ದೇಹವೆಂದರೆ ರಾಮಾನುಜ!

Updated on: 

ಮುಸಲ್ಮಾನ ಅರಸನ ಬಳಿ ಹಿಂದೂ ದೇವರ ವಿಗ್ರಹ! ಅದನ್ನು ಬಿಟ್ಟಿರಲಾರೆ ಎಂದ ಅರಸು ಕುವರಿ, ಕನಸಿನಲ್ಲಿ ದೇವರು ತಿಳಿಸಿದಂತೆ ಒಬ್ಬ ಧರ್ಮಗುರು ವಿಗ್ರಹವನ್ನು ಪಡೆಯುವುದು; ಅದನ್ನೇ ಹಿಂಬಾಲಿಸಿಕೊಂಡು ಬಂದ ಮುಸಲ್ಮಾನ ರಾಜಪುತ್ರಿ ಅವರ ಸೇವೆಯಲ್ಲೇ ಕಣ್ಮರೆಯಾಗುವುದು. ಹಿಂದೂಗಳ ಯಾತ್ರಾ ಸ್ಥಳದಲ್ಲಿ ಮುಸಲ್ಮಾನ ಯುವತಿಯ ಮೂರ್ತಿ! ಎಂಥ ಸೂಜಿಗದ ಕಥೆ!
ಮೇಲುಕೋಟೆ, ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳ. ಅಲ್ಲಿ ಚೆಲುವನಾರಾಯಣ ಸ್ವಾಮಿಯನ್ನು ಪ್ರತಿಷ್ಠಾಪಿಸಿದವರು ಧರ್ಮಗುರು ರಾಮಾನುಜಾಚಾರ್ಯರು. ವಿಗ್ರಹವನ್ನು ರಾಮಾನುಜಾಚಾರ್ಯರು ದೆಹಲಿಯ ಸುಲ್ತಾನನಿಂದ ಪಡೆದರೆಂಬುದು ಪ್ರತೀತಿ. ಕನಸಿನಲ್ಲಿ ನಾರಾಯಣ ದೇವರು ಹೇಳಿದಂತೆ ತಮಗೆ ಬೇಕಾದ ರಾಮಪ್ರಿಯ ವಿಗ್ರಹವನ್ನು ರಾಮಾನುಜರು ಆರಿಸಿ ಸುಲ್ತಾನನಿಂದ ಪಡೆದರು. ಸುಲ್ತಾನನ ಮಗಳು ಬೀಬಿ ನಾಚ್ಚಿಯಾರ್ ಆ ವಿಗ್ರಹವನ್ನು ಪ್ರೀತಿಸುತ್ತಿದ್ದಳು. ಅದನ್ನು ಬಿಟ್ಟಿರಲಾರದೆ ಮೇಲುಕೋಟೆಗೆ ಬಂದಳು. ಅಲ್ಲಿಯೇ ದೇವನಲ್ಲಿ ಐಕ್ಯಳಾದಳು ಎಂದು ಹೇಳುತ್ತಾರೆ. ಬೀಬಿ ನಾಚ್ಚಿಯಾರ್ ಮೂರ್ತಿಯನ್ನು ಮೇಲುಕೋಟೆಯಲ್ಲಿ ಈಗಲೂ ಕಾಣಬಹುದು.
ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಲು ಆದಿಶೇಷ ಅವತಾರಿಗಳಾಗಿ ತ್ರೇತಾಯುಗದಲ್ಲಿ ಲಕ್ಷ್ಮಣನಾಗಿ, ದ್ವಾಪರದಲ್ಲಿ ಬಲರಾಮನಾಗಿ, ಕಲಿಯುಗದಲ್ಲಿ ತಮಿಳುನಾಡಿನ ಪೆರಂಬದೂರಿನಲ್ಲಿ ಆಸೂರಿ ಕೇಶವ ಪೆರುಮಾಳ್ ಮತ್ತು ಭೂದೇವಿ ದಂಪತಿಯರಲ್ಲಿ ರಾಮಾನುಜರು ಜನಿಸಿದರು. ಮಾಧವ ಪ್ರಕಾಶರೇ ರಾಮಾನುಜರ ಶಿಷ್ಯತ್ವವನ್ನು ಸ್ವೀಕರಿಸುವಂತಾದುದು ವೈಶಿಷ್ಟ್ಯ.
ಮೊದಲಿನಿಂದಲೂ ವೈಷ್ಣವ ಧರ್ಮದ ಪ್ರಭಾವ ಇವರ ಮೇಲಿತ್ತು. ಭಕ್ತಿಮಾರ್ಗ ಇವರನ್ನು ಆಳವಾಗಿ ಆಕರ್ಷಿಸಿತ್ತು. ಶ್ರೀರಂಗದಿಂದ ಮಧುರೈಗೆ ಬೇಸರವಿಲ್ಲದೆ 18 ಬಾರಿ ಹೋಗಿ ಗೋಷ್ಠಿಪೂರ್ಣರನ್ನು ಒಲಿಸಿಕೊಂಡರು. ಅವರಿಂದ ಕಲಿತ 'ಅಷ್ಟಾಕ್ಷರಿ ಮಂತ್ರ'ದ ರಹಸ್ಯಾರ್ಥವನ್ನು ಸಕಲ ಚೇತನರ ಉದ್ಧಾರ ಮಾಡುವ ಉದ್ದೇಶದಿಂದ ತಿರುಕೋಟ್ಟಿಮಾರಿನ ನರಸಿಂಹ ದೇವಾಲಯದ ಗೋಪುರದ ಮೇಲಿಂದ ಮಂತ್ರವನ್ನು ಘಂಟಾಘೋಷವಾಗಿ ಸಾರಿದರು.
30ನೇ ವಯಸ್ಸಿನಲ್ಲಿ ಮಾಧವ ಪ್ರಕಾಶರ ಗೋಷ್ಠಿಯಲ್ಲಿ, ಮಹಾ ಪೂರ್ಣರು ಪಂಚ ಸಂಸ್ಕಾರ ಮಾಡಿ ವಿಶಿಷ್ಟಾದ್ವೈತ ಸಿದ್ಧಾಂತದ ಪ್ರವರ್ತಕರಾಗಿ ದೀಕ್ಷೆಯನ್ನಿತ್ತರು. ಮೇಲುಕೋಟೆಗೆ ಬಂದು ಚೆಲುವನಾರಾಯಣನನ್ನು ಪ್ರತಿಷ್ಠಾಪಿಸಿ, ಉತ್ಸವ ಮೂರ್ತಿಯಾಗಿ 'ರಾಮಪ್ರಿಯ'ನನ್ನೂ ತಂದು ವೈರಮುಡಿ ಉತ್ಸವವನ್ನು ಪ್ರತಿವರ್ಷವೂ ನೆರವೇರಿಸಿದರು. ದ್ವಾರ ಸಮುದ್ರದ ಹೊಯ್ಸಳ ರಾಜನಾದ ವಿಠಲ ದೇವರಾಯ (ಬಿಟ್ಟಿದೇವನ) ಮಗಳ ಭೂತ ಚೇಷ್ಟೆ ನಿವಾರಿಸಿ, ಅವನಿಗೆ ವಿಷ್ಣುವರ್ಧನ ಎಂಬ ಶ್ರೀವೈಷ್ಣವ ದೀಕ್ಷೆಯನ್ನಿತ್ತು ಅವನಿಂದ ಬೇಲೂರಿನ ಚೆನ್ನಕೇಶವ ದೇವಾಲಯವನ್ನು ಕಟ್ಟಿಸಿದರು.
ರಾಮಾನುಜರು ವಿಶಿಷ್ಟಾದ್ವೈತ ಮತ ಪ್ರಚಾರಕ್ಕಾಗಿ ಭಾರತದಲ್ಲೆಲ್ಲಾ ಸಂಚರಿಸಿದರು. ತೊಂಡನೂರು ನರಸಿಂಹ ದೇಗುಲದಲ್ಲಿ ರಾಮಾನುಜರನ್ನು ವಾದ ಮಾಡಲು ಕರೆದಾಗ, ಆದಿ ಶೇಷಾಂಶರಾದ ಆಚಾರ್ಯರು ದೇವಾಲಯದ ಹಿಂಬದಿಯಲ್ಲಿ ಒಂದು ಸಾವಿರ ರೂಪದಿಂದ ಅವರಿಗೆ ಉತ್ತರ ಕೊಟ್ಟು ಸಂಪೂರ್ಣವಾಗಿ ಜಯಿಸಿದರು. ಅದರ ನೆನಪಿಗಾಗಿ ಈಗಲೂ ತೊಂಡನೂರು ನರಸಿಂಹ ದೇಗುಲದ ಗೋಡೆಯ ಮೇಲೆ ರಾಮಾನುಜರು ಸಹಸ್ರಫಣಿಯುತರಾಗಿ ಗೋಚರಿಸುವುದು ಕಾಣಬಹುದು.

ವಿಶಿಷ್ಟಾದ್ವೈತ ಎಂದರೆ...
ರಾಮಾನುಜರು ಬೋಧಿಸಿದ ಧರ್ಮಕ್ಕೆ ವಿಶಿಷ್ಟಾದ್ವೈತವೆಂದು ಹೆಸರು. ವಿಶಿಷ್ಟಾದ್ವೈತದಲ್ಲಿ ಸುಗುಣೇಶ್ವರ ಉಪಾಸನೆಯನ್ನು ಹೇಳಿದೆ. ಎಂದರೆ ದೇವರಿಗೆ ಅನಂತ ಕಲ್ಯಾಣ ಗುಣಗಳಿವೆ. ದೇವರಿಗಿರುವ ಕಲ್ಯಾಣ ಗುಣಗಳು ಅನೇಕವಾದರೂ ಅವುಗಳಲ್ಲಿ ಮುಖ್ಯವಾದುವು ಸತ್ಯ, ಸೌಶೀಲ್ಯ ಮತ್ತು ಸೌಂದರ್ಯ, ಜೀವ ಮತ್ತು ಜಗತ್ತುಗಳಿಂದ ವಿಶಿಷ್ಟನಾದ ಬ್ರಹ್ಮನ ಅದ್ವೈತವನ್ನು ಬೋಧಿಸಿದ ಧರ್ಮ ವಿಶಿಷ್ಟಾದ್ವೈತ. ವೈಷ್ಣವ ಸಂಪ್ರದಾಯವೂ, ವಿಷ್ಣು ದೇಗುಲಗಳೂ ಬಹಳ ಹಿಂದಿನಿಂದ ಇದ್ದರೂ ವಿಶಿಷ್ಟಾದ್ವೈತವನ್ನು ವಿಶೇಷವಾಗಿ ಪ್ರಚಾರ ಮಾಡಿದವರು ರಾಮಾನುಜಾಚಾರ್ಯರು.
ಮೇಲುಕೋಟೆ ಚೆಲುವನಾರಾಯಣನ ಪದತಲದಲ್ಲಿ ಇರುವ ಬೀಬಿ ನಾಚ್ಚಿಯಾರ್‌ಗೆ ನಿತ್ಯ ನೆರವೇರಿಸುವ ಪೂಜಾ ಕಾರ್ಯಕ್ರಮ ರಾಮಾನುಜ ಮತದ ಉದಾರತೆಯನ್ನು ಭಕ್ತಿಯೆಂಬುದು ಮುಕ್ತಿಗೆ ಏಕೈಕ ಅರ್ಹತೆಯಾಗಿದೆ ಎಂದು ಘೋಷಿಸುತ್ತದೆ.
ಶ್ರೀ ಲಕ್ಷ್ಮೀನಾರಾಯಣನೇ ಪರತತ್ತ್ವ, ಚೇತನ, ಅಚೇತನಗಳೆಲ್ಲವೂ ಅವನಿಗೆ ಅಧೀನವಾದುವು ಮಾನವನು ತನ್ನ ಆತ್ಮೋನ್ನತಿ ಮತ್ತು ಶಾಶ್ವತ ಸುಖವಾದ ಮೋಕ್ಷ ಇವೆರಡನ್ನೂ ಪಡೆಯಲು ನಾರಾಯಣನಲ್ಲಿ ದೃಢವಾದ ವಿಶ್ವಾಸಪೂರ್ವಕ ಶರಣಾಗತಿಯಲ್ಲಿದೆ ಬೇರೆ ಗತಿ ಇಲ್ಲ. ಇದು ರಾಮಾನುಜರ ಉಪದೇಶ.
ತಮ್ಮ ನೂತನ ಶರೀರ- ಶರೀರಿ ಸಂಬಂಧ ಸಿದ್ಧಾಂತದ ಮೂಲಕ ಭೇದ- ಅಭೇದ ಶೃತಿ ವಾಕ್ಯಗಳಲ್ಲಿ ಸಮನ್ವಯ, ಪಾಂಚರಾತ್ರ ಆಗಮದ ಪ್ರಮಾಣ ಸ್ಥಾಪನೆ ದೇಗುಲಗಳ ನಿರ್ಮಾಣ ಆಗಮೋಕ್ತ ಪೂಜಾ ವ್ಯವಸ್ಥೆ ಪ್ರಪತ್ತಿಯ ಮೂಲಕ ಎಲ್ಲರಿಗೂ ಮೋಕ್ಷ ಇವು ರಾಮಾನುಜರು ಸಾಧಿಸಿದ ಐದು ಮಹತ್ಕಾರ್ಯಗಳು. ಹಿಂದೆ ನಮ್ಮಲ್ಲಿ ಹುಟ್ಟಿದ ಸಾಂಖ್ಯವೇ ಮೊದಲಾದ ದರ್ಶನಗಳು ಇಂದಿನ ವೈಜ್ಞಾನಿಕ ಬೌದ್ಧಿಕ ಅನ್ವೇಷಣೆಗಳಾಗಿ, ಬೌದ್ಧಿಕ ಸಿದ್ಧಿಗಳಾಗಿ ಅಸ್ತಿತ್ವವನ್ನು ಹೊಂದಿದ್ದವು. ಅವುಗಳು ಧಾರ್ಮಿಕ ಮತಗಳಾಗಲಿಲ್ಲ. ಪಂಥಗಳೂ ಆಗಲಿಲ್ಲ. ಆದರೆ ತ್ರಿಮತಗಳು ಧಾರ್ಮಿಕ ಪಂಥಗಳಿಗೂ ದಾರಿಮಾಡಿಕೊಟ್ಟು ಅನುಯಾಯಿಗಳನ್ನು ಹೊಂದಿ ಆಚಾರ ವಿಚಾರಗಳ ಎರಡೂ ಘಟ್ಟದಲ್ಲಿಯೂ ಅಸ್ತಿತ್ವ, ಪ್ರಚಾರ ಪಡೆದವು.  
ಭಾರತೀಯ ಚಿಂತನೆಗೆ ಹೊಸ ಕ್ರಾಂತಿಕಾರಿ ಆಯಾಮ ಕೊಟ್ಟ ರಾಮಾನುಜದರ್ಶನ, ಇಹವನ್ನು ಬದಲಾಯಿಸುತ್ತ, ಪರದ ದರ್ಶನವನ್ನು ಕೊಟ್ಟಿತು ಎಂಬುದನ್ನು ನಾವು ವಿಶೇಷವಾಗಿ ಗಮನಿಸಬೇಕು.  

-  ಗುರುರಾಜ ಪೋಶೆಟ್ಟಿಹಳ್ಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com