

ಪಥೇಪುರ್..!
ಜೈಪುರದಿಂದ 32 ಕಿ.ಮೀ. ದೂರದ ಚೋಮು ಸಮೀಪವಿರುವ ಪುಟ್ಟ ಗ್ರಾಮ ಇದು. ಈ ಹಳ್ಳಿಯ ಮಹಿಳೆಯರ ಯಶೋಗಾಥೆ ಎಲ್ಲರ ಕಣ್ಣರಳಿಸುವಂತೆ ಮಾಡಿದೆ. ಈ ಗ್ರಾಮದ ಮಹಿಳೆಯರು ಸಂಸಾರ ನೋಡಿಕೊಂಡು ಸುಮ್ಮನೆ ಕುಳಿತಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವರು ಮಾಡಿದ ಪ್ರಯತ್ನ ಇತರರಿಗೆ ಮಾದರಿ. ಅವರ ಈ ಸಾಧನೆಗೆ ಕಾರಣ ಆಗಿದ್ದು ಎಚ್‌ಡಿಎಫ್‌ಸಿ ಬ್ಯಾಂಕ್. ಬ್ಯಾಂಕ್ ನೀಡಿದ ಪ್ರೋತ್ಸಾಹ ಮತ್ತು ಸಿಬ್ಬಂದಿಯ ಮಾರ್ಗದರ್ಶನ ಪರಿಣಾಮವಾಗಿ ಹಳ್ಳಿ ಹೆಂಗಸರು ಈಗ ಕೈಯ್ಯಲ್ಲಿ ಕಾಸು ಕಾಣುತ್ತಿದ್ದಾರೆ. ಎಟಿಎಂ ಕಾರ್ಡ್‌ಗಳು ಅವರ ಬಳಿ ರಾರಾಜಿಸುತ್ತಿವೆ. ಒಟ್ಟಿನಲ್ಲಿ ದುಡಿಮೆಗೆ ಸ್ತ್ರೀಶಕ್ತಿ ಅಲ್ಲಿ ದಾರಿ ಕಂಡುಕೊಂಡಿದೆ.
ಅರಿವು ಇರಲಿಲ್ಲ
ಪಥೇಪುರ್ ಕುಗ್ರಾಮ. ಅಲ್ಲಿಗೆ ಹೋಗಲು ಸರಿಯಾದ ರಸ್ತೆಯೂ ಇಲ್ಲ. ಆಧುನಿಕ ಜಗತ್ತಿನ ಸಂಪರ್ಕವೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಅಭಿವೃದ್ಧಿಯಲ್ಲಿ ಹಿಂದುಳಿದು ಹೋಗಿದೆ ಹಳ್ಳಿ. ಹೀಗಾಗಿ ಅಲ್ಲಿಯ ಜನರಿಗೆ ಬ್ಯಾಂಕು, ಹಣಕಾಸು ವ್ಯವಹಾರದ ಅರಿವೇ ಇರಲಿಲ್ಲ.
ಇಂಥ ವೇಳೆ ಹಳ್ಳಿಗೆ ಪದಾರ್ಪಣೆ ಮಾಡಿದ ಎಚ್‌ಡಿಎಫ್‌ಸಿ ಬ್ಯಾಂಕ್ ಅಲ್ಲಿನವರ ಜೀವನದ ದಿಕ್ಕನ್ನೇ ಬದಲಿಸಿತು. 2011ರಲ್ಲಿ ಹಳ್ಳಿಯಲ್ಲಿ ತನ್ನ ಕಾರ್ಯಚಟುವಟಿಕೆ ಆರಂಭಿಸಿದ ಬ್ಯಾಂಕ್ ಇಂದು ನೂರಾರು ಮಹಿಳೆಯರು ಸ್ವಾವಲಂಬಿಗಳಾಗಲು ದಾರಿಮಾಡಿಕೊಟ್ಟಿದೆ. ಪಥೇಪುರ ಒಂದೇ ಅಲ್ಲ, ಸಾವಿರಾರು ಹಳ್ಳಿಗಳಲ್ಲಿ ಬ್ಯಾಂಕ್ ಇಂಥ ಕಾರ್ಯಕ್ರಮ ಜಾರಿಗೆ ತಂದಿದೆ.
ಮಾಡಿದ್ದೇನು?
ನೀವು ಸ್ವಯಂ ಉದ್ಯೋಗ ಆರಂಭಿಸಿ. ಅದಕ್ಕಾಗಿ ನಾವು ಸಾಲ ಸೌಲಭ್ಯ ಒದಗಿಸುತ್ತೇವೆ. ಜೊತೆಗೆ ತರಬೇತಿಯನ್ನೂ ನೀಡುತ್ತೇವೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದಾಗ ಆರಂಭದಲ್ಲಿ ಯಾರೂ ಆಸಕ್ತಿ ತೋರಿಸಲಿಲ್ಲ. ಆದರೂ ಅಧಿಕಾರಿಗಳು ಪ್ರಯತ್ನ ಬಿಡಲಿಲ್ಲ. ಸ್ವಯಂ ಉದ್ಯೋಗದಿಂದ ಆಗುವ ಅನುಕೂಲಗಳೇನು ಎಂಬುದನ್ನು ಮನವರಿಕೆ ಮಾಡಿಕೊಟ್ಟ ಬಳಿಕ ಮಹಿಳೆಯರು ಒಬ್ಬೊಬ್ಬರಾಗಿ ಮುಂದೆ ಬಂದರು. ಒಟ್ಟು 35 ಮಂದಿ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಪಡೆದು ಸ್ವಯಂ ಉದ್ಯೋಗ ಆರಂಭಿಸಿದರು.
ಕಾಟದಿಂದ ಮುಕ್ತಿ
ಈಗ ಗ್ರಾಮದಲ್ಲಿ ಟೈಲರಿಂಗ್, ಬಟ್ಟೆ ಮೇಲೆ ಕಸೂತಿ ಹಾಕುವ, ಬಟ್ಟೆ ನೇಯ್ಗೆ, ಪಶುಪಾಲನೆ ಕರಕುಶಲ ವಸ್ತು ತಯಾರಿಕೆ ಸೇರಿದಂತೆ ಹಲವು ಚಟುವಟಿಕೆಗಳು ನಡೆಯುತ್ತಿವೆ. ಇದಕ್ಕಾಗಿ ಬ್ಯಾಂಕ್ ತಲಾ 15 ಸಾವಿರ ಸಾಲ ವಿತರಿಸಿತು. ಆ ಹಣದಲ್ಲಿ ಕಚ್ಚಾ ವಸ್ತುಗಳನ್ನು ಖರೀದಿ ಮಾಡುವ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಕಚ್ಚಾವಸ್ತು ಪೂರೈಸಿದವರಿಗೇ ಮಾರಾಟ ಮಾಡುತ್ತಿದ್ದಾರೆ. ಖರ್ಚು-ವೆಚ್ಚ, ಸಾಲದ ಕಂತು ಮರುಪಾವತಿ ಎಲ್ಲ ಹೋಗಿ ತಲಾ ರು. 3-4 ರುಪಾಯಿ ಉಳಿತಾಯ ಮಾಡುತ್ತಿದ್ದಾರೆ.
ಬ್ಯಾಂಕ್ ನೋಡಿದವರಲ್ಲ...
ನಾವು ಎಂದೂ ಬ್ಯಾಂಕ್‌ನ ಮುಖ ನೋಡಿದವರಲ್ಲ. ಬ್ಯಾಂಕ್‌ನವರೇ ಬಂದು ಸಾಲ ಕೊಟ್ಟು, ನಾನಾ ಕೆಲಸಗಳ ತರಬೇತಿ ಕೊಡಿಸಿದ್ದಾರೆ. ನಾವೀಗ ಸ್ವಾವಲಂಬಿಗಳಾಗಿದ್ದೇವೆ. ಇದರಿಂದ ಕುಟುಂಬದಲ್ಲಿ ನಮಗೆ 'ಪವರ್' ಸಿಕ್ಕಿದೆ ಎನ್ನುತ್ತಾರೆ ಅನಿತಾ ಯೋಗಿ.
ಬ್ಯಾಂಕ್ ಅಧಿಕಾರಿಗಳು ಸಾಲ ಕೊಟ್ಟು ಸುಮ್ಮನಾಗುವುದಿಲ್ಲ. ಪ್ರತಿ ತಿಂಗಳು ಹಳ್ಳಿಗೆ ಹೋಗಿ ಪ್ರಗತಿ ಪರಿಶೀಲನೆ ಮಾಡುತ್ತಾರೆ. ಯಾರಿಗೆ ಸಾಲ ಕೊಡಬೇಕು, ಅವರಿಗೆ ಯಾವ ರೀತಿಯ ತರಬೇತಿ ಅಗತ್ಯ ಎಂಬುದನ್ನು ನೋಡುತ್ತಾರೆ. ಆಗಾಗ್ಗೆ ಹಳ್ಳಿಗರಿಗೆ ಮಾರ್ಗದರ್ಶನ ಮಾಡುತ್ತಿರುತ್ತಾರೆ. ವಿಶೇಷ ಎಂದರೆ, ಸಾಲ ಮರುಪಾವತಿ ಹಳ್ಳಿಯಲ್ಲಿ ಕರಾರುವಕ್ಕಾಗಿದೆ.
ಸಾವಿರಾರು ಸಿಬ್ಬಂದಿ
'ಕೇವಲ ರಾಜಸ್ಥಾನದ ಪಥೇಪುರ್ ಮಾತ್ರವಲ್ಲ. ಕರ್ನಾಟಕ ಸೇರಿದಂತೆ ದೇಶದ ನಾನಾ ರಾಜ್ಯಗಳ ಸಾವಿರಾರು ಹಳ್ಳಿಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಇಂಥ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ. ಇದಕ್ಕಾಗಿ 3 ಸಾವಿರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅವರಿಗಾಗಿ ಬ್ಯಾಂಕ್ ಒಟ್ಟಾರೆ ರು. 150 ಕೋಟಿ ವೆಚ್ಚ ಮಾಡುತ್ತಿದೆ ಎನ್ನುತ್ತಾರೆ' ಯೋಜನೆ ಉಸ್ತುವಾರಿ ಹೊತ್ತಿರುವ ಬ್ಯಾಂಕ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಹಣಕಾಸು ವಿಭಾಗದ ಮುಖ್ಯಸ್ಥ ಮನೋಹರ ರಾಜ್. ಕೋಟಿ ಮಹಿಳೆಯರನ್ನು ಆರ್ಥಿಕ ಸಬಲರನ್ನಾಗಿಸುವ ಗುರಿಯನ್ನು ಬ್ಯಾಂಕ್ ಹೊಂದಿದೆ. ದೇಶದಲ್ಲಿ 27 ಕೋಟಿಗೂ ಅಧಿಕ ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ. ಅವರಲ್ಲಿ 22 ಕೋಟಿ ಮಂದಿ ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಅತ್ತ ಕಡೆ ಎಚ್‌ಡಿಎಫ್‌ಸಿ ದೃಷ್ಟಿ ನೆಟ್ಟಿದೆ.
ಬ್ಯಾಂಕ್‌ನ ಗುರಿ ಏನು?
ಬ್ಯಾಂಕ್ ಸಂಪರ್ಕವೇ ಇಲ್ಲದ ಹಳ್ಳಿಗಳಲ್ಲಿ ಒಂದು ಕೋಟಿ ಕುಟುಂಬಗಳಿಗೆ (ವೈಯಕ್ತಿಕವಾಗಿ 5 ಕೋಟಿ ಮಂದಿಗೆ) ಕಿರು ಸಾಲ ನೀಡುವ ಉದ್ದೇಶವಿದೆ. ಈ ಮೂಲಕ ಜನರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದೇ ನಮ್ಮ ಗುರಿ.
- ಆದಿತ್ಯಪುರಿ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ
- ಕೆ.ವಿ. ಪ್ರಭಾಕರ್