ಮಣ್ಣೊಳಗೆ ಕುಳಿತ ಕತೆಗಳು

'ಹೋಗು, ಎಲ್ಲ ಬಿಟ್ಟು ಹೋಗು, ನಮ್ಮನ್ನು ಮರೆಯಬೇಡ. ನಾಳೆ ನಾವೆಲ್ಲರೂ ...
ಮಣ್ಣೊಳಗೆ ಕುಳಿತ ಕತೆಗಳು
Updated on: 

'ಹೋಗು, ಎಲ್ಲ ಬಿಟ್ಟು ಹೋಗು, ನಮ್ಮನ್ನು ಮರೆಯಬೇಡ. ನಾಳೆ ನಾವೆಲ್ಲರೂ ನಿನ್ನವರಾಗುತ್ತೇವೆ' ಎಂದು ತನ್ನ 13 ದಿನದ ಹಸುಳೆಯ ಗೋರಿಯ ಮೇಲೆ ತಂದೆ ಕೆತ್ತಿಸಿರುವ ಚರಮಗೀತೆಯಿರುವ ಗೋರಿ, ಅದರ ಪಕ್ಕದಲ್ಲಿಯೇ ಆ ಮಗುವಿನ ತಾಯಿಯ ಗೋರಿ, ಸಮೀಪದ ನದಿಯಲ್ಲಿ ದುರಂತ ಸಾವಿಗೀಡಾದ ಇಬ್ಬರು ಗೆಳೆಯರ ಒಂದೇ ಗೋರಿ, ಪಕ್ಕದಲ್ಲಿ ಕಾಲರಾ ಬೇನೆಗೆ ತುತ್ತಾದ ಯುವತಿಯೊಬ್ಬಳ ಗೋರಿ... ಹೀಗೆ ಒಂದಲ್ಲ, ಎರಡಲ್ಲ, 64 ಗೋರಿಗಳ ಕಥೆ-ವ್ಯಥೆಗಳಿವು.
ನಮ್ಮನ್ನಾಳಲು ಬಂದು ಇಲ್ಲಿಯ ಮಣ್ಣಲ್ಲಿ ಮಣ್ಣಾದ ಬ್ರಿಟಿಷ್ ಅಧಿಕಾರಿಗಳ, ಮತ್ತವರ ಪರಿವಾರದವರ ಗೋರಿಗಳಿರುವುದು ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ.
ಸ್ವಾತಂತ್ರ್ಯ ಹೋರಾಟ ಹತ್ತಿಕ್ಕಲು ತಮ್ಮ ಸೈನ್ಯವನ್ನು ಕೇಂದ್ರೀಕರಿಸಲು 1820ರ ಸುಮಾರಿಗೆ ಕಲಾದಗಿಯನ್ನು ಆಯ್ಕೆ ಮಾಡಿಕೊಂಡ ಬ್ರಿಟಿಷರು, ಆನಂತರ 1864ರಿಂದ 1884ರವರೆಗೆ ಇದನ್ನೇ ಜಿಲ್ಲಾ ಕೇಂದ್ರವನ್ನಾಗಿ  ಮಾಡಿಕೊಂಡಿದ್ದರು. ಆ ದಿನಗಳಲ್ಲಿ ಇಲ್ಲಿ ನೆಲೆಯೂರಿದ ಸೈನ್ಯಾಧಿಕಾರಿಗಳ, ಮತ್ತವರ ಪರಿವಾರದವರ ಗೋರಿಗಳ ಸಮೂಹಗಳು ಕಲಾದಗಿಯ ಮಣ್ಣಲ್ಲಿ ನೆನಪಾಗಿ ಕುಳಿತಿವೆ.
ಇಲ್ಲಿನ ಅಂಬೇಡ್ಕರ್ ಸರ್ಕಲ್ ಬಳಿ ಮತ್ತು ಊರ ಬೈಪಾಸ್ ರಸ್ತೆಯ ಪಕ್ಕದಲ್ಲಿ ಬ್ರಿಟಿಷರ ಗೋರಿಗಳ ಸಮೂಹವಿದೆ. ಸ್ಥಳೀಯರಿಂದ ಫಿರಂಗಿಯರ ಗೋರಿಗಳು ಎಂದು ಕರೆಸಿಕೊಳ್ಳುವ ಇವುಗಳು ಇಂದು ದಯನೀಯ ಸ್ಥಿತಿಯಲ್ಲಿವೆ. ಅಂಬೇಡ್ಕರ್ ಸರ್ಕಲ್ ಬಳಿ ಹೊಟೇಲ್ ಮನೆಗಳ ಹಿಂಭಾಗದಲ್ಲಿ, ಕೊಳಚೆ  ನೀರು, ಕಸಕಡ್ಡಿ, ಗಿಡಗಂಟೆಗಳಿಂದ ಆವೃತ್ತವಾಗಿರುವ ಗೋರಿಗಳ ಬಳಿ ಹೋಗುವುದು ತುಸು ಪ್ರಯಾಸವೇ.  ಇನ್ನು ಹೊರ ರಸ್ತೆಯಲ್ಲಿ ತುಸು ಒಳಭಾಗದಲ್ಲಿರುವ ಗೋರಿಗಳ ಸಮೂಹ ಮುಳ್ಳು ಗಿಡಗಳಿಂದ ಭಾಗಶಃ ಮುಚ್ಚಿಹೋಗಿವೆ.
ಹಾಳು ಸ್ಥಿತಿಯಲ್ಲಿರುವ ವಿಭಿನ್ನ ಗೋರಿಗಳು
ಎತ್ತರಕ್ಕೆ ನಿಂತ ಗೋಡೆಗಳ ನಡುವಿನ 64 ಗೋರಿಗಳು ಒಂದರಂತೆ ಮತ್ತೊಂದಿಲ್ಲ. ಪ್ರತಿ ಗೋರಿಯ ಮೇಲೂ ಸತ್ತ ವ್ಯಕ್ತಿಗಳ ವಿವರಣೆಗಳಿವೆ, ಚರಮಗೀತೆಗಳನ್ನು ಕೆತ್ತಲಾಗಿದೆ. 1821ರಿಂದ 1890ರವರೆಗಿನ ಗೋರಿಗಳನ್ನು ನಾವಿಲ್ಲಿ ಕಾಣಬಹುದು.
ಇಲ್ಲಿನ ಗೋರಿಗಳನ್ನು ನೋಡುವಾಗ ಮತ್ತು ಅವುಗಳ ಮೇಲೆ ಕೆತ್ತಿರುವ ಫಲಕಗಳನ್ನು ಓದುವಾಗ ಮನಸ್ಸು  ಮೂಕವಾಗುತ್ತದೆ. ಕಾರಣ, ಅವು ಹೇಳುವ ಸಾವಿನ ಕಥೆಗಳು. ನಮ್ಮನ್ನು ಬಹು ದರ್ಪದಿಂದ ಆಳಲು ಬಂದ ಬ್ರಿಟಿಷರು ಕೂಡಾ ಸಾವು ಬಂದಾಗ ಕೇವಲ ಮನುಷ್ಯರು ಎಂಬುದನ್ನು ಇವು ಸೂಚಿಸುತ್ತವೆ.
ಸಾವಿನ ಸಮಾಜವಾದಕ್ಕೆ ಚಕ್ರವರ್ತಿ, ಮಗು, ಹೆಂಡತಿ, ಸೈನಿಕ, ದೊಡ್ಡವ, ಸಣ್ಣವ ಎಂಬ ಫರಕೆಲ್ಲಿಯದು    ಎಂದು ಈ ಗೋರಿಗಳ ನಡುವೆ ನಿಂತು ಕೇಳುತ್ತಾರೆ ಖ್ಯಾತ ಬರಹಗಾರ ಡಾ.ರಹಮತ್ ತರೀಕೆರೆ.
1960ರವರೆಗೂ ಇದನ್ನು ಕ್ರಿಶ್ಚಿಯನ್ನರು ಸಂರಕ್ಷಿಸಿದ್ದರು. ಮಾಲಿಯೊಬ್ಬ ಕಾಯುತ್ತಿದ್ದ. ಇಲ್ಲೆಲ್ಲ ಹೂಗಿಡಗಳನ್ನು ಬೆಳೆಸಿದ್ದ ಎಂದು ನೆನಪಿಸಿಕೊಳ್ಳುತ್ತಾರೆ ಬ್ರಿಟಿಷರೊಂದಿಗೆ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಿದ್ದ ಇಲ್ಲಿನ 95 ವರ್ಷದ ಹಿರಿಯ ಭೀಮರಾವ್ ಕಲಕಣರ್.
ಆನಂತರ ಏನಾಯಿತೋ, ಇದು ಹಾಳಾಗಲಾರಂಭಿಸಿತು. ನಿಧಿ ಆಸೆಗಾಗಿ ಗೋರಿಗಳನ್ನು ಅವುಗಳ ಮೇಲಿನ ಫಲಕವನ್ನು ಕಿತ್ತೆಸೆಯಲಾಯಿತು. ತಮ್ಮ ಪೂರ್ವಜರ ಗೋರಿಗಳನ್ನು ನೋಡಿ ಅವುಗಳಿಗೆ ಗೌರವಿಸಲು ವಿದೇಶದಿಂದ ಅನೇಕರು ಇಲ್ಲಿಗೆ ಬರುತ್ತಿರುತ್ತಾರೆ ಎಂದು ಬರಹಗಾರ ದ.ರಾ.ಪುರೋಹಿತ್ ಹೇಳುತ್ತಾರೆ.
ಇಲ್ಲಿಗೆ ಬರುವ ಗಣ್ಯರು, ಇತಿಹಾಸಕಾರರು, ಪಾದ್ರಿಗಳು, ಅಧಿಕಾರಿಗಳು ಇದರ ದುಸ್ಥಿತಿಯ ಬಗ್ಗೆ ಮರುಕ ವ್ಯಕ್ತಪಡಿಸಿ ಸಂರಕ್ಷಣೆಯ ಬಗ್ಗೆ ಮಾತನಾಡುತ್ತಾರೆ. ಆದರೆ ಅದೇಕೋ ಇನ್ನೂ ಕಾರ್ಯಗತವಾಗುತ್ತಿಲ್ಲ.


= -ಪ್ರವೀಣರಾಜು ಎಸ್.ಸೊನ್ನದ
    pravinrajusonnad@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com