

ಹಿಂದೂ ಧರ್ಮ, ಜೀವನ ಧರ್ಮ. ಮಾನವ ದಿನಂಪ್ರತಿ ತಿಳಿದೋ ತಿಳಿಯದೆಯೋ ದೇವರ ಕಡೆಗೆ ಒಂದಲ್ಲ ಒಂದು ವಿಧದಲ್ಲಿ ತನ್ನ ಪ್ರಾರ್ಥನೆ, ಆರಾಧನೆಗಳನ್ನು ಸಲ್ಲಿಸುತ್ತಾ ಬಂದಿದ್ದಾನೆ. ತನ್ನ ಪರಂಪರೆ ಮತ್ತು ಸಂಸ್ಕೃತಿಗಳನ್ನು ಗೌರವಿಸುತ್ತಾ ಬಾಳುತ್ತಾ ಬದುಕುತ್ತಿದ್ದಾನೆ.
ಧಾರ್ಮಿಕ ಮತ್ತು ಸಾಮಾಜಿಕವಾಗಿ ಪ್ರತ್ಯೇಕಿತನಾಗಲು ಆಶಿಸುವವನನ್ನೂ ನಾಸ್ತಿಕನನ್ನೂ ಹಿಂದೂ ಧರ್ಮವು ಪ್ರತ್ಯೇಕವಾಗಿಸುವುದಿಲ್ಲ. ಅನೇಕ ಪ್ರಾಂತೀಯ ಭಾಷೆಗಳು, ಜಾತಿಗಳು ಭಾರತದಲ್ಲಿ ತುಂಬಿದ್ದರೂ ಆಚಾರ ಕ್ರಮಗಳು ಭಿನ್ನವಾಗಿದ್ದರೂ ಸನಾತನ ಧಾರ್ಮಿಕ ಮಹಾಶಕ್ತಿ ಎಲ್ಲರನ್ನೂ ಒಂದುಗೂಡಿಸಿದೆ. ಅದರ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಅದನ್ನು ಭಾರತೀಯರು ಗಮನಿಸಬಹುದು. ಇದು ವಿಶ್ವ ಹಿಂದುತ್ವದ ಸಾಕ್ಷಿಯಾಗಿದೆ.
ಹಬ್ಬಗಳೆಲ್ಲ ಕಾಲ ಮತ್ತು ಪ್ರಕೃತಿಯ ಉತ್ಪನ್ನಗಳಾಗಿವೆ. ಪ್ರಕೃತಿಯ ಹಿಂದಿರುವ ಮಹಾಚೇನತದ ದಿವ್ಯ ಚೇತನವನ್ನು ಜನತೆ ಆರಾಧಿಸುತ್ತಾ ಆ ಶಕ್ತಿಯ ಅನು ಗ್ರಹದಿಂದ ತಮ್ಮ ಬದುಕನ್ನು ಹೆಚ್ಚು ಅರ್ಥ್ನ ಪೂರ್ಣವಾಗಿ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ.
ಸಂಸಾರದ ಜಂಜಡಗಳನ್ನು ಕೆಲಹೊತ್ತು ಮನಸ್ಸಿನಿಂದ ಮರೆಮಾಡುವ ಉತ್ಸವಗಳು, ಜನರ ಸಂಸ್ಕೃತಿಯ ಜೀವಾಳವೇ ಆಗಿದೆ. ಒಂದು ಉದ್ದೇಶಕ್ಕಾಗಿ ಜನರು ಒಂದು ಕಡೆ ಸೇರುವುದರಲ್ಲಿ ಒಂದು ಜನಾಂಗದ ಅಂತರಂಗದ ಅಭಿಲಾಷೆ ಈಡೇರುತ್ತದೆ. ಮನುಷ್ಯ ಕೇವಲ ಪಂಚಭೂತಾತ್ಮಕ ಶರೀರವಲ್ಲ. ಅದನ್ನು ಮೀರಿದ ಬೇರೆ ಸತ್ವಗಳು ಆತನಲ್ಲಿರುವುದರಿಂದಲೇ ಆತ ನಾಗರಿಕತೆಯನ್ನು ನಿರ್ಮಿಸಿರುವುದು.
ಎಲ್ಲರಿಗೂ ಸಮಾನವಾಗಿರುವ ವಿಷಯದಲ್ಲಿ ಜನರನ್ನು ಒಂದು ಕಡೆ ಸೇರಿಸುವುದು ಒಂದು ಉತ್ತಮ ಪ್ರೇರಣೆ. ಇದು ಸಾಮಾಜಿಕ ಆರೋ ಗ್ಯಕ್ಕೂ ಸಹಾಯಕ. ಧಾರ್ಮಿಕ ಹಬ್ಬ ಹರಿದಿನಗಳ ಆಚರಣೆ ಹಿಂದೂ ಸಂಸ್ಕೃತಿಯ ಜೀವಂತಿಕೆಗೆ ಸಾಕ್ಷಿ.
ಆಚಾರ ಮತ್ತು ವಿಚಾರಗಳು ಧರ್ಮದ ಎರಡು ಮುಖಗಳು. ಇವುಗಳಲ್ಲಿ ನಂಬಿಕೆ ಮತ್ತು ಧರ್ಮ ಜಾಗೃತಿಗಳು ಸೇರಿಕೊಂಡಿರುತ್ತವೆ. 'ಆಚರಣೆಯ ಸಾಧನೆ, ಅಭ್ಯುದಯ ಸಾಧನೆ ಈ ಎರಡಕ್ಕೂ ಅನುಕೂಲವಾದದ್ದು ಧರ್ಮ' ಎನ್ನುತ್ತದೆ ಉಪನಿಷತ್.
ಧರ್ಮವು ಕೇವಲ ಬುದ್ಧಿ ಸಾಮರ್ಥ್ಯವಲ್ಲ. ಅದು ಮಹಾಪುರುಷರ ಸೇವೆಯ ಫಲ. ಆಚರಣೆಯ ಅನುಸಂಧಾನದ ಫಲವೇ ಧರ್ಮ. ಧರ್ಮವು ಬಾಳಿನ ಉಸಿರು. ಕರ್ಮವು ಇದರ ಚಾಲಕ. ನಮ್ಮ ಹಬ್ಬ ಹರಿದಿನಗಳು ಅಕ್ಕಿಯನ್ನು ಕಾಪಾಡುವ ಹೊಟ್ಟಿನಂತೆ ಧರ್ಮ ಅಕ್ಕಿಯಾದರೆ ಹಬ್ಬ ಅದನ್ನು ಕಾಪಾಡುವ ಹೊಟ್ಟು, ಭತ್ತ ಭಿತ್ತಿ ಭತ್ತ ಪಡೆಯುವಂತೆ ಧಾರ್ಮಿಕ ಆಚರಣೆಗಳಿಂದ ಒಗ್ಗಟ್ಟು ಶಾಂತಿ ಮತ್ತು ಸಂತೃಪ್ತಿಯನ್ನು ಪಡೆಯುತ್ತೇವೆ.
-ಶಿವರಾಮ ಭಟ್ ಹತ್ತೊಕ್ಕಲು