

ಸ್ಫಟಿಕ ಮಣಿಗಳು ಬೆಣಚು ಕಲ್ಲಿನ ಶಿಲೆಗೆ ಸೇರಿದ್ದು, ಸಿಲಿಕಾನ್ ಡೈ ಆಕ್ಸೈಡ್ನಿಂದ ರಚನೆಗೊಂಡಿರುತ್ತದೆ. ಇದು ಸಾಮಾನ್ಯವಾಗಿ ಹಿಮಾಲಯದ ತಪ್ಪಲಿನಲ್ಲಿ ಹೇರಳವಾಗಿ ದೊರೆಯುತ್ತದೆ. ಸ್ಫಟಿಕ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಇದನ್ನು ಧರಿಸಿದಲ್ಲಿ ಮನುಷ್ಯನ ಮನಸ್ಸು ಶಾಂತವಾಗಿರುತ್ತದೆ.
ಜೊತೆಗೆ ಈ ಸ್ಫಟಿಕ ಮಣಿಯನ್ನು ಹಿಡಿದು ಮಂತ್ರ ಜಪ ಮಾಡುವಾಗ ಮಂತ್ರಗಳಿಂದ ಆಗುವ ಕಂಪನ ತರಂಗಗಳು ಈ ಮಣಿಗಳಿಗೆ ವರ್ಗಾವಣೆಯಾಗಿ ಈ ಮಣಿಗಳಲ್ಲಿನ ಶಕ್ತಿ ಹೆಚ್ಚುತ್ತದೆ. ಜೊತೆಗೆ ಇಂತಹ ಮಣಿಗಳನ್ನು ಸ್ಪರ್ಶಿಸುವುದರಿಂದ ಮಾನಸಿಕ ಕಿನ್ನತೆಗೊಳಗಾದವರು ಇದರಿಂದ ಪರಿಹಾರವನ್ನೂ ಹೊಂದುತ್ತಾರೆ. ಸ್ಫಟಿಕಗಳು ಪಾರದರ್ಶಕವಾಗಿ ಬಿಳಿಯ ಬಣ್ಣದಾಗಿರುತ್ತದೆ. ಬೇರೆಬೇರೆ ದೇಶಗಳಲ್ಲಿ ಇವು ಅನೇಕ ಬಣ್ಣಗಳಲ್ಲಿ ದೊರೆಯುತ್ತವೆ. ಬಿಳಿ, ಹಳದಿ, ಗುಲಾಬಿ, ಕಂದು, ನೇರಳೆ ಈ ಬಣ್ಣಗಳು ಹೆಚ್ಚು ಬಳಕೆಯಲ್ಲಿವೆ.
ಸ್ಫಟಿಕದ ಉಪಯೋಗಗಳು
ಯಾರಿಗೆ ಕಂಕಣ ಭಾಗ್ಯ ತಡವಾಗಿದೆಯೋ ಅಂತಹವರು ಹಳದಿ ಮಿಶ್ರಿತ ಸ್ಫಟಿಕ ಮಣಿಯನ್ನು ಧರಿಸುವುದರಿಂದ ಶೀಘ್ರದಲ್ಲಿ ಇವರಿಗೆ ಮದುವೆಯಾಗುವ ಯೋಗ ಕೂಡಿಬರುತ್ತದೆ.
ದಂಪತಿಗಳಲ್ಲಿ ಒಳ ಜಗಳ ಇದ್ದರೆ ಅಂತಹವರು ಗುಲಾಬಿ ಬಣ್ಣದ ಸ್ಫಟಿಕ ಧರಿಸುವುದರಿಂದ ಅವರ ಮನಸ್ಸು ಶಾಂತಚಿತ್ತವಾಗುವುದಲ್ಲದೆ ಆಧ್ಯಾತ್ಮಿಕ ಸಾಧನೆ ಕಡೆ ಅವರ ಮನಸ್ಸು ಒಲವನ್ನು ತೋರಿಸುತ್ತದೆ.
ಬಿಳಿ ಬಣ್ಣದ ಪಾರದರ್ಶಕ ಸ್ಫಟಿಕವನ್ನು ಅಧ್ಯಾತ್ಮ ಸಾಧನೆಗೆ ಮತ್ತು ತಲೆ ನೋವು ಇದ್ದಾಗ ಈ ಸ್ಫಟಿಕವನ್ನು ಅರ್ಧಗಂಟೆಯಷ್ಟು ಸಮಯ ತಲೆ ಹತ್ತಿರ ಇಟ್ಟುಕೊಂಡಾಗ ತಲೆ ನೋವು ಉಪಶಮನವಾಗುತ್ತದೆ.
ಒಂದು ಭಾಗ ತಲೆ ನೋವಿನಿಂದ ಬಳಲುತ್ತಿರುವವರು ಕಡು ನೀಲಿ ಸ್ಫಟಿಕವನ್ನು ಹಣೆಯ ಮೇಲೆ ಹತ್ತು ನಿಮಿಷ ಇಟ್ಟುಕಂಡರೆ ನೋವಿನಿಂದ ಮುಕ್ತಿ ಪಡೆಯಬಹುದು.
ನೀಲಿ ಬಣ್ಣದ ಸ್ಫಟಿಕವನ್ನು ಗಂಟಲಿನ ಭಾಗದಲ್ಲಿ 25 ನಿಮಿಷಗಳ ಕಾಲ ಇಟ್ಟಾಗ ಗಂಟಲು ನೋವು ಕಡಿಮೆಯಾಗುತ್ತದೆ.
ಗ್ಯಾಸ್ಟ್ರಿಕ್ನಿಂದ ಬಳಲುತ್ತಿರುವವರು ಹಳದಿ ಸ್ಫಟಿಕವನ್ನು 10 ನಿಮಿಷ ಹೊಟ್ಟೆಯ ಮೇಲೆ ಇಟ್ಟುಕೊಂಡರೆ ಗಣನೀಯವಾಗಿ ಈ ಸಮಸ್ಯೆ ಕಡಿಮೆಯಾಗುತ್ತದೆ.
= ಹೃದಯ ಸಂಬಂಧಿ ಖಾಯಿಲೆ ಹಾಗೂ ರಕ್ತದೊತ್ತಡದಿಂದ ಬಳಲುತ್ತಿರುವವರು ಗುಲಾಬಿ ಬಣ್ಣದ ಸ್ಫಟಿಕ ಮಣಿಯನ್ನು ಸುಮಾರು ಅರ್ಧಗಂಟೆ ಎದೆ ಭಾಗದಲ್ಲಿ ಇಟ್ಟುಕೊಂಡರೆ ಇವರ ಆರೋಗ್ಯ ಸುಧಾರಿಸುತ್ತದೆ.
ಸಾಮಾನ್ಯವಾಗಿ ಸ್ಫಟಿಕವನ್ನು ಎಲ್ಲರೂ ಧರಿಸಬಹುದು ಆದರೆ ವೃಷಭ, ಮಿಥುನ, ಕಟಕ, ಕನ್ಯಾ, ತುಲಾ, ಮಕರ ಹಾಗೂ ಕುಂಭ ರಾಶಿಯವರು ಧರಿಸಿದರೆ ಉತ್ತಮ ಪರಿಣಾಮ ಬೀರುತ್ತದೆ. ಭರಣಿ, ಆರಿದ್ರಾ, ಪುಷ್ಯ, ಆಶ್ಲೇಷ, ಪುಬ್ಬ, ಅನುರಾಧ, ಜೇಷ್ಠ, ಪೂರ್ವಾಷಾಢ, ಶತಭಿಷ, ರೇವತಿ ಈ ನಕ್ಷತ್ರದವರು ಈ ಸ್ಫಟಿಕವನ್ನು ಧರಿಸುವುದರಿಂದ ಹೆಚ್ಚಿನ ಅನುಕೂಲ ಹೊಂದುತ್ತಾರೆ.
-ಮಂಡಗದ್ದೆ ಪ್ರಕಾಶಬಾಬು