ಮೊಬೈಲ್ ಅಂದ್ರೆ ಮಿಸ್ಟರ್ ಯಮ!

ಮೊಬೈಲ್ ಅಂದ್ರೆ ಮಿಸ್ಟರ್ ಯಮ!
Updated on: 

ಮನೆಯಲ್ಲಿನ ಹೆಂಡತಿ ಮುಖವನ್ನೂ ನಾವಷ್ಟು ಸಲ ನೋಡಿರಲ್ಲ. ಮೊಬೈಲನ್ನು ಕನಿಷ್ಠವೆಂದರೂ ಮೂವತ್ತು ಸಲ ನೋಡಿರುತ್ತೇವೆ. ಆದರೆ, ಹೆಂಡತಿ ಸಹವಾಸ ಆರೋಗ್ಯಕ್ಕೆ ಆಹ್ಲಾದಕರ. ಮೊಬೈಲ್ ಸಹವಾಸ ಆರೋಗ್ಯಕ್ಕೆ ಹಾನಿಕರ!
ಹೌದು, ಮೊಬೈಲ್ ಕ್ರಾಂತಿ ಮಾಡಿದೆ. ಎರಡೂ ಕೈಗೆ ಒಂದೊಂದು ಸೇರಿದೆ. ಆದರೀ ಸಂಪರ್ಕ ಸಾಧನ ತರುತ್ತಿರುವ ಆಪತ್ತು ಅಷ್ಟಿಷ್ಟಲ್ಲ. ಇದು ಸ್ವೀಕರಿಸುವ ಅಥವಾ ಹೊರಸೂಸುವ ರೇಡಿಯೋ ಫ್ರೀಕ್ವೆನ್ಸಿ- ಎಲೆಕ್ಟ್ರೋ ಮ್ಯಾಗ್ನೆಟಿಕ್ ಅಲೆಗಳು ನಮ್ಮ ದೇಹಕ್ಕೆ ಆಗಿಬರಲ್ಲ. ಈ ತರಂಗಗಳ ಅಡ್ಡ ಪರಿಣಾಮವನ್ನು, ಅದರ ಮೇಲೆ ನಮೂದಿಸಿರುವ SAR (Specific Absorption Rate) ನಿಂದ ಲೆಕ್ಕ ಹಾಕಬಹುದು. ಇದನ್ನು ನಿಯಂತ್ರಿಸುವ ಸಂಸ್ಥೆ FCC(Federal communication commission),1996ರಿಂದ ಈಚೆಗೆ ತಯಾರಾದ ಯಾವುದೇ ಮೊಬೈಲ್ ಖಆಖ ಮೌಲ್ಯ 1.6 ವ್ಯಾಟ್/ ಕೆ.ಜಿ. ಮೀರಬಾರದು. ಹಾಗೆಯೇ 2000ನೇ ಇಸವಿಯಿಂದ ಈಚೆಗೆ, ಪ್ರತಿ ಮೊಬೈಲ್ ತಯಾರಕರು, ಪ್ರತಿ ಸೆಟ್ ಮೇಲೆ, ಇದರ ಖಆಖ ಲೇಬಲ್ ಹಾಕಬೇಕಾಗಿದೆ.
ಇನ್ನು ಈ ಮೊಬೈಲ್ ಸೆಟ್‌ಗಳಿಂದ ಹೊರಹೊಮ್ಮುವ ರೇಡಿಯೋ ಫ್ರೀಕ್ವೆನ್ಸಿ- ಎಲೆಕ್ಟ್ರೋ ಮ್ಯಾಗ್ನೆಟಿಕ್ ತರಂಗಗಳು ತರುವ ಅಡ್ಡಪರಿಣಾಮಗಳು ಕಮ್ಮಿಯೇನಲ್ಲ. ಒಂದೆಡೆ ಮೊಬೈಲ್ ತಯಾರಕರು 'ಮೊಬೈಲ್‌ನ ತರಂಗಗಳು ಯಾವುದೇ ಅಪಾಯ ತರುವುದಿಲ್ಲ' ಎಂದು ವಾದಿಸುತ್ತಾ ಬಂದರೆ, ಇನ್ನೊಂದೆಡೆ ವಿಜ್ಞಾನಿಗಳು- ವೈದ್ಯರು ಈ ತರ್ಕವನ್ನು ತಳ್ಳಿಹಾಕುತ್ತಲೇ ಬಂದಿದ್ದಾರೆ. ಆದರೆ, ಗ್ರಾಹಕ ಈ ವಾದಗಳನ್ನು ಕಿವಿಗೂ ಬೀಳಿಸಿಕೊಳ್ಳದೆ ಮತ್ತೆ ಮತ್ತೆ ಮೊಬೈಲ್‌ಗೆ ಕೈಹಾಕುತ್ತಲೇ ಇದ್ದಾನೆ.
ಮೊಬೈಲ್ ಬಳಸುವಾಗ ಶಾಖದ ಅಡ್ಡ ಪರಿಣಾಮವನ್ನು ನೀವೂ ಕಂಡಿರಬಹುದು. ಸತತವಾಗಿ ಹೆಚ್ಚು ಸಮಯ ಮೊಬೈಲನ್ನು ಬಳಸಿದಾಗ, ಇಡೀ ಉಪಕರಣ ಹಾಗೂ ಆತನ ಕಿವಿಗಳು ಬಿಸಿಯಾಗಿ, ದೇಹದ ಅದರಲ್ಲೂ ಜೀವಕೋಶದ ಕಾರ್ಯವೈಖರಿ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಂದರೆ, ಮೊಬೈಲ್ ಆಗ ಮೈಕ್ರೋವೇವ್ ಸ್ಟೌನಂತೆ ಕೆಲಸ ಮಾಡುತ್ತದೆ. ದೇಹದ ಉಷ್ಣತೆಯನ್ನು ಏಕಾಏಕಿ ಹೆಚ್ಚಿಸಿ, ರಕ್ತ ಸಂಚಾರದ ವ್ಯತ್ಯಯಕ್ಕೆ ಕಾರಣವಾಗುತ್ತದೆ. ಆಗ ದೇಹ ಹೆಚ್ಚಿದ ಶಾಖವನ್ನು ಕ್ಷಿಪ್ರವಾಗಿ ಹೊರಸೂಸಲಾಗದೆ, ನರಗಳು ಉಬ್ಬುತ್ತವೆ. ಇದು ನೇರವಾಗಿ ನಮ್ಮ ಕಣ್ಣುಗಳು ಹಾಗೂ ಜನನಾಂಗಗಳ ಮೇಲೆ ಪರಿಣಾಮ ಬೀರುತ್ತದೆ. ಮೊಬೈಲಿನ ಇನ್ನೊಂದು ಅಡ್ಡಪರಿಣಾಮವಿದೆ. ಶಾಖರಹಿತ ಅಡ್ಡ ಪರಿಣಾಮ. ಜೀವಕೋಶದ ಪದರಗಳಲ್ಲಿನ ಒಕ್ಕೂಟ ರಚನೆಗೆ ರೇಡಿಯೋ ಫ್ರೀಕ್ವೆನ್ಸಿ- ಎಲೆಕ್ಟ್ರೋ ಮ್ಯಾಗ್ನೆಟಿಕ್ ತರಂಗಗಳು ಅಡ್ಡಿಯಾಗುತ್ತವೆ. ಇದಕ್ಕೆ ಕಾರಣ ದೇಹದಿಂದ ಖಋ-ಊಂ ತರಂಗಗಳು ಹೀರಲ್ಪಟ್ಟಾಗ, ಉಂಟಾಗುವ ಎಡ್ಡಿ ಕರೆಂಟ್. ಹಾಗೆಯೇ ರಕ್ತ ಹಾಗೂ ಮೆದುಳಿನ ನಡುವೆ ಇರುವ ಸಮತೋಲನ ಸ್ಥಿತಿಯ ಸ್ಥಾನಪಲ್ಲಟ, ಜೀವನಿರೋಧಕ ಶಕ್ತಿಯ ಕ್ಷೀಣತೆ, ನರವ್ಯೂಹಗಳಲ್ಲಿ ಈ ವಿದ್ಯುತ್ ತರಂಗಗಳಿಂದ ಉಂಟಾಗುವ ಉತ್ಕರ್ಷದಿಂದ ಆಗುವ ದೋಷಗಳು ಇತ್ಯಾದಿ.
ಮೊಬೈಲ್‌ನ ಹೆಚ್ಚಿನ ಹಾಗೂ ಸತತ ಬಳಕೆಯಿಂದ, ವ್ಯಕ್ತಿಯ ಮೆದುಳಿನಲ್ಲಿ ಅತೀವ ಏರುಪೇರುಗಳು ಕಾಣಿಸುತ್ತವೆ. ಕೆಲಸದಲ್ಲಿ ಏಕಾಗ್ರತೆಯ ಕೊರತೆ, ನಿದ್ರಾಹೀನತೆ, ಸುಸ್ತು, ತಲೆನೋವು, ಹೆಚ್ಚಿದ ರಕ್ತದೊತ್ತಡ, ಹಾರ್ಮೋನ್ ಸ್ರವಿಸುವಿಕೆಯಲ್ಲಿ ಏರುಪೇರು, ಪುರುಷರಲ್ಲಿ ಸಂತಾನೋತ್ಪತ್ತಿ ಸಮಸ್ಯೆ ಇತ್ಯಾದಿ.
ಹೀಗಾಗಿ, ಮೊಬೈಲ್ ಎಷ್ಟೋ ಆಕರ್ಷಕವೋ, ಎಷ್ಟು ತಂತ್ರಜ್ಞಾನಸ್ನೇಹಿಯೋ ಅಷ್ಟು ಮಾರಕವೂ ಹೌದು. ಆರೋಗ್ಯದ ಪ್ರಜ್ಞೆ ಬಳಸಿ ಉಪಯೋಗಿಸಿದರಷ್ಟೇ, ಈ ಮೊಬೈಲಿನ ಅಡ್ಡಪರಿಣಾಮದಿಂದ ಬಚಾವಾಗಲು ಸಾಧ್ಯ.

ಮೊಬೈಲ್ ಬಳಕೆಗೆ ಸೂತ್ರ
    ಅಗತ್ಯವಿದ್ದಾಗ ಮಾತ್ರ ಮೊಬೈಲ್ ಬಳಸುವುದು.
    ಮೆಸೇಜ್ ಬಂತಾ, ಕಾಲ್ ಬಂತಾ ಅಂತ ಪದೇಪದೇ ಮುಟ್ಟಿ ನೋಡದೇ ಇರುವುದು.
    ಬ್ಯಾಟರಿ ಲೋ ಇರುವಾಗ ಮೊಬೈಲ್ ಅತ್ಯಂತ ತೀಕ್ಷ್ಣ ರೇಡಿಯೋ ಫ್ರೀಕ್ವೆನ್ಸಿ- ಎಲೆಕ್ಟ್ರೋ ಮ್ಯಾಗ್ನೆಟಿಕ್ ಕಿರಣಗಳನ್ನು ಹೊರಹಾಕುತ್ತದೆ. ಆ ವೇಳೆ ಬಳಕೆ ನಿಲ್ಲಿಸಿ. ಅಗತ್ಯ ಚಾರ್ಜ್ ಆದ ಬಳಿಕವಷ್ಟೇ ಬಳಸಿ.
    ಮಲಗುವಾಗ ಮೊಬೈಲ್ ಅನ್ನು ತಲೆಯ ಕೆಳಗೆ ಇಟ್ಟುಕೊಳ್ಳಬೇಡಿ. ಅನತಿ ದೂರದಲ್ಲಿ ಇಡುವುದು ಕ್ಷೇಮ.
    ಅನಗತ್ಯ ವೇಳೆ ಮೊಬೈಲನ್ನು ಸ್ವಿಚ್ಡ್ ಆಫ್ ಮಾಡಿ.
    ಕಾಲ್‌ಗಿಂತ ಸಾಧ್ಯವಾದಷ್ಟು ಎಸ್ಸೆಮ್ಮೆಸ್‌ಗಳಲ್ಲೇ ವ್ಯವಹರಿಸಿ.
    ಸ್ಪೀಕರ್ ಫೋನ್ ಮತ್ತು ಬ್ಲೂ ಟೂತ್ ಬಳಕೆ ಹೆಚ್ಚು ಮಾಡಿ.
    ಮಕ್ಕಳ ಮೇಲೆ ಮೊಬೈಲ್ ಮಾರಕ ಪರಿಣಾಮ ಬೀರುತ್ತದೆ. ಅವರ ಕೈಗೆ ಮೊಬೈಲ್ ಕೊಡಬೇಡಿ.
    ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ನಿಲ್ಲಿಸಿ. ಶೇ.15 ಅಪಘಾತಕ್ಕೆ ಮೊಬೈಲೇ ಕಾರಣ.
    ಮೊಬೈಲ್‌ನಲ್ಲಿ ಗೇಮ್ ಹಾಕಿಕೊಂಡು ಆಡುವುದನ್ನು ನಿಲ್ಲಿಸಿ.

= ನಾಗಮಂಗಲ ನರಸಿಂಹಮೂರ್ತಿ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com