ಟ್ವೀಟರ್ ಅಕೌಂಟ್ ಹೊಂದಿರುವ ಶೇ.44 ಬಳಕೆದಾರರು ಇವತ್ತಿನವರೆಗೂ ಒಮ್ಮೆಯೂ ಟ್ವೀಟಿಸಿಯೇ ಇಲ್ಲವಂತೆ!
ಹಾಗಿದ್ದರೆ ಇವರೆಲ್ಲ ಯಾವ ಕಾರಣಕ್ಕೆ ಅಂಕೌಂಟ್ ಹೊಂದಿದ್ದಾರೆ ಎನ್ನುವುದನ್ನು ತಿಳಿಯಲು ಟ್ವೀಟರ್ ಕಂಪನಿಗೆ ಗೊತ್ತಾಗಿಲ್ಲ. ಅಂದರೆ 98 ಟ್ವೀಟರ್ ಅಕೌಂಟ್‌ಗಳಲ್ಲಿ 43 ಕೋಟಿ ಅಕೌಂಟ್‌ಗಳು ನಿಷ್ಕ್ರಿಯವಾಗಿವೆ. ಭಾರತದ ಕೆಲ ಸೆಲೆಬ್ರಿಟಿಗಳ ಟ್ವೀಟರ್ ಅಕೌಂಟ್‌ನ ಫಾಲೋವರ್ಸ್‌ಗಳನ್ನು ಕೃತಕವಾಗಿ ಹೆಚ್ಚಿಸಲಾಗುತ್ತಿದೆ ಎಂಬೆಲ್ಲ ಮಾತುಗಳಿವೆ. ಈ ಅಕೌಂಟ್‌ಗಳೂ ಇದೆ ಲೆಕ್ಕಕ್ಕೆ ಸೇರುತ್ತವೆಯೋ, ಟ್ವೀಟಿಸದವರೇ ಹೇಳಬೇಕು.
'ಟ್ರಾಫಿಕ್' ಅಪ್ಲಿಕೇಶನ್
ದೂರದ ರಾಯಚೂರಿನ ಹಳ್ಳಿಯೊಂದರಿಂದ ಮೆಜೆಸ್ಟಿಕ್‌ಗೆ ಬಂದು, 'ರೀ ಯಪ್ಪಾ ಹೆಗಡೆನಗರ ಬರ್ತಿರೇನು' ಯಾವುದಾದರೂ ಆಟೋದವರನ್ನು ಕೇಳಿದರೆ, 'ಸ್ವಾಮಿ ರು. 400 ಕೊಡಿ, ಈ ಟೇಮಲ್ಲಿ ಯಾವ ಬಸ್ ಇಲ್ಲ, ಪ್ಯಾಸೆಂಜರೂ ಸಿಗಲ್ಲ' ಎಂದು ಧಿಮಾಕಿನ ಉತ್ತರ ಬರುತ್ತದೆ. ಆದರೆ ಒಂದೊಮ್ಮೆ ಬೆಂಗಳೂರು ಹಾಗೂ ಕರ್ನಾಟಕದ ಟ್ರಾಫಿಕ್ ಪೊಲೀಸರು ಇಂಥದ್ದೊಂದು ಮೊಬೈಲ್ ಅಪ್ಲಿಕೇಷನ್ ರೂಪಿಸಿದರೆ 'ನೋ ಉಲ್ಲು ಬನಾವಿಂಗ್' ಎಂದು ಪ್ರತ್ಯುತ್ತರ ನೀಡಬಹುದು.
ದೆಹಲಿ ಟ್ರಾಫಿಕ್ ಪೊಲೀಸರು ಅರವಿಂದ್ ಕೇಜ್ರಿವಾಲ್‌ರಂಥ ಕ್ರಾಂತಿಕಾರ ಸುಧಾರಕ ವ್ಯಕ್ತಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಮೇಲೆ ಮೊಬೈಲ್ ಅಪ್ಲಿಕೇಷನ್ ಹೊರತಂದಿದ್ದಾರೆ. ಇದನ್ನು ನಿಮ್ಮ ಆ್ಯಂಡ್ರಾಯ್ಡ್ ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡರೆ ದೆಹಲಿಯ ಟ್ರಾಫಿಕ್ ಮಾಹಿತಿ, ಟ್ಯಾಕ್ಸಿ, ಬಸ್, ಆಟೋ ಪ್ರಯಾಣ ದರ ಹಾಗೂ ದೆಹಲಿಯ ಎಲ್ಲ ಪ್ರದೇಶಗಳ ಕುರಿತ ಮಾಹಿತಿ ಉಚಿತವಾಗಿ ದೊರೆಯತ್ತದೆ.
ಯಾವುದಾದರೂ ಟ್ಯಾಕ್ಸಿವಾಲಾಗಳು ಹೆಚ್ಚು ಹಣ ಬೇಡಿಕೆಯಿಟ್ಟರೆ ಕೂಡಲೇ ಲೆಕ್ಕಮಾಡಿ ಅವರಿಗೆ ತೋರಿಸಬಹುದು. ರೋಡ್ ಮ್ಯಾಪ್ ಅನ್ನು ಇದು ನೀಡುತ್ತದೆ. ಇದರಿಂದ ಸುತ್ತಾಡಿಸಿಕೊಂಡು ಹೋಗಲು ಸಾಧ್ಯವಿಲ್ಲ. ಮತ್ತೊಂದೆಡೆ ಇವರು ಅನುಚಿತವಾಗಿ ವರ್ತಿಸಿದರೆ, ಹೆಚ್ಚಿನ ಪ್ರಯಾಣ ದರಕ್ಕೆ ಡಿಮಾಂಡ್ ಮಾಡಿದರೆ ಕೂಡಲೇ ಅಪ್ಲಿಕೇಷನ್ ಮೂಲಕ ದೂರು ಸಲ್ಲಿಸಬಹುದು. ಇದಲ್ಲದೆ, ಈ ಅಪ್ಲಿಕೇಷನ್ ಹೊಂದಿರುವ ಬಳಕೆದಾರರು 'ನೋ ಪಾರ್ಕಿಂಗ್' ಜಾಗದಲ್ಲಿ ವಾಹನ ನಿಲ್ಲಿಸಿದ್ದರೆ, ಆ ಬಳಿಕ ಅದನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದರೆ ಅದರ ಬಗೆಗಿನ ತಾಜಾ ಮಾಹಿತಿಯನ್ನೂ ಪಡೆಯಬಹುದು. ಬೆಂಗಳೂರಿನ ಪೊಲೀಸ್ ಮಹಾಶಯರು ಈ ಬಗ್ಗೆ ತಲೆಕೆಡಿಸಿಕೊಳ್ಳಬಹುದಿತ್ತು.