ವಿಮಾಚಾರ

ವಿಮಾಚಾರ
Updated on: 

ಇಂದು ನೂರಾರು ವಿಮಾ ಕಂಪನಿಗಳಿವೆ. ಅವುಗಳ ಹೊಟ್ಟೆಯೊಳಗೆ ಸುರುಳಿ ಸುತ್ತುಕೊಂಡಿರುವುದು ಕೇವಲ ಗ್ರಾಹಕರನ್ನು ಸೆಳೆಯುವ ತಂತ್ರಗಳಷ್ಟೇ. ಗ್ರಾಹಕರೂ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭ ತರುವ ವಿಮಾಪಾಲಿಸಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈಗ ಆನ್‌ಲೈನ್ ಮೂಲಕ ಮಾರಾಟವಾಗುತ್ತಿರುವ ವಿಮಾ ಪಾಲಿಸಿಗಳು ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಹಾಗೂ ಸುಲಭವಾಗಿ ಕೈಗೆಟುಕುತ್ತಿವೆ.
ಅಂತರ್ಜಾಲದಲ್ಲಿ ಮಾರಾಟವಾಗುವ ಈ ವಿಮಾ ಪಾಲಿಸಿಗಳು ಇತರ ವಿಮಾ ಪಾಲಿಸಿಗಳಿಗಿಂತ ಕಡಿಮೆ ವೆಚ್ಚದಲ್ಲಿ ಸಿಗುತ್ತಿವೆ. ಇದರಲ್ಲಿ ಗ್ರಾಹಕರು ಹಾಗೂ ಕಂಪನಿ ಮಧ್ಯೆ ಯಾವುದೇ ಏಜೆಂಟ್‌ಗಳು ಇರುವುದಿಲ್ಲ. ಕಂಪನಿಗಳು ನೇರವಾಗಿ ಗ್ರಾಹಕರಿಗೆ ಪಾಲಿಸಿಗಳನ್ನು ಮಾರುತ್ತವೆ. ಹೀಗಾಗಿ ಶೇ. 20-30 ವೆಚ್ಚ ಉಳಿತಾಯವಾಗುತ್ತದೆ. ಜತೆಗೆ ಪ್ರಸರಣ, ಸಿಬ್ಬಂದಿ, ಕಚೇರಿ ವೆಚ್ಚಗಳೂ ತೀರಾ ಕಡಿಮೆಯಾಗಿರುವುದರಿಂದ ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಪಾಲಿಸಿಗಳು ಲಭ್ಯವಾಗುತ್ತವೆ.  ಆದರೆ, ಈ ವಿಮಾ ಪಾಲಿಸಿಗಳು ಎಷ್ಟು ಸುರಕ್ಷಿತ? ಇದರಲ್ಲಿ ಭದ್ರತೆ ಇದೆಯೇ? ವಿಮೆ ಮಾರಾಟ ಸಂದರ್ಭದಲ್ಲಿ ತಿಳಿಸಲಾದಂತೆ ಕ್ಲೇಮ್ ಮಾಡಲಾಗುತ್ತದೆಯೇ? ಎಂಬ ಕುರಿತು ಚರ್ಚೆ ನಡೆಯುತ್ತಿವೆ. ಆನ್‌ಲೈನ್ ವಿಮಾ ಪಾಲಿಸಿಗಳು ಇತ್ತೀಚಿನ ದಿನಗಳಲ್ಲಿ ಆರಂಭವಾಗಿದ್ದು, ಅಷ್ಟು ಪ್ರಚಾರ ಹೊಂದಿಲ್ಲ. ಗ್ರಾಹಕರಲ್ಲೂ ಈ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲ. ಹೀಗಾಗಿ ಇಂಥ ಪಾಲಿಸಿಗಳನ್ನು ಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದಾರೆ.
6 ತಿಂಗಳ ವರೆಗೆ ತನಿಖೆ
ಪಾಲಿಸಿ ಹೊಂದಿದ ಎರಡೇ ವರ್ಷದಲ್ಲಿ ಕ್ಲೇಮ್ ಮಾಡಬೇಕಾದರೆ ವಿಮಾ ಕಂಪನಿಗಳು 6 ತಿಂಗಳವರೆಗೂ ತನಿಖೆ ನಡೆಸುವ ಸಾಧ್ಯತೆ ಇರುತ್ತದೆ. ಪಾಲಿಸಿ ಹೊಂದಿ ಎರಡು ವರ್ಷಕ್ಕಿಂತ ಮೇಲ್ಪಟ್ಟಿದ್ದರೆ 90 ದಿನಗಳಲ್ಲಿ ಪರಿಶೀಲಿಸಿ ಕ್ಲೇಮ್ ಮಾಡಬೇಕಾಗುತ್ತದೆ. ಉತ್ತಮ ಕಂಪನಿಗಳ ಆನ್‌ಲೈನ್ ಕ್ಲೇಮ್ ಪಾಲಿಸಿಗಳನ್ನು ಕೊಳ್ಳುವುದರಿಂದ ಯಾವುದೇ ತೊಂದರೆ ಆಗದು. ಕ್ಲೇಮ್ ಹಾಗೂ ಸೆಟಲ್‌ಮೆಂಟ್‌ಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎನ್ನುತ್ತಾರೆ ತಜ್ಞರು.
70 ಲಕ್ಷ ಪಾಲಿಸಿಗಳ ಮಾರಾಟ
ಆನ್‌ಲೈನ್‌ನಲ್ಲಿ ಸರಾಸರಿ ರು. 70 ಲಕ್ಷ ಮೌಲ್ಯದ ಪಾಲಿಸಿಗಳು ಈಗ ಮಾರಾಟವಾಗುತ್ತಿವೆ. ಅವುಗಳಿಗೆ ವೈದ್ಯಕೀಯ ಪ್ರಮಾಣ ಪತ್ರ ಅಗತ್ಯ. ಆದರೆ ಇದಕ್ಕಿಂತ ಕಡಿಮೆ ಮೌಲ್ಯದ ಪಾಲಿಸಿಗಳಿಗೆ ವೈದ್ಯಕೀಯ ಪ್ರಮಾಣ ಪತ್ರದ ಅಗತ್ಯತೆ ಇರುವುದಿಲ್ಲ. ಪಾಲಿಸಿ ಹೊಂದುವ ಸಂದರ್ಭದಲ್ಲಿ ಗ್ರಾಹರಿಗೆ ಸಾಕಷ್ಟು ಮಾಹಿತಿ ನೀಡಲಾಗುತ್ತದೆ. ಇಲ್ಲಿ ಏಜೆಂಟರು ಇರುವುದಿಲ್ಲ, ಹೀಗಾಗಿ ಗ್ರಾಹಕರೇ ಆನ್‌ಲೈನ್‌ನಲ್ಲಿ ಫಾರಂ ತುಂಬಬೇಕಾಗುತ್ತದೆ. ಇತರ ಪಾಲಿಸಿಗಳಿಗೆ ಹೋಲಿಸಿದರೆ ಇಲ್ಲಿ ಹೆಚ್ಚಿನ ಡಿಕ್ಲರೇಶನ್‌ಗಳು ಇರುತ್ತವೆ. ಏಗನ್ ರೆಲಿಗೇರ್, ಆನ್‌ಲೈನ್ ಮೂಲಕ ಪಾಲಿಸಿಗಳನ್ನು ಮಾರಾಟ ಮಾಡಿದ ಮೊದಲ ಕಂಪನಿ.
ಅದು 2009
2009ರಲ್ಲಿ ಏಗನ್ ರೆಲಿಗೇರ್ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಪಾಲಿಸಿಗಳನ್ನು ಮಾರಲು ಆರಂಭಿಸಿತು. ಆದರೆ ಇದರ ಸೆಟಲ್‌ಮೆಂಟ್‌ಗಳು ಪ್ರೋತ್ಸಾಹದಾಯಕವಾಗಿರದ ಕಾರಣ ಹೆಚ್ಚಿನ ಗ್ರಾಹಕರನ್ನು ಹೊಂದುವಲ್ಲಿ ವಿಫಲವಾಯಿತು. ಐಆರ್‌ಡಿಎ ಪ್ರಕಾರ 2012ರಲ್ಲಿ ಏಗನ್ ರೆಲಿಗೇರ್ 66 ಪ್ರತಿಶತ ಮಾತ್ರ ಸೆಟಲ್‌ಮೆಂಟ್ ಮಾಡಿವೆ.
ಕೆಲವೇ ವರ್ಷಗಳು
ಆನ್‌ಲೈನ್ ಪಾಲಿಸಿಗಳು ಆರಂಭವಾಗಿ ಕೆಲವೇ ವರ್ಷಗಳಾಗಿವೆ. ಈಗ ಬಂದಿರುವ ಪೈಕಿ ಬಹುತೇಕ ಅರ್ಲಿ ಕ್ಲೇಮ್‌ಗಳೇ ಆಗಿವೆ ಮತ್ತು ಕೆಲವು ವಂಚನೆ ಪ್ರಕರಣಗಳೂ ಸೇರಿವೆ. ಹೀಗಾಗಿ ಸೆಟಲ್‌ಮೆಂಟ್ ಪ್ರಮಾಣ ಕಡಿಮೆಯಾಗಿದೆ. ಆದರೆ ಆಫ್‌ಲೈನ್ ಪಾಲಿಸಿ ಕಂಪನಿಗಳಿಗೆ ಹೋಲಿಸಿದರೆ ತಮ್ಮ ಸೆಟಲ್‌ಮೆಂಟ್ ಉತ್ತಮವಾಗಿಯೇ ಇದೆ.
ಉತ್ತಮ ಕಂಪನಿಯನ್ನು ಆಯ್ದುಕೊಂಡು, ಪಾಲಿಸಿಯ ಫಾರಂ ಅನ್ನು ಸರಿಯಾಗಿ ತುಂಬಿ, ನಿಗದಿತ ಅವಧಿಯಲ್ಲಿ ಕಂತುಗಳನ್ನು ತುಂಬಿದಲ್ಲಿ ಯಾವುದೇ ಭಯಪಡುವ ಅಗತ್ಯವಿಲ್ಲ ಎನ್ನುತ್ತಾರೆ ತಜ್ಞರು.

-  ಗಣೇಶ ಹೆಗಡೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com