ಜಾಬಾಲಿ ಮಹರ್ಷಿಗಳು ಲೋಕಕಲ್ಯಾಣಕ್ಕಾಗಿ ಒಂದು ಯಜ್ಞವನ್ನು ನಡೆಸಲು ನಿರ್ಣಯಿಸಿ ಪುಣ್ಯ ಹಸುವಾಗಿದ್ದ ಕಾಮಧೇನುವನ್ನು ಭೂಮಿಗೆ ಕರೆತರಲು ನಿರ್ಧರಿಸಿದನು. ಕಾಮಧೇನುವನ್ನು ತರಲು ದೇವತೆಗಳ ಒಡೆಯನಾದ ಇಂದ್ರನ ಒಪ್ಪಿಗೆ ಕೇಳಿದಾಗ ಇಂದ್ರನು ಕಾಮಧೇನುವು ವರುಣ ಲೋಕಕ್ಕೆ ಹೋಗಿರುವುದರಿಂದ ಅದರ ಬದಲು ನಂದಿನಿಯನ್ನು ಕರೆದೊಯ್ಯಬಹುದಾಗಿ ತಿಳಿಸಿದನು. ಆದರೆ ಜಾಬಾಲಿ ಮಹರ್ಷಿಯೊಂದಿಗೆ ಹೋಗಲು ನಿರಾಕರಿಸಿದ ನಂದಿನಿಗೆ ಜಾಬಾಲಿ ಮಹರ್ಷಿ ಶಾಪ ನೀಡುತ್ತಾರೆ. ಶಾಪ ವಿಮೋಚನೆಗಾಗಿ ಪ್ರಾರ್ಥಿಸಿದಾಗ ದುರ್ಗಿಯು ಪ್ರತ್ಯಕ್ಷವಾಗಿ ಜಬಲಿ ಮಹರ್ಷಿಯ ಶಾಪದಂತೆ ನದಿಯಾಗಿ ಹರಿಯುವಂತೆ ಹೇಳಿದಳು. ನಂತರ ತಾನೇ ಆಕೆಯ ಮಗಳಂತೆ ಹುಟ್ಟಿ ಮಹರ್ಷಿ ಜಬಲಿಯ ಶಾಪ ವಿಮೋಚನೆಗೊಳಿಸುವುದಾಗಿ ಆಶೀರ್ವದಿಸಿದಳು. ನಂತರ ಅರುಣಾಸುರನೆಂಬ ರಾಕ್ಷಸನ ಸಂಹಾರ ಮಾಡಬೇಕಾಗುತ್ತದೆ. ಎರಡು ಅಥವಾ ನಾಲ್ಕು ಕಾಲಿನ ಯಾವುದೇ ಪ್ರಾಣಿಯಾಗಲಿ ಹಾಗೂ ಆಯುಧದಿಂದಾಗಲಿ ತನಗ ಸಾವು ಬರಬಾರದೆಂದು ಅರುಣಾಸುರನೆಂಬ ರಾಕ್ಷಸ ವರ ಪಡೆದಿದ್ದ ಕಾರಣ, ದೇವಿಯು ದುಂಬಿಗಳ ರೂಪದಲ್ಲಿ ಆತನನ್ನು ಸಂಹಾರ ಮಾಡುತ್ತಾಳೆ, ಅರುಣಾಸುರನ ಸಂಹಾರವಾದ ನಂತರ ದೇವತೆಗಳಲೆಲ್ಲಾ ಭ್ರಮರಾಂಬಿಕೆಗೆ (ದುಂಬಿಗಳ ರಾಣಿ) ಉಗ್ರರೂಪದಿಂದ ಶಾಂತಿ ಸ್ವಭಾವವನ್ನು ಹೊಂದಲು ಪ್ರಾರ್ಥಿಸಿದರು ಆಗ ದೇವಿಯು ಶಾಂತ ರೂಪದಲ್ಲಿ ನಂದಿನಿ ನದಿಯ ಕೇಂದ್ರ ಭಾಗದಲ್ಲಿ ಬಂದು ಅವತರಿಸುತ್ತಾಳೆ, ಇದೇ ವೇಳೆ ನಂದಿನಿಗೆ ನೀಡಲಾಗಿದ್ದ ಶಾಪವಿಮೋಚನೆ ಮಾಡುತ್ತಾಳೆ. ನಂದಿನಿ ನದಿಯಿಂದ ದುರ್ಗೆ ಅವತರಿಸಿದ್ದಕ್ಕಾಗಿ ಈ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರು ಬಂದಿದೆ.