ವಿದ್ಯುತ್ ಸಂಚಾರ!

ಎಲೆಕ್ಟ್ರಿಕ್ ವಾಹನಗಳು ಎಂದಾಕ್ಷಣ ಮೂಗು ಮುರಿಯುವವರೇ ಹೆಚ್ಚು. ಅವು ಸುರಕ್ಷಿತವಲ್ಲ,...
ವಿದ್ಯುತ್ ಸಂಚಾರ!
Updated on: 

ಒಂದು ಕಿ.ಮೀ.ಗೆ ಹತ್ತು ಪೈಸೆ

ಎಲೆಕ್ಟ್ರಿಕ್ ವಾಹನಗಳು ಎಂದಾಕ್ಷಣ ಮೂಗು ಮುರಿಯುವವರೇ ಹೆಚ್ಚು. ಅವು ಸುರಕ್ಷಿತವಲ್ಲ, ನಂಬಲರ್ಹವಲ್ಲ ಎಂಬೆಲ್ಲ ಆರೋಪಗಳು. ಆದರೆ, ಪೆಟ್ರೋಲಿಯಂ ಆಧಾರಿತ ಇಂಧನಗಳನ್ನು ಇನ್ನೆಷ್ಟು ಕಾಲ ನಂಬಿ ಕೂರುವುದು? ಪೆಟ್ರೋಲ್, ಡೀಸೆಲ್‌ಗಳಿಗೆ ಅದೆಷ್ಟು ದುಡ್ಡು ಸುರಿಯುವುದು, ಇನ್ನು ಇತರ ಇಂಧನಗಳ ಭವಿಷ್ಯವೇನು... ಎಂಬೆಲ್ಲ ಆಲೋಚನೆ ಮಾಡಿದಾಗ ಎಲೆಕ್ಟ್ರಿಕ್ ವಾಹನಗಳು ಪರ್ಯಾಯವಾಗಬಹುದೇ ಎಂಬ ಆಲೋಚನೆ ತಲೆಯಲ್ಲಿ ಬರುತ್ತದೆ.

ಇಂಥದ್ದೇ ವಿಚಾರ ಲಹರಿಯನ್ನು ಇರಿಸಿಕೊಂಡು ಕನ್ನಡದ ಹುಡುಗ ದಿವಿಕ್ ರೆಡ್ಡಿ 2007ರಲ್ಲಿ ಗೋ ಗ್ರೀನ್ ಬಿಒವಿ ಎಂಬ ಸಂಸ್ಥೆಗೆ ಜನ್ಮಕೊಟ್ಟರು. ಪರ್ಯಾಯ ಇಂಧನ ಕ್ಷೇತ್ರದ ಸಂಶೋಧನೆ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ. ಪೆಟ್ರೋಲಿಯಂ ಇಂಧನಗಳ ದರ ದಿನದಿಂದ ದಿನಕ್ಕೆ ಗಗನ ಕುಸುಮವಾಗುತ್ತಿದೆ. ಇದರ ಬೆನ್ನಲ್ಲೇ ಪರಿಸರ ಮಾಲಿನ್ಯ ಕೂಗು ಕೇಳಿಬರುತ್ತಿದೆ.

ಇವಕ್ಕೆಲ್ಲ ಎಲೆಕ್ಟ್ರಿಕ್ ವಾಹನಗಳು ಮಾತ್ರ ಪರಿಹಾರವಾಗಬಲ್ಲವು ಎಂದು ಅರಿತ ದಿವಿಕ್ ರೆಡ್ಡಿ ಹಾಗೂ ಅವರ ತಂದೆ ಅಶೋಕ್ ರೆಡ್ಡಿ ಗೋ ಗ್ರೀನ್ ಬೈಕ್ ಉತ್ಪಾದಕ ಘಟಕ ತೆರೆಯಲು ಮುಂದಾದರು. ಮೊದಲೆರಡು ವರ್ಷಗಳನ್ನು ಸಂಶೋಧನೆ ಹಾಗೂ ಪ್ರಯೋಗಕ್ಕೆ ಮೀಸಲಿಟ್ಟ ರೆಡ್ಡಿ, ಮೂರೂವರೆ ವರ್ಷಗಳಿಂದ ರಾಜ್ಯಾದ್ಯಂತ ಎಲೆಕ್ಟ್ರಿಕ್ ಬೈಕ್‌ಗಳ ಹವಾ ಪ್ರಾರಂಭಿಸಿದ್ದಾರೆ. ನಗರ ಪ್ರದೇಶಗಳ ಮೇಲೆ ಕಣ್ಣಿಟ್ಟು ಈ ಬೈಕ್ ತಯಾರಿಸಲಾಗಿದೆ. ರಾಜ್ಯದ ರಸ್ತೆಗಳಲ್ಲಿ 17 ಸಾವಿರ ಬೈಕ್‌ಗಳು ಚಲಿಸುತ್ತಿವೆ.

ಸಾಮಾನ್ಯವಾಗಿ ಪೆಟ್ರೋಲ್ ಎಂಜಿನ್‌ಗಳ ಬೈಕ್‌ಗೆ ಒಂದು ಕಿ.ಮೀ.ಗೆ ಒಂದೂವರೆ ರುಪಾಯಿ ಖರ್ಚು ಬರುತ್ತದೆ. ಈ ಖರ್ಚಿನಲ್ಲಿ ಸರ್ವೀಸ್ ದರವು ಸೇರಿರುವುದಿಲ್ಲ. ಆದರೆ, ಪೆಟ್ರೋಲ್ ಬೆಲೆಯು ವರ್ಷದಿಂದ ವರ್ಷಕ್ಕೆ ಶೇ.15ರಷ್ಟು ಏರುತ್ತಿದೆ. ಇದರಿಂದ ನಿರ್ವಹಣಾ ವೆಚ್ಚವೂ ಹೆಚ್ಚಾಗುತ್ತಲೇ ಇದೆ. ಒಂದು ಲೀಟರ್ ಪೆಟ್ರೋಲ್‌ಗೆ 50 ಕಿ.ಮೀ. ಇಂಧನ ಕ್ಷಮತೆ ಹೊಂದಿರುವ ಬೈಕ್‌ನಲ್ಲಿ ಪ್ರಸ್ತುತ ಪೆಟ್ರೋಲ್ ದರದ ಪ್ರಕಾರ ಒಂದೂವರೆ ರುಪಾಯಿ ಖರ್ಚಾಗುತ್ತದೆ. ಆದರೆ ಇಂಧನ ಕ್ಷಮತೆಯು ಎಲ್ಲ ವಾಹನಗಳಲ್ಲಿ ಒಂದೇ ರೀತಿ ಇರುವುದಿಲ್ಲ ಹಾಗೂ ನಗರ ಪ್ರದೇಶದ ಟ್ರಾಫಿಕ್ ಕಿರಿಕಿರಿಯಲ್ಲಿ ಇದು ಕಡಿಮೆಯಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ. ಆದರೆ, ಎಲೆಕ್ಟ್ರಿಕ್ ವಾಹನೋದ್ಯಮ ಹೇಳುವ ಪ್ರಕಾರ 100 ಕಿ.ಮೀ. ಕ್ಷಮತೆಯ ಬೈಕ್‌ನ ಬ್ಯಾಟರಿಯನ್ನು ಸಂಪೂರ್ಣ ಚಾರ್ಜ್ ಮಾಡಲು # 10 ಖರ್ಚಾಗುತ್ತದೆ. ಅಂದರೆ ಪ್ರತಿ ಕಿ.ಮೀ.ಗೆ 10 ಪೈಸೆಗಿಂತ ಹೆಚ್ಚು ವ್ಯಯವಾಗುವುದಿಲ್ಲ. ಗೋ ಗ್ರೀನ್‌ನ ಮುಖ್ಯಸ್ಥ ದಿವಿಕ್ ಹೇಳುವ ಪ್ರಕಾರ, ಪ್ರತಿ ಕಿ.ಮೀ.ಗೆ 5ರಿಂದ 10 ಪೈಸೆ ಹಣವನ್ನು ತೆಗೆದಿಟ್ಟರೆ ಆ ವಾಹನದ ಸರ್ವೀಸಿಂಗ್ ಕೂಡ ಮುಗಿಯುತ್ತದೆ.

20 ಸಾವಿರ ಕಿ.ಮೀ ಅಥವಾ ಎರಡು ವರ್ಷದವರೆಗೆ ಬೈಕ್‌ನ ಬ್ಯಾಟರಿ ಬದಲಿಸುವ ಅವಶ್ಯಕತೆ ಬರುವುದಿಲ್ಲ. ಒಮ್ಮೆ ಬ್ಯಾಟರಿ ಬದಲಿಸಲು # 6ರಿಂದ # 10 ಸಾವಿರ ಖರ್ಚು ಬರುತ್ತದೆ. ಪೆಟ್ರೋಲ್‌ಗೆ ಖರ್ಚು ಮಾಡುವ ದುಡ್ಡಿನಲ್ಲಿ ಶೇ.10ರಷ್ಟು ದುಡ್ಡನ್ನು ಬ್ಯಾಟರಿ ಬದಲಿಸಲು ಬಳಸಿಕೊಳ್ಳಬಹುದು. ಮನೆಯಲ್ಲಿರುವ ಫ್ಯಾನ್ ಅಥವಾ ಇತರ ಎಲೆಕ್ಟ್ರಿಕ್ ಉತ್ಪನ್ನಗಳಂತೆ ಇದು ಕಾರ್ಯನಿರ್ವಹಿಸುತ್ತದೆ. ಈ ಕಾರಣದಿಂದ ಈ ಬೈಕ್‌ಗಳು ಹೊಗೆ ಉಗುಳುವ ಪ್ರಮೇಯವೇ ಎದುರಾಗುವುದಿಲ್ಲ.

ಗ್ಯಾರೇಜ್‌ನಿಂದ ಉತ್ಪಾದನೆ

ಭಾರಿ ವಾಹನಗಳ ಸರ್ವೀಸ್ ಸೆಂಟರ್‌ನಿಂದ ವಾಹನೋದ್ಯಮಕ್ಕೆ ಕಾಲಿರಿಸಿದ ರೆಡ್ಡಿ ಕುಟುಂಬ, ಎಲೆಕ್ಟ್ರಿಕ್ ವಾಹನಗಳ ಸ್ವಂತ ಘಟಕ ಸ್ಥಾಪಿಸಿ ತಯಾರಿಕೆಗೆ ಮುಂದಾಯಿತು. ಬೆಂಗಳೂರಿನ ಜಯದೇವ ಜಂಕ್ಷನ್ ಬಳಿ 1985ರಲ್ಲಿ ಸಣ್ಣದೊಂದು ಗ್ಯಾರೇಜ್ ಅನ್ನು ದಿವಿಕ್ ತಂದೆ ಅಶೋಕ್ ರೆಡ್ಡಿ ಆರಂಭಿಸಿದರು. ಮೊದಲ 13 ವರ್ಷಗಳ ಕೆಲಸವನ್ನು ಇದೇ ಗ್ಯಾರೇಜಿನಲ್ಲೇ ಕಳೆದ ಅಶೋಕ್ ರೆಡ್ಡಿ, 1998ರಲ್ಲಿ ಪೆಟ್ರೋಲ್- ಎಲ್‌ಪಿಜಿ ಕನ್ವರ್ಟರ್ ಕಿಟ್‌ನ ಡೀಲರ್‌ಶಿಪ್ ಪಡೆದರು. ಅಂದಿನಿಂದ ದೇಶದ ಯಾವುದೇ ಮೂಲೆಯಲ್ಲಿ ವಾಹನ ಮೇಳಗಳು ನಡೆಯುತ್ತಿದ್ದರೆ ಅಲ್ಲಿ ಅಶೋಕ್ ರೆಡ್ಡಿ ಅಥವಾ ದಿವಿಕ್ ಭಾಗವಹಿಸಲು ಪ್ರಾರಂಭಿಸಿದರು.

ಇದೇ ಸಂದರ್ಭದಲ್ಲಿ ಭಾರತ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಲು ಆರಂಭವಾಗಿತ್ತು. ಪರಿಸರ ಮಾಲಿನ್ಯದ ಮಾತುಗಳು ದೊಡ್ಡದಾಗಿ ಕೇಳಲಾರಂಭಿಸಿದ್ದವು. 2004ರಲ್ಲಿ ದೆಹಲಿಯಲ್ಲಿ ನಡೆದ ಆಟೋ- ಎಕ್ಸ್‌ಪೋದಲ್ಲಿ ಹೋಗಿದ್ದ ಅಶೋಕ್ ರೆಡ್ಡಿ, ಚೀನಾದ ಕಂಪನಿಯೊಂದರ ಎಲೆಕ್ಟ್ರಿಕ್ ಬೈಕ್ ಅನ್ನು ನೋಡಿದರು.

ಇದನ್ನೇ ಆಧಾರವಾಗಿರಿಸಿಕೊಂಡು ಚೀನಾ ಕಂಪನಿಯನ್ನು ಸಂಪರ್ಕಿಸಿ ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನ ತಯಾರಿಕೆಗೆ ಮುಂದಾದರು. ಆದರೆ, ಆಗತಾನೆ ದೇಶಕ್ಕೆ ಕಾಲಿಡುತ್ತಿದ್ದ ಎಲೆಕ್ಟ್ರಿಕ್ ವಾಹನಗಳು ಜನರ ವಿಶ್ವಾಸವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಚೀನಾದಿಂದ ಬೈಕ್‌ನ ಎಂಜಿನ್, ಬ್ಯಾಟರಿಗಳನ್ನು ತಂದು ಕೋಲಾರದ ಚಿಂತಾಮಣಿಯಲ್ಲಿ ಅಸೆಂಬಲ್ ಮಾಡಲಾರಂಭಿಸಿದರು.

ಎಂಜಿನಿಯರಿಂಗ್ ಓದಿದ್ದರೂ ಆಸಕ್ತಿಯಿಂದ ಕಾರ್ಯಕ್ರಮ ನಿರೂಪಕರಾಗಿ ಕೆಲಸ ಮಾಡುತ್ತಿದ್ದ ದಿವಿಕ್, ತಂದೆಯ ಒತ್ತಾಸೆಯ ಮೇರೆಗೆ ಎಲೆಕ್ಟ್ರಿಕ್ ವಾಹನ ತಯಾರಿಕೆಗೆ ಮುಂದಾದರು. ಆದರೆ ಎಂಟ್ರಿ ಕೊಟ್ಟ ಬಳಿಕ ಬೈಕ್ ತಯಾರಿಕೆಯಿಂದ ಅಶೋಕ್ ಸಂಪೂರ್ಣ ವಿಮುಖರಾದರು.

ಗ್ಯಾರೇಜ್ ಪಕ್ಕದಲ್ಲೇ ಮೊದಲ ಅಂಗಡಿ ತೆರೆದ ದಿವಿಕ್ ಆರಂಭಿಕ ಹಂತದಲ್ಲಿ ಬೆಂಗಳೂರಿನಲ್ಲೇ 8 ಡೀಲರ್ ಅಂಗಡಿಗಳನ್ನು ತೆರೆದರು. ಹಂತಹಂತವಾಗಿ ರಾಜ್ಯಾದ್ಯಂತ ಒಟ್ಟು 27 ಅಂಗಡಿಗಳನ್ನು ಪ್ರಾರಂಭಿಸಿದರು.

ನಗರ ಪ್ರದೇಶದ ನಿವಾಸಿಗಳನ್ನು ಗುರಿಯಾಗಿರಿಸಿಕೊಂಡು ಉದ್ಯಮಕ್ಕೆ ಕೈ ಹಾಕಿದರು, ಮೊದಲ ಬೈಕ್ ಅನ್ನು ಪಡೆದವರು ಬೆಳಗಾವಿಯ ಸಮೀಪದ ಹಳ್ಳಿಯೊಂದರ ರೈತ. ನಿತ್ಯ ಹಾಲು ವ್ಯಾಪಾರಕ್ಕೆ ಎಲೆಕ್ಟ್ರಿಕ್ ಬೈಕ್ ಅನ್ನು ಆತ ಬಳಸುತ್ತಿದ್ದ.

ಗೋ ಗ್ರೀನ್ ಉತ್ಪನ್ನಗಳು
ಗೋ ಗ್ರೀನ್ ಸಂಸ್ಥೆಯು ಪ್ರಸ್ತುತ ಮೂರು ಬೈಕ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. ಪಿಎಂ004, ಕವಾಚ್ ಹಾಗೂ ಕೊರಾ ಬೈಕ್‌ಗಳು ಲಭ್ಯವಿವೆ. ಈ ವಾಹನಗಳನ್ನು ಅತಿ ವೇಗದಲ್ಲಿ ಚಲಿಸಲು ಸಾಧ್ಯವಾಗದಿದ್ದರೂ, ನಗರ ಪ್ರದೇಶಕ್ಕೆ ಸಾಕೆನಿಸುವಷ್ಟಿದೆ. ಗರಿಷ್ಠವಾಗಿ ಪ್ರತಿ ಗಂಟೆಗೆ 20ರಿಂದ 30 ಕಿ.ಮೀ. ವೇಗದಲ್ಲಿ ಚಲಿಸಬಹುದು. ಈಗ ತಾನೆ ಬೈಕ್ ಚಾಲನೆ ಆರಂಭಿಸಿರುವವರಿಗೆ ಕೊರಾ ಹೇಳಿ ಮಾಡಿಸಿದ ವಾಹನ. 250 ವ್ಯಾಟ್‌ನ ಮೋಟಾರ್ ಅನ್ನು ಇದರಲ್ಲಿ ಅಳವಡಿಸಲಾಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ 50 ಕಿ.ಮೀ. ಚಲಿಸಬಹುದು. ಸಂಪೂರ್ಣ ಚಾರ್ಜ್ ಆಗಲು ಸುಮಾರು 6 ಗಂಟೆ ಬೇಕಾಗುತ್ತದೆ.

ಈ ಮೂರು ಬೈಕ್‌ಗಳನ್ನು ಒಮ್ಮೆ ನೋಡಿದಾಗ ಟಿವಿಎಸ್ ಸ್ಕೂಟಿ, ಹೋಂಡಾ ಸಿಟಿ ಹಾಗೂ ಹೋಂಡಾ ಆ್ಯಕ್ಟಿವಾ ನೋಡಿದಂತೆ ಅನಿಸುತ್ತದೆ. ಬೈಕ್‌ನ ಪ್ಲಾಸ್ಟಿಕ್ ಗುಣಮಟ್ಟ ಅಷ್ಟು ಆಕರ್ಷಕ ಅಥವಾ ಗುಣಮಟ್ಟದಿಂದ ಕೂಡಿಲ್ಲ ಎನಿಸಿದರೂ, ಎಲೆಕ್ಟ್ರಿಕ್ ಬೈಕ್‌ಗಳ ಚಾಲನೆಗೆ ಸಾಕನಿಸುತ್ತದೆ. ಹೋಂಡಾ ಸಿಟಿಯ ಮಾದರಿಯಲ್ಲಿರುವ ಪಿಎಂ004 ಕೂಡ 250 ವ್ಯಾಟ್‌ನ ಮೋಟಾರ್ ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ 55 ಕಿ.ಮೀ. ಚಲಿಸಬಹುದು. 7 ಗಂಟೆ ಚಾರ್ಜ್ ಮಾಡಿದರೆ ಬ್ಯಾಟರಿ ಫುಲ್ ಎಂದು ತೋರಿಸುತ್ತದೆ ಹಾಗೂ 2 ಯುನಿಟ್ ವ್ಯಯವಾಗುತ್ತದೆ.

ಅಷ್ಟೊಂದು ಉತ್ಪಾದನೆ ಅಸಾಧ್ಯ
ಹೋಂಡಾ ಆ್ಯಕ್ಟೀವಾ ಮಾದರಿಯಲ್ಲಿರುವ ಕವಾಚ್, 100 ಕಿ.ಮೀ. ಚಲನಾ ಕ್ಷಮತೆ ಹೊಂದಿದೆ. ಸಂಪೂರ್ಣ ಬ್ಯಾಟರಿ ಚಾರ್ಜ್ ಮಾಡಲು 3 ಯುನಿಟ್ ವಿದ್ಯುತ್ ಬೇಕಾಗುತ್ತದೆ. ಸುಮಾರು 20 ಸಾವಿರ ಕಿ.ಮೀ.ಗಳವರೆಗೆ ಬ್ಯಾಟರಿ ಬದಲಿಸದೇ ಚಲಿಸಬಹುದು. ಆರಂಭಿಕ ದಿನಗಳಲ್ಲಿ ಪ್ರತಿ ತಿಂಗಳಿಗೆ 4 ರಿಂದ 6 ಬೈಕ್‌ಗಳು ಮಾರಾಟವಾಗುತ್ತಿದ್ದವು. ಆದರೆ, ಈಗ ಸುಮಾರು 700ಕ್ಕೂ ಅಧಿಕ ವಾಹನಗಳು ರಸ್ತೆಗಿಳಿಯುತ್ತಿವೆ. ಹೊರ ರಾಜ್ಯದಿಂದಲೂ ಬೇಡಿಕೆ ಹೆಚ್ಚಿದೆ. ಆದರೆ ಬೇಡಿಕೆಗೆ ತಕ್ಕಂತೆ ವಾಹನ ಉತ್ಪಾದನೆ ಅಸಾಧ್ಯವಾಗಿದೆ ಎನ್ನುತ್ತಾರೆ ದಿವಿಕ್. ಅಂದಹಾಗೆ ಈ ಮೂರು ಬೈಕ್‌ಗಳು # 38 ಸಾವಿರದಿಂದ # 53 ಸಾವಿರದವರೆಗೆ ಲಭ್ಯವಿವೆ. ಭವಿಷ್ಯದಲ್ಲಿ ಮೂರು ಹಾಗೂ ನಾಲ್ಕು ಚಕ್ರಗಳ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ಕುರಿತಂತೆ ದಿವಿಕ್ ಪ್ರಯೋಗ ಆರಂಭಿಸಿದ್ದಾರೆ. ಇನ್ನೊಂದು ವರ್ಷದಲ್ಲಿ ಈ ಪ್ರಯೋಗದಲ್ಲೂ ಯಶ ಕಾಣುವುದಾಗಿ ಅವರು ಹೇಳುತ್ತಾರೆ.

ಇ ಸ್ಟಾರ್ ತ್ರಿಚಕ್ರ ವಾಹನ
ಬೆಂಗಳೂರಿನ ಎನ್.ಟಿ. ಸೊಲ್ಯೂಷನ್ಸ್ ಕಂಪನಿಯು ತ್ರಿ ಚಕ್ರ ವಾಹನವನ್ನು ಮಾರುಕಟ್ಟೆಗೆ ಬಿಟ್ಟಿದೆ. ಎಲ್‌ಪಿಜಿ ಆಟೋಗಳಿಗೆ ಪರ್ಯಾಯವಾಗಿ ಸಂಸ್ಥೆಯು ಇ-ಸ್ಟಾರ್ ಹೆಸರಲ್ಲಿ ವಾಹನವನ್ನು ರೂಪಿಸಿದೆ. ಪ್ರತಿ ಚಾರ್ಜ್‌ಗೆ 80ರಿಂದ 100 ಕಿ.ಮೀ. ಚಲಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. 500 ಕೆಜಿ ತೂಕ ಅಥವಾ 6 ಜನರನ್ನು ಇದು ಒಯ್ಯುತ್ತದಂತೆ. ಈ ನೂತನ ವಾಹನಕ್ಕೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ಸಾ.ರಾ. ಗೋವಿಂದು ಇತ್ತೀಚೆಗೆ ಚಾಲನೆ ನೀಡಿದರು.

- ರಾಜೀವ ಹೆಗಡೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com