ಏಡಿ ಜೇಡದ ಜಾಡು ಹಿಡಿದು

ಏಡಿ ಜೇಡದ ಜಾಡು ಹಿಡಿದು
Updated on: 

ಬಾನಂಚಿನ ಪರದೆ ಸರಿದು ಮೂಡಣದಲ್ಲಿ ರವಿ ಉದಯಿಸಿ, ಜಗಕೆಲ್ಲ ಬೆಳಕ ಚೆಲ್ಲಿ ಜೀವಿಗಳಿಗೆ ನವ ಚೈತನ್ಯ ನೀಡುತ್ತಿದ್ದ. ರವಿವಾರ, ಕಚೇರಿಗೆ ರಜೆ. ನಾನು ನನ್ನ ಸಂಗಾತಿಯಾದ ಕ್ಯಾಮರಾಕ್ಕೆ ಆಹಾರ ಹುಡುಕಿ ಹೊಲಗಳ ಇಕ್ಕೆಲಗಳನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತಾ ಸಾಗುತ್ತಿದ್ದೆ.
ನಮ್ಮ ಹೊಲದ ಅಂಚಿಗಿರುವ ಚದುರಂಗದ ಹೂವಿನ ಮೇಲೆ ಕಪ್ಪನೆಯ ಕೀಟ ಕಂಡು ಹತ್ತಿರ ಹೋಗಿ ನೋಡಿದಾಗ ಏಡಿಯನ್ನೇ ಹೋಲುವ ಬಿಳಿ ಜೇಡವು ಆ ಕಪ್ಪಾದ ಕೀಟವನ್ನು ಹಿಡಿದು ಬೇಟೆಯಾಡುತ್ತಿತ್ತು. ಮಾಸಲು ಬಿಳಿ, ಕೆಂಪು ವರ್ಣದ ಹೂವಿನ ಮಧ್ಯೆ ಛದ್ಮವೇಷಧಾರಿಯಾದ ಶ್ವೇತ ಏಡಿ ಜೇಡವು ನೊಣವನ್ನು ಬೇಟೆಯಾಡಿ ತನ್ನ ಬಾಹುಗಳಲ್ಲಿ ಬಿಗಿದಪ್ಪಿ ಹಿಡಿದಿತ್ತು.
ನಾನು ಈಗ ಜಾಗೃತನಾಗಿ ನನ್ನ ಇರುವಿಕೆಯ ಅರಿವು ಅದಕ್ಕೆ ಗೊತ್ತಾಗದಂತೆ ಹಸಿರಿನ ಹಿನ್ನೆಲೆ ಆಯ್ಕೆ ಮಾಡಿಕೊಂಡು ನನ್ನ ಕ್ಯಾಮೆರಾವನ್ನು ಅದರ ಹತ್ತಿರಕ್ಕೆ ಒಯ್ದು ಫೋಕಸ್ ಮಾಡಿ ಆ ಬೇಟೆಯ ಪ್ರಸಂಗವನ್ನು ಕ್ಲಿಕ್ಕಿಸತೊಡಗಿದೆ. ಆ ಶ್ವೇತ ಜೇಡವು ತನ್ನ ಬಲಿಷ್ಟ ಬಾಹುಗಳಿಂದ ನೊಣವನ್ನು ಗಟ್ಟಿಯಾಗಿ ಹಿಡಿದು ತನ್ನ ಚಿಕ್ಕ ಬಾಯಿಯಿಂದ ಬಲಿಯಾದ ನೊಣದ ದೇಹದ ಮೇಲೆ ಜೀರ್ಣರಸವನ್ನು ಸ್ರವಿಸಿ, ದ್ರವರೂಪದ ಸಾರವನ್ನು ಹೀರುತ್ತಾ ಮುಂಜಾನೆಯ ಉಪಾಹಾರವನ್ನು ಸವಿಯತೊಡಗಿತ್ತು. ಜೇಡಗಳಿಗೆ ಅತಿ ಚಿಕ್ಕದಾದ ಬಾಯಿ ಇದ್ದು ಅಷ್ಟೇ ಕಿರಿದಾದ ಅನ್ನನಾಳವಿರುವುದರಿಂದ ಅವು ದ್ರವರೂಪದ ಆಹಾರವನ್ನು ಮಾತ್ರ ಸೇವಿಸುತ್ತವೆ.
ಗಾಳಿಗೆ ಹೂವು ಅಲುಗಾಡಲಾರಂಭಿಸಿದಾಗ ಜೇಡ ಆ ನೊಣವನ್ನು ಹೊತ್ತು ಕೆಳಗಡೆ ಇಳಿಯತೊಡಗಿತು. ಹಾಗೆ ಕೆಳಗಡೆ ಇದ್ದ ಎಲೆಗಳ ಮೇಲೆ ಹೋಗಿ ಕುಳಿತು ಮತ್ತೆ ಆ ನೊಣದ ದೇಹದ ರಸವನ್ನು ಹೀರತೊಡಗಿತು. ಜೋರಾಗಿ ಬೀಸುತ್ತಿದ್ದ ಗಾಳಿಗೆ ಜೇಡ ಕೆಳಗೆ ಬೀಳಬಹುದು ಎಂದುಕೊಂಡಿದ್ದೆ. ಆದರೆ ಜೇಡವು ಕಣ್ಣಿಗೆ ಕಾಣದ ಸೂಕ್ಷ್ಮ ಎಳೆಯನ್ನು ಆ ಎಲೆಗೆ ಸಹಾಯಕ್ಕೆ ಅಂಟಿಸಿದ್ದು ಕ್ಯಾಮೆರಾದ ಮ್ಯಾಕ್ರೋ ಲೆನ್ಸಲ್ಲಿ ಸೆರೆಯಾಗಿತ್ತು!
ಜೇಡಗಳಲ್ಲಿಯೇ ವಿಶಿಷ್ಟವಾದ ಈ ಶ್ವೇತ ಏಡಿ ಜೇಡಗಳ ತಲೆ ಹಾಗೂ ಕಾಲುಗಳು ಪಾರದರ್ಶಕವಾದ ಶ್ವೇತ ವರ್ಣದಿಂದ ಕೂಡಿದ್ದು, ಉದ್ದ ಮುಂಗಾಲುಗಳಿದ್ದವು. ಈ ಜಾತಿಯ ಜೇಡಗಳು ಬಲೆಯನ್ನು ನೇಯುವುದಿಲ್ಲ, ಬದಲಾಗಿ ಬೇಟೆಗಾಗಿ ಹೂವುಗಳ ಇಲ್ಲವೇ ಎಲೆಗಳ ಮೇಲೆ ಛದ್ಮ  ವೇಷಧಾರಿಯಾಗಿ ಅವಿತು ಕುಳಿತು ಮಕರಂದ ಸವಿಯಲು ಬರುವ ಕೀಟಗಳನ್ನು ಹಿಡಿದು ಬೇಟೆಯಾಡಿ ರಸ ಹೀರುತ್ತವೆ. ರೋಗ ಹರಡುವ ನೊಣಗಳನ್ನು ಭಕ್ಷಿಸಿ ಮಾನವರಿಗೆ ಸ್ನೇಹಿಗಳಾಗಿ ಪರಿಸರದ ಆಹಾರ ಸರಪಳಿಯನ್ನು ಸಮತೋಲನದಲ್ಲಿಡಲು ಪ್ರಮುಖ ಪಾತ್ರ ವಹಿಸುತ್ತವೆ.
ಜೇಡದ ಉಪಹಾರ ಮುಗಿಯುವುದನ್ನು ನೋಡಿದ ನಾನು ನನ್ನ ಕ್ಯಾಮರವನ್ನು ಹೆಗಲಿಗೇರಿಸಿಕೊಂಡು ಹೆಜ್ಜೆ ಹಾಕತೊಡಗಿದೆ.

= ಚಿತ್ರ-ಲೇಖನ: ಶಶಿಧರ ಹಿರೇಮಠ, ಕದರಮಂಡಲಗಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com