ಝರಣಿ ಗುಹಾ ದೇವಾಲಯದ ನರಸಿಂಹ ಸ್ವಾಮಿ ಮಹಿಮೆ ಗೊತ್ತಾ!

ಮಬ್ಬು ಕತ್ತಲಿನ ಗುಹೆಯಲ್ಲಿ ಸದಾ ಹರಿಯುವ ನೀರಿನಲ್ಲಿ ಸುಮಾರು 300 ಅಡಿಗಳಷ್ಟು ದೂರ ಎದೆಮಟ್ಟದ ಉಗುರು ಬೆಚ್ಚಗಿನ ನೀರಲ್ಲಿ ನಡೆದು ಹೋಗಿ ದೇವರ ದರ್ಶನ ಪಡೆಯುವುದು ಒಂದು ವಿಶಿಷ್ಟ ಅನುಭವ.
ನರಸಿಂಹ ಸ್ವಾಮಿ ಝಿರಾ ಗುಹಾ ದೇವಾಲಯ
ನರಸಿಂಹ ಸ್ವಾಮಿ ಝಿರಾ ಗುಹಾ ದೇವಾಲಯ
Updated on: 

ದೇವರ ಮೇಲಿನ ನಂಬಿಕೆಗೆ ಅಪಾರ. ಜನ ಮರುಳೋ ಜಾತ್ರೆ ಮರುಳೋ ಎಂಬ ಮಾತಿದೆ. ಇದಕ್ಕೆ ಅಪವಾದ ಎಂಬಂತ್ತೆ ಬೀದರ್ ಹೊರವಲಯದಲ್ಲಿರುವ ನರಸಿಂಹ ಝರಣಿ ಗುಹಾ ದೇವಾಲಯ ಕರ್ನಾಟಕದ ಅಪರೂಪದ ಯಾತ್ರಾಸ್ಥಳ ಜತೆಗೆ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಭಕ್ತರ ಆರಾಧ್ಯ ಕ್ಷೇತ್ರವಾಗಿದೆ.

ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ- ಮಹಾರಾಷ್ಟ್ರಗಳಿಂದ ನವ ವಧುವರರು ನರಸಿಂಹ ಝರಣಿಗೆ ಬಂದು ಪೂಜಿಸುವ ಸಂಪ್ರದಾಯವಿದೆ. ಮಕ್ಕಳಾಗದ ದಂಪತಿ ಸಂತಾನ ಪ್ರಾಪ್ತಿಗಾಗಿ ನರಸಿಂಹ ದೇವರಲ್ಲಿ ಹರಕೆ ಕಟ್ಟಿಕೊಳ್ಳುತ್ತಾರೆ. ಹೆರಿಗೆಗೆ ತವರಿಗೆ  ಹೋಗುವ ಮುನ್ನ ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸಿ ಹೋಗುವ ರೂಢಿಯಿದೆ. ಮಕ್ಕಳಾದ ಮೇಲೆ ಬಂದು ಮಗುವಿನ ಜಾವಳ ತೆಗೆಸುವ ಅಥವಾ ತೊಟ್ಟಿಲು ಬಿಡುವ ಹರಕೆ ಸಲ್ಲಿಸುತ್ತಾರೆ.

ವಿಶೇಷ ಅನುಭವ
ನರಸಿಂಹ ಝರಣಿ ಗುಹಾ ದೇವಾಲಯ ಮಬ್ಬು ಕತ್ತಲಿನ ಗುಹೆಯಲ್ಲಿ ಸದಾ ಹರಿಯುವ ನೀರಿನಲ್ಲಿ ಸುಮಾರು 500 ಅಡಿಗಳಷ್ಟು ದೂರ ನಡೆದು ಹೋಗಿ ದೇವರ ದರ್ಶನ ಮಾಡಬೇಕು. ಎದೆಮಟ್ಟದ ಉಗುರು ಬೆಚ್ಚಗಿನ ನೀರಲ್ಲಿ ನಡೆದು ಸಾಗುವುದು ಒಂದು ವಿಶಿಷ್ಟ ಅನುಭವ.

ಗುಹೆಯ ಮಬ್ಬುಗತ್ತಲಿನಲ್ಲಿ ನೀರಿನಲ್ಲಿ ನಡೆದು ಹೋಗಲು ಮಾನಸಿಕ ಸಿದ್ಧತೆ ಇದ್ದರೆ ದರ್ಶನ ಸುಲಭ. ಗುಹೆಯೊಳಗಿನ ನೀರು ಯಾವುದೇ ಸಂದರ್ಭದಲ್ಲೂ ಎದೆಮಟ್ಟ ಮೀರುವುದಿಲ್ಲ. ಈ ನೀರಲ್ಲಿ ಎಷ್ಟು ಸಲ ಓಡಾಡಿದರೂ ಶೀತ ಆಗುವುದಿಲ್ಲ! ಈ ನೀರಿನಲ್ಲಿ ಗಂಧಕ (ಸಲ್ಫರ್)ದ ಅಂಶವಿದೆ. ನೀರು ಚಳಿಗಾಲದಲ್ಲೂ ಬೆಚ್ಚಗಿನ ಅನುಭವ ನೀಡುತ್ತದೆ. ಈ ನೀರಿನಲ್ಲಿ ನೆನೆದರೆ ಚರ್ಮದ ರೋಗಗಳು ನಿವಾರಣೆ ಆಗುತ್ತವೆ ಎಂಬ ನಂಬಿಕೆ ಇದೆ.

ಗುಹೆಯೊಳಗೆ ನಡೆದು ಸ್ವಾಮಿಯ ದರ್ಶನಕ್ಕೆ ಹೋಗುವಾಗ ಧರಿಸಲು ಅಗತ್ಯ ಬಟ್ಟೆ (ಟವೆಲ್, ಲುಂಗಿ, ಮಹಿಳೆಯರಿಗೆ ಪ್ರತ್ಯೇಕ ಸೀರೆ) ತರಬೇಕು. ಕೌಂಟರ್‌ನಲ್ಲಿ ಟಿಕೆಟ್ ಪಡೆದು ಸಾಲಿನಲ್ಲಿ ಗುಹೆ ಮುಂಭಾಗದಿಂದ ನರಸಿಂಹ ದೇವರ ಕಡೆಗೆ ನಡೆದು ಸಾಗಬೇಕು. ಅದಕ್ಕೂ ಮೊದಲು ಗುಹೆಯಿಂದ ಹರಿದು ಗೋಮುಖದ ಮೂಲಕ ಬರುವ ನೀರಿನಲ್ಲಿ ಮೈ ತೊಳೆದುಕೊಳ್ಳಬೇಕು. ಗುಹೆಯೊಳಕ್ಕೆ ಹೋಗದೇ ಹಿಂದಿರುಗುವವರಿಗೆ ಇಲ್ಲಿಯೇ ಪೂಜೆ, ಮಂಗಳಾರತಿ ಮಾಡಿ ಕೊಡುವ ವ್ಯವಸ್ಥೆಯೂ ಇದೆ. ವಿಶೇಷ ಪೂಜೆ ಮಾಡಿಸುವವರು ಅರ್ಚಕರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು. ಸಾಮಾನ್ಯ ಪೂಜೆಗಾಗಿ ಅರ್ಚಕರೊಬ್ಬರು ಗುಹೆಯೊಳಗೆ ಇರುತ್ತಾರೆ.

ನರಸಿಂಹ ಜಯಂತಿಯಂದು ಇಲ್ಲಿ ವಿಶೇಷ ಪೂಜೆ, ಹೋಮ-ಹವನಗಳು ನಡೆಯುತ್ತವೆ. ಅದನ್ನು ಬಿಟ್ಟರೆ ಇಲ್ಲಿ ವರ್ಷದಲ್ಲಿ ವಿಶೇಷ ಆಚರಣೆಗಳಿಲ್ಲ. ಹರಕೆ ಹೊತ್ತವರು ಸಾಮಾನ್ಯವಾಗಿ ಮಂಗಳವಾರ ಮತ್ತು ಶನಿವಾರ ಇಲ್ಲಿಗೆ ಬರುತ್ತಾರೆ. ದೇವಸ್ಥಾನದ ಮುಂಭಾಗದಲ್ಲಿ ನೈವೇದ್ಯಕ್ಕಾಗಿ ಅಡುಗೆ ಮಾಡಲು ಬೇಕಾದ ಸೌದೆ ಮತ್ತಿತರ ವಸ್ತುಗಳು ದೊರೆಯುತ್ತವೆ. ಎರಡು ಕಣಿವೆಗಳ ನಡುವೆ ಇರುವ ಪ್ರದೇಶದಲ್ಲಿ ಕಟ್ಟಿಗೆಯ ಒಲೆ ಹೂಡಿ ಎಣ್ಣೆ ಹೋಳಿಗೆ, ಅನ್ನ ನೈವೇದ್ಯ ಮಾಡಿ ಅರ್ಪಿಸುತ್ತಾರೆ.

ದೇವಾಲಯದ ಇತಿಹಾಸ
ಹಿರಣ್ಯಕಶಪುವಿನ ವಧೆಯ ಬಳಿಕ ನರಸಿಂಹನು ಶಿವ ಭಕ್ತನು ಮತ್ತು ಅಸುರನು ಆದ "ಜಲಾಸುರ" ನ ವಧೆ ಮಾಡಲು ಬರುತ್ತಾನೆ. ಯುದ್ಧದ ಬಳಿಕ ಜಲಾಸುರನು ಸೋಲನ್ನೋಪ್ಪಿ, ಸಾವನ್ನೋಪ್ಪುವಾಗ ನರಸಿಂಹನ ಕಾಲು ಹಿಡಿದು ಇಲ್ಲಿಯೇ ವಾಸಮಾಡಿ ಬಂದ  ಭಕ್ತರಿಗೆ ಆಶಿರ್ವಾದ ಮಾಡುವಂತೆ ವರ ಕೇಳಿ ಕೊಳ್ಳುತ್ತಾ ನರಸಿಂಹನ ಪಾದದಿಂದ ನೀರಾಗಿ ಹರಿಯಲು ಶುರುಮಾಡುತ್ತಾನೆ. ಅವನಿಗೆ ಕೊಟ್ಟ ಮಾತಿನಂತೆ ದೇವರು ಗುಹೆಯೊಳಗೆ ಐಕ್ಯವಾದರೆಂದು ಪ್ರತೀತಿ.  ನರಸಿಂಹನ ಪಾದದಿಂದ ನೀರು ಸತತವಾಗಿ ಸುರಿಯುವುದರಿಂದಲೇ ಇ ಸ್ಥಳಕ್ಕೆ "ನರಸಿಂಹ ಝೀರ" ಎಂದು ಹೆಸರಿಡಲಾಗಿದೆ.

ದೇವರ ದರ್ಶನಕ್ಕೆ ಪ್ರಶಸ್ತ ಕಾಲ
ನವೆಂಬರ್‌ನಿಂದ ಜನವರಿ ನಡುವಿನ ಅವಧಿ ದೇವಸ್ಥಾನಕ್ಕೆ ಭೇಟಿ ನೀಡುವುದಕ್ಕೆ ಪ್ರಶಸ್ತ ಕಾಲ. ನಿತ್ಯ ಬೆಳಿಗ್ಗೆ ಏಳು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಗುಹೆಯೊಳಕ್ಕೆ ಹೋಗಿ ಸ್ವಾಮಿಯ ದರ್ಶನ ಪಡೆಯಬಹುದು. ಮುಜರಾಯಿ ಇಲಾಖೆಯ ಕೌಂಟರ್‌ನಲ್ಲಿ ಐದು ರೂಪಾಯಿ ಪಾವತಿಸಿ ಪ್ರವೇಶ ಟಿಕೆಟ್ ಪಡೆಯಬೇಕು. ಸೂರ್ಯಗ್ರಹಣ ಸಂದರ್ಭದಲ್ಲಿ ದೇವಾಲಯ ಮುಚ್ಚಿರುತ್ತದೆ.

ಜಂಬಿಟ್ಟಿಗೆ ನೆಲದ ಕಣಿವೆಯಲ್ಲಿ ಇರುವ ಈ ಗುಹಾಲಯದಲ್ಲಿ ವರ್ಷವಿಡೀ ನೀರು ಹರಿಯುತ್ತದೆ. ಗುಹೆಯಲ್ಲಿ ಉಸಿರಾಟಕ್ಕೆ ತೊಂದರೆ ಆಗದಂತೆ ಹೊರಗಿನಿಂದ ಗಾಳಿ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ದರ್ಶನಕ್ಕೆ, ನೈವೇದ್ಯ, ಜಾವಳ, ಪೂಜೆ, ಅಭಿಷೇಕ ಮತ್ತು ಮಹಾಭಿಷೇಕ ಇತ್ಯಾದಿಗಳಿಗೆ ಪ್ರತ್ಯೇಕ ಟಿಕೆಟ್ ಖರೀದಿಸಬೇಕು. ಕೇಶಮುಂಡನಕ್ಕೂ ಇಲ್ಲಿ ವ್ಯವಸ್ಥೆ ಇದೆ. ಝರಣಿಯಿಂದ ಹೊರಬಂದ ನೀರಿನಲ್ಲಿ ಸ್ನಾನ ಮಾಡುವುದಕ್ಕೆ ಮತ್ತು ಬಟ್ಟೆ ಬದಲಿಸುವುದಕ್ಕೆ ವ್ಯವಸ್ಥೆ ಇದೆ.

ತಲುಪುವ ಮಾರ್ಗಗಳು
ಬೆಂಗಳೂರಿನಿಂದ ಹೈದರಾಬಾದ್ ಗೆ ವಿಮಾನದಲ್ಲಿ ಪ್ರಯಾಣಿಸಿದರೆ ಹೈದರಾಬಾದ್‌ನಿಂದ ಬೀದರ್‌ಗೆ ರೈಲು ಹಾಗೂ ಬಸ್ ಸೌಕರ್ಯವಿದೆ. ಬೆಂಗಳೂರಿನಿಂದ ನಾಂದೇಡ್‌ಗೆ ಹೋಗುವ ಎಕ್ಸ್‌ಪ್ರೆಸ್ ರೈಲು ಬೀದರ್ ಮಾರ್ಗವಾಗಿ ಹೋಗುತ್ತದೆ. ಗುಲ್ಬರ್ಗ ಮತ್ತು ಹೈದರಾಬಾದ್‌ನಿಂದ ರಸ್ತೆ ಸಂಪರ್ಕವೂ ಇದೆ. ನರಸಿಂಹ ಝರಣಿ ಹೈದರಾಬಾದ್‌ನಿಂದ 120 ಕಿ.ಮೀ., ಗುಲ್ಬರ್ಗ ನಗರದಿಂದ 110  ಕಿ.ಮೀ. ದೂರದಲ್ಲಿದೆ. ಬೀದರ್ ಬಸ್ ನಿಲ್ದಾಣದಿಂದ ಝರಣಿಗೆ ನಗರ ಸಾರಿಗೆಯ ಬಸ್‌ಗಳ ಮೂಲಕ  ಹೋಗಬಹುದು. ಆಟೋರಿಕ್ಷಾಗಳೂ ಇವೆ.

- ವಿಶ್ವನಾಥ್. ಎಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com