ದಕ್ಷಿಣಾಯನ

ಹಿಂದೂ ಪಂಚಾಂಗ ಸಂವತ್ಸರವನ್ನು ಉತ್ತರಾಯಣ, ದಕ್ಷಿಣಾಯನ ಎಂದು ಎರಡು ಭಾಗಗಳಲ್ಲಿ ವಿಂಗಡಿಸಿದೆ. ರವಿ ಮಕರ ರಾಶಿಗೆ ಪ್ರವೇಶಿಸಿದ ನಂತರ 6 ತಿಂಗಳು ಅಂದರೆ ಕುಂಭ, ಮೀನ, ಮೇಷ ವೃಷಭ, ಮಿಥುನ ರಾಶಿಯಲ್ಲಿದ್ದು, ನಂತರ ಸಾಮಾನ್ಯವಾಗಿ 13 ಅಥವಾ 16ರ ಜುಲೈನಲ್ಲಿ ಕಟಕ ರಾಶಿಯನ್ನು ಪ್ರವೇಶಿಸುವನು. ಈ ಕಾಲವನ್ನು ದಕ್ಷಿಣಾಯಣ ಪುಣ್ಯಕಾಲವೆಂದು ಕರೆಯುವರು.
ಉತ್ತರಾಯಣ ಪುಣ್ಯಕಾಲ ಮುಗಿದ ಮೇಲೆ ಸ್ವರ್ಗದ ಬಾಗಿಲು ಹಾಕಿ ಬಿಡುವುದಂತೆ. ಭೀಷ್ಮನಂಥ ಮಹಾಪುಣ್ಯಪುರುಷನು ತನ್ನ ಸಾವನ್ನು ಉತ್ತರಾಯಣದಲ್ಲಿ ಆಗಬೇಕು ಎಂದು ಬಯಸಿದರು. ಇದೇ ರೀತಿ ದಕ್ಷಿಣಾಯನವನ್ನೂ ಪರಮಪುಣ್ಯ ಸಂಚಯನ ಕಾಲ ಎನ್ನುತ್ತಾರೆ. ಏಕೆಂದರೆ ಈ ಕಾಲದಲ್ಲಿ ಪುರಾಣಕ್ಕೆ ಸಂಬಂಧಿಸಿದ ಹಲವು ಮಹತ್ತರ ಘಟನೆಗಳು ನಡೆದಿವೆ...
ದಕ್ಷಿಣಾಯಣದ ಘಟನೆಗಳು
ಕೃತಾಯುಗದಲ್ಲಿ ದಾಕ್ಷಾಯಣಿ ಪುನರ್ಜನ್ಮ ಪಡೆದು ಪರ್ವತರಾಜನ ಮಗಳಾಗಿ ಜನಿಸಿ ಪಾರ್ವತಿ ಆದಳು. ಶಿವನನ್ನು ತಪಸ್ಸಿನಿಂದ ಮೆಚ್ಚಿಸಿ ಓಲೈಸಿಕೊಂಡು ಅವರಿಬ್ಬರೂ ವಿವಾಹವಾಗಿದ್ದು ಇದೇ ದಕ್ಷಿಣಾಯಣ ಪುಣ್ಯ ಕಾಲದಲ್ಲಿ.
ಇಂದು ಎಲ್ಲರಿಂದಲೂ ಪ್ರಥಮ ಪೂಜೆ ಪಡೆಯುತ್ತಿರುವ ಗಣಪತಿಯು ಅವತಾರ ಪಡೆದದ್ದು ದಕ್ಷಿಣಾಯನದ ಭಾದ್ರಪದ ಮಾಸದಲ್ಲಿ.
ದ್ವಾಪರ ಯುಗದಲ್ಲಿ ಶ್ರೀಮನ್ ನಾರಾಯಣ ಶ್ರೀಕೃಷ್ಣನಾಗಿ ಅವತರಿಸಿದ್ದು, ದಕ್ಷಿಣಾಯನದ ಶ್ರಾವಣ ಮಾಸದಲ್ಲಿ.
ಭೂದೇವಿಯ ಮಗನಾದ ನರಕಾಸುರನನ್ನು ಶ್ರೀಕೃಷ್ಣನು ಸಂಹರಿಸಿದ್ದು ದಕ್ಷಿಣಾಯನದ ಕಾರ್ತಿಕ ಮಾಸದಲ್ಲಿ.
ಶ್ರೀಹರಿ ವರಾಹ ಅವತಾರ ತಾಳಿದ್ದು ಈ ದಕ್ಷಿಣಾಯಣದಲ್ಲಿ.
ಹಿರಣ್ಯಾಕ್ಷ ರಾಕ್ಷಸನು ಲೋಕ ಕಂಟಕನಾಗಿದ್ದು, ಭೂದೇವಿಯನ್ನು ಅಪಹರಿಸಿ ಪಾತಾಳದಲ್ಲಿ ಅಡಗಿಸಿದ್ದನು. ಭೂದೇವಿ ಶ್ರೀಹರಿಯನ್ನು ಪ್ರಾರ್ಥಿಸಿ ನನ್ನನ್ನು ರಕ್ಷಿಸು ಎಂದಳು. ಶ್ರೀಹರಿ ವೈಕುಂಠವನ್ನು ಬಿಟ್ಟು, ಹಂದಿಯಾಗಿ ಅವತರಿಸಿದ್ದು ಇದೇ ದಕ್ಷಿಣಾಯಣದಲ್ಲಿ.
ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ನೂಕಿದ್ದು ಇದೇ ಅವಧಿಯಲ್ಲಿ.
ಲೋಕಮಾತೆ ಪಾರ್ವತಿಯು ಮಹಿಷಾಸುರ, ರಕ್ತಬೀಜಾಸುರ, ಚಂಡಮುಂಡರನ್ನು ಚಾಮುಂಡಿಯಾಗಿ ಅವತರಿಸಿ ಸಂಹರಿಸಿದ್ದು ದಕ್ಷಿಣಾಯನದ ಆಶ್ವಯುಜ ಮಾಸದಲ್ಲಿ.
ತ್ರಿಮೂರ್ತಿಗಳು ಏಕರೂಪವಾಗಿ ಸಂಯೋಗಗೊಂಡು ದತ್ತ ಅವತಾರವಾಗಿದ್ದು ದಕ್ಷಿಣಾಯಣದಲ್ಲಿ.
ವಾನರ ಕುಲತಿಲಕ, ರಾಮಸೇವಾ ಧುರಂದರ ಆಂಜನೇಯ ಅವತಾರವಾಗಿದ್ದು ದಕ್ಷಿಣಾಯನದಲ್ಲಿ. ಅಲ್ಲದೆ ವಿಶ್ವಾಮಿತ್ರ ಋಷಿ ತಪಸ್ಸಿನಿಂದ ಬ್ರಹ್ಮದೇವನನ್ನು ಮೆಚ್ಚಿಸಿ ಬ್ರಹ್ಮರ್ಷಿ ಆದದ್ದು, ಬ್ರಹ್ಮದೇವ ಲೋಕದಲ್ಲಿ ಸೃಷ್ಟಿಕಾರ್ಯ ಆರಂಭಿಸಿದ್ದು ದಕ್ಷಿಣಾಯನದ ಪುಣ್ಯಕಾಲದಲ್ಲಿ.
-ಮಂಡಗದ್ದೆ ಪ್ರಕಾಶಬಾಬು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


