

ಪ್ರಪಂಚದಲ್ಲಿ ದೊರಕುವ ಸುಖವು ದುಃಖ ಮಿಶ್ರಿತ ಹಾಗೂ ಕ್ಷಣಿಕವಿರುತ್ತದೆ. ಆ ಸುಖಗಳಿಂದ ತೃಪ್ತಿ ಸಮಾಧಾನ ಲಭಿಸುವುದಿಲ್ಲ. ನಾವು ಎಲ್ಲ ಆಸೆ ಆಕಾಂಕ್ಷೆಗಳನ್ನು ಪೂರೈಸಿ ಸುಖಿಯಾಗಲು ಪ್ರಯತ್ನಿಸುವುದು ಬೆಂಕಿಯಲ್ಲಿ ತುಪ್ಪವನ್ನು ಸುರಿದು ಅದನ್ನು ನಂದಿಸಲು ಹೊರಟಂತೆ. ಆದರೆ ಪರಮಾರ್ಥದಲ್ಲಿ ಸಿಗುವ ತೃಪ್ತಿಯು ಸಮಾಧಾನ ತಂದು ಕೊಡುತ್ತದೆ. ಅದಕ್ಕೋಸ್ಕರ ನಾವು ಸಾಧನೆ ಮಾಡಬೇಕಾಗುತ್ತದೆ.
ಪರಮಾರ್ಥದಿಂದ ಆನಂದ ಪಡೆಯುವುದೆಂದರೆ ಮೋಕ್ಷ ಪಡೆಯುವುದು. ಮೋಕ್ಷವನ್ನು ಪಡೆಯುವಲ್ಲಿ ಅನೇಕ ಮಾರ್ಗಗಳಿರುತ್ತವೆ. ನಾವು ಯಾವುದೇ ಒಂದು ಮಾರ್ಗದ ಅಭಿಮಾನ ಹಿಡಿದರೆ, ಬೇರೆ ಮಾರ್ಗ ಅನುಸರಿಸುವವರ ಮೇಲೆ ತಿರಸ್ಕಾರ ಹಾಗೂ ಅಗೌರವ ಉಂಟಾಗುತ್ತದೆ. ಇದರಿಂದ ಮನಸ್ತಾಪಗಳು ಉಂಟಾಗುತ್ತವೆ. ಎಲ್ಲ ಮಾರ್ಗಗಳೂ ಒಂದಕ್ಕೊಂದು ಪೂರಕವೇ.
ಅತ್ಯಂತಿಕ ಸುಖರೂಪಿ ಮೋಕ್ಷವನ್ನು ಪಡೆಯುವುದಕ್ಕೆ ಮೂರು ಮೆಟ್ಟಿಲುಗಳು- ಶ್ರವಣ, ಮನನ ಹಾಗೂ ನಿದಿಧ್ಯಾಸನ. ಶ್ರವಣವೆಂದರೆ ಅನುಭವಿ ಜ್ಞಾನಿಗಳಿಂದ ವೇದಾಂತ ಶ್ರವಣ ಮಾಡುವುದು. ಶ್ರವಣದ ನಂತರ ಏಕಾಂತದಲ್ಲಿ ಕುಳಿತು ಶ್ರವಣದ ವಿಷಯವನ್ನು ತನ್ನದಾಗಿ ಮಾಡಿಕೊಡಬೇಕು. ಮನಸ್ಸಿಗೆ ಮನವರಿಕೆ ಮಾಡಿಕೊಳ್ಳಬೇಕು. ಇದುವೇ ಮನನ. ಮನನದಿಂದ 'ಸಚ್ಚಿದಾನಂದ ಆತ್ಮನೇ ನನ್ನ ನಿಜ ಸ್ವರೂಪ'ವೆಂದು ಅನುಭವ ಪೂರ್ವಕವಾಗಿಯೇ ತಿಳಿಯುವುದಾದರೂ, ಸಾಧಕನು ತನ್ನ ಮೊದಲಿನ ಜೀವನಿಶ್ಚಯದ ಪ್ರಾಬಲ್ಯದಿಂದ ಅದನ್ನು ಮರೆಯಬಾರದು. ಆದುದರಿಂದ ನಿಶ್ಚಯವನ್ನು ದೃಢಗೊಳಿಸುವುದು ಅವಶ್ಯವಿರುತ್ತದೆ. ಆತ್ಮಧ್ಯಾನ ಮಾಡುತ್ತಿರಬೇಕು. ಇದುವೇ ನಿದಿಧ್ಯಾಸನ ಆನಂದದಲ್ಲಿರುವ ಅಭ್ಯಾಸವನ್ನು ಮಾಡಬೇಕು.
ಶ್ರವಣ ಮಾಡಿ ಮನನ ಮಾಡದಿದ್ದರೆ ಕಮಲದ ಎಲೆಯ ಮೇಲೆ ಬಿದ್ದ ನೀರು ಸ್ವಲ್ಪವೇ ಗಾಳಿಯಿಂದ ಕೆಳಗೆ ಬೀಳುವಂತೆ ಶ್ರವಣದ ವಿಷಯ ಕೈ ಬಿಟ್ಟು ಹೋಗುತ್ತದೆ. ಶ್ರವಣ ಮನನ ಮಾಡಿ ನಿದಿಧ್ಯಾಸನ ಮಾಡದಿದ್ದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುತ್ತದೆ. ಶ್ರವಣ, ಮನನ ನಿದಿಧ್ಯಾಸನದಿಂದ ಆನಂದರೂಪಿ ಸಾಕ್ಷಾತ್ಕಾರವನ್ನು ಪಡೆಯುವುದೇ ಪರಮಾರ್ಥದ ಹಾಗೂ ಮಾನವನ ಗುರಿ. ಸಾಕ್ಷಾತ್ಕಾರವೆಂದರೆ ಯಾವಾಗಲೂ ಹಾಗೂ ಎಂತಹುದೇ ಪರಿಸ್ಥಿತಿಯಲ್ಲಿ ಆನಂದದಿಂದ ಇರುವುದಾಗಿದೆ. ಸುಲಭ ಆತ್ಮಜ್ಞಾನ ಗ್ರಂಥದಲ್ಲಿ ಜ್ಞಾನ, ಭಕ್ತಿ, ವೈರಾಗ್ಯ, ಅಹಂಕಾರನಾಶ, ಬ್ರಹ್ಮಜ್ಞಾನ, ಬ್ರಹ್ಮಪ್ರಾಪ್ತಿ, ಸಹಜ ಸಮಾಧಿ ಹಾಗೂ ಜೀವನ ಮುಕ್ತನು ನಿತ್ಯ ಜೀವನದಲ್ಲಿ ಹೇಗೆ ವರ್ತಿಸುತ್ತಾನೆ ಎಂಬುದರ ಬಗೆಗೆ ವಿಷದವಾಗಿ ವಿವರಿಸಿದೆ. ಈ ಗ್ರಂಥದಲ್ಲಿ ಬೋಧವನ್ನು ಮನನ ಮಾಡಿ ಅದನ್ನು ಚೆನ್ನಾಗಿ ಅರಗಿಸಿಕೊಂಡರೆ ಸಾಧಕರು ನಿಸ್ಸಂದೇಹವಾಗಿ ಕೃತಾರ್ಥರಾಗುವರು.
- ಶಾಮರಾವ್ ಬಿ.ಕಣ್ಣೂರ