ಕಾಣಿಕೆ ಡಬ್ಬಿ ಮೇಷ್ಟ್ರ ಶಾಲೆ

ಕಾಣಿಕೆ ಡಬ್ಬಿ ಮೇಷ್ಟ್ರ ಶಾಲೆ
Updated on: 

ಸೌಕರ್ಯ ವಂಚಿತವಾದ ಒಂದು ಹಳ್ಳಿಯ ಸರ್ಕಾರಿ ಶಾಲೆ ಅದು. ಬೆಂಚಿಲ್ಲ, ಕುಡಿಯುವ ನೀರಿಲ್ಲ, ಶೌಚಾಲಯವಿಲ್ಲ ಎಂಬ ಹತ್ತು ಹಲವು ಕೊರತೆಗಳು ಕಾಡುತ್ತಿದ್ದ ಆ ಶಾಲೆಗೆ ಶಿಕ್ಷಕರಾಗಿ ಬಂದವರೂ ಹೆಚ್ಚು ದಿನ ಅಲ್ಲಿ ನಿಲ್ಲದೆ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದರು. ಅಂಥ ಸಂದರ್ಭದಲ್ಲಿ ಓರ್ವ ಶಿಕ್ಷಕರು ತನಗೆ ಅದೇ ಶಾಲೆಯೇ ಬೇಕು ಎಂದು ಕೇಳಿ ವರ್ಗ ಮಾಡಿಸಿಕೊಂಡು ಬಂದರು! ಬಸ್ಸಿಳಿದು ಎರಡೂವರೆ ಮೈಲು ದೂರ ಕಾಲ್ನಡಿಗೆಯಲ್ಲೇ ಬರಬೇಕು. ಅವರಿಗೆ ಹೃದಯದ ತೊಂದರೆ, ಕುತ್ತಿಗೆ ನೋವುಗಳು ಸಂಗಾತಿಯಾಗಿದ್ದರೂ ತನ್ನ ತೊಂದರೆಗಳನ್ನು ಅಲಕ್ಷಿಸಿ ಅವರು ಅದೇ ಶಾಲೆಗೆ ಬಂದಿದ್ದರು.
ಶಾಲಾ ಪರಿಸರದಲ್ಲಿ  59 ಕುಟುಂಬಗಳಿದ್ದವು. ಯಾರೂ ಹೇಳಿಕೊಳ್ಳುವಷ್ಟು ಧನಿಕರಲ್ಲ. ಮೇಷ್ಟ್ರು ಅವರನ್ನೆಲ್ಲ ಕರೆದು ಒಂದು ಸಭೆ ಮಾಡಿದರು. ಕನಿಷ್ಠ ಒಂದು ರೂಪಾಯಿಯಿಂದ ಆರಂಭಿಸಿ ನಿಮಗೆ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಶಾಲೆಗಾಗಿ ಉಳಿಸಿ. ನಾನು ಶಾಲೆಯಿಂದಲೇ ನಿಮಗೆ ಒಂದು ಡಬ್ಬಿಯನ್ನು ಕೊಡುತ್ತೇನೆ. ನಿಮ್ಮ ಪ್ರತಿದಿನದ ಕಾಣಿಕೆಯನ್ನು ಈ ಡಬ್ಬಿಗೆ ಹಾಕಿ ವರ್ಷದ ಕೊನೆಯ ದಿನ ಶಾಲೆಗೆ ತಂದುಕೊಡಿ ಎಂದು ಮನವಿ ಮಾಡಿ ಪ್ರತಿ ಮನೆಗೂ ಒಂದು ಡಬ್ಬಿ ಕೊಟ್ಟರು. ಈ ಮಹತ್ಕಾರ್ಯದ ಮೊದಲ ದೇಣಿಗೆಯಂದು ತಾವೇ 5000 ನೀಡಿದರು. ಅಲ್ಲಿಗೇ ಸುಮ್ಮನಾಗದೆ ತಮ್ಮ ಪರಿಚಯದ ಅಂಗಡಿಗಳು, ಸ್ನೇಹಿತರು ಬಂಧುಗಳು ಎಲ್ಲರಿಗೂ ಇಂಥ ಡಬ್ಬಿಯನ್ನು ನೀಡಿ ಉಳಿತಾಯದ ಚಿಕ್ಕ ಕೊಡುಗೆಯನ್ನಾದರೂ ಒಂದುಗೂಡಿಸಿ ಕೊಡಲು ಪ್ರಾರ್ಥಿಸಿದರು.
ಈ ಕಾಣಿಕೆಯ ಅಭಿಯಾನ ನಡೆದ 1071 ದಿನಗಳಲ್ಲಿ ಸಹೃದಯರ ಸ್ಪಂದನದಿಂದ ಸಂಗ್ರಹವಾದ ಒಟ್ಟು ಮೊತ್ತ 3,33,000! ಪ್ರತಿ ವರ್ಷ ಈ ಹಣದಿಂದ ಬರುವ ಬಡ್ಡಿಯಿಂದ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ಬರೆಯುವ ಪುಸ್ತಕವನ್ನು ಉಚಿತವಾಗಿ ಕೊಡಲಾಗುತ್ತಿದೆ. ಅಲ್ಲದೆ ಇಲ್ಲಿ ಕಲಿತವರು ವೃತ್ತಿಪರ ಶಿಕ್ಷಣ ಪಡೆಯುವುದಾದರೆ ಅವರಿಗೆ ನೆರವು ಮತ್ತು ಹತ್ತನೆಯ ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸಿದವರಿಗೆ ಪುರಸ್ಕಾರ ನೀಡಲು ವ್ಯವಸ್ಥೆ ಕೈಗೊಳ್ಳಲಾಗಿದೆ.
ಹೀಗೆ ಕಾಣಿಕೆ ಡಬ್ಬಿಗಳ ಮೂಲಕ ಹೊಸ ಪರಂಪರೆಯೊಂದನ್ನು ಸೃಷ್ಟಿಸಿ ಕಾಣಿಕೆ ಡಬ್ಬಿ ಮೇಷ್ಟ್ರು ಎಂದೇ ಖ್ಯಾತರಾದವರು ಎಡ್ವರ್ಡ್ ಡಿಸೋಜ. ಬೆಳ್ತಂಗಡಿ ತಾಲೂಕಿನ ಕಟ್ಟದಬೈಲು ಶಾಲೆಯಲ್ಲಿ ಅವರ ಈ ಪ್ರಯೋಗ ಫಲ ನೀಡಿದೆ. ಸುವರ್ಣನಿಧಿ ಎಂಬ ಹೆಸರಿನಲ್ಲಿ ಸಂಗ್ರಹವಾದ ಹಣವನ್ನು ಠೇವಣಿಯಿಟ್ಟಿದ್ದಾರೆ. ಮೂರು ವರ್ಷಗಳಲ್ಲಿ ಮಕ್ಕಳಿಗೆ ಒಂದು ಲಕ್ಷ ರೂ. ವಿತರಣೆಯಾಗಿ ಇನ್ನೂ 3.75 ಲಕ್ಷ ಠೇವಣಿ ಇದೆ. ಹತ್ತು ವರ್ಷಕ್ಕೂ ಅಧಿಕ ಸಮಯದಿಂದ ಎರಡು ಮೈಲು ಕಾಲ್ನಡಿಗೆಯಲ್ಲೇ ಅವರು ಶಾಲೆಗೆ ಬರುತ್ತಾರೆ. ಅವರು ಮಾಡುವ ಒಳ್ಳೆಯ ಕೆಲಸಗಳಿಗೆ ಶಾಲೆಯ ಎಲ್ಲ ಅಧ್ಯಾಪಕರು ಬೆಂಗಾವಲಿಗಿದ್ದಾರೆ. ಶಾಲಾ ಅಭಿವೃದ್ಧಿ ಸಮಿತಿಯವರು, ಊರಿನ ಎಲ್ಲರೂ ಹೆಗಲು ಜೋಡಿಸಿದ್ದಾರೆ.
ಈಗ ಕಾಣಿಕೆ ಡಬ್ಬಿ ಯೋಜನೆ ನಿಂತಿದೆ. ಆದರೆ ಶಾಲಾ ವಾರ್ಷಿಕೋತ್ಸವದ ಸಮಯದಲ್ಲಿ ಅದೃಷ್ಟ ಚೀಟಿಗಳನ್ನು ಮಾರಿ ತಲಾ 5ರಂತೆ 90 ಸಾವಿರ ಸಂಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಶಾಲೆಗೆ ಅಧ್ಯಾಪಕರ ಕೊರತೆಯಾದರೆ ಈ ಹಣದಿಂದ ಗೌರವ ಶಿಕ್ಷಕರನ್ನು ನೇಮಿಸಿಕೊಳ್ಳಲು ಈ ಹಣ ಮೀಸಲಾಗುತ್ತದೆ.
ಕೊರತೆಯ ಕಾಡಾಗಿದ್ದ ಈ ಸರ್ಕಾರಿ ಶಾಲೆ ಇಂದು ಮಾದರಿಯ ನಂದನವನವಾಗಿದೆ. ನೂರಾ ಒಂದು ಮಕ್ಕಳಿದ್ದಾರೆ. ರಂಗಮಂಟಪ, ಕುಡಿಯುವ ನೀರು ಪೀಠೋಪಕರಣಗಳು, ಬಿಸಿಯೂಟದ ಕೊಠಡಿ, ಧ್ವಜಸ್ಥಂಭ ಹೀಗೆ ಹಲವಾರು ಸೌಲಭ್ಯಗಳಿಗಾಗಿ ಅರ್ಧ ಕೋಟಿಗೂ ಮಿಗಿಲಾಗಿ ಆಗಿರುವ ಖರ್ಚಿನಲ್ಲಿ 10 ಲಕ್ಷ ದೇಣಿಗೆ ಊರವರದೇ ಇದೆ. ವ್ಯವಸ್ಥಿತವಾದ ವಾಚನಾಲಯಕ್ಕೆ ಪುಸ್ತಕಗಳನ್ನೂ ಕೊಟ್ಟವರಿದ್ದಾರೆ. ಇದೇ ಗ್ರಾಮದ ಐವತ್ತು ಮಂದಿಯಿರುವ ರಕ್ತದಾನಿಗಳ ತಂಡವನ್ನು ಅಷ್ಟೇ ಸಂಖ್ಯೆಯ ನೇತ್ರದಾನಿಗಳ ಬಳಗವನ್ನು ಎಡ್ವರ್ಡ್ ಕಟ್ಟಿದ್ದಾರೆ. ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನೂ ಏರ್ಪಡಿಸುತ್ತಾರೆ. ಸ್ವತಃ ತನ್ನ ದೇಹದಾನ ಮಾಡಲೂ ಎಡ್ವರ್ಡ್ ಮುಂದಾಗಿದ್ದಾರೆ.
ಕಟ್ಟದಬೈಲು ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಸಾಂಸ್ಕೃತಿಕ ಶಿಬಿರಗಳು, ಯಕ್ಷಗಾನ ತರಬೇತಿ, ಗಣಕಯಂತ್ರದ ಪರಿಣತಿಗೂ ಅವಕಾಶವಿದೆ. ಕ್ರೀಡೆಗಳು, ಅಂಚೆಚೀಟಿ ಸಂಗ್ರಹ, ನಾಣ್ಯ ಸಂಗ್ರಹದಂಥ ಹವ್ಯಾಸಗಳಿಗೆ ಉತ್ತೇಜನವಿದೆ. ವೃತ್ತಿ ಮಾರ್ಗದರ್ಶನ ಶಿಬಿರಗಳು ಏರ್ಪಡುತ್ತವೆ. ಮನರಂಜನೆಗಾಗಿ ದೂರದರ್ಶನ ವೀಕ್ಷಣೆಗೂ ಅವಕಾಶವಿದೆ. ಇದೆಲ್ಲವೂ ಸಾಧ್ಯವಾದದ್ದು ಎಡ್ವಡ್ ಮೇಷ್ಟ್ರು ಬಂದ ಮೇಲೆ.
ಶಾಲೆಗೆ ಪ್ರಶಸ್ತಿಗಳು ಬಂದಿವೆ. ಅವರನ್ನು ತಾಲೂಕು ಮತ್ತು ಜಿಲ್ಲೆಯ ಉತ್ತಮ ಶಿಕ್ಷಕರೆಂದು ಗೌರವಿಸಲಾಗಿದೆ. ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಶಿಕ್ಷಕರ ದಿನೋತ್ಸವದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನೂ ನೀಡಲಾಗಿದೆ.
ಆದರೆ ಪುರಸ್ಕಾರ ಪ್ರಶಸ್ತಿಗಳಿಗಾಗಿ ಎಂದೂ ಹಂಬಲಿಸದ ಎಡ್ವರ್ಡ್ ದಿನ ಬೆಳಗಾದರೆ ಚಿಂತಿಸುವುದು ಈ ಶಾಲೆಗಾಗಿ ತಾನು ಇನ್ನೂ ಏನು ಮಾಡಲು ಸಾಧ್ಯ ಎಂಬುದಷ್ಟೇ ಆಗಿದೆ. (ದೂ.9972382001)

= ಪರಾಶರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com