

ನೀರುಕಾಯಿ ಮರ ಬೇರೆಬೇರೆ ಪ್ರದೇಶದಲ್ಲಿ ಬೇರೆಬೇರೆ ಕಾಲದಲ್ಲಿ ಹೂ ಬಿಡುತ್ತದೆ. ಮುಂಬೈಯಲ್ಲಿ ಚಳಿಗಾಲ ಮುಗಿಯುವ ಹೊತ್ತಿಗೆ ಹೂ ಬಿಟ್ಟರೆ, ಬೆಂಗಳೂರಿನಲ್ಲಿ ಮಳೆಗಾಲ ಮುಗಿಯುವ ಹೊತ್ತಿಗೆ, ಅಂದರೆ ಸೆಪ್ಟೆಂಬರ್ ಹೊತ್ತಿಗೆ ಅರಳಲು ಪ್ರಾರಂಭವಾಗಿ ನವೆಂಬರ್ - ಡಿಸೆಂಬರ್ ವರೆಗೂ ಕೆಲವು ಮರಗಳಲ್ಲಿ ಹೂವಿರುತ್ತದೆ.
ಉದ್ಯಾನ ನಗರಿ ಬೆಂಗಳೂರಿನಲ್ಲಿ ವರ್ಷವಿಡೀ ಒಂದಲ್ಲ ಒಂದು ಮರ ಹೂ ಬಿಡುತ್ತಿರುತ್ತದೆ. ಸೆಪ್ಟೆಂಬರ್ ಬಂತೆಂದರೆ 'ಬೆಂಕಿ ಸುಂದರಿ' ಅರಳಲು ಶುರು. ಈ ಹೂವಿನ ಕಣ್ಣು ಕುಕ್ಕುವ ಕೇಸರಿ ಬಣ್ಣ ಗಮನ ಸೆಳೆಯುತ್ತದೆ. ಈ ಹೂವಿನ ಮರಕ್ಕೆ 'ದಿ ಸ್ಕಾರ್ಲೆಟ್ ಟ್ರೀ, ಫೌಂಟೆನ್ ಟ್ರೀ' ಎಂಬ ಹೆಸರುಗಳಿವೆ. ಕನ್ನಡದ ಹೆಸರು ನೀರುಕಾಯಿ ಮರ. ಈ ಹೂವುಗಳಲ್ಲಿ ನೀರಿನಂತಹ ದ್ರವ ಪದಾರ್ಥ ತುಂಬಿರುತ್ತದೆ. ಇದರಿಂದಲೇ ಈ ಹೆಸರು ಬಂದಿದೆ. ಈ ಮರದ ಮೂಲ ಆಫ್ರಿಕಾ ದೇಶ. ಭಾರತದಲ್ಲಿ ಅತೀ ಚಳಿಯಿರುವ ಭಾಗಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಭಾಗಗಳಲ್ಲಿ ಈ ಮರಗಳನ್ನು ಕಾಣಬಹುದು. ಭಾರತದಲ್ಲಿ ಈ ಮರ ಯಾವಾಗ ನೆಲೆ ಕಂಡಿತು ಎಂಬ ಬಗ್ಗೆ ಹೆಚ್ಚಾಗಿ ಮಾಹಿತಿಗಳಿಲ್ಲ. ತಮಾಶೆ ಅಂದ್ರೆ ಈ ಮರ ಬೇರೆಬೇರೆ ಪ್ರದೇಶದಲ್ಲಿ ಬೇರೆಬೇರೆ ಕಾಲದಲ್ಲಿ ಹೂ ಬಿಡುತ್ತದೆ. ಮುಂಬೈಯಲ್ಲಿ ಚಳಿಗಾಲ ಮುಗಿಯುವ ಹೊತ್ತಿಗೆ ಹೂ ಬಿಟ್ಟರೆ, ಬೆಂಗಳೂರಿನಲ್ಲಿ ಮಳೆಗಾಲ ಮುಗಿಯುವ ಹೊತ್ತಿಗೆ, ಅಂದರೆ ಸೆಪ್ಟೆಂಬರ್ ಹೊತ್ತಿಗೆ ಅರಳಲು ಪ್ರಾರಂಭವಾಗಿ ನವೆಂಬರ್ - ಡಿಸೆಂಬರ್ ವರೆಗೂ ಕೆಲವು ಮರಗಳಲ್ಲಿ ಹೂವಿರುತ್ತದೆ. ಒಂದು ಮರದ ತುಂಬಾ ಹೂವಿದ್ದರೆ ಇನ್ನೊಂದು ಮರದಲ್ಲಿ ಇನ್ನೂ ಮೊಗ್ಗುಗಳಿರುತ್ತವೆ.
ಈ ಮರ ಸುಮಾರು 70 ರಿಂದ 80 ಅಡಿಗಳವರೆಗೆ ಬೆಳೆಯಬಲ್ಲದು. ಕಡು ಕಂದು ಬಣ್ಣದ ಕಾಂಡ ಹೊಂದಿದ್ದು ಒಳಗಡೆ ತಿರುಳು ಬಿಳಿ ಬಣ್ಣವಿರುತ್ತದೆ. ಈ ಮರದ ಕಟ್ಟಿಗೆಯನ್ನು ಕುಸುರಿ ಕೆಲಸ ಮತ್ತು ಕಾಗದ ತಯಾರಿಸಲು ಉಪಯೋಗಿಸುತ್ತಾರೆ. ಫಲವತ್ತಾದ ಮಣ್ಣು ಮತ್ತು ಹಿತ-ಮಿತವಾದ ಮಳೆ ಈ ಮರದ ಬೆಳವಣಿಗೆಗೆ ಪೂರಕ. ಪುಟ್ಟ ಪುಟ್ಟ ಎಲೆಗಳು ಕೊಂಬೆಗಳ ತುಂಬೆಲ್ಲಾ ಹರಡಿ ಮರವೆಲ್ಲಾ ಹಸಿರು ಹಸಿರು. ಈ ಎಲೆಗಳ ಮಧ್ಯದಿಂದ ಮೊಗ್ಗುಗಳು ಒಂದು ಗುಚ್ಛದಂತೆ ಹೊರಬರುತ್ತವೆ. ಈ ಮೊಗ್ಗುಗಳ ತುಂಬಾ ನೀರು ತುಂಬಿಕೊಂಡಿದ್ದು ಅರಳುವ ಮುನ್ನ ಹೂಗಳು ಆ ನೀರನ್ನು ಹೀರಿಕೊಳ್ಳುತ್ತವೆ. ಹೂಗಳು ಕಡುಕೇಸರಿ ಬಣ್ಣವನ್ನು ಹೊಂದಿದ್ದು ಕೆಳಭಾಗದಲ್ಲಿ ಕೆಂಪು ಮಿಶ್ರಿತವಾಗಿರುತ್ತವೆ. ಪ್ರತಿಯೊಂದೂ ಕೊಂಬೆಯ ತುದಿಯಲ್ಲೂ ಒಂದೊಂದು ಹೂಗುಚ್ಛದಂತೆ ಹೂಗಳರಳಿ ಮರವಿಡೀ ಥೇರಿನಂತೆ ಕಂಗೊಳಿಸುತ್ತದೆ. ಈ ಹೂಗಳು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದ ಹೊಂಬಿಸಿಲಿಗೆ ಇನ್ನಷ್ಟು ಹೊಳೆಯುತ್ತವೆ. ಹೂಗಳು ಉದುರಿದ ನಂತರ ಕೊಂಬಿನಾಕಾರದ ಕೋಡುಗಳು ಉತ್ಪತ್ತಿಯಾಗುತ್ತವೆ. ಈ ಮರವನ್ನು ಬೀಜವಲ್ಲದೆ ಕಂದುಗಳಿಂದಲೂ ಬೆಳೆಸಬಹುದು.
ಫೆಬ್ರವರಿ - ಮಾರ್ಚ್ ತಿಂಗಳಲ್ಲಿ ಪೂರ್ತಿ ಬೋಳಾಗುವ ಈ ಮರ ಜೂನ್ - ಜುಲೈ ಬರುವಷ್ಟರಲ್ಲಿ ಮತ್ತೆ ಹಸಿರಾಗುತ್ತದೆ. ಮುಖ್ಯವಾಗಿ ಇದು ಅಲಂಕಾರಿಕ ಮರ. ಬೆಂಗಳೂರಿನ ರಸ್ತೆ ಬದಿಗಳಲ್ಲಿ ಈ ಮರಗಳು ಬಣ್ಣ ತುಂಬಿವೆ. ನಗರೀಕರಣ, ವಾಯುಮಾಲಿನ್ಯ, ಶಬ್ದಮಾಲಿನ್ಯ ಈ ಎಲ್ಲಾ ಸಮಸ್ಯೆಗಳ ಮಧ್ಯೆಯೂ ಈ ಮರಗಳು ಹೂವಿನೊಂದಿಗೆ ಕೆಲಸ ಕೊಡುತ್ತಿವೆ. ಇದು ಸಂತಸದ ವಿಷಯವಲ್ಲದೆ ಇನ್ನೇನು?
- ವೀಣಾ ಅನಂತ್