

ದೇಶದ ಅರ್ಥ ವ್ಯವಸ್ಥೆ ನಿಜಕ್ಕೂ ಶೋಚನೀಯ ಸ್ಥಿತಿಯಲ್ಲಿದೆ. ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ)ಗೆ ಸದಾ ತಲೆನೋವಾಗಿರುವ ವಿಚಾರವೆಂದರೆ ಅಮೆರಿಕದ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯುತ್ತಿರುವುದು. ಹೀಗಾಗಿಯೇ ಕಳೆದವಾರ ಮುಂಬೈನಲ್ಲಿ ಮುಕ್ತಾಯಗೊಂಡ ತ್ರೈಮಾಸಿಕ ಹಣಕಾಸು ನೀತಿ ಪರಿಶೀಲನಾ ಸಭೆಯಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳದೆ ಯಥಾಸ್ಥಿತಿ ಕಾಪಾಡಿಕೊಳ್ಳಲು ನಿರ್ಧರಿಸಿತ್ತು.
ಸಿಆರ್ಆರ್ ಕಡಿತ
ನಗದು ಮೀಸಲು ಅನುಪಾತ (ಸಿಆರ್ಆರ್)ದಲ್ಲಿ ಆರ್ಬಿಐ ಕಡಿತಗೊಳಿಸಿದೆ. ಅಂದರೆ, ಬ್ಯಾಂಕ್ಗಳು ಸಾಲ ನೀಡುವ ನಿಧಿಗೆ ವಿಧಿಸಲಾಗಿರುವ ನಿರ್ಬಂಧವನ್ನು ಹಿಂಪಡೆಯಬಹುದು. ಸದ್ಯ ಸಿಆರ್ಆರ್ನ ಪ್ರಮಾಣ ಶೇ.0.25ರಷ್ಟು ತಗ್ಗಿಸಲಾಗಿದೆ. ಆರ್ಬಿಐನ ಈ ನಿರ್ಧಾರದಿಂದಾಗಿ ಬ್ಯಾಂಕ್ಗಳಿಗೆ ಹೆಚ್ಚುವರಿಯಾಗಿ 17,500 ಕೋಟಿ ಮೊತ್ತವನ್ನು ಸಾಲವಾಗಿ ನೀಡಲು ಸಾಧ್ಯವಾಗುತ್ತದೆ.
ರೆಪೋ ರೇಟ್
ಆರ್ಬಿಐ ತನ್ನ ಬ್ಯಾಂಕ್ಗಳಿಗೆ ನೀಡುವ ಸಾಲಕ್ಕೆ ರೆಪೋ ರೇಟ್ ಎನ್ನಲಾಗುತ್ತದೆ. ಜನಸಾಮಾನ್ಯರು ಬ್ಯಾಂಕ್ಗಳಿಂದ ಪಡೆಯುವ ಸಾಲದ ಮೇಲೆ ಈ ರೆಪೋ ರೇಟ್ ಪ್ರಭಾವ ಬೀರುತ್ತದೆ. ಬ್ಯಾಂಕ್ಗಳು ಆರ್ಬಿಐಗೆ ಹೆಚ್ಚಿನ ಬಡ್ಡಿ ನೀಡಿ ಸಾಲ ಪಡೆದುಕೊಂಡರೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಅದರ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುತ್ತವೆ. ಹೇಗೆಂದರೆ ಗ್ರಾಹಕರು ಪಡೆಯುವ ವಾಹನ, ಗೃಹ ಮತ್ತು ಕಾರ್ಪೊರೇಟ್ ಸಾಲಗಳ ಬಡ್ಡಿದರದಲ್ಲಿ ವ್ಯತ್ಯಾಸವಾಗುತ್ತದೆ. ಬಡ್ಡಿದರ ಹೆಚ್ಚಾದಂತೆ ಜನಸಾಮಾನ್ಯರ ಮೇಲೆ ವರ್ಗಾವಣೆಯಾಗುತ್ತದೆ. ಕಡಿಮೆಯಾದರೆ ಅದೂ ಪರಿಣಾಮ ಬೀರುತ್ತದೆ.
ಯಥಾಸ್ಥಿತಿ ನಿರ್ಧಾರಕ್ಕೆ ಕಾರಣ
ಕೇಂದ್ರ ಸರ್ಕಾರ ಈಗ ತಲೆಕೆಳಗಾಗಿ ನಿಂತರೂ ಏರಿಕೆಯಾಗುತ್ತಿರುವ ಬೆಲೆಗಳನ್ನು ತಡೆಯಲು ವಿಫಲವಾಗಿದೆ. ಜತೆಗೆ ರುಪಾಯಿ ಕುಸಿಯುತ್ತಿರುವ ಬೆಳವಣಿಗೆ ಸರ್ಕಾರದ ತಲೆತಿನ್ನಲಾರಂಭಿಸಿದೆ. ಹೀಗಾಗಿ, ತನ್ನ ಹಣಕಾಸಿನ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ಮುಂದಾಗಿದೆ. ಗೋದಿ, ಅಕ್ಕಿ ದರ ಸಗಟು ಮಾರುಕಟ್ಟೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.
ದೇಶದ ಸಗಟು ಮಾರಾಟ ವ್ಯವಸ್ಥೆಯ ಹಣದುಬ್ಬರದಲ್ಲಿ ಶೇ.4.86ರಷ್ಟು ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಸಗಟು ಮಾರಾಟ ವ್ಯವಸ್ಥೆಯ ಹಣದುಬ್ಬರ 40 ತಿಂಗಳುಗಳಷ್ಟು ತಗ್ಗಿತ್ತು. ಅಂದರೆ ಈ ವರ್ಷದ ಮೇ ತಿಂಗಳಲ್ಲಿ ಅದು ಶೇ.4.7ಕ್ಕೆ ಇಳಿದಿತ್ತು. ಆದರೆ ಬೆಲೆ ಏರಿಕೆ ಕಾರಣದಿಂದ ಶೇ.9.74ಕ್ಕೆ ಹೆಚ್ಚಳವಾಗಿತ್ತು.
ರುಪಾಯಿ ಕುಸಿತ ಕೂಡ ಆರ್ಬಿಐ ನಿರ್ಧಾರಕ್ಕೆ ಕಾರಣ. ಮೇ ತಿಂಗಳ ನಂತರ ರುಪಾಯಿ ಮೌಲ್ಯದಲ್ಲಿ ಶೇ.13ರಷ್ಟು ಕುಸಿತ ಕಂಡಿದೆ.
ಇಳಿಯದು ಇಎಂಐ
ಜನಸಾಮಾನ್ಯರ ನಿರೀಕ್ಷೆ ಎಂದರೆ ಗೃಹ, ವಾಹನ ಸಾಲಗಳ ಮೇಲಿನ ಇಎಂಐ ತಗ್ಗಬೇಕೆಂಬುದು. ಅಂದರೆ, ಪ್ರತಿ ತಿಂಗಳ ಕಂತಿನ ಮೊತ್ತ ಮತ್ತು ಬಡ್ಡಿ ದರ ಕಡಿಮೆಯಾಗಬೇಕು. ಆದರೆ, ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
ಹೈರಾಣಾಗಲಿದೆ ಜೀವನ
ಡಾಲರ್ ಎದುರು ರುಪಾಯಿ ಮೌಲ್ಯ ಕುಸಿದರೆ ಜನಸಾಮಾನ್ಯರಿಗೆ ಏನು ತೊಂದರೆ ಎಂಬ ಪ್ರಶ್ನೆ ಉಂಟಾಗ ಬಹುದು. ಅಂಥ ತೊಂದರೆ ಸಾಕಷ್ಟಿವೆ. ಅದು ವಿದೇಶದಿಂದ ಆಮದಾಗುವ ವಸ್ತುಗಳ ಮೇಲೆ ಪರಿಣಾಮ ಬೀರುತ್ತದೆ.
- ಆಮದು ಮಾಡಿಕೊಳ್ಳುವ ಕಚ್ಚಾ ತೈಲ ದುಬಾರಿಯಾಗುತ್ತದೆ. ಏಕೆಂದರೆ ಇತರ ದೇಶಗಳ ಜತೆ ವಹಿವಾಟು ಮಾಡುವ ವೇಳೆ ಅಮೆರಿಕನ್ ಡಾಲರ್ನಲ್ಲಿ ಪಾವತಿ ಮಾಡಬೇಕಾಗುತ್ತದೆ. ಇದರಿಂದಾಗಿ ನಮ್ಮ ದೇಶದಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಪರಿಷ್ಕರಣೆ ಮಾಡಲೇಬೇಕಾಗುತ್ತದೆ. ಇದು ಇತರ ವಸ್ತುಗಳು ಮತ್ತು ಸಾಗಣೆ ವೆಚ್ಚದ ದುಬಾರಿಗೆ ಕಾರಣವಾಗುತ್ತದೆ.
- ಆಮದು ಮಾಡಿಕೊಳ್ಳುವ ಕಂಪ್ಯೂಟರ್ ಮತ್ತು ಮೊಬೈಲ್.
- ವಿದೇಶಗಳಿಂದ ಆಮದು ಮಾಡುವ ಚಿನ್ನ.
ದರ ಹೆಚ್ಚಳ ಮತ್ತು ಆರ್ಬಿಐ
ಕೆಲವೊಂದು ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗದೇ ಇರಬಹುದು. ಆದರೆ ಅಮೆರಿಕದ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಕಂಡಾಗ ದೇಶೀಯವಾಗಿ ತೈಲೋತ್ಪನ್ನಗಳ ದರ ಹೆಚ್ಚಿಸಬೇಕಾಗುತ್ತದೆ. ಏಕೆಂದರೆ, ತೈಲ ಕಂಪನಿಗಳು ಇತರ ರಾಷ್ಟ್ರಗಳಿಗೆ ಡಾಲರ್ನಲ್ಲಿ ಪಾವತಿಸಬೇಕಾಗುತ್ತದೆ. ಹೀಗಾಗಿ, ವೆಚ್ಚ ಹೊಂದಾಣಿಕೆಗಾಗಿ ತೈಲ ಕಂಪನಿಗಳು ತೈಲೋತ್ಪನ್ನಗಳ ಬೆಲೆ ಹೆಚ್ಚು ಮಾಡಬೇಕಾಗುತ್ತದೆ. ಸದ್ಯ ಆಗುತ್ತಿರುವುದೂ ಅದೇ. ಈ ಸ್ಥಿತಿ ಮುಂದುವರಿಯುವ ಎಲ್ಲ ಸೂಚನೆಗಳೂ ಇವೆ.
ಆರ್ಬಿಐ ಪ್ರಕಾರ, ರುಪಾಯಿ ಕುಸಿತದ ಸಮಯ ಮತ್ತು ಅದರಿಂದ ಉಂಟಾಗುವ ಪರಿಣಾಮಗಳು ಹಣದುಬ್ಬರದ ಏರಿಕೆ ಮೇಲೆ ಪ್ರಭಾವ ಬೀರಲಿದೆ.
ಒಟ್ಟಿನಲ್ಲಿ 'ಗ್ಲೋಬಲ್ ವಿಲೇಜ್' ಅಥವಾ ಜಾಗತಿಕ ಗ್ರಾಮ ಪಂಥದಲ್ಲಿರುವ ನಾವು ವಾಷಿಂಗ್ಟನ್ ಮತ್ತು ಐರೋಪ್ಯ ಒಕ್ಕೂಟದ ಯಾವುದೇ ರಾಷ್ಟ್ರದಲ್ಲಿ ತಲ್ಲಣ ಉಂಟಾದರೂ ಕರ್ನಾಟಕದಲ್ಲಿರುವ ನಮಗೆ ಅದರ ಕಂಪನ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿಯಾದರೂ ತಟ್ಟಿಯೇ ತಟ್ಟುತ್ತದೆ!
- ಸದಾಶಿವ ಕೆ.
khandige29@gmail.com