ವ್ಯವಹಾರ ನಿರಾಶಾದಾಯಕ

ವ್ಯವಹಾರ ನಿರಾಶಾದಾಯಕ
Updated on: 

ಚಾಲ್ತಿ ವರ್ಷದಲ್ಲಿನ ವ್ಯವಹಾರದ ವರದಿಗಳು ಆಶಾದಾಯಕವಾಗಿಲ್ಲ. ವರ್ಷದ ಮೊದಲ ತ್ರೈಮಾಸಿಕ ಅವಧಿಯ ಪ್ರಗತಿ ಸೂಚಕ ಸೂಚ್ಯಂಕಗಳೂ ಹೇಳಿಕೊಳ್ಳುವಂತೆ ಉತ್ಸಾಹವನ್ನು ತುಂಬಲಿಲ್ಲ. ಇದೇ ಪರಿಸ್ಥಿತಿ ಜುಲೈ- ಸೆಪ್ಟೆಂಬರ್ 2013ರ ಅವಧಿಯಲ್ಲಿತ್ತು.
ಇನ್ನೂ ಹೊಸ ಸೂಚ್ಯಂಕಗಳು ಪ್ರಕಟವಾಗಿಲ್ಲದೇ ಇದ್ದರೂ, ಲಭ್ಯವಿರುವ ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು ಭವಿಷ್ಯ ನುಡಿಯುವುದಾದರೆ, ನಿರುತ್ಸಾಹ ನೀಗುತ್ತದೆ ಎನ್ನುವುದಕ್ಕೆ ಯಾವ ಆಧಾರವೂ ಇಲ್ಲ.
ಸಮಗ್ರ ಅರ್ಥವ್ಯವಸ್ಥೆಯೇ ದುರ್ಬಲವಾಗಿರುವಾಗ, ಜಾಗತಿಕ ವಿದ್ಯಮಾನಗಳೂ ಪ್ರತಿಕೂಲವಾಗಿರುವಾಗ, ಇಲ್ಲಿ ಮಾತ್ರ ಉತ್ಸಾಹ ಚಿಮ್ಮುವುದೆನ್ನುವುದಕ್ಕೆ ಯಾವ ಆಧಾರವೂ ಇಲ್ಲ. ಆದರೂ ಯೋಜನಾ ಆಯೋಗದ ಉಪಾಧ್ಯಕ್ಷ, ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಹಾಗೂ ರಿಸರ್ವ್ ಬ್ಯಾಂಕ್‌ನ ಗವರ್ನರ್ ರಘುರಾಮನ್ ರಾಜನ್ ತಿಂಗಳೊಪ್ಪತ್ತಿನಲ್ಲಿ ಪರಿಸ್ಥಿತಿ ಸುಧಾರಿಸುವುದೆನ್ನುವ ಆಶಾವಾದವನ್ನು ಬಿತ್ತುವ ಪ್ರಯತ್ನದಲ್ಲಿದ್ದಾರೆ. ಅವರಿಗೆ ಶುಭವಾಗಲಿ. ಬಡ್ಡಿದರದಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. ರಿಸರ್ವ್ ಬ್ಯಾಂಕಿನ ದೃಷ್ಟಿಯಲ್ಲಿ ಅದು ಅನಿವಾರ್ಯ ಎನಿಸಿದರೂ ಅಲ್ಪಾವಧಿ ಸಾಲಗಳ ಬಡ್ಡಿದರ ವಾರ್ಷಿಕ ಶೇಕಡಾವಾರು ಲೆಕ್ಕದಲ್ಲಿ 7.5ರಿಂದ 11.5ಕ್ಕೇರಿರುವುದನ್ನು ಪಡೆದುಕೊಳ್ಳುವ ಶಕ್ತಿ ಅರ್ಥವ್ಯವಸ್ಥೆಗೆ ಇದ್ದಂತಿಲ್ಲ.

ಪರಿಣಾಮ: ಮೂಲ ಸೌಲಭ್ಯ ಯೋಜನೆಗಳು ಮಂದಗತಿಯಲ್ಲೇ ಸಾಗಬೇಕು. ಕಂಪನಿಗಳಿಗೆ ಆರ್ಡರ್‌ಗಳು ಸಿಗುವುದಿಲ್ಲ. ಬಡ್ಡಿದರದ ಏರಿಕೆಯ ಪರಿಣಾಮ ಪೂರ್ಣ ಪ್ರಮಾಣದಲ್ಲಿ ಪ್ರಕಟವಾಗಲಿಕ್ಕೆ ಇನ್ನೊಂದು ತಿಂಗಳು ಬೇಕಂತೆ.

ಏರುತ್ತಿರುವ ಇನ್‌ಫ್ಲೇಷನ್: ಅಧಿಕಾರದ ಸ್ಥಾನಗಳಲ್ಲಿರುವವರು ಏನಾದರೂ ಹೇಳಿಕೊಳ್ಳಲಿ, ಆಹಾರ ಪದಾರ್ಥಗಳ ಬೆಲೆ ಏರಿಕೆ ಆಧಾರದ ಇನ್‌ಫ್ಲೇಷನ್ ದರ ಏರುತ್ತಲೇ ಇದೆ. ಸೆಪ್ಟೆಂಬರ್‌ನಲ್ಲಿ ಆಹಾರ ಇನ್‌ಫ್ಲೇಷನ್ ದರ ಶೇ. 18.40ರಷ್ಟಿತ್ತು. (ಹೋದ ವರ್ಷದ ಸೆಪ್ಟೆಂಬರ್ ಅಂಕಿಯ ಜತೆ ಹೋಲಿಕೆ). ನಿಜ. ಜನಸಂಖ್ಯೆಯ ಒಂದು ದೊಡ್ಡ ಭಾಗ- ಅಂದರೆ ಬಿಪಿಎಲ್ ಕಾರ್ಡ್‌ದಾರರು- ತಮ್ಮ ಅವಶ್ಯಕತೆಯನ್ನು ಸರ್ಕಾರಿ ಡಿಪೋಗಳ ಮೂಲಕ ಪೂರೈಸಿಕೊಳ್ಳುವುದರಿಂದ ಆ ವರ್ಗದ ಬೊಬ್ಬೆ ಕೇಳಿ ಬರುತ್ತಿಲ್ಲ. ಆದರೆ, ಆ ಜನವರ್ಗವೂ ಈರುಳ್ಳಿಯ ಬೆಲೆಯನ್ನು ತೂಗಿಸುವುದು ಕಷ್ಟ. ಮೊಟ್ಟೆಯ ಬೆಲೆಯೂ ಮುಗಿಲನ್ನು ಮುತ್ತಿಡಲು ಹೊರಟಿವೆ. ಇದಕ್ಕೆಲ್ಲ ಚುನಾವಣೆಯ ಸಮಯದಲ್ಲಿ ಚಿದಂಬರಮ್- ಸಿದ್ದರಾಮಯ್ಯ ಯಾವ ರೀತಿಯಲ್ಲಿ ಪರಿಹಾರ ಒದಗಿಸುತ್ತಾರೋ ನೋಡಬೇಕು.

ಕೊನೆಮಾತು
ಒಬ್ಬ ಪ್ರಖ್ಯಾತ ಅರ್ಥಶಾಸ್ತ್ರ ಪಂಡಿತರ ಪ್ರಕಾರ, ಈಚಿನ ದಿನಗಳಲ್ಲಿ ಬಡವರ ಸಂಖ್ಯೆಯೂ ಕಡಿಮೆಯಾಗಿದೆ. ಬಡತನದ ಬೇಗೆಯೂ ಕಡಿಮೆಯಾಗಿದೆ. (ಆದರೂ ಒಬ್ಬ ಜನಸಂಖ್ಯೆಯ ಶೇ.67ರಷ್ಟು ಜನರಿಗೆ ಅಗ್ಗದ ಧಾನ್ಯ ಸಿಗುತ್ತಿರುವುದು ಬೇರೆ ಮಾತು) ಗ್ರಾಮೀಣ ಭಾರತದಲ್ಲಿ ದೈನಂದಿನ ಕೂಲಿಯ ದರವೂ ಹೆಚ್ಚಿದೆ. ಇದರ ರಾಜಕೀಯ ಸಂದೇಶವೇನು? ಚುನಾವಣೆ ಸಮೀಕ್ಷಾ ವರದಿಗಳು ಹೇಳುತ್ತಿರುವಂತೆ ಕಾಂಗ್ರೆಸ್ ಹೀನಾಯವಾಗಿ ಸೋಲುವುದಿಲ್ಲ, ಹಾಗೆಂದ ಮಾತ್ರಕ್ಕೆ ಕಾಂಗ್ರೆಸ್ ಗೆಲ್ಲುತ್ತೆ ಎಂದೇನೂ ಅಲ್ಲ. ಪಂಡಿತರ ಮಾತು ಅಂದರೆ ಹೀಗೇ.

- ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com