ಚಿಂಚೋಳಿಯ ಬತ್ತದ ಗಂಗೆ

ಚಿಂಚೋಳಿಯ ಬತ್ತದ ಗಂಗೆ
Updated on: 

ಬಿಸಿಲ ನಗರಿ ಗುಲ್ಬರ್ಗದಲ್ಲಿ ಬೇಸಿಗೆ ಬಂದರೆ ಹನಿ ನೀರಿಗೂ ಹಾಹಾಕಾರ. ಎಲ್ಲರ ಬಾಯಲ್ಲೂ ನೀರಿನದೇ ಮಾತು. ಈ ಭಾಗದ ಹಳ್ಳ, ನದಿ, ಹೊಳೆ ಬತ್ತಿ ಆ ಪಾತ್ರಗಳು ಕ್ರಿಕೆಟ್ ಮೈದಾನಗಳಂತಾಗಿರುತ್ತವೆ. ಆದರೆ, ಇಂಥ ಈ ಜಿಲ್ಲೆಯಲ್ಲಿ ನೀರಿನ ಉಗಮ ಸ್ಥಾನ ಇದೆ ಎಂದರೆ ನಂಬುತ್ತೀರಾ?
'ಪವಿತ್ರ ಗಂಗೆ' ಎಂದು ಖ್ಯಾತಿ ಗಳಿಸಿದ ಚಿಂಚೋಳಿ ತಾಲೂಕಿನ ಹೊರವಲಯದ ಈ ತಾಣಕ್ಕೆ ಜನರು 'ಬುಗ್ಗೆ'ಯ ಕಾರಣಕ್ಕಾಗಿಯೇ ವಿಶೇಷವಾಗಿ ಗುರುತಿಸುತ್ತಾರೆ. ವರ್ಷವಿಡೀ ಕಾಲದ ಹಂಗಿಲ್ಲದೆ ಇಲ್ಲಿ ನೀರು ಉದ್ಭವಿಸುತ್ತದೆ. 1976ರ ಬರಗಾಲದಲ್ಲೂ ಇಲ್ಲಿ ನೀರು ಬತ್ತಿರಲಿಲ್ಲವಂತೆ! ಪಂಚಲಿಂಗಗಳ ಸಮ್ಮುಖದಲ್ಲಿ ಉಗಮವಾಗುವ ಇಲ್ಲಿನ ನೀರು ಅಧ್ಯಾತ್ಮ ಮಟ್ಟದಲ್ಲಿ ವಿಶೇಷ ಸ್ಥಾನ ಪಡೆದಿದೆ. ಅಂತರ್ಜಲ ಮಟ್ಟ ಕುಸಿಯುತ್ತಿರುವ ಈ ದಿನಗಳಲ್ಲಿ ನಿರಂತರ ನೀರು ಉಗಮವಾಗುವುದು ಅಚ್ಚರಿಯೇ ಸರಿ.
ಬಸವಣ್ಣನ ಮೂರ್ತಿಯ ಕೆಳಗಿನಿಂದ ಉಗಮವಾಗುವ ಈ ನೀರು ಕೊನೆಗೆ ಸೇರುವುದು ಮುಲ್ಲಾಮರಿ ನದಿಗೆ. ತಾಲೂಕಿನೆಲ್ಲೆಡೆ ನೀರು ಬತ್ತಿದರೂ ಇಲ್ಲಿ ಬತ್ತುವುದಿಲ್ಲ ಎಂಬುದು ನಿಜಕ್ಕೂ ಸೋಜಿಗ. ಸ್ವಚ್ಛ ನೀರು ಸೂಸುವ ಈ ಸ್ಥಳ ನೋಡಲದ್ಭುತ. ಬೇಸಿಗೆ ಬೇಗೆಗೆ ಇಲ್ಲಿನ ನೀರು ಬಿಸಿಯಾಗದೆ, ತಣ್ಣನೆಯ ನೀರು ಉತ್ಪತ್ತಿಯಾಗುವುದು ಮತ್ತೊಂದು ವಿಶೇಷತೆ. ಇದರ ಮುಂದೆ ಫ್ರಿಡ್ಜ್ ಸಹ ಸರಿಸಾಟಿಯಲ್ಲ ಎಂದೇ ಇಲ್ಲಿನ ಜನರ ಭಾವನೆ.
ಪುಣ್ಯಕ್ಷೇತ್ರ ದರ್ಶನಕ್ಕೆ ಬಂದವರಿಗೆ ತಾಲೂಕಿನಲ್ಲಿ ಚಂದ್ರಂಪಳ್ಳಿ ಕೆರೆ, ಎತ್ತಿಪೋತೆ ಜಲಪಾತ, ಗೊಟಮಗೊಟ್ಟಿ ಸ್ಥಳ, ಶಾದಿಪುರ ಅರಣ್ಯ, ನೀರಿನ ಮೇಲೆ ಮಡಿಕೆಗಳು ತೇಲುವ ಕೊರವಂಜೇಶ್ವರಿ ಬಾವಿ, ಧಾರ್ಮಿಕ ಕ್ಷೇತ್ರ ಮೊಘಾ, ಜಾಪಳ ಹಣ್ಣಿಗೆ ಪ್ರಸಿದ್ಧಿಯಾದ ಚಂದ್ರಂಪಳ್ಳಿ ಇನ್ನಿತರ ಪ್ರಮುಖ ಸ್ಥಳಗಳೂ ಮನಕ್ಕೆ ಮುದ ನೀಡುತ್ತವೆ.

= ಅವಿನಾಶ್ ಎಸ್. ಬೋರಂಚಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com