ಯೋಗ ಮಾರ್ಗ

ಯೋಗ ಮಾರ್ಗ
Updated on: 

ಅಷ್ಟಾಂಗ ಯೋಗ ಈಗಲೂ ಜನರಿಗೆ ಒಂದು ಪವಾಡ ಎಂಬಂತೆಯೇ ಅನಿಸುತ್ತಿದೆ. ನನ್ನನ್ನು ಬಹಳ ವರ್ಷಗಳಿಂದ ಬಲ್ಲ ಜನರೂ ಕೂಡ ನನ್ನಲ್ಲಿ ಈ ಬಗ್ಗೆಯೇ ಪ್ರಶ್ನೆ ಕೇಳುತ್ತಿರುತ್ತಾರೆ. ಅವರ ಪ್ರಶ್ನೆಗಳು ಸದಾ ಅಷ್ಟಾಂಗ ಯೋಗದ ಸುತ್ತಲೇ ಸುತ್ತುತ್ತಿರುತ್ತದೆ. ಹೊಸ ಮಂತ್ರ ಹೊಸ ತಂತ್ರ ಹೊಸ ಜ್ಞಾನ ಅಥವಾ ಹೊಸದೊಂದು ಯೋಗಾಭ್ಯಾಸದ ಬಗ್ಗೆ ಕೇಳುವ ಜನರನ್ನು ಕಂಡು ನನಗೆ ಅಚ್ಚರಿಯಾಗುತ್ತದೆ. ವಾಸ್ತವತೆ ಏನೆಂದರೆ ಇದರಲ್ಲಿ  ಹೊಸದಾಗಿ ಕಲಿಸುವಂಥದ್ದು ನಿಜಕ್ಕೂ ಏನೂ ಇಲ್ಲ.   
ನೀವು ಎ ಎಂಬ ಬಿಂದುವಿನಲ್ಲಿ ಇದ್ದೀರಿ ಎಂದುಕೊಳ್ಳಿ. ಅಲ್ಲಿಂದ ನಿಮಗೆ ಬಿ ಬಿಂದುವಿಗೆ ಚಲಿಸುವ ಗುರಿಯಿದೆ ಎಂದುಕೊಳ್ಳಿ. ಈ ಎರಡು ಬಿಂದುಗಳ ನಡುವಣ ಪಯಣ ಮಾರ್ಗದ ನೀಲನಕ್ಷೆಯನ್ನು  ಸಾವಿರಾರು ವರ್ಷಗಳ ಹಿಂದೆಯೇ ಪತಂಜಲಿ ಋಷಿಗಳು ಮಾಡಿಟ್ಟು ಹೋಗಿದ್ದಾರೆ. ನೀವು ಮಾಡಬೇಕಿರೋದು ಕೇವಲ ಆ ಮಾರ್ಗದಲ್ಲಿ ನಡೆಯುವ ಕೆಲಸವಷ್ಟೇ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಅಂತಿಮ ನಿಲ್ದಾಣಕ್ಕೂ ಕಿರುನಿಲುಗಡೆಗಳು. ಯೋಗ ಅಂದ ತಕ್ಷಣ ತಲೆಕೆಳಗಾಗಿ ನಿಲ್ಲುವುದೋ ಅಥವಾ ವಿಚಿತ್ರವಾಗಿ ಉಸಿರಾಟ ನಡೆಸುವುದೋ ಅಲ್ಲ. ಅಥವಾ ಸಾಮಾನ್ಯರು ತಿನ್ನದ ಗಡ್ಡೆ ಗೆಣಸು ಹಣ್ಣು ಹಂಪಲು ತಿಂದುಕೊಂಡು ಪಥ್ಯದಲ್ಲಿ ಇರುವುದೂ ಅಲ್ಲ. ಇದು ಅಷ್ಟಾಂಗ ಯೋಗದ ಭಾಗಗಳು ಅಷ್ಟೇ. ದಿನನಿತ್ಯದ ಎಲ್ಲ ಕಾರ್ಯಗಳ ನಡುವೆ ನಡೆಸುವ ಆಚರಣೆ ಇದಾಗಬೇಕು. ಸದ್ಯಕ್ಕೆ ಐದು ಯಮ ಮತ್ತು ನಿಯಮಗಳತ್ತ ಗಮನ ಹರಿಸೋಣ. ಸತ್ಯ -ಸದಾ ನಿಜವನ್ನೇ ನುಡಿವ ಸಂಕಲ್ಪ. ಆಸ್ತೇಯ - ಕಳ್ಳತನ ಮಾಡದಿರುವ ನಿರ್ಧಾರ, ಅಪರಿಗ್ರಹ - ಯಾರಿಂದಲೂ ವಸೂಲಿ ಮಾಡದಿರುವುದು, ಅಹಿಂಸೆ - ಪ್ರಾಣಿ ಪಕ್ಷಿ ನರರನ್ನು ಹಿಂಸಿಸದಿರುವುದು, ಬ್ರಹ್ಮಚರ್ಯ - ಮನಸಿನಲ್ಲೂ ಕೂಡ ಕಾಮಭಾವದಿಂದ ದೂರ ಇರುವುದು, ಸ್ವಚ್ಛ- ದೈಹಿಕ ಮತ್ತು ಮಾನಸಿಕವಾಗಿ ಶುದ್ಧವಾಗಿರುವುದು, ಸಂತೋಷ - ಇರುವುದಷ್ಟರಲ್ಲೇ ತೃಪ್ತಿ ಪಡುವುದು, ಸ್ವಾಧ್ಯಾಯ -  ನಮ್ಮನ್ನು ನಾವು ಓದಿಕೊಳ್ಳುವುದು, ತಪಸ್ಸು - ಧ್ಯಾನದ ಮೂಲಕ ನಮ್ಮನ್ನು ನಾವು ಶುದ್ಧಿಗೊಳಿಸಿಕೊಳ್ಳುವುದು, ಈಶ್ವರ ಧ್ಯಾನ, ಇವುಗಳ ಅಳವಡಿಕೆ ನಿಮ್ಮಲ್ಲಿ ಅಷ್ಟಾಂಗ ಯೋಗ ಕಲಿಕೆಯನ್ನು ಸುಲಭವಾಗಿಸುತ್ತದೆ.
ಸುಳ್ಳು ಹೇಳದಿರುವುದನ್ನು, ಕಳ್ಳತನ ಮಾಡದಿರುವುದನ್ನು, ಉದ್ರೇಕಗೊಳ್ಳದಿರುವುದನ್ನು ಯಾರಿಗೂ ಯಾರೂ ಕಲಿಸಲಾಗುವುದಿಲ್ಲ. ಅದೇ ರೀತಿ ತೃಪ್ತ ಜೀವನ ಅನುಭವಿಸುವುದನ್ನೂ ಕೂಡ. ಅದು ನಮ್ಮೊಳಗೇ ನಾವು ಕಂಡುಕೊಳ್ಳುವುದು. ಯಮ ಮತ್ತು ನಿಯಮಗಳು ನಿಮ್ಮಲ್ಲಿ ಕೆಲವು ವಿಷಯಗಳಲ್ಲಿ ವೈರಾಗ್ಯ ಮೂಡಿಸುತ್ತದೆ. ಉದ್ರೇಕಕಾರಿ ವಿಷಯಗಳಿಂದ ವಿಮುಖವಾಗಿಸುತ್ತವೆ.   
ಯೋಗ ಪ್ರಕೃತಿ ಸಹಜ ವಿಷಯ. ಅದು ಮಹಾನ್ ವಿದ್ಯೆಯೇನೂ ಅಲ್ಲ. ಅನಾದಿ ಕಾಲದಿಂದ ಋಷಿಮುನಿಗಳು ಹೇಳುತ್ತಾ ಬಂದಿರೋದು ಇದನ್ನೇ. ಪತಂಜಲಿ ಮಹರ್ಷಿಗಳು ಕೂಡ ಇದನ್ನೇ ಹೇಳಿರುವುದು.
ಅಷ್ಟಾಂಗ ಯೋಗ ಒಲಿಯುವುದೂ ಅಲ್ಲ. ಹಾಗಂತ ಅದು ಬ್ರಹ್ಮ ವಿದ್ಯೆಯೂ ಅಲ್ಲ. ದಿನನಿತ್ಯದ ಅಭ್ಯಾಸಗಳಲ್ಲಿ ಸನ್ನಡತೆ ರೂಪಿಸಿಕೊಂದಷ್ಟೂ ಅಷ್ಟಾಂಗ ಯೋಗವನ್ನು ಕರಗತ ಮಾಡಿಕೊಳ್ಳುವುದು ಸುಲಭವಾಗುತ್ತದೆ. ಯಮ ಮತ್ತು ನಿಯಮಗಳ ಅಳವಡಿಕೆ ಪ್ರತಿ ಮನುಷ್ಯನಲ್ಲೂ ಅಗತ್ಯ.
ಮೋಕ್ಷ ಮಾರ್ಗ

= ಯೋಗಿ ಅಶ್ವಿನಿ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com