

ಮಹಾಲಕ್ಷ್ಮೀ, ವರಲಕ್ಷ್ಮೀ, ಧನಲಕ್ಷ್ಮೀ, ಸೌಭಾಗ್ಯಲಕ್ಷ್ಮೀ, ಧಾನ್ಯಲಕ್ಷ್ಮೀ, ಕನಕಲಕ್ಷ್ಮೀ, ರಾಜಲಕ್ಷ್ಮೀ, ವಿದ್ಯಾಲಕ್ಷ್ಮೀ, ವಿಜಯಲಕ್ಷ್ಮೀ, ಧೈರ್ಯಲಕ್ಷ್ಮೀ, ಆರೋಗ್ಯಲಕ್ಷ್ಮೀ, ಸೌಂದರ್ಯಲಕ್ಷ್ಮೀ ಹೀಗೆ ಅನಂತಾನಂತ ಹೆಸರುಗಳಿಂದ ತನ್ನ ಭಕ್ತರಿಂದ ಆರಾಧಿಸಲ್ಪಡುವ, ಪೂಜಿಸಲ್ಪಡುವ ದೇವಿ ಶ್ರೀಲಕ್ಷ್ಮೀ ಪ್ರಾಪಂಚಿಕ ಸುಖಕ್ಕೆ ಬೇಕಾದ ಅರ್ಥ-ಕಾಮಗಳನ್ನೂ, ಪರಮಾಧಿಕ ಸಾಧನೆಗೆ ಬೇಕಾದ ಧರ್ಮ-ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥ ದಯಪಾಲಿಯುತ್ತಿರುವ ಅಧಿದೇವತೆ ಈ ಮಹಾಲಕ್ಷ್ಮೀ
ಯಾ ಶ್ರೀಃ ಸ್ವಯಂ ಸುಕೃತಿನಾಂ ಭುವನೇಷ್ಟ ಲಕ್ಷ್ಮೀಃ
ಪಾಪಾತ್ಮನಾ ಕೃತಧಿಯಾಂ ಹೃದಯೇಷು ಬುದ್ಧಿಃ
ಶ್ರದ್ಧಾಂ ಸತಾಂ ಕುಲಜನ ಪ್ರಚವಸ್ಯ ಲಜ್ಜಾ
ತಾತ್ವಾ ನತಾಃ ಸ್ಮಪರಿಪಾಲಯ ದೇವಿ ವಿಶ್ವಃ ॥
ಯಾರು ಪುಣ್ಯಾತ್ಮರ ಗೃಹಗಳಲ್ಲಿ ಸ್ವಯಂ ಶ್ರೀಲಕ್ಷ್ಮೀ ರೂಪದಿಂದಲೂ, ಪಾಪಿಗಳ ಗೃಹಗಳಲ್ಲಿ ದರಿದ್ರತೆಯ ರೂಪದಿಂದಲೂ, ಶುದ್ಧಾಂತಃಕರಣವುಳ್ಳವರ ಹೃದಯದಲ್ಲಿ ಸದ್ಬುದ್ಧಿ ರೂಪದಿಂದಲೂ, ಸತ್ಪುರುಷರ ಅಂತರಂಗದಲ್ಲಿ ಶ್ರದ್ಧಾ ಸ್ವರೂಪಳಾಗಿಯೂ, ಕುಲೀನ ವ್ಯಕ್ತಿಗಳ ಮನದಲ್ಲಿ ಲಜ್ಜಾ ಸ್ವರೂಪದಿಂದಲೂ ನಿವಾಸ ಮಾಡುತ್ತಿರುವಳೋ ಅಂತಹ ಭಗವತಿ ಶ್ರೀವರಮಹಾಲಕ್ಷ್ಮೀಯು ಸಂಪೂರ್ಣ ವಿಶ್ವವನ್ನು ಪಾಲಿಸಿ, ಪೋಷಿಸಲೆಂದು ಸಡಗರ ಸಂಭ್ರಮಗಳಿಂದ ಆಚರಿಸುವ ಹಬ್ಬ ಶ್ರೀ ವರಮಹಾಲಕ್ಷ್ಮೀ ವ್ರತ.
ಈ ಭೌತಿಕ ಪ್ರಪಂಚದಲ್ಲಿ ಸುಖ ಸಾಧನೆ, ಸಂಪತ್ತು, ವೈಭವೋಪೇತ ಜೀವನ, ವಸ್ತು, ವಾಹನ, ಭವನ, ಭೋಗ, ಭಾಗ್ಯಗಳನ್ನು ನೀಡುವ ಅಧಿದೇವತೆ ಶ್ರೀ ವರಮಹಾಲಕ್ಷ್ಮೀ. ಈ ಮಹಾದೇವಿಯ ವ್ರತ ಶ್ರಾವಣ ಮಾಸ, ಶುಕ್ಲ, ತ್ರಯೋದಶಿ ಅಂದರೆ 8.8.2014 ರಂದು ಬರುತ್ತದೆ.
ಶ್ರೀ ವರಲಕ್ಷ್ಮೀ ವ್ರತ ಕಥೆ
ಬ್ರಹ್ಮಲೋಕ ನಿವಾಸಿಗಳಾದ ಸನಕಾದಿ ಮಹಾಋಷಿಗಳು ವೇದವ್ಯಾಸರ ಶಿಷ್ಯರಾದ ಸೂತಪುರಾಣಿಕರನ್ನು ಕುರಿತು, ಮಹಾನುಭಾವರೇ ಯಾವ ವ್ರತವನ್ನು ಮಾಡಿದರೆ ಮನುಷ್ಯರಿಗೆ ಸಮಸ್ತ ಸೌಭಾಗ್ಯ, ಐಶ್ವರ್ಯ, ಪುತ್ರಪೌತ್ರಾದಿ ಸಂಪತ್ತು ಉಂಟಾಗುವುದು ಎಂದು ಕೇಳುತ್ತಾರೆ. ಆಗ ಸೂತಪುರಾಣಿಕರು, ಪೂರ್ವದಲ್ಲಿ ಸಾಕ್ಷಾತ್ ಪರಮೇಶ್ವರನು ಪಾರ್ವತಿದೇವಿಯು ಲೋಕಾನುಗ್ರಹಕ್ಕಾಗಿ ವರಲಕ್ಷ್ಮೀ ವ್ರತವನ್ನು ಆಚರಿಸಿದರೆ ಮನುಷ್ಯ ಮನೋಕಾಮನೆಗಳು ಪೂರ್ಣವಾಗುತ್ತವೆ ಎಂದು ಹೇಳಿದಂತಹ ಕಥೆಯನ್ನು ಇವರೂ ಹೇಳುತ್ತಾರೆ. ಶ್ರಾವಣ ಮಾಸದ ಎರಡನೇ ಶುಕ್ರವಾರದ ದಿನ ಭಕ್ತಿಪೂರ್ವಕವಾಗಿ ವರಲಕ್ಷ್ಮೀ ವ್ರತವನ್ನು ಕಲ್ವೋಕ್ತ ಪ್ರಕಾರವಾಗಿ ಮಾಡಬೇಕು. ಭವಿಷ್ಟೋತ್ತರ ಪುರಾಣದಲ್ಲಿ ಬರುವ ವರಮಹಾಲಕ್ಷ್ಮೀ ವ್ರತ ಕಥೆಯು ಬರುತ್ತದೆ.
ಪೂಜಾವಿಧಾನ
ವರಲಕ್ಷ್ಮೀ ಪೂಜೆಯಲ್ಲಿ ಕಳಸವನ್ನಿಟ್ಟು ನಾನಾ ರೀತಿಯಿಂದ ಅಲಂಕರಿಸಬೇಕು. 12 ಗಂಟಿನ ದಾರವನ್ನು ಸಿದ್ಧಮಾಡಿಕೊಂಡು ಕಳಸದ ಬಲಭಾಗದಲ್ಲಿಟ್ಟು ಪೂಜಿಸಬೇಕು. ಇದನ್ನು ದೋರಗ್ರಂಥಿ ಎಂದು ಹೇಳುತ್ತಾರೆ.
ನಂತರ ಕಳಸವನ್ನು ಶ್ರೀಲಕ್ಷ್ಮೀ ಅಷ್ಟೋತ್ತರದಿಂದಲೂ, ದೋರ ಗ್ರಂಥಿಯನ್ನು ರಮಾಯೈನಮಃ, ಸರ್ವಮಂಗಳಾಯೈ ನಮಃ, ಕಮಲವಾಸಿನೈ ನಮಃ, ಮನ್ಮಥ ಜನನೈ ನಮಃ, ವಿಷ್ಣು ವಲ್ಲಭಾಯೈ ನಮಃ, ಕ್ಷಿರಾಬ್ಧಿಕನ್ಯಕಾಯೈನಮಃ, ಲೋಕಮಾತೇ ನಮಃ, ಭಾರ್ಗವ್ಯೈ ನಮಃ, ಪದ್ಮಹಸ್ತಾಯೈ ನಮಃ, ಪುಷ್ಟೈ ನಮಃ, ತುಷ್ಟೈನ ನಮಃ, ವರಲಕ್ಷ್ಮಿಣ್ಯ ನಮಃ ಎಂಬ ದ್ವಾದಶ ನಾಮಗಳಿಂದ ಪೂಜಿಸಿ, ಆ ದಾರವನ್ನು ಬಲಮುಂಗೈಗೆ ಕಟ್ಟಿಕೊಳ್ಳಬೇಕು. ಹೀಗೆ ಪೂಜಾ ವಿಧಾನವನ್ನು ಸಂಕ್ಷಿಪ್ತವಾಗಿ ಹೇಳಬಹುದು.
= ವಿ.ಕೇಶವಮೂರ್ತಿ