ಟಾಟಾ ಡೊಕೊಮೊದಿಂದ 'ಎಂಡ್ಲೆಸ್ ಮ್ಯೂಸಿಕ್' ಸೇವೆ

ಟಾಟಾ ಡೊಕೊಮೊ ಮತ್ತೊಂದು ಭಿನ್ನ ಸ್ವರೂಪದ ಮೌಲ್ಯವರ್ಧಿತ ಸೇವೆಯನ್ನು ತನ್ನ ಪ್ರಿಪೇಯ್ಡ್ ಚಂದಾದಾರರಿಗಾಗಿ ಇತ್ತೀಚಿಗೆ ಪರಿಚಯಿಸಿತು. 'ಎಂಡ್ಲೆಸ್ ಮ್ಯೂಸಿಕ್' ಹೆಸರಿನಲ್ಲಿ ಆರಂಭಿಸಲಾಗಿರುವ ಈ ಮೌಲ್ಯವರ್ಧಿತ ಸೇವೆಯು ದೇಶದ ದೂರ ಸಂಪರ್ಕ ಕ್ಷೇತ್ರದಲ್ಲೇ ಮೊದಲಾಗಿದೆ. ಈ ಸೇವೆಯನ್ನು ಜಿಎಸ್ಎಂ ಚಂದಾದಾರರು ಎಲೆಕ್ಟ್ರಾನಿಕ್ ವೋಚರ್ ವಿತರಕರಿಂದ ಸುಲಭದಲ್ಲಿ ಪಡೆದುಕೊಳ್ಳಬಹುದು. ನೂತನ ಸೇವೆಗೆ ಚಾಲನೆ ನೀಡಿದ ಟಾಟಾ ಡೊಕೊಮೊದ 'ವಿಎಎಸ್ ಮಾರುಕಟ್ಟೆ' ವಿಭಾಗದ ಮುಖ್ಯಸ್ಥ ರಿಷಿಮೋಹನ್ ಮಲ್ಹೋತ್ರ, ಕಂಪೆನಿ ಡಿಜಿಟಲ್ ಸ್ವರೂಪದಲ್ಲಿ, ವಸ್ತುಗಳ ರೀತಿಯಲ್ಲಿ, ಧ್ವನಿ ಸ್ವರೂಪದಲ್ಲಿ ನೀಡಬಹುದಾದ ಎಲ್ಲ ಬಗೆಯ ಹಾಗೂ ವಿಶಿಷ್ಟ ರೀತಿಯ ಸೇವೆಗಳನ್ನೂ ವಿವಿಧ ಮಾರ್ಗಗಳ ಮೂಲಕ ಗ್ರಾಹಕರಿಗೆ ಮುಟ್ಟಿಸಲು ಯತ್ನಿಸಲಾಗುತ್ತಿದೆ' ಎಂದರು.
ಬೆಂಗಳೂರಿನಲ್ಲಿ ಅನೂಸ್ 3ನೇ ಘಟಕ
32ನೇ ವರ್ಷ ಪೂರೈಸಿದ ಸಂಭ್ರಮಾಚರಣೆಯಲ್ಲಿರುವ ಸಲೂನ್ ಕ್ಷೇತ್ರದ ಅನೂಸ್ ಸಂಸ್ಥೆ, ಬೆಂಗಳೂರಿನಲ್ಲಿ ತನ್ನ 3ನೇ ಘಟಕವನ್ನು ಸ್ಥಾಪಿಸಿದ್ದು, ಈ ಮೂಲಕ ದೇಶದ 15 ಪ್ರಮುಖ ನಗರಗಳಲ್ಲಿ ಒಟ್ಟು 21 ಘಟಕ ಹೊಂದಿದಂತಾಗಿದೆ. ರಾಜಾಜಿನಗರದಲ್ಲಿ ಆರಂಭವಾಗಿರುವ ಘಟಕವು ಸುಮಾರು 2500 ಚದರ ಅಡಿ ವಿಸ್ತೀರ್ಣ ಹೊಂದಿದೆ. ಉದ್ಘಾಟನೆ ಬಳಿಕ ಮಾತನಾಡಿದ ಅನೂಸ್ನ ಸಂಸ್ಥಾಪಕಿ ಅನುರಾಧಾ, 'ಹೈದರಾಬಾದ್ನಲ್ಲಿ ಮನೆಯೊಂದರ ಗ್ಯಾರೇಜ್ನಲ್ಲಿ ಆರಂಭವಾದ ಅನೂಸ್ನ ಪಯಣ ಇಂದು ದೇಶಾದ್ಯಂತ ತನ್ನದೇ ಬ್ರಾಂಡ್ ಸ್ಥಾಪಿಸುವವರೆಗೆ ಮುಂದುವರಿದಿದೆ. ಭಾರತದಾದ್ಯಂತ ತನ್ನ ಘಟಕಗಳನ್ನು ಹೊಂದಿದ್ದು, ಅಮೆರಿಕಾದಲ್ಲೂ ಘಟಕವೊಂದನ್ನು ಸ್ಥಾಪಿಸಿರುವುದು ನಿಜಕ್ಕೂ ರೋಚಕ, ಸ್ಫೂರ್ತಿದಾಯಕ ಪಯಣ ಎಂದರು.
ಫೆರಾರಿ ಕಾರುಗಳ ಪುಟಾಣಿ ಮಾದರಿ ಮಾರುಕಟ್ಟೆಗೆ
ಜಾಗತಿಕ ಮಟ್ಟದಲ್ಲಿ ಐಶಾರಾಮಿ ಮತ್ತು ಅತಿವೇಗದ ಕಾರುಗಳಿಗಾಗಿ ಪ್ರಸಿದ್ಧ ಪಡೆದಿರುವ 'ಫೆರಾರಿ' ಮತ್ತು ಕಾರುಗಳ ಪುಟ್ಟ ಮಾದರಿ ತಯಾರಿಕಾ ಸಂಸ್ಥೆ 'ಲೆಗೊ ಸಮೂಹ'ದ ಜತೆಗೆ ತೈಲ ಮಾರಾಟ ಕಂಪೆನಿ 'ಷೆಲ್' ಒಪ್ಪಂದ ಮಾಡಿಕೊಂಡಿದೆ. ಫೆರಾರಿ ಕಾರು ಮಾದರಿಗಳ ಪ್ರಚಾರ ಕಾರ್ಯಕ್ಕೆ ಕೈಜೋಡಿಸಿದೆ. 'ಲೆಗೊ ಬ್ರಿಕ್ಸ್' ಕಂಪೆನಿ ತಯಾರಿಕೆಯಾದ, ಬಿಚ್ಚಿ ಜೋಡಿಸಬಹುದಾದ ಮತ್ತು ಸಂಗ್ರಹಿಸಿಟ್ಟುಕೊಳ್ಳಲು ಯೋಗ್ಯವಾದ ಫೆರಾರಿ ಕಾರುಗಳ ಪುಟಾಣಿ ಮಾದರಿಗಳನ್ನು ಹೊಂದಿರುವ ಕೆಲವೇ ದೇಶಗಳಲ್ಲಿ ಈಗ ಭಾರತವೂ ಒಂದಾಗಿದೆ. ಈ ಮಾದರಿಗಳು ಭಾರತದ ಬೆಂಗಳೂರು, ಮೈಸೂರು, ಹೈದರಬಾದ್, ಚೆನ್ನೈ, ಪುಣೆ, ಅಹಮದಾಬಾದ್, ರಾಜ್ಕೋಟ್, ಸೂರತ್ ಮತ್ತು ಬರೋಡಾ, ಷೆಲ್ ತೈಲ ಮಾರಾಟ ಕೇಂದ್ರಗಳಲ್ಲಿ ಖರೀದಿಗೆ ಲಭ್ಯವಿದೆ.
ಜಯನಗರದಲ್ಲಿ ಗ್ರೀನ್ಟ್ರೆಂಡ್ಸ್ ಸೆಲೂನ್ 2ನೇ ಮಳಿಗೆ ಆರಂಭ
ಹೇರ್ ಸ್ಟೈಲ್ ಸಲೂನ್ಗಳಲ್ಲಿ ಖ್ಯಾತಿ ಹೊಂದಿರುವ ಕೇವಿನ್ಕೇರ್ ಅಂಗಸಂಸ್ಥೆ 'ಗ್ರೀನ್ ಟ್ರೆಂಡ್ಸ್' ಜಯನಗರದಲ್ಲಿ ತನ್ನ 149ನೇ ಸಲೂನ್ನನ್ನು ಇತ್ತೀಚೆಗೆ ಪ್ರಾರಂಭಿಸಿತು.
ಕರ್ನಾಟಕದಲ್ಲಿ ಇದು 16ನೇ ಮಳಿಗೆಯಾಗಿದ್ದು, ನಟಿ ಕಾವ್ಯಶೆಟ್ಟಿ ಸಲೂನ್ ಉದ್ಘಾಟಿಸಿದರು. ಸಂಸ್ಥೆಯ ವ್ಯಾಪಾರ ವಿಭಾಗದ ಮುಖ್ಯಸ್ಥ ಗೋಪಾಲಕೃಷ್ಣ ಮಾತನಾಡಿ, 'ಜಯನಗರದಲ್ಲಿ ಇದು ನಮ್ಮ 2ನೇ ಮಳಿಗೆಯಾಗಿದ್ದು, ಇಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ಭರವಸೆಯೊಂದಿಗೆ ಗ್ರಾಹಕರನ್ನು ಮತ್ತಷ್ಟು ಅಂದವಾಗಿ ಕಾಣಿಸುವಂತೆ ಮಾಡಲು ಸಲೂನ್ ತೊಡಗಿಕೊಳ್ಳಲಿದೆ' ಎಂದರು. ಈ ಸಲೂನ್ 7 ಹೇರ್ ಜೋನ್ಸ್, 2 ಹೇರ್ ವಾಷ್ ಜೋನ್ಸ್, 3 ಫೇಷಿಯಲ್ ಮತ್ತು ಬಾಡಿ ಸ್ಪಾ ರೂಮ್ ಮತ್ತು 3 ಪೆಡಿಕ್ಯೂರ್ ಜೋನ್ಗಳನ್ನು ಹೊಂದಿದೆ. ಗ್ರಾಹಕರಿಗೆ ಹಿತವೆನಿಸುವ ವಾತಾವರಣ ಮತ್ತು ಒಳಾಂಗಣ ವಿನ್ಯಾಸ ರೂಪಿಸಲಾಗಿದೆ.
ಹೋಮ್ಶಿಕಾರಿ ಡಾಟ್ಕಾಂನಿಂದ ಆನ್ಲೈನ್ ಭೂ ಆಸ್ತಿ ಸೇವೆ
HomeShikari.com, ಪಾರದರ್ಶಕತೆ ಮತ್ತು ಗೌಪ್ಯತೆಯುಳ್ಳ, ತೊಂದರೆರಹಿತ ಆನ್ಲೈನ್ ಭೂ ಆಸ್ತಿ ಸೇವೆಗಳನ್ನು ಆರಂಭಿಸಿದೆ. ತನ್ನ ಗ್ರಾಹಕರಿಗೆ, ಪರೀಕ್ಷಿತ ಆಸ್ತಿ ಪಟ್ಟಿಗಳು, ವಿವಿಧ ಮೌಲ್ಯವರ್ಧಿತ ಸೇವೆಗಳು ಮತ್ತು ನಿಷ್ಠ ಗ್ರಾಹಕ ಸಹಾಯದೊಂದಿಗೆ, ತೊಂದರೆ ರಹಿತ ಆಸ್ತಿ ಖರೀದಿಸುವ ಅನುಭವವನ್ನು ಒದಗಿಸಲಿದೆ. ಸೇವೆಗಳ ಬಗ್ಗೆ ಪ್ರತಿಕ್ರಿಯಿಸುತ್ತ, HomeShikari. comನ ಕಾರ್ಯನಿರ್ವಾಹಕ ಅಧಿಕಾರಿ ಸುಂದರ್ ಅವರು, 'ಇಂದು ಎಲ್ಲರೂ, ಸಂಪೂರ್ಣ ಪರಿಹಾರ ಒಂದೆಡೆ ಪಡೆಯಲು ಇಚ್ಛಿಸುತ್ತಾರೆ ಮತ್ತು ತಮ್ಮ ವೈಯಕ್ತಿಕ ಮಾಹಿತಿ ಮತ್ತು ದಾಖಲೆಗಳು ಗೌಪ್ಯವಾಗಿರಬೇಕೆಂದು ಬಯಸುತ್ತಾರೆ. ನಾವು, ನಮ್ಮ ಎಲ್ಲ ಪಾಲುದಾರರು, ಕಟ್ಟಡ ನಿರ್ಮಾಪಕರು, ಆಸ್ತಿ ಖರೀದಿಸಬಯಸುವವರು ಮತ್ತು ಮನೆಗಳ ಮಾಲೀಕರಿಗೆ, ಪಾರದರ್ಶಕತೆಯನ್ನು ಒದಗಿಸಿ, ಅದನ್ನು ಸಾಧಿಸುತ್ತೇವೆ' ಎಂದರು. ಮಾಹಿತಿಗೆ www.HomeShikari.comಗೆ ಭೇಟಿ ನೀಡಬಹುದು.
ಕಾವೇರಿ, ಇ- ತ್ರಿವೇಣಿ ಟ್ಯಾಂಕ್ಗಳಿಗೆ ಐಎಸ್ಐ ಗುರುತು
ನೀರು ಸಂಗ್ರಹ ಟ್ಯಾಂಕ್ಗಳಲ್ಲಿ ಒಂದಾದ 'ಕಾವೇರಿ' ಮತ್ತು 'ಇ-ತ್ರಿವೇಣಿ' ಮುದ್ರೆ ಹೊಂದಿರುವ ಟ್ಯಾಂಕ್ಗಳು ಒಂದು ಏಕೈಕ ವಿತರಣೆಯ ಮಹತ್ವಾಕಾಂಕ್ಷಿ ಉದ್ಯಮಗಳಲ್ಲಿ ಒಂದಾಗಿದ್ದು, ಇದು ಐಎಸ್ಐ ಗುರುತನ್ನು ಬಳಸಲು ಪರವಾನಗಿ ಪಡೆದಿದೆ. ಕಂಪನಿಯು ಪೂರ್ಣಪ್ರಮಾಣದ ಗುಣಮಟ್ಟದ ನಿಯಂತ್ರಣ ಪ್ರಯೋಗಾಲಯಕ್ಕೆ 200 ಲೀ. ಸಾಮರ್ಥ್ಯ ಹೊಂದಿರುವ ಟ್ಯಾಂಕ್ ನಿರ್ಮಾಣಕ್ಕೆ ಬಿಐಎಸ್ ಪ್ರಕಾರ ಎಲ್ಲಾ ಪರೀಕ್ಷೆಗಳನ್ನು ನಡೆಸಿ ಸ್ಥಾಪಿತವಾಗಿದ್ದು, ಇದೀಗ ಸಿಪಿವಿಸಿ ಕೊಳವೆಗಳು ಮತ್ತು ಫಿಟ್ಟಿಂಗ್ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ. ಕಂಪನಿಯು ಕೃಷಿ ಕೈಗಾರಿಕೆಗಳು, ರಾಸಾಯನಿಕ ಕೈಗಾರಿಕೆಗಳು, ಔಷಧೀಯ ಉದ್ಯಮಗಳು ಮತ್ತು ಸರ್ಕಾರದ ಕ್ಷೇತ್ರಗಳಲ್ಲಿ ಅನೇಕ ಪ್ರತಿಷ್ಠಿತ ಗ್ರಾಹಕರನ್ನು ಹೊಂದಿದೆ.
ಕ್ಯಾಲಿಫೋರ್ನಿಯಾ ಉಪಮೇಯರ್ ಅನು ನಟರಾಜ್ ಬೆಂಗಳೂರಿಗೆ ಭೇಟಿ
ಕ್ಯಾಲಿಫೋರ್ನಿಯಾದ ಉಪಮೇಯರ್ 'ಅನು ನಟರಾಜ್' ಬೆಂಗಳೂರಿಗೆ ನ.17ರಂದು ಆಗಮಿಸಿದ್ದಾರೆ. ನಗರದಲ್ಲಿ ಉದ್ಯಮ ಸ್ಥಾಪನೆ ಮತ್ತು ಸ್ಥಾಪಿತ ಉದ್ಯಮಗಳ ಪ್ರಗತಿ ಮತ್ತು ಇತರೇ ಉದ್ದೇಶದೊಂದಿಗೆ ನಗರದಲ್ಲಿ ತಂಗಿದ್ದು, ಚೆನ್ನೈ ಮತ್ತು ಜೈಪುರ್ಗಳಲ್ಲಿ ಉದ್ಯಮಗಳ ಸ್ಥಾಪನೆಗೆ ಭೇಟಿ ನೀಡಲಿದ್ದಾರೆ. ಇವರ ಜತೆಗೆ ಅರ್ಥಶಾಸ್ತ್ರ ಅಭಿವೃದ್ಧಿ ನಿಗಮದ ನಿರ್ದೇಶಕ ಕೆಲ್ಲಿ ಕ್ಲಿನ್, ಫ್ರೀಮಂಟ್ ಸಿಟಿ ಮಂಡಳಿ ಸದಸ್ಯ ವಿನ್ನಿ ಬ್ಯಾಕೋನ್, ನಗರ ನಿರ್ದೇಶಕ ನಾಡಿನ್ ಕ್ಲಿನ್, ಫ್ರೀಮಂಟ್ನ ಉಪಾಧ್ಯಕ್ಷ ಮಾರ್ಕ್ ಡಾನಜ್, ಸೇರಿದಂತೆ 14 ಸದಸ್ಯರ ತಂಡ ಬೆಂಗಳೂರಿಗೆ ಆಗಮಿಸಿದೆ. ಮಾರುಕಟ್ಟೆಯ ಏರಿಳಿತಗಳು ಮತ್ತು ಬೇಡಿಕೆಗೆ ತಕ್ಕಂತೆ ಉದ್ಯಮ ಸ್ಥಾಪಿಸಲು ಕ್ಯಾಲಿಫೋರ್ನಿಯಾ ತಂಡ ಸಮಾಲೋಚನೆ, ಸಂಶೋಧನೆ ನಡೆಸಲಿದೆ.
ನೆಲಮಂಗಲದಲ್ಲಿ ಆರ್ಡೆಕ್ಸ್ನ ಹೊಸ ಘಟಕ
ಬೆಂಗಳೂರು: ಟೈಲ್ಸ್ಗಳ ಅಳವಡಿಕೆ ಮತ್ತು ಅದಕ್ಕೆ ಸಂಬಂಧಪಟ್ಟ ಅಂಟು ಮತ್ತಿತರ ಉತ್ಪನ್ನಗಳ ತಯಾರಿಕೆ ಹಾಗೂ ಮಾರಾಟದ ಮುಂಚೂಣಿಯಲ್ಲಿರುವ ಆರ್ಡೆಕ್ಸ್ ಎಂಡೋರ್ ಕಂಪನಿ ಬೆಂಗಳೂರು ಸಮೀಪದ ನೆಲಮಂಗಲದಲ್ಲಿ ತನ್ನ ಹೊಸ ಉತ್ಪಾದನಾ ಘಟಕವನ್ನು ಆರಂಭಿಸಿದೆ. ಈ ಹೊಸ ಘಟಕಕ್ಕೆ ಆರ್ಡೆಕ್ಸ್ ಎಂಡೋರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಗೋಪಿನಾಥ್ ಕೃಷ್ಣನ್ ಚಾಲನೆ ನೀಡಿ, 'ಈ ಘಟಕ ಪ್ರತಿ ಗಂಟೆಗೆ ಸುಮಾರು 60 ಟನ್ ಸಾಮಾರ್ಥ್ಯದಷ್ಟು ಉತ್ಪನ್ನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ' ಎಂದರು. ಪ್ರಿಸಮ್ ಸಿಮೆಂಟ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಅಗರ್ವಾಲ್, ಆರ್ಡೆಕ್ಸ್ ಸಮೂಹದ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಮಾರ್ಕ್ ಸ್ಲಾಂಲೂಯಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


