ಕುಬೇರ ಗ್ರಾಮ

ಕುಬೇರ ಗ್ರಾಮ
Updated on: 

ವೈಕುಂಠ ಏಕಾದಶಿ ಅದಾಗಲೇ ಮುಗಿದಿದೆ. ಯಾರಿಗೆ 'ಕೈಲಾಸ'ಕ್ಕೆ ಅರ್ಥಾತ್ ಸ್ವರ್ಗಕ್ಕೆ ದಾರಿ ಸಿಕ್ಕಿತೋ ಇಲ್ಲವೋ ಗೊತ್ತಿಲ್ಲ. ಆದರೂ ಕಾಣದ ಸ್ವರ್ಗದ ಬಾಗಿಲು ಬಡಿಯಲು ದೇಗುಲಗಳ ಮುಂದೆ ಕ್ಯೂ ನಿಲ್ಲುವವರ ಸಂಖ್ಯೆಗೇನೂ ಕಮ್ಮಿ ಇಲ್ಲ. ಆದರೆ, ಸ್ವರ್ಗ ಎಲ್ಲೂ ಇಲ್ಲ ನಿಮ್ಮ ಮುಂದೆಯೇ ಇದೆ ನೋಡಿ ಎನ್ನುತ್ತಿದೆ ದೂರದ ಚೀನಾ.
'ಕಾಣದ ಕಡಲಿಗೆ ಹಂಬಲಿಸಿದರೆ ಏನು ಪ್ರಯೋಜನಾ? ವಸಿ ಇತ್ತ ನೋಡಿ' ಎನ್ನುತ್ತಿರುವ ಚೀನಾದ ಆ ಪುಟ್ಟ ಊರಿನ ಹೆಸರೇ ಹುವಾಕ್ಸಿ. ನಿಜಕ್ಕೂ ಇದು ಧರೆ ಮೇಲಿನ ಸ್ವರ್ಗ. 'ನೀಲಿ ಆಕಾಶದ ಕೆಳಗಿರುವ ಜಗತ್ತಿನ ನಂ. 1 ಶ್ರೀಮಂತ ಗ್ರಾಮ' ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಪುಟ್ಟ ಊರು ವಿಸ್ತೀರ್ಣದಲ್ಲಿ, ಬೆಂಗಳೂರಿನ ವಿಲ್ಸನ್‌ಗಾರ್ಡನ್‌ಗಿಂತಲೂ ತುಸು ಚಿಕ್ಕದು. ಐದಾರೂ ವರ್ಷಗಳ ಹಿಂದೆ ಇದರ ವಿಸ್ತೀರ್ಣ ಬರೀ 1 ಕಿ.ಮೀ.! ಈಗಲೂ ಅಷ್ಟೇ ಇದೆ ಎನ್ನುವುದು ಅಲ್ಲಿನ ಅಧಿಕಾರಿಗಳ ಮಾತು.
ತೀರಾ ಆಡು ಭಾಷೆಯಲ್ಲಿ ಹೇಳಬಹುದಾದರೆ ಪುಟ್ಟಗೋಸಿಯಷ್ಟು ವಿಸ್ತೀರ್ಣವುಳ್ಳ ಈ ಗ್ರಾಮ, ಜಗತ್ತಿನ ಅತ್ಯಂತ ಶ್ರೀಮಂತ, ವಿಲಾಸಿ ಗ್ರಾಮ. ನಿರ್ಮಾಣವಾಗಿದ್ದು 1961ರಲ್ಲಿ. ಜನಸಂಖ್ಯೆ 2 ಸಾವಿರ ಮಾತ್ರ. ಇಲ್ಲಿ ಎಲ್ಲರೂ ರೈತರೇ. ಇಲ್ಲಿನ ಮೂಲ ನಿವಾಸಿಗಳ ಬ್ಯಾಂಕ್ ಖಾತೆಗಳ ಸಂಪತ್ತು ಕೋಟಿಗಳ ಗಡಿ ದಾಟಿದೆ.
ಎಲ್ಲರೂ ಕುಬೇರರೇ!
1961ರಲ್ಲಿ ನೂರು ಚಿಲ್ಲರೆ ಜನರಿಂದ ಹುಟ್ಟಿಕೊಂಡ ಹುವಾಕ್ಸಿ ಸಂಪತ್ತಿನ ಅರಮನೆ ಎನಿಸಿಕೊಳ್ಳುವಷ್ಟರಲ್ಲಿ ಒಂದು ಸಾವಿರ ರೈತರನ್ನು ಒಳಗೊಂಡಿತ್ತು. 2 ಸಾವಿರ ಮೂಲ ರೈತರ ಜೊತೆಗೆ 20,344 ವಲಸೆ ಕಾರ್ಮಿಕರು, 28,240 ಅಕ್ಕಪಕ್ಕದ ಗ್ರಾಮಸ್ಥರು ಈ ಹಳ್ಳಿಯಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ಇಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದ್ದರೂ ಮೂಲ ನಿವಾಸಿಗಳಲ್ಲಿ ಬಡತನದ ನೆರಳೂ ಸೋಕಿಲ್ಲ. ಒಂದು ಅಂದಾಜಿನ ಪ್ರಕಾರ, ಇಲ್ಲಿ ರೈತರ ಆದಾಯ ಕನಿಷ್ಠ 1 ಲಕ್ಷ ಯುರೋಗಳಷ್ಟು. ಅಂದರೆ ಇವರ ವಾರ್ಷಿಕ ವರಮಾನ ರು. 75 ಲಕ್ಷ. ವಲಸೆ ಬಂದಿರುವ ಕಾರ್ಮಿಕರ ಹೊರತಾಗಿ ನೂರಕ್ಕೆ ನೂರರಷ್ಟು ಎಲ್ಲರೂ ಕುಬೇರರೇ. ಇತ್ತೀಚೆಗೆ ಇಲ್ಲಿನ ತೆರಿಗೆ ಅಧಿಕಾರಿಗಳು ಸ್ಥಳೀಯರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಪ್ರತಿಯೊಬ್ಪರ ಖಾತೆಯ ಲೆಕ್ಕ ಕೋಟಿಯ ಗಡಿ ದಾಟಿತ್ತಂತೆ.
ಕೈಗಾರಿಕೀಕರಣದ ನೆರಳು
ಸ್ಥಳೀಯರೆಲ್ಲರೂ ಸ್ವಂತ ಭೂಮಿ ಹೊಂದಿದ್ದಾರೆ. ಒಬ್ಬರು ಇನ್ನೊಬ್ಬರ ಭೂಮಿಯಲ್ಲಿ ಹೋಗಿ ದುಡಿಯುವ ದೃಶ್ಯ ಇಲ್ಲಿಲ್ಲ. ಇದೀಗ ಈ ಗ್ರಾಮಕ್ಕೆ ಮಲ್ಟಿ ವಲಯಗಳ ದಾಳಿ ಶುರುವಾಗಿದೆ. ಕೈಗಾರಿಕೀಕರಣದ ಗಾಳಿಗೂ ತುತ್ತಾಗಿ, ಬಹುತೇಕರು ಜೆಟ್ ವಿಮಾನ ಖರೀದಿಸಿದ್ದಾರೆ. ಜೊತೆಗೆ ಹಡಗುಗಳನ್ನು ಮಾರುವ ವ್ಯವಸ್ಥೆಯೂ ಇಲ್ಲಿದೆ. ಹೀಗೆ ಎಷ್ಟೇ ವಲಸೆ ಪ್ರವೃತ್ತಿಯಿಂದ ಜನಸಂಖ್ಯೆ ಹೆಚ್ಚಾದರೂ, ವಿಸ್ತೀರ್ಣ ತುಸು ಜಾಸ್ತಿಯಾದರೂ ಹುವಾಕ್ಸಿ, ಪಕ್ಕಾ ಸಾಂಪ್ರದಾಯಿಕ ಹಳ್ಳಿಯಾಗಿಯೇ ಉಳಿದುಕೊಂಡಿದೆ.
ಮೂರು ವರ್ಷದ ಹಿಂದೆ ಹುವಾಕ್ಸಿಯ 50ನೇ ವಾರ್ಷಿಕೊತ್ಸವ ನಡೆಯಿತು. ಅದರ ಸವಿನೆನಪಿಗಾಗಿ ಇಲ್ಲಿ ಗಗನ ಚುಂಬಿ ಕಟ್ಟಡಗಳು, ಲಕ್ಷುರಿ ಇಂಟರ್ ನ್ಯಾಷನಲ್ ಹೋಟೆಲ್ ಅನ್ನು ಹಾಗೂ ಒಂದು ಬೃಹತ್ ಗೋಪುರವನ್ನು ನಿರ್ಮಿಸಲಾಯಿತು. 'ಅಭಿವೃದ್ಧಿಯ ಹೆಸರಿನಲ್ಲಿ ಹಳ್ಳಿಯ ಸ್ವರೂಪವನ್ನು ಕೆಡವಲಾಗುತ್ತಿದೆ. ರೈತರ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ. ಇಲ್ಲಿನ ದುಡಿಮೆಗಾರರನ್ನು ಪರಾವಲಂಬಿಗಳನ್ನಾಗಿಸುವ ಹುನ್ನಾರ ನಡೆಯುತ್ತಿದೆ' ಎಂದು ಈಗಾಗಲೇ ಸ್ಥಳೀಯರು ದನಿ ಎತ್ತುತ್ತಿದ್ದಾರೆ. ಇದರ ನಡುವೆಯೂ, ಹುವಾಕ್ಸಿಯ ಜನ ತಮ್ಮ ಮೂಲ ಕಸುಬಾದ ಕೃಷಿಯನ್ನು ಕೈಬಿಟ್ಟಿಲ್ಲ. ಕೈಗಾರಿಕೀಕರಣದ ಅಬ್ಬರದ ನಡುವೆಯೂ ಶ್ರೀಮಂತಿಕೆಯನ್ನು ಉಳಿಸಿಕೊಂಡಿದೆ ಎನ್ನುವುದೇ ಈ ಹಳ್ಳಿಯ ಹೆಗ್ಗಳಿಕೆ. ಧರೆ ಮೇಲಿನ ಸ್ವರ್ಗ ಬೆಳೆಯುತ್ತಿರುವ ಪಕ್ಕದ ಚೀನಾದ ಹುವಾಕ್ಸಿ ಗ್ರಾಮ ನಮ್ಮ ಭಾರತಕ್ಕೇನಾದರೂ ಸ್ಫೂರ್ತಿಯಾಗಬಹುದೇ? ಒಂದು ಪುಟ್ಟ ಆಸೆ ಅಷ್ಟೇ.


-ಕೇಶವ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com