

ಉಪನಯನ ಹಿಂದೂಗಳ ಸಂಪ್ರದಾಯದಲ್ಲಿ ಪ್ರಮುಖ ಕರ್ಮ. ಈ ಕರ್ಮ ಧಾರ್ಮಿಕ ಆಚರಣೆ ಹಾಗೂ ದೈವಿಕ ಆಚರಣೆ ನಡೆಸಲು ಪ್ರಥಮ ಸೋಪಾನ. ಉಪವೀತನಾದವನಿಗೆ ದೈವಿಕ ಆಚರಣೆ ನಡೆಸಲು ಆದ್ಯತೆ ಇರುತ್ತದೆ. ಏಕೆಂದರೆ, ಬಹ್ಮೋಪನಯನ ಆದವನಿಗೆ ಮನಸ್ಸನ್ನು ಪಂಚೇಂದ್ರಿಯಗಳ ಹಿಡಿತದಲ್ಲಿರುವಂತೆ ಮಾಡುವ ಸಾಮರ್ಥ್ಯ ಈ ಕಾರ್ಯದಲ್ಲಿರುತ್ತದೆ. ಅಂದರೆ ದೈವಕ್ಕೆ ಹತ್ತಿರ ಹಾಗೂ ದೈವಾಚರಣೆ ಮಾಡುವ ಕರ್ಮವೇ ಈ ಕಾರ್ಯ.
ಬ್ರಾಹ್ಮಣ ವಟುವಿಗೆ 8 ವರ್ಷದೊಳಗೆ ವಸಂತ ಋತುವಿನಲ್ಲಿ, ಕ್ಷತ್ರಿಯರಿಗೆ 16 ವರ್ಷದ ಒಳಗಡೆ ಗ್ರೀಷ್ಮ ಋತುವಿನಲ್ಲಿ, ವೈಶ್ಯರಿಗೆ 6 ರಿಂದ 12ನೇ ವರ್ಷದ ಒಳಗೆ ಶರತ್ ಋತುವಿನಲ್ಲಿ ಉಪನಯನ ಮಾಡಬೇಕು. ಆದರೆ ಈಗಿನ ನಾಗರಿಕ ಜೀವನದಲ್ಲಿ ಹಿಂದಿನ ಪರಂಪರೆಯನ್ನು ಅನೂಚಾನವಾಗಿ ಆಚರಿಸದೆ ಸಂಪ್ರದಾಯ ಬಿಡಬಾರದೆಂಬ ವ್ಯಾಮೋಹಕ್ಕೆ ಒಳಗಾಗಿ ಮದುವೆಯ ದಿನದಂದೇ ಉಪನಯನ ಮಾಡುವುದೂ ಇದೆ. ಇದರಿಂದ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು.
ಮುಹೂರ್ತ ವತ್ಯಾಸ
ಮದುವೆ ಮತ್ತು ಇತರೆ ಕಾರ್ಯಕ್ರಮದ ಮುಹೂರ್ತಕ್ಕೂ ಉಪನಯನದ ಮುಹೂರ್ತಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ವಿವಾಹಕ್ಕೆ 7ನೇ ಮನೆ ಶುದ್ಧಿ ಮಾಡಿ ತಾರಾಬಲ ನೋಡಲಾಗುತ್ತದೆ. ಆದರೆ ಉಪನಯನದ ಮುಹೂರ್ತ ಲಗ್ನ ಸರಿ ಇಲ್ಲದಿದ್ದಾಗ ಹಲವು ಅವಘಡಗಳು ಸಂಭವಿಸುತ್ತವೆ.
ಏನೇನು ಸಾಧ್ಯತೆ?
ಲಗ್ನದಿಂದ 12ರಲ್ಲಿ ರವಿ ಇದ್ದು, ಕುಜ ರವಿಯನ್ನು ವೀಕ್ಷಿಸಿದರೆ ತಂದೆಗೆ ಅಂಧತ್ವ ಬರುತ್ತದೆ. ಲಗ್ನಕ್ಕೆ ವ್ಯಯಭಾವದಲ್ಲಿ ಕುಜ ಮತ್ತು ಶನಿಯುತಿ ಉಂಟಾದರೆ ವಟುವಿಗೆ ಕಾರಾಗೃಹವಾಸ ಉಂಟಾಗುವ ಸಾಧ್ಯತೆ. ಲಗ್ನದಲ್ಲಿ ಚಂದ್ರ ಸ್ಥಿತನಾದರೆ ವಟು ಅನಾರೋಗ್ಯ ಪೀಡಿತ ದುರ್ನಡತೆಯುಳ್ಳ, ಧರ್ಮಬಾಹಿರನೂ ಹಾಗೂ ಕರ್ಮಹೀನನೂ ಆಗುವನು. ಒಂದು ವೇಳೆ ಶುಕ್ಲ ಪಕ್ಷದ ಚಂದ್ರ ಲಗ್ನದಲ್ಲಿದ್ದು, ಶುಭ ಗ್ರಹ ದೃಷ್ಟಿ ಇದ್ದರೆ ಮಾತ್ರ ಶುಭ ಫಲ ದೊರೆಯುತ್ತದೆ ಎಂಬುದು ಗಾರ್ಗ್ಯ ಮಹರ್ಷಿಗಳ ಅಭಿಪ್ರಾಯ.
ಕಟಕ ಲಗ್ನವಾಗಿ ಅದರಲ್ಲಿ ಗುರುಚಂದ್ರರ ಯುತಿ ಇದ್ದು, ಲಗ್ನಕ್ಕೆ ದಶಮ ಕೇಂದ್ರದಲ್ಲಿ ಬುಧ- ಶುಕ್ರರು ಮತ್ತು 11ರಲ್ಲಿ ರವಿ ಹಾಗೂ 3-6-11ನೇ ಸ್ಥಾನದಲ್ಲಿ ಶನಿ ಕುಜರು ಇದ್ದ ಸಮಯದಲ್ಲಿ ಉಪನೀತನಾದ ವಟುನಿಗೆ ಐಶ್ವರ್ಯ, ವಿದ್ಯೆ, ಸಕಲ ಭೋಗದ ಭಾಗ್ಯವಿರುತ್ತದೆ.
ಉಪನಯನ ಲಗ್ನಕ್ಕೆ ಯಾವ ನಕ್ಷತ್ರ ಎಷ್ಟನೇ ಹಾಗೂ ಆ ಕಾಲಕ್ಕೆ ಯಾವ ನವಾಂಶ ಬರುವುದೋ ಅದರ ಮೇಲೆ ಸಿಂಹ ನವಾಂಶವಾದರೆ ಪಾಪಕಾರ್ಯ ಮಾಡುವವನು, ಕಟಕ ನವಾಂಶವಾದರೆ ದರಿದ್ರನೂ, ವೃಶ್ಚಿಕ ನವಾಂಶವಾದರೆ ಆಯುಧ ಧಾರಿಗಳು, ಕನ್ಯಾ ಮಿಥುನ ಅಂಶವಾದರೆ ವಿದ್ಯಾಯುಕ್ತ, ತುಲಾ, ವೃಷಭಾಂತನಾದರೆ ಶೀಘ್ರವೇ ಗೃಹ ಸ್ಥಾಪಿಸುವನು. ಮಕರ, ಕುಂಭ ಅಂಶವಾದರೆ ಚಂಡಾಲ ಸಹವಾಸದಿಂದ ಅವರ ಸೇವೆ ಮಾಡಬಯಸುವನು ಆಗುತ್ತಾನೆ.
ನಿಯಮಗಳು
ಉಪನಯನಕ್ಕೆ ಅಗತ್ಯವಾಗಿ ಕೆಲ ನಿಯಮಗಳನ್ನು ಅನುಸರಿಸಲೇಬೇಕು. ಉಪನಯನವನ್ನು ಉತ್ತರಾಯಣ ಕಾಲದಲ್ಲಿ ಮಾಡುವುದು ಒಳ್ಳೆಯದು. ಮಾಘ- ಫಾಲ್ಗುಣ, ಚೈತ್ರ- ವೈಶಾಖ ಉತ್ತಮ ಮಾಸಗಳು. 8ನೇ ವಯಸ್ಸಿನಲ್ಲಿ ಉಪನಯನ ಮಾಡುವಾಗ ವಟುವಿಗೆ ಗುರುಬಲ ಇಲ್ಲದಿದ್ದರೆ ಶಾಂತಿ ಕರ್ಮ ಆಚರಿಸಿ ಈ ಕಾರ್ಯ ಮಾಡಬಹುದು.
ಗುರು ಸ್ವಸ್ಥಾನ- ಉಚ್ಛ ಸ್ಥಾನ ಸ್ಥಿರವಾದರೆ ಒಳ್ಳೆಯದು. 2-3-5-7-10-13ನೇ ತಿಥಿಗಳು ಉತ್ತಮ ಮಾಘ ಫಾಲ್ಗುಣ ಮಾಸದಲ್ಲಿ ತೃತೀಯ ಮತ್ತು ಸಪ್ತಮಿ ತಿಥಿಗಳು ಬಳಸಬಹುದೆಂದು ಗಾರ್ಗ್ಯ ಮಹರ್ಷಿಗಳ ಅಭಿಮತ.
ಸೋಮವಾರ ಉಪನಯನಕ್ಕೆ ನಿಷಿದ್ಧ. ವಟುವಿನ ತಾಯಿ ಗರ್ಭವತಿಯಾಗಿ 6 ತಿಂಗಳಾಗಿದ್ದರೆ ಕಾರ್ಯ ಮಾಡಬಹುದು. ನಂತರದ ಮಾಸ ವರ್ಜ್ಯ. ಜನ್ಮರಾಶಿಗೆ ಉಪನಯನ ಲಗ್ನ ಅಷ್ಟಮವಾಗಿರಬಾರದು ಮತ್ತು ಉಪನಯನ ಲಗ್ನಕ್ಕೆ 2 ಮತ್ತು 8ನೇ ಮನೆ ಶುದ್ಧ ಅವಶ್ಯ. ಅಷ್ಟಮ ಮತ್ತು ದಶಮದಲ್ಲಿ ಚಂದ್ರ ಇರುವುದು ನಿಷಿದ್ಧ.
ಬುಧವಾರ- ಗುರುವಾರ ಮತ್ತು ಶುಕ್ರವಾರ ಶ್ರೇಷ್ಠ. ಸೋಮವಾರ ಸಾಧಾರಣ- ಭಾನುವಾರ ಅತಿ ಸಾಧಾರಣ ಮಾಹಿತಿಗೆ ಮೊ: 9611989120.
- ಸಿ. ರಂಗನಾಥರಾವ್
ಚಿತ್ರ: ದಿನೇಶ್ ಜೆ.ಕೆ.