

ಒಂದೊಂದು ಬಾರಿ ಶಾಪವೂ ವರವಾಗುತ್ತದೆ ಎಂಬುದಕ್ಕೆ ನಮ್ಮ ಇತಿಹಾಸದಲ್ಲಿ ಹಲವು ಉದಾಹರಣೆ ಇದೆ. ಅದರಲ್ಲಿ ರಾಯರ ಜೀವನವೂ ಒಂದು. ಇವರು ಮೊದಲಿಗೆ ಶಂಕುಕರ್ಣನೆಂಬ ಕರ್ಮಜ ದೇವತೆಯಾಗಿದ್ದರು. ಬ್ರಹ್ಮದೇವರಿಗೆ ಪೂಜೆಗೆ ಬೇಕಾದ ಪುಷ್ಪಗಳನ್ನು ತರುವ ಜವಾಬ್ದಾರಿ ಲೋಪವಾದಾಗ ಬ್ರಹ್ಮದೇವರಿಂದ ಶಾಪಗ್ರಸ್ಥರಾದರು.
ದೈತ್ಯಯೋನಿಯಲ್ಲಿ ಹುಟ್ಟಿದನು. ಹಿರಣ್ಯಕಶಿಪುವಿನ ಪುತ್ರ ಪ್ರಹ್ಲಾದನಾಗಿ ಅವತರಿಸಿ ಭಗವಂತನು ಕಂಬದಿಂದ ನರಸಿಂಹನಾಗಿ ಅವತರಿಸಿ ಅನುಗ್ರಹಿಸಿದನು. ಮುಂದೆ ಬಾಹ್ಲೀಕರಾಗಿ ವ್ಯಾಸರಾಜರಾಗಿ ಅವತರಿಸಿ ಭಗವಂತನ ವಿಶೇಷ ಸೇವೆಯನ್ನು ಮಾಡಿ ಅವನ ಅನುಗ್ರಹಕ್ಕೆ ಪಾತ್ರರಾದರು.
ವಿಜಯನಗರದ ಹಿಂದೂ ಸಾಮ್ರಾಜ್ಯ ಶಿಥಿಲವಾಗುತ್ತಿದ್ದು, ಅಲ್ಲಲ್ಲಿ ಮುಸ್ಲಿಂ ನಾಯಕರು ತಂತಮ್ಮ ಪಾಳೆಯ ಪಟ್ಟುಗಳನ್ನು ಕಟ್ಟಿಕೊಂಡು ಆಳುತ್ತಿದ್ದರು. ಇಂಗ್ಲೀಷರು, ಫ್ರೆಂಚರು, ಡಚ್ಚರು, ವ್ಯಾಪಾರದ ನೆವದಿಂದ ಇಲ್ಲಿಗೆ ಬಂದು ಕೈ ಹಾಕುತ್ತಿದ್ದರು. ಧರ್ಮಪೀಠಗಳು ಸಂಪ್ರದಾಯ ನಿಷ್ಠ ಪಂಡಿತರ ನಡುವೆ ಇದ್ದು, ತಂತಮ್ಮ ಸಂಕುಚಿತ ವ್ಯಾಪ್ತಿಯಲ್ಲಿ ಲೋಕ ಸಂಚಾರ ಮಾಡುತ್ತಿದ್ದರು. ಜನ ಸಾಮಾನ್ಯರೊಡನೆ ಅವರ ಸಂಪರ್ಕ ಕಡಿಮೆಯಾಗಿ ಒಂದು ರೀತಿಯ ಕಂದಕವೇರ್ಪಟ್ಟಿತು. ಈ ಕಂದಕಕ್ಕೆ ಸೇತುವೆಯಾಗಿ, ಕನಕ, ಪುರಂದರರಂತೆ ಜನ ಸಾಮಾನ್ಯರ ಬಳಿಗೆ ಆಧ್ಯಾತ್ಮಿಕತೆಯನ್ನು ತಂದವರೇ ರಾಘವೇಂದ್ರರು.
ಲೋಕದಲ್ಲಿ ಶಿಷ್ಯರ ಹಣ ದೋಚುವ ಗುರುಗಳೇ ಬಹಳ. ಶಿಷ್ಯರ ಮನಸ್ಸನ್ನು ಅಪಹರಿಸುವ ಗುರುಗಳು ಕಡಿಮೆ. ಶಿಷ್ಯರ ಹೃದಯದಿಂದ ತಾಪವನ್ನು ಪರಿಹಾರ ಮಾಡುವವರು ವಿರಳ. ಅಂತಹ ಗುರುಗಳ ಸಾಲಿನಲ್ಲಿ ನಿಲ್ಲಬಲ್ಲ ಸಮರ್ಥ, ಧೀಮಂತ ಗುರುಗಳಲ್ಲಿ ಶ್ರೀರಾಘವೇಂದ್ರರು ಅಗ್ರಮಾನ್ಯರು.
ರಾಯರ ನಾಲ್ಕು ಅವತಾರಗಳಲ್ಲಿ ಏಕಸೂತ್ರತೆ ಇದೆ. ಒಂದೊಂದು ಅವತಾರದ ಕಾರ್ಯ ಇನ್ನೊಂದಕ್ಕೆ ಪೂರಕವಾಗಿದೆ. ಭಾಗವತ ಧರ್ಮಪ್ರಚಾರಕ್ಕೆ ಪ್ರಹ್ಲಾದರಾದರೆ, ಬಲಕಾರ್ಯಕ್ಕೆ ಬಾಹ್ಲೀಕರದಾಯಿತು. ವ್ಯಾಸರಾಜರಲ್ಲಿ ರಾಜನೀತಿ ವ್ಯಾಸ- ದಾಸಸಾಹಿತ್ಯ ಪೋಷಣೆಯ ಗ್ರಂಥ ರಚನೆ ಮುಖ್ಯವಾಯಿತು. ಗುರುರಾಜರಲ್ಲಿ ಇವೆಲ್ಲವೂ ಸಮಾವೇಶಗೊಂಡು ಜೊತೆಗೆ ಸಜ್ಜನರ ಕಲ್ಯಾಣ ಉದ್ಧಾರ ಮುಖ್ಯ ಕಾರ್ಯವಾಗಿದೆ.
ಮಹೋನ್ನತ ಮಟ್ಟಕ್ಕೆರಿದ ದಾಸಸಾಹಿತ್ಯ ಪರಂಪರೆ ಮುಂದೆ ಅಳಿಸಿ ಹೋಗುವ ಪ್ರಸಂಗ ಬಂದಾಗ ಅದಕ್ಕೆ ಮತ್ತೆ ಸಂಜೀವಿನಿ ಪ್ರಾಯರಾದವರು ಗುರುರಾಜರು. ಗುರುರಾಜರ ವರ್ಚಸ್ಸಿನಿಂದಲೇ ಈ ಸಾಹಿತ್ಯ ವಿಜಯದಾಸರಿಂದ ಮುಂದುವರೆದು ವಿಸ್ತಾರವಾಗಿ ಹಬ್ಬಿತ್ತು. ಗುರುರಾಜರ ಸನ್ನಿಧಾನದಿಂದ ಚೀಕಲಪರವಿ, ಉತ್ತನೂರು, ಮಾನವಿ, ಲಿಂಗಸೂಗೂರು, ಆದವಾನಿ, ಮೊದಲಕಲ್ಲು ಮುಂತಾದ ಸ್ಥಳಗಳಲ್ಲಿ ವಿಜಯದಾಸರು ಗೋಪಾಲದಾಸರೇ ಮೊದಲಾದ ದಾಸಾಗ್ರಣಿಗಳು ಜನ್ಮವೆತ್ತಿದರು.
ರಾಯರು ಹುಟ್ಟಿದ್ದು ತಮಿಳುನಾಡಿನ ಕಾವೇರಿ ಪಟ್ಟಣದಲ್ಲಿ. ಸಶರೀರ ಬೃಂದಾವನ ಪ್ರವೇಶ ಮಾಡಿದ್ದು ಮಂತ್ರಾಲಯದಲ್ಲಿ. ಅವರು ಬಹುಕಾಲ ಸಂದರ್ಶಿಸಿದ ಕಾರ್ಯಕ್ಷೇತ್ರ ಕರ್ನಾಟಕ. ಮಾನವೀಯತೆಯ ಸಾಕಾರ ಮೂರ್ತಿಯಾದ ಮಹಿಮಾನ್ವಿತನ ಅನುಗ್ರಹ ಪಡೆಯಲು ಜಗತ್ತಿನಾದ್ಯಂತ ಭಕ್ತರು ಮಂತ್ರಾಲಯಕ್ಕೆ ಬರುತ್ತಾರೆ.
ದ್ವೈತ ವಾಙ್ಮಯದ ಅಧ್ವರ್ಯುಗಳಾದ ರಾಘವೇಂದ್ರರು ರಚಿಸಿದ ಉಪಲದ್ಧ ಗ್ರಂಥಗಳ ಸಂಖ್ಯೆ ಅರ್ಧ ಶತಕದ ಹತ್ತಿರ. ಆಧ್ಯಾತ್ಮ ಜ್ಞಾನ ಪ್ರಪಂಚದಲ್ಲೂ ಸೀಮಾ ಶಕಪುರುಷರು. ಅವರ ಶೈಲಿಯನ್ನು ಪರಿಶೀಲಿಸಿದರೆ ರಾಯರ ವ್ಯಾಕರಣ ಪಾಂಡಿತ್ಯವನ್ನು ಹೊಗಳಬೇಕೋ, ಮೀಮಾಂಸಾಶಾಸ್ತ್ರದ ಪ್ರೌಢಿಮೆಯನ್ನು ಪ್ರಶಂಸಿಸಬೇಕೋ, ನ್ಯಾಯ ನೈಪುಣ್ಯವನ್ನು ಬಣ್ಣಿಸಬೇಕೋ, ವೇದ ವೈದುಷ್ಯವನ್ನು ಸ್ತುತಿಸಬೇಕೋ, ಧರ್ಮಶಾಸ್ತ್ರ ಪ್ರಾವೀಣ್ಯತೆಯನ್ನು ಕೊಂಡಾಡಬೇಕೋ ಎಂಬುದು ತಿಳಿಯದು.
ತ್ರಿಕಾಲ ಜ್ಞಾನಿಗಳಾದ ಗುರುರಾಜರು ಮುಂದಾಗಲಿರುವ ಆಧ್ಯಾತ್ಮಿಕ ಅವನತಿಯನ್ನು, ಜನರಿಗೆ ಬರಬಹುದಾದ ಕಷ್ಟ ಕೋಟಲೆಗಳನ್ನು ಮೊದಲೇ ಊಹಿಸಿರಬಹುದು. ಅದಕ್ಕಾಗಿಯೇ ಅವರು ತಮ್ಮ ಪೂರ್ವಾವತಾರ ಪ್ರಹ್ಲಾದರಾಜನಿದ್ದಾಗ ತಮಗೆ ಪ್ರತ್ಯಕ್ಷರಾದ ನರಸಿಂಹದೇವರನ್ನು ಕುರಿತು ಹೇಳುತ್ತಾರೆ. ಇವರೆಲ್ಲರನ್ನೂ ಬಿಟ್ಟು ನಾನೊಬ್ಬನೇ ಮೋಕ್ಷಕ್ಕೆ ಬರಲಾರೆ. ರಾಘವೇಂದ್ರರು ತಮ್ಮ ಶಿಷ್ಯರ ಸಮೇತ ಆಧ್ಯಾತ್ಮಿಕ ಸೌಗಂಧವನ್ನು ಬೀರುತ್ತಾ ಆಸೇತುಹಿಮಾಚಲ ದಿಗ್ವಿಜಯ ಮಾಡಿದ್ದನ್ನು ರಾಘವೇಂದ್ರ ವಿಜಯಕಾರರು ವಿಸ್ತಾರವಾಗಿ ವರ್ಣಿಸಿದ್ದಾರೆ. ಹಾಗೆ ಮಾಡುವಾಗ ನಿತ್ಯಾರ್ಚನೆಗಾಗಿ ಅಪರೂಪದ ಮಹಿಮೋಪೇತವಾದ ಸಾಲಿಗ್ರಾಮಗಳನ್ನು ಅವರು ಸಂಗ್ರಹಿಸಿದ್ದರು.
ತಾವು ಬೃಂದಾವನ ಪ್ರವೇಶಿಸಿ ಜಪಮಾಡುತ್ತ ಕುಳಿತಾಗ ಜಪಮಾಲೆ ಕೆಳಗೆ ಬಿದ್ದ ತಕ್ಷಣ ತಮ್ಮ ಮೇಲೆ ಏಳುನೂರು ಸಾಲಿಗ್ರಾಮಗಳನ್ನು ಇಟ್ಟು ಬೃಂದಾವನ್ನು ಮುಚ್ಚಲು ಆದೇಶಿಸಿದ್ದರು. ಗುರುರಾಜರ ಬೃಂದಾವನದಲ್ಲಿ ಏಳುನೂರು ಸಾಲಿಗ್ರಾಮಗಳ ಸನ್ನಿಧಾನವಿದ್ದಾಗ ಅದು ಕಾಮಧೇನು- ಕಲ್ಪವೃಕ್ಷಗಳಾಗದೇ ಇನ್ನೇನಾಗಲು ಸಾಧ್ಯ.
ತಮ್ಮ ಬೃಂದಾವನವನ್ನು ನಿರ್ಮಿಸಲು ಅವರು ಆಯ್ದೊಕಂಡ ಶಿಲೆಯೂ ಕೂಡ ದೈವಿಕ ಮೌಲ್ಯವುಳ್ಳದ್ದು ಎಂಬುದು ಸರ್ವವಿದಿತ. ಅದು ಶ್ರೀರಾಮಚಂದ್ರನ ಪಾದಸ್ಪಶಂದಿಂದ ಪುನೀತವಾದ ಶಿಲೆ. ಅವರ ಬೃಂದಾವನವಿರುವ ಸ್ಥಳ ಕೃತಯುಗದಲ್ಲಿ ಪ್ರಹ್ಲಾದರಾಜ ಯಾಗ ಮಾಡಿದ ಸ್ಥಳ.
ಬೃಂದಾವನಕ್ಕೆ ನಾಲ್ಕು ಪಾರ್ಶ್ವಗಳು. ಎದುರಿಗೆ ಶ್ರೀಲಕ್ಷ್ಮೀನರಸಿಂಹನ ಸನ್ನಿಧಾನ. ತನ್ನ ಭಕ್ತರ ಅನಿಷ್ಟ ನಿವೃತ್ತಿ ಇಷ್ಟ ಪ್ರಾಪ್ತಿ ನರಸಿಂಹದೇವರ ಕಾರ್ಯ. ಬಂದ ಭಕ್ತರ ಅಪಮೃತ್ಯು ಕಳೆವ ಸ್ವಾಮಿ ಭಕ್ತರನ್ನು ಬೃಂದಾವನದ ಬಲಪಾರ್ಶ್ವಕ್ಕೆ ಸಾಗಿಸುತ್ತಾನೆ. ಅಲ್ಲಿ ಸೀತಾ ಸಹಿತ ಶ್ರೀರಾಮಚಂದ್ರನ ಸನ್ನಿಧಾನ. ಭಕ್ತ ಜನರ ಬದುಕನ್ನು ಸಮೃದ್ಧಗೊಳಿಸಿ, ಅವರ ಅಂತರಂಗದ ಸಂತಾಪಗಳನ್ನು ತೊಲಗಿಸಿ ಅವರನ್ನು ಸಾಧನ ಮಾರ್ಗದಲ್ಲಿ ಮುನ್ನೆಡೆಸುವ ಶ್ರೀರಾಮರೂಪದ ಸನ್ನಿಧಾನ.
ಜಗದ್ಗುರು ಎಂಬ ಪದಕ್ಕೆ ಅನ್ವರ್ಥರಾಗಿ ಕಲ್ಪವೃಕ್ಷ, ಕಾಮಧೇನು ಸದೃಶರಾದ, ಅಗಮ್ಯ ಮಹಿಮ ಶ್ರೀರಾಘವೇಂದ್ರ ಗುರುಸಾರ್ವಭೌಮರ 343ನೇ ಆರಾಧನಾ ಮಹೋತ್ಸವನ್ನು ಆಗಸ್ಟ್ 11 ರಿಂದ 13ರವರಗೆ ಆಚರಿಸಲಾಗುತ್ತಿದೆ. ಮಾಹಿತಿಗೆ 9886767780.
ಗುರುರಾಜ ಪೋಶೆಟ್ಟಿಹಳ್ಳಿ