ವಾಣಿಜ್ಯ

ಕುಸಿದ ಬೆಳವಣಿಗೆ; ಕಂಪಿಸಿದ ಪೇಟೆ

ಕುಸಿದ ಬೆಳವಣಿಗೆ; ಕಂಪಿಸಿದ ಪೇಟೆ
Published On :

ನವದೆಹಲಿ/ಮುಂಬೈ/ಬೆಂಗಳೂರು: ಕುಸಿದ ಬೆಳವಣಿಗೆ; ಕಂಪಿಸಿದ ಪೇಟೆ!
- ವಾರಾಂತ್ಯ ಶುಕ್ರವಾರ ಆದದ್ದೂ ಅದೇ. 2012-13ನೇ ಸಾಲಿನಲ್ಲಿ  ಜಿಡಿಪಿ ದರ ಶೇ.5ರ ಬೆಳವಣಿಗೆ ದಾಖಲಿಸಿದ್ದು ಮುಂಬೈ ಷೇರು ಪೇಟೆಯಲ್ಲಿ ಭಾರಿ ಕಂಪನ ಉಂಟು ಮಾಡಿತು.
  ಶುಕ್ರವಾರ ವಾರಾಂತ್ಯವೂ ಆದ್ದರಿಂದ ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ 455 ಅಂಕಗಳಷ್ಟು ಕುಸಿತ ಕಂಡಿತು. ಇದು ಕಳೆದ 15 ತಿಂಗಳಲ್ಲೇ ಮುಂಬೈ ಷೇರು ಮಾರುಕಟ್ಟೆ ಕಂಡ ಅತಿ ದೊಡ್ಡ ಕುಸಿತವಾಗಿದೆ.   ಸೂಚ್ಯಂಕ ಒಂದು ವಾರದ ಕನಿಷ್ಠ ಕುಸಿತ ಅಂದರೆ 19, 760.30ಕ್ಕೆ ಕುಸಿತ ಕಂಡಿತು. 2012ರ ಫೆ.27ರಂದು ಮಾರುಕಟ್ಟೆ 478 ಅಂಕಗಳಷ್ಟು ಸೂಚ್ಯಂಕ ಕುಸಿತವಾಗಿತ್ತು.   ಶುಕ್ರವಾರದ ಬೆಳವಣಿಗೆಯಿಂದಾಗಿ ಹೂಡಿಕೆದಾರರಿಗೆ ಬರೋಬ್ಬರಿ 1.1 ಲಕ್ಷ ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
  ಪ್ರಮುಖ ಕಂಪನಿಗಳಾದ ಐಟಿಸಿ, ಆರ್‌ಐಎಲ್,  ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ವಿಪ್ರೋ ಸೇರಿದಂತೆ ಪ್ರಮುಖ ಕಂಪನಿಗಳ ಷೇರುಗಳು ಪಾತಾಳ ಕಂಡಿವೆ. ಇನ್ಫೋಸಿಸ್, ಸ್ಟರ್ಲೈಟ್ ಲಿಮಿಟೆಡ್, ಟಿಸಿಎಸ್ ಅಲ್ಪ  ಏರಿಕೆ ಕಂಡವು.  ನಿಷ್ಟಿ ಸೂಚ್ಯಂಕ ಕೂಡ 138.10ರಷ್ಟು ಇಳಿಕೆಯಾಗಿದೆ. ಶುಕ್ರವಾರದ ಅಂತ್ಯಕ್ಕೆ 5,985.98ರಲ್ಲಿ ಮುಕ್ತಾಯವಾಯಿತು.
ದಶಕದಷ್ಟು ಕುಸಿತ:  ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ ಮಾರ್ಚ್ 31ಕ್ಕೆ ಮುಕ್ತಾಯವಾದ 2012-13ನೇ ಹಣಕಾಸು ವರ್ಷದಲ್ಲಿ ಕೃಷಿ, ಉತ್ಪಾದನಾ ಕ್ಷೇತ್ರ, ಗಣಿ ವಲಯಗಳಲ್ಲಿ ಶೇ.5ರಷ್ಟು ಕನಿಷ್ಠ ಬೆಳವಣಿಗೆ ದಾಖಲಿಸಿದೆ.
 ಕಳೆದ ಒಂದು ದಶಕದಲ್ಲಿ ಇದು ಅತ್ಯಂತ ಕನಿಷ್ಠ ದಾಖಲೆಯಾಗಿದೆ. ಮಾರ್ಚ್ 31ಕ್ಕೆ ಅಂತ್ಯವಾದ 4ನೇ ತ್ರೈಮಾಸಿಕದಲ್ಲಿ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ಶೇ.4.8ರಷ್ಟು ಬೆಳವಣಿಗೆ ಸಾಧಿಸಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.5.4, ಶೇ.5.2 ಮತ್ತು ಶೇ.4.7ರ ದರದಲ್ಲಿ ಬೆಳವಣಿಗೆ ದಾಖಲಿಸಿತ್ತು. ಕಳೆದ ಹಣಕಾಸು ವರ್ಷದ ಜನವರಿ- ಮಾರ್ಚ್ ಅವಧಿಯಲ್ಲಿ ಉತ್ಪಾದನಾ ಕ್ಷೇತ್ರ ಅಲ್ಪ ಪ್ರಮಾಣದ ಅಂದರೆ ಶೇ.2ರಷ್ಟು ಬೆಳವಣಿಗೆ ದಾಖಲಿಸಿತ್ತು. ಕೃಷಿ ಕ್ಷೇತ್ರ ಅಭಿವೃದ್ಧಿಯಾದದ್ದು ಶೇ.1.4 ಮಾತ್ರ. 2011-12ರ ಇದೇ  ಇದೇ ಅವಧಿಯಲ್ಲಿ ತೋಟಗಾರಿಕೆ  ಕ್ಷೇತ್ರದ ಬೆಳವಣಿಗೆ ಶೇ.2ರಷ್ಟು ದಾಖಲಿಸಿತ್ತು. ಕೃಷಿ ಕ್ಷೇತ್ರ 2012-13ರಲ್ಲಿ ಶೇ.1.9ರಷ್ಟು ಬೆಳವಣಿಗೆ ಕಂಡಿತ್ತು. 2011-12ರಲ್ಲಿ ಕೃಷಿ ಕ್ಷೇತ್ರ ಶೇ.3.6ರಷ್ಟು ಬೆಳವಣಿಗೆ ಸಾಧಿಸಿತ್ತು.
ಹಣಕಾಸು ಇಲಾಖೆಯ ಅಂದಾಜಿನ ಪ್ರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.6.1ರಿಂದ ಶೇ. 6.7ರಷ್ಟು ಹೆಚ್ಚಳವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
2011-12ನೇ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆ ಶೇ.6.2ರಷ್ಟು ದಾಖಲಾಗಿತ್ತು.
ರುಪಾಯಿ ಕುಸಿತ: ಈ ಆರ್ಥಿಕ ಹೊಡೆತಗಳ ನಡುವೆ ಅಮೆರಿಕದ ಡಾಲರ್ ಎದುರು ರುಪಾಯಿ 11 ತಿಂಗಳ ಗರಿಷ್ಠ ಕುಸಿತ ಕಂಡಿತು. ಡಾಲರ್ ಎದುರು ರುಪಾಯಿ 12 ಪೈಸೆಯಷ್ಟು ಕುಸಿತ ಕಂಡಿತು. ಈ ಬೆಳವಣಿಗೆಯಿಂದಾಗಿ ರಕ್ಷಣೆ ಮತ್ತು ತೈಲೋಲತ್ಪನ್ನ ಕ್ಷೇತ್ರಗಳಲ್ಲಿನ ವಹಿವಾಟಿಗೆ ಧಕ್ಕೆಯಾಗುವ ಸಾಧ್ಯತೆ ಇದೆ.
  ದೇಶದ ಷೇರು ಮಾರುಕಟ್ಟೆಗೆ ಅಮೆರಿಕ ಮೂಲದ ಸಾಂಸ್ಥಿಕ ಹೂಡಿಕೆದಾರರು 90 ದಶಲಕ್ಷ ಡಾಲರ್ ಹೂಡಿಕೆ ಮಾಡಿದ್ದು ಮತ್ತು ಹಣದುಬ್ಬರ ಬಗ್ಗೆ ಆರ್‌ಬಿಐನ ಆಶಾದಾಯಕವಲ್ಲದ ಮುನ್ಸೂಚನೆ ಮತ್ತು ಜಿಡಿಪಿ ಕುಸಿತ ಅಮೆರಿಕದ ಡಾಲರ್ ಎದುರು ರುಪಾಯಿ ಮೌಲ್ಯ 56.76ಕ್ಕೆ ಕುಸಿಯಿತು. 2012ರ ಜ.28ರ ನಂತರ ಇದು ಗರಿಷ್ಠ ಕುಸಿತ.

ಏಷ್ಯನ್ ಮಾರುಕಟ್ಟೆ
ಏಷ್ಯನ್ ಮಾರುಕಟ್ಟೆಗಳಲ್ಲಿ ಕೂಡ ಕುಸಿತದ ಕಂಪನ ರಿಂಗಣಿಸಿತ್ತು. ತೈವಾನ್, ಜಪಾನ್, ದ.ಕೊರಿಯಾ ಮತ್ತು ಐರೋಪ್ಯ ಮಾರುಕಟ್ಟೆಗಳಲ್ಲೂ ಶುಕ್ರವಾರ ವಹಿವಾಟು ಮಂದಗತಿಯಲ್ಲಿತ್ತು.

ಚಿನ್ನ ಮತ್ತಷ್ಟು ಅಗ್ಗ?
ಅಮೆರಿಕದ ಡಾಲರ್ ಎದುರು ರುಪಾಯಿ ಕುಸಿತದ ಕಾರಣದಿಂದಾಗಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 2 ಸಾವಿರದಷ್ಟು ಮಟ್ಟಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ. ಆದರೆ ಅದು 25 ಸಾವಿರಕ್ಕಿಂತ ಕೆಳಗೆ ಇಳಿಕೆಯಾಗಲಾರದು.
ನವದೆಹಲಿ ಚಿನಿವಾರ ಮಾರುಕಟ್ಟೆಯಲ್ಲಿ ಏಪ್ರಿಲ್‌ನಲ್ಲಿ ಪ್ರತಿ 10 ಗ್ರಾಂ ಚಿನ್ನಕ್ಕೆ ರು. 27,790 ಆಗಿತ್ತು.

ಮುಂದಿನ ತಿಂಗಳಲ್ಲಿ ಹಣದುಬ್ಬರ ದರ ಕುಸಿತ ಕಾಣಲಿದೆ. ಅಂಥ ವಾತಾವರಣ ಸೃಷ್ಟಿಯಾಗಲಿದೆ. ಈ ಮೂಲಕ ದೇಶದಲ್ಲಿ ಉತ್ತಮ ಹಣಕಾಸು ಕ್ಷೇತ್ರದ ಅಭಿವೃದ್ಧಿಯಾಗಲಿದೆ.
- ಮನಮೋಹನ್ ಸಿಂಗ್ 
ಪ್ರಧಾನಿ


ಏರಿಳಿತಕ್ಕೆ ರಾಜಕೀಯ ಪರಿಸ್ಥಿತಿಯೂ ಕಾರಣ. ಅದಕ್ಕೆ ಪೂರಕವಾಗಿ ಮಾರುಕಟ್ಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮೇಲುಗೈ ಸಾಧಿಸಿದ್ದಾರೆ. ಪ್ರಮುಖ ಕಂಪನಿಗಳ ಷೇರುಗಳು ಅವರ ಹಿಡಿತದಲ್ಲಿರುವುದರಿಂದ ಸಣ್ಣ ಮತ್ತು ಮಧ್ಯಮ ಹೂಡಿಕೆದಾರರಿಗೆ ಸ್ಪರ್ಧೆ ಎದುರಿಸಲು ಕಷ್ಟವಾಗುತ್ತಿದೆ. ಅವರು ನಿಧಾನವಾಗಿ ಹೂಡಿಕೆ ವಲಯದಿಂದ ದೂರವಾಗುತ್ತಿದ್ದಾರೆ.
-ಕೆ.ಈಶ್ವರ ಭಟ್,
ಷೇರ್ ಬ್ರೋಕರ್, ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.