳಿಸುವುದು ಹಾಗೂ ಸತ್ಕರ್ಮವನ್ನು ಮಾಡುವುದೇ ಚಾತುರ್ಮಾಸ್ಯದ ಗುರಿಯಾಗಿದೆ.
ಆಹಾರ ಕ್ರಮ
ಹಿಂದೂ ಪಂಚಾಂಗದ ಪ್ರಕಾರ 6 ಋತು. ಈ ಋತುಗಳ ಸಮಯದಲ್ಲಿ ಮೈಕೈ ನೋವು ಕಾಲುಗಳು ಚರ್ಮಗಳು ಒಡೆಯುವುದು, ಗಂಟಲು ನೋವು, ಶೀತ, ಜ್ವರ ಬರುವ ಸಾಧ್ಯತೆಗಳು ಹೆಚ್ಚು. ಈ ಕಾರಣಕ್ಕಾಗಿ ಯತಿಗಳು 1ನೇ ತಿಂಗಳು ಬೇಳೆಯನ್ನು ಸೇವಿಸಬಾರದು, 2ನೇ ತಿಂಗಳು ಮೊಸರು, 3ನೇ ತಿಂಗಳು ಹಾಲು, 4ನೇ ತಿಂಗಳು ಕಾಳುಗಳು ತರಕಾರಿಗಳನ್ನು ಸೇವಿಸಬಾರದು ಎಂಬ ನಿಯಮ ಇದೆ.
ಈ ಚಾತುರ್ಮಾಸ್ಯ ವ್ರತ ಸಾವಿರಾರು ವರ್ಷಗಳಿಂದಲೂ ಆಚರಣೆಯಲ್ಲಿದೆ. ಈಗಲೂ ಸಾಧು ಸಂತರು ಲೋಕ ಕಲ್ಯಾಣಕ್ಕಾಗಿ ಆತ್ಮೋನ್ನತಿಗಾಗಿ ಈ ವ್ರತ ಆಚರಿಸುವರು. ಈ ವ್ರತ ಆಚರಿಸಲು ದಕ್ಷಿಣ ಭಾರತದ ಯತಿಗಳು ಹಿಮಾಲಯಕ್ಕೆ ಹೋಗುವುದು.
ನಿಯಮಗಳು
ಚಾತುರ್ಮಾಸ್ಯದ ಸಮಯದಲ್ಲಿ ಯತಿ, ಸಾಧು ಸಂತರು ಕೇಶಮುಂಡನೆ ಮಾಡಿಕೊಳ್ಳಬಾರದು.
ದಿನಕ್ಕೆ ಒಂದು ಹೊತ್ತು ಮಾತ್ರ ಊಟ ಮಾಡಬೇಕು. ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಬಾರದು. ಪ್ರತಿದಿನ ಗೀತೆ, ಉಪನಿಷತ್, ಸ್ಮೃತಿ ಪುರಾಣಗಳನ್ನು ಅಧ್ಯಯನ ಮಾಡಬೇಕು. ಆಹಾರದಲ್ಲಿ ಕಟ್ಟುಪಾಡು ಇರಬೇಕು. ನದಿ, ಸರೋವರ, ಸಮುದ್ರಗಳಲ್ಲಿ ಸ್ನಾನ ಮಾಡಬೇಕು.
- ಮಂಡಗದ್ದೆ ಪ್ರಕಾಶ ಬಾಬು