ಕಾರವಾರ್‌ಶಿಪ್

ಕಾರವಾರ ಎಂದೊಡನೆ ಹಚ್ಚಹಸಿರಿನ ಪರಿಸರದ ಮಧ್ಯ ಕಡಲ ತೆರೆಗಳು ಕುಪ್ಪಳಿಸುವ ದೃಶ್ಯ...
ಕಾರವಾರ್‌ಶಿಪ್
Updated on: 

ಕಾರವಾರ ಎಂದೊಡನೆ ಹಚ್ಚಹಸಿರಿನ ಪರಿಸರದ ಮಧ್ಯ ಕಡಲ ತೆರೆಗಳು ಕುಪ್ಪಳಿಸುವ ದೃಶ್ಯ ಕಣ್ಮುಂದೆ ಸುಳಿಯುತ್ತದೆ. ಮೀನುಗಾರಿಕೆ, ಅದಿರು ಸಾಗಣೆ, ಬೋಟಿಂಗ್ ಚಟುವಟಿಕೆಗಳಿಂದ ಪ್ರಸಿದ್ಧವಾಗಿರುವ ಕಾರವಾರ, ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಿ. ಅರಣ್ಯ ಪರಿಸರದೊಂದಿಗೆ ಮನರಂಜನೆಯೂ ಸಿಗುವ ಕಾರವಾರದಲ್ಲಿ ಈಗ ಪ್ರಸಿದ್ಧಿ ಪಡೆಯುತ್ತಿರುವುದು 'ಐಎನ್‌ಎಸ್ ಚಾಪೆಲ್‌' (ಸ್ಪೀಡ್) ವಾರ್‌ಶಿಪ್ ಮ್ಯೂಸಿಯಂ.
ಕಾರವಾರದ ರವೀಂದ್ರನಾಥ ಟಾಗೋರ್ ಬೀಚ್ ಬಳಿ ಸ್ಥಾಪಿತವಾಗಿರುವ ಈ ಮ್ಯೂಸಿಯಂ ಎನ್‌ಎಚ್ 17ಕ್ಕೆ ಅಂಟಿಕೊಂಡಿದೆ. ಇಲ್ಲೊಂದು ಹಡಗಿದೆ. ನೇವಿಯಿಂದ ಮೇ 5, 2005ರಲ್ಲಿ ರಿಟೈರ್‌ಮೆಂಡ್ ಆಗುವ ಮುನ್ನ ಈ ಹಡಗು ವಿಶಾಖಪಟ್ಟಣಂನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಕಾರವಾರದಲ್ಲಿ ನೌಕಾನೆಲೆ ಸ್ಥಾಪಿತ ವೇಳೆ ರಕ್ಷಣಾ ಸಚಿವಾಲಯ 2006ರ ಏಪ್ರಿಲ್‌ನಲ್ಲಿ ಜಿಲ್ಲಾಡಳಿತಕ್ಕೆ ಒಪ್ಪಿಸಿತು. ರಷ್ಯಾದಿಂದ ಕೊಂಡು ತಂದ ಮಿಸಿಲ್ ಬೋಟ್ ಇದಾಗಿದೆ. 2006ರ ನವೆಂಬರ್‌ನಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಹಡಗಿನ ತೂಕ 245 ಟನ್. 38.6 ಮೀಟರ್ ಉದ್ದವಿದ್ದು, ಬೀಮ್ ಎತ್ತರ 7.6 ಮೀಟರ್ ಇದೆ. ವೇಗ 37 ನಾಟ್ಸ್. 1971ರ ಭಾರತ- ಪಾಕ್ ಯುದ್ಧದಲ್ಲಿ ಭಾಗವಹಿಸಿದ್ದ ಕಾರಣಕ್ಕೆ ಇದು ಮಹತ್ವದ್ದಾಗಿದೆ. ನಮ್ಮ ನೌಕಾದಳದಲ್ಲಿ ಇದು 24 ವರ್ಷ ಸೇವೆ ಸಲ್ಲಿದೆ. ವಾರ್‌ಶಿಪ್ ಮ್ಯೂಸಿಯಂ ಬಳಿ ಕೆಲವು ಮಿಸಿಲ್‌ಗಳನ್ನು ಪ್ರದರ್ಶನಕ್ಕಿರಿಸಲಾಗಿದೆ.

ಒಳಗಡೆ ಏನೈತಿ?
ಇದರೊಳಗೆ ಎಲ್ಲವೂ ತಂತ್ರಜ್ಞಾನ ಆಧರಿಸಿ ಕಾರ್ಯಚಟುವಟಿಕೆಗಳೇ ಕಣ್ಣಿಗೆ ಕಾಣಿಸುತ್ತವೆ. ಪ್ರವೇಶದ್ವಾರದ ಬಲಗಡೆಯೇ ಭಾರತೀಯ ನೌಕಾದಳದ ಕಾರ್ಯವನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಲು ಎಲ್‌ಸಿಡಿ ಟಿವಿ ಇಡಲಾಗಿದೆ. ಇಲ್ಲಿ 10 ನಿಮಿಷದ ಸಾಕ್ಷ್ಯಚಿತ್ರವು ಯುದ್ಧಗಳು, ಆಪರೇಟಿಂಗ್ ವ್ಯವಸ್ಥೆ ಹಾಗೂ ನೌಕಾದಳದ ಆಡಳಿತ ಬಗೆಗಿನ ಕಿರುಮಾಹಿತಿ ನೀಡುತ್ತದೆ.
ಸ್ಟಾಫ್‌ಗಳ ವಿಶ್ರಾಂತಿ ಕೊಠಡಿ, ಕಚೇರಿ ವ್ಯವಸ್ಥೆಯ ಪ್ರತಿರೂಪಗಳು ಇಲ್ಲಿವೆ. ಪ್ರವಾಸಿಗರು ಅದರಲ್ಲೂ ಮೆಕಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಪ್ಪದೇ ಭೇಟಿ ನೀಡಬೇಕಾದ ತಾಣ. ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾಗವಹಿಸಿ ಪರಮವೀರ ಚಕ್ರ ಪಡೆದ ಮೇಜರ್ ರಾಮ ರಾಗೋಭ ರಾಣೆ ಅವರ ಪ್ರತಿಮೆಯನ್ನೂ ಹಡಗಿಗೆ ಅಭಿಮುಖವಾಗಿ ಸ್ಥಾಪಿಸಲಾಗಿದೆ.
ಈ ಹಡಗು ನಿಲ್ಲಿಸಿರುವ ತಾಣದ ಸುತ್ತಲೂ ಸುಂದರ ಉದ್ಯಾನವನ ನಿರ್ಮಿಸಲಾಗಿದೆ. ವಾಕಿಂಗ್ ಪಾತ್‌ಗಳು, ವೀಕ್ಷಣಾ ಮಂಟಪದಿಂದ ಹಡಗು ಮತ್ತು ಅದರ ಹಿಂದಿನ ಕಡಲ ಕಿನಾರೆಯ ಅಲೆಗಳ ಮೇಳ ನಿಮ್ಮ ಭೇಟಿಗೆ ಮತ್ತಷ್ಟು ಮುದ ತರುವಂಥ ವಾತಾವರಣ ಇಲ್ಲಿನದು. ಇನ್ನು ಈ ಉದ್ಯಾನದ ಬಾಜುಗೆ ಅಕ್ವೇರಿಯಂ ಹಾಗೂ ಫೌಂಟೇನ್ ಸಹ ಇದೆ.

ಮತ್ತೇನಿದೆ?
ದೇವಭಾಗ್ ಬೀಚ್ (8 ಕಿ.ಮೀ.), ಸಾಗರ ಸೇರುವ ತಾಣ ಕಾಳಿ ಸಂಗಮದ ಸನ್‌ಸೆಟ್, ಕದ್ರಾ ಬಳಿಯ ವಜ್ರಾ ಜಲಪಾತ, ಸದಾಶಿವಗಡ್ ಕೋಟೆ (6 ಕಿ.ಮೀ.), ನಂದಿವಾಡ (10 ಕಿ.ಮೀ.) ಟ್ರೆಕ್ಕಿಂಗ್ ತಾಣ ಗುಡ್ಡಳ್ಳಿ (6 ಕಿ.ಮೀ.) ಮುಂತಾದ ತಾಣಗಳ ಸೌಂದರ್ಯ ಕೂಡ ಕಣ್ಣರಳಿಸುವಂಥದ್ದು.

ಹೀಗೆ ಬನ್ನಿ...

ಹುಬ್ಬಳ್ಳಿಯಿಂದ ಕಾರವಾರ 168 ಕಿ.ಮೀ., ಮಂಗಳೂರಿನಿಂದ 270 ಕಿ.ಮೀ. ಪಣಜಿಯಿಂದ 110 ಕಿ.ಮೀ.

- ಶಿವಮೊಗ್ಗ ಗಿರಿಧರ್
ಚಿತ್ರ: ವಸಂತಕುಮಾರ್ ಕತಗಾಲ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com