ಪ್ಲಸ್ ಪಾಯಿಂಟ್

'ಆಗದು ಎಂದು ಕೈಲಾಗದು ಎಂದು, ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ' ಎಂಬ ಹಾಡಿನ ಸಾಲನ್ನು ನಾವೆಲ್ಲ ಕೇಳಿದ್ದೇವೆ.
ಪ್ಲಸ್ ಪಾಯಿಂಟ್
Updated on: 

'ಮನುಷ್ಯನ ನಿಜವಾದ ವ್ಯಕ್ತಿತ್ವ ಪ್ರಕಟವಾಗುವುದು ಆತ ಸುಖದಲ್ಲಿದ್ದಾಗ ಅಲ್ಲ, ಸಂಕಷ್ಟದಲ್ಲಿದ್ದಾಗಲೇ' ಎನ್ನುತ್ತಾರೆ ಜಾರ್ಜ್ ವಾಷಿಂಗ್ಟನ್. ಒಬ್ಬ ವ್ಯಕ್ತಿಗೆ ನಿಜವಾದ ಧನಾತ್ಮಕ ಆಲೋಚನೆಗಳ ಅಗತ್ಯವಿರುವುದು ಆತನಿಗೆ ಸಂಕಷ್ಟ ಎದುರಾದಾಗಲೇ. ಈ ವಿಚಾರಗಳನ್ನು ಮಾತನಾಡುವುದು ಸುಲಭ, ವಾಸ್ತವದಲ್ಲಿ ಈ ಧನಾತ್ಮಕ ಚಿಂತನೆ ಎನ್ನುವುದು ಸಾಧ್ಯವೇ ಎಂಬುದನ್ನು ತಿಳಿಯಬೇಕು.
ಸಾಧ್ಯ ಎಂದು ಮಾಡಿ ತೋರಿಸಿದ, ಸಾಧಕರು ಪ್ರಪಂಚದಲ್ಲಿ ಬಹಳ ಮಂದಿ ಇದ್ದಾರೆ. ಕ್ಯಾನ್ಸರ್‌ಗೆ ತುತ್ತಾಗಿ ಸಾವಿನ ದವಡೆಯಿಂದ ಹೊರಬಂದು ಮೈದಾನಕ್ಕಿಳಿದ, ಕ್ರಿಕೆಟ್ ಪಟು ಯುವರಾಜ್‌ಸಿಂಗ್‌ರ ಉದಾಹರಣೆ ನಮ್ಮೆದುರು ಇಲ್ಲವೇ? ದೈಹಿಕ ದೌರ್ಬಲ್ಯ, ಕಿತ್ತು ತಿನ್ನುವ ಬಡತನವನ್ನೂ ಮೀರಿ ನಿಂತು, ದೇಶಕ್ಕೆ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಕನ್ನಡಿಗ ಗಿರೀಶ್‌ರನ್ನು ಧನಾತ್ಮಕತೆಗೆ ಉದಾಹರಣೆಯಾಗಿ ನೆನೆಯದಿರಲು ಸಾಧ್ಯವೇ?
'ಆಗದು ಎಂದು ಕೈಲಾಗದು ಎಂದು, ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ' ಎಂಬ ಹಾಡಿನ ಸಾಲನ್ನು ನಾವೆಲ್ಲ ಕೇಳಿದ್ದೇವೆ. ಆದರೆ, ಕೈ ಕಟ್ಟಿ ಕೂರಲು ಕೈಗಳೇ ಇರದಿದ್ದರೆ? ಸಾಲದೆಂಬಂತೆ, ಕಾಲುಗಳೂ ಇರದಿದ್ದರೆ? ಅಂಥ ವ್ಯಕ್ತಿ ಏನು ಮಾಡಲು ಸಾಧ್ಯ? ಇನ್ನೊಬ್ಬರ ಆಶ್ರಯದಲ್ಲಿ ಬದುಕಬಹುದಷ್ಟೇ ಎಂದು ನಿರ್ಧರಿಸಬಹುದು.
ಆದರೆ, ಮನಸ್ಸೆಂಬುದಕ್ಕೆ ಯಾವ ಮಿತಿಯೂ ಇಲ್ಲ. ಮನಸ್ಸಿದ್ದರೆ ಅಸಾಧ್ಯವೆಂಬುದಿಲ್ಲ ಎಂದು ಮಾಡಿ ತೋರಿಸಿದಾತನೇ ನಿಕ್ ವ್ಯುಜಿಸಿಕ್. ಈತ ಸರ್ಬಿಯಾ ಮೂಲದ ಅಮೆರಿಕನ್. ಹುಟ್ಟುವಾಗಲೇ 'ಟೆಟ್ರಾ ಅಮೇಲಿಯಾ' ಎಂಬ ಕಾಯಿಲೆಯಿಂದ ಎರಡು ಕೈ, ಎರಡೂ ಕಾಲುಗಳಿಲ್ಲದೇ ಹುಟ್ಟಿದವನು.
ತನ್ನ ಈ ದುರವಸ್ಥೆಯಿಂದ ಎಂಟನೇ ವಯಸ್ಸಿನಲ್ಲೇ ಆತ್ಮಹತ್ಯೆಗೆ ಆಲೋಚಿಸಿದ ನಿಕ್‌ಗೆ ಅವನ ತಾಯಿ ಆತ್ಮಸ್ಥೈರ್ಯ ತುಂಬುತ್ತಾಳೆ. ಕಾಲಿನ ಜಾಗದಲ್ಲಿರುವ ಹೆಬ್ಬೆರಳಿನಂಥ ರಚನೆಗೆ ಪೆನ್ನು ಜೋಡಿಸಿ ಬರೆಯಲು ಕಲಿತ ನಿಕ್ ಕಾಲೇಜು ಓದಿ, ಎರಡೆರಡು ಪದವಿ ಪಡೆಯುತ್ತಾನೆ. ಈಜಲು ಕಲಿಯುತ್ತಾನೆ, ಗಾಲ್ಫ್ ಆಡುತ್ತಾನೆ, 'ಔ್ಝಜಿಜ ಢ್ಝಿಝ್ಟ್ಡಿಡಿ ಔ್ಝಟಛಿಡ' ಎಂಬ ಸಂಸ್ಥೆಯಾರಂಭಿಸಿ, ಅದರ ಮೂಲಕ, ದೈಹಿಕ ದೌರ್ಬಲ್ಯತೆ ಮೀರಿ ನಿಂತು ತನ್ನ ಉದ್ದೇಶವನ್ನು ಕುರಿತು ವಿಶ್ವದಾದ್ಯಂತ 24 ದೇಶಗಳಲ್ಲಿ 2 ಮಿಲಿಯನ್‌ಗೂ ಹೆಚ್ಚು ಜನರ ಕಿವಿಗಳಿಗೆ ಸ್ಫೂರ್ತಿದಾಯಕ  ಭಾಷಣಗಳನ್ನು ತಲುಪಿಸುತ್ತಾನೆ.
ಈತನ ವಿಡಿಯೋಗಳನ್ನು ಅಂತರ್ಜಾಲದಲ್ಲಿ ನೋಡಿ ಕೋಟ್ಯಂತರ ಮಂದಿ ಸ್ಫೂರ್ತಿ ಪಡೆಯುತ್ತಿದ್ದಾರೆ. 'ಮನಸ್ಸಿದ್ದರೆ ಮಾರ್ಗ'ಕ್ಕೆ ಅತ್ಯುತ್ತಮ ಉದಾಹರಣೆಯಾಗುವ ನಿಕ್ ಧನಾತ್ಮಕತೆಗೆ ಜೀವಂತ ನಿದರ್ಶನ.
ಧನಾತ್ಮಕತೆಗೆ ಅಭೂತಪೂರ್ವ ಉದಾಹರಣೆಯಾಗುವ ಇನ್ನೊಬ್ಬ ವ್ಯಕ್ತಿ ಈಗ ಜೀವಂತ ಇಲ್ಲ. ಸಾವು ಎಂಬುದು ಅನಿವಾರ್ಯ ಮನುಷ್ಯರೆಲ್ಲರ ಪಯಣ ಸಾವಿನೆಡೆಗೆ. ಸಾವೆಂದರೆ ಅಂತ್ಯವೆಂದು ನಾವು ಭಾವಿಸುತ್ತೇವೆ. ಆದರೆ ಸಾವು ಸಮೀಪಿಸಿದಾಗ, ಅದನ್ನು ಎವೆಯಿಕ್ಕಿ ನೋಡಿ ಬದುಕಿಗೆ ಸಕಾರಾತ್ಮಕತೆ ಸಂದೇಶ ನೀಡಿದಾತನೇ ರ್ಯಾಂಡಿಪಾಶ್. ರ್ಯಾಂಡಿ ನಲವತ್ತರ ಹರೆಯದಲ್ಲೇ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ಗೆ ತುತ್ತಾಗುತ್ತಾನೆ. ಅವನ ಆಯುಸ್ಸು ಕೆಲವೇ ತಿಂಗಳೂ ಎಂದು ವೈದ್ಯರು ಹೇಳುತ್ತಾರೆ. ಸಾವಿನ ಬಗ್ಗೆ ಪ್ರಬಂಧ ಬರೆಯಬಹುದು. ಉಪನ್ಯಾಸ ನೀಡಬಹುದು. ಆದರೆ, ಅದು ಇಂಥ ದಿನ ಬರಲಿದೆ ಎಂದು ಗೊತ್ತಾದಾಗ ಅದನ್ನು ಎದುರಿಸುವುದು ಕಷ್ಟ.
ಆದರೆ, ರ್ಯಾಂಡಿಪಾಶ್ ತನ್ನ ಉಳಿದ ದಿನಗಳಲ್ಲಿ ಮಾಡಿದ ಸಾಧನೆ, ತೋರಿದ ಧೈರ್ಯ ಅಭೂತಪೂರ್ವವಾದುದು. ಆತ ತನ್ನ ಕೊನೆಯ ದಿನಗಳಲ್ಲಿ 'ನಿಮ್ಮ ಬಾಲ್ಯದ ಕನಸುಗಳನ್ನು ನನಸಾಗಿಸುವುದು ಹೇಗೆ?' ಎಂಬುದರ ಕುರಿತು, ವಿವಿಗಳಲ್ಲಿ 'ಅಂತಿಮ ಉಪನ್ಯಾಸ' ನೀಡುತ್ತಾನೆ ಇದು ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯವಾಗುತ್ತದೆ. ಯುಟ್ಯೂಬ್‌ನಲ್ಲಿ ಅತಿ ಹೆಚ್ಚು ನೋಡಲ್ಪಟ್ಟ ವಿಡಿಯೋ ಎಂಬ ಖ್ಯಾತಿ ಪಡೆಯುತ್ತದೆ. ರ್ಯಾಂಡಿಪಾಶ್‌ನ 'ದಿ ಲಾಸ್ಟ್ ಲೆಕ್ಚರ್‌' ಧನಾತ್ಮಕತೆಯ ಕುರಿತಾದ ಅತ್ಯದ್ಭುತ ಪುಸ್ತಕ. ಅದನ್ನು ಕನ್ನಡಕ್ಕೆ ಪರಿಣಾಮಕಾರಿಯಾಗಿ ಅನುವಾದಿಸಿದ್ದಾರೆ, ಇನ್ಫೋಸಿಸ್‌ನ ಉಮೇಶ್. ಆ ಪುಸ್ತಕದಲ್ಲಿ ರ್ಯಾಂಡಿ ಒಂದು ಕಡೆ ಹೀಗೆನ್ನುತ್ತಾನೆ, 'ನನ್ನನ್ನು ಪರೀಕ್ಷೆ ಮಾಡಿದ ವೈದ್ಯರೂ ಧನಾತ್ಮಕವಾಗಿ ಚಿಂತಿಸುವವರೇ. ಏಕೆಂದರೆ, ಅವರು ನನಗೆ ನೀವಿನ್ನು ಮೂರು ತಿಂಗಳಲ್ಲಿ ಸಾಯುತ್ತೀರಿ ಎನ್ನಲಿಲ್ಲ, ಬದಲಿಗೆ ಮೂರು ತಿಂಗಳು ಆರೋಗ್ಯವಾಗಿ ಬದುಕಿರುತ್ತೀರಿ ಎಂದರು'. ಸಾವನ್ನು ಇದಕ್ಕಿಂತ ಧನಾತ್ಮಕವಾಗಿ ಆಲೋಚಿಸಲು ಸಾಧ್ಯವೇ?
ಹೀಗೆ ಬದುಕು ಹಾಗೂ ಸಾವು ಎರಡನ್ನೂ ಅತ್ಯಂತ ಸಕಾರಾತ್ಮಕವಾಗಿ ಸ್ವೀಕರಿಸಬಹುದು ಎನ್ನುವುದಕ್ಕೆ ಈ ಮಹನೀಯರು ಉದಾಹರಣೆಯಾಗಿ ನಿಲ್ಲುತ್ತಾರೆ. ಧನಾತ್ಮಕ ಚಿಂತನೆಯ ವಾಸ್ತವ ಸ್ವರೂಪವಾಗಿ ಕಾಣಿಸಿಕೊಳ್ಳುತ್ತಾರೆ.

-ಎಚ್.ಎಸ್. ನವೀನ್‌ಕುಮಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com