ನವದೆಹಲಿ: ಚೀನಾ ಕಾರು ನಿರ್ಮಾಣ ಕಂಪನಿಯಾದ ಎಸ್‌ಎಐಸಿ ಮೊಟಾರ್ಸ್ ಮತ್ತು ಗ್ರೇಟ್ ವಾಲ್ ಮೊಟಾರ್ಸ್ ಭಾರತದ ಕಾರು ನಿರ್ಮಾಣ ಮಾರುಕಟ್ಟೆಗೆ ಲಗ್ಗೆಯಿಡಲು ಸಿದ್ಧತೆ ನಡೆಸುತ್ತಿವೆ.
ಫೋಕ್ಸ್ ವ್ಯಾಗನ್, ಫೋರ್ಡ್, ಜನರಲ್ ಮೊಟಾರ್ಸ್ ಮೊದಲಾದ ವಿದೇಶಿ ಕಂಪನಿಗಳು ಭಾರತದ ಮಾರುಕಟ್ಟೆಯಲ್ಲಿ ಅಧಿಪತ್ಯ ಸ್ಥಾಪಿಸುತ್ತಿರುವ ಹೊತ್ತಲ್ಲೇ ಚೀನಾ ಕೂಡಾ ಇತ್ತ ಕಣ್ಣಿಟ್ಟಿದೆ.
ಕೆಲವೊಂದು ಅನಾವಶ್ಯಕವೆನಿಸುವ ವೈಶಿಷ್ಟ್ಯಗಳನ್ನು ಕಿತ್ತು ಹಾಕಿ ಅಗ್ಗದ ಕಾರುಗಳನ್ನು ನಿರ್ಮಾಣ ಮಾಡಲು ಚೀನಾದ ಕಂಪನಿಗಳು ಚಿಂತನೆ ನಡೆಸಿವೆ. ಸುಜುಕಿ, ಹುಂಡೈ ಮೊದಲಾದ ಕಂಪನಿಗಳೊಂದಿಗೆ ಸ್ಪರ್ಧೆಗಿಳಿಯುವ ಯೋಜನೆಯೂ ಈ ಕಂಪನಿಗಳಿಗಿದೆ ಎಂದು ಹೇಳಲಾಗುತ್ತಿದೆ.
2016ರ ವೇಳೆ ಜಗತ್ತಿನ ಕಾರು ನಿರ್ಮಾಣ ಮಾರುಕಟ್ಟೆಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನಕ್ಕೇರಲಿದೆ ಎಂದು ತಜ್ಞರು ಹೇಳಿದ್ದಾರೆ.
2015ರಲ್ಲಿ ಭಾರತದಲ್ಲಿ 27 ಲಕ್ಷ ವಾಹನಗಳು ಮಾರಾಟವಾಗಿದ್ದು, 2020ರ ವೇಳೆಗೆ 50 ಲಕ್ಷ ದಾಟಬಹುದೆಂದು ಅಂದಾಜಿಸಲಾಗಿದೆ.