ಅರ್ಥ ಮಾಡಿಕೊಳ್ಳಿ

ಮಾನವ ಮತ್ತು ಹಣಕಾಸಿನ ನಡುವೆ ಅವಿನಾಭಾವ ಸಂಬಂಧ ಇದೆ. ಇತ್ತೀಚೆಗೆ...
ಅರ್ಥ ಮಾಡಿಕೊಳ್ಳಿ
Updated on: 

ಮಾನವ ಮತ್ತು ಹಣಕಾಸಿನ ನಡುವೆ ಅವಿನಾಭಾವ ಸಂಬಂಧ ಇದೆ. ಇತ್ತೀಚೆಗೆ ಡಾಲರ್ ಎದುರು ರುಪಾಯಿ ಕುಸಿದು ಹೋಗಿದ್ದ ಸಂದರ್ಭದಲ್ಲಿ ಅದು ಅತ್ಯಂತ ನಿಚ್ಚಳವಾಗಿ ಅರಿವಿಗೆ ಬಂತು. ರುಪಾಯಿ ಕುಸಿತದಿಂದಾಗಿ ಸಂತೋಷಪಟ್ಟವರೂ, ದುಃಖತಪ್ತರಾದವರೂ ಇದ್ದಾರೆ. ಡಾಲರ್ ಎದುರು ಅದರ ಮೌಲ್ಯ ಕುಸಿದು ಹೋದ ಪರಿಣಾಮವಾಗಿ ವಿದೇಶಗಳಲ್ಲಿ ಇದ್ದ ಭಾರತೀಯರು ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಕುಟುಂಬಕ್ಕೆ ಹಣ ಕಳುಹಿಸಬಹುದು ಎಂಬ ಸಂತೋಷದಲ್ಲಿ ಅವರಿದ್ದರು. ಆದರೆ ಜಾಗತಿಕ ಹಣಕಾಸು ಕುಸಿತದಿಂದಾಗಿ ವ್ಯವಹಾರ ನಷ್ಟವಾದವರು ಪರಿಸ್ಥಿತಿ ಬಗ್ಗೆ ಶೋಕಿಸುತ್ತಾ ಇದ್ದರು. ಎಂಥ ಪರಿಸ್ಥಿತಿ ಇದ್ದರೂ ನಮ್ಮನ್ನು ಕಾಪಾಡುವುದು ಯೋಜನಾಬದ್ಧವಾದ ಉಳಿತಾಯ ಮತ್ತು ಹಣದ ಹೂಡಿಕೆ.

ಇದು ಅಗತ್ಯ ವಿಚಾರ
ಹಣಕಾಸು ಯೋಜನೆ ಪ್ರತಿಯೊಬ್ಬರಿಗೂ ಅಗತ್ಯ ವಿಚಾರ. ಇದನ್ನು ಕೇವಲವಾಗಿ ಪರಿಗಣಿಸಲು ಸಾಧ್ಯವೇ ಇಲ್ಲ. ಅದನ್ನು ಆರಂಭಿಸುವ ಮುನ್ನ ಪ್ರತಿಯೊಂದು ಅಂಶವನ್ನು ಕೂಲಕಂಷವಾಗಿ ಪರಿಶೀಲಿಸಬೇಕು. ಅಲ್ಪ ಮತ್ತು ದೀರ್ಘಕಾಲದ ಯೋಜನೆಗಳನ್ನು ಪಟ್ಟಿಮಾಡಿಕೊಳ್ಳಬೇಕು. ಇದಕ್ಕಾಗಿ ಪ್ರತಿ ತಿಂಗಳ ಮುಂಗಡ ಪತ್ರ ಸಿದ್ಧಪಡಿಸಿ ಇರಿಸಿಕೊಳ್ಳಬೇಕಾದದ್ದು ಅಗತ್ಯ

ನಂತರ ಯೋಜನೆ
ಈ ತಿಂಗಳು ಯಾವ ಅಗತ್ಯ ವಸ್ತು ಖರೀದಿಗೆ ಮುಂದಾಗಬೇಕು, ಅದರ ಅಗತ್ಯ ಇದೆಯೇ, ಇದ್ದರೆ ಅದಕ್ಕೆ ಎಷ್ಟು ದುಡ್ಡು ಕೊಡಬೇಕು... ಇಂಥ ವಿಚಾರಗಳ ಬಗ್ಗೆ ಪರಾಮರ್ಶೆ ನಡೆಸಬೇಕು. ಸಂಬಳದಿಂದ ಬರುವ ಹಣವನ್ನು ಮನೆ ಬಾಡಿಗೆ, ದಿನಸಿ ಸಾಮಗ್ರಿ, ಉಳಿತಾಯ, ಹೂಡಿಕೆ ಈ ನಿಟ್ಟಿನಲ್ಲಿ ಕ್ರಮಬದ್ಧವಾಗಿ ಯೋಚಿಸಿ ಹೂಡಿಕೆ ಮಾಡಬೇಕು. ಒಂದು ವೇಳೆ ಮನೆಕಟ್ಟುವುದಿದ್ದರೆ ಯಾವ ರೀತಿ ಯೋಜನೆ ಮಾಡಬೇಕು? ಎಲ್ಲಿ ಮನೆ ಕಟ್ಟುವುದು? ಅಲ್ಲಿ ಅದಕ್ಕೆ ತಗಲುವ ವೆಚ್ಚ... ಈ ನಿಟ್ಟಿನಲ್ಲಿ ಹೆಚ್ಚಿನ ಚಿಂತನೆ, ಅಧ್ಯಯನ ಅಗತ್ಯ.

ಉಳಿತಾಯಕ್ಕೆ ಆದ್ಯತೆ
ಹಣದ ಉಳಿತಾಯ ಎನ್ನುವ ವಿಚಾರ ಎಲ್ಲರೂ ತಪ್ಪದೇ ಅನುಸರಿಸಬೇಕಾದದ್ದು. ಈ ನಿಟ್ಟಿನಲ್ಲಿ ಹೆಚ್ಚಿನವರಿಗೆ ತಿಳಿದೇ ಇಲ್ಲ. ಈಗಂತೂ ಆಕರ್ಷಕವಾಗಿರುವ ಠೇವಣಿ ಯೋಜನೆ ಲಭ್ಯವಿದೆ. ಕಳೆದ ವರ್ಷದ ಮಧ್ಯಭಾಗದಲ್ಲಿ ಆರ್‌ಬಿಐ ಠೇವಣಿ ಮೇಲಿರುವ ಮಿತಿ ತೆಗೆದುಹಾಕಿತು. ಹೀಗಾಗಿ, ಅನುಕೂಲವಿರುವ ರೀತಿಯಲ್ಲಿ ಠೇವಣಿ  ಇರಿಸುವ ಬಗ್ಗೆ ಬ್ಯಾಂಕ್‌ಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ಖರ್ಚಿನ ವಿಚಾರ
ಯೋಜನಾಬದ್ಧವಾಗಿ ಹಣ ಖರ್ಚು ಮಾಡುವುದೆಂದರೆ ದಿನಕ್ಕೆರಡು ಬಾರಿ ಮಾತ್ರ ಊಟ ಅಥವಾ 10 ಕಿ.ಮೀ. ದೂರವನ್ನೂ ನಡೆದೇ ಹೋಗಬೇಕು ಎಂಬ ಅರ್ಥವಲ್ಲ. ಇದು ತುಂಬ ಸರಳ ವಿಚಾರ. ಅನಗತ್ಯವಾಗಿ ಹಣ ಖರ್ಚು ಮಾಡುವ ಬದಲು ಯಾವುದಕ್ಕೆ ಅಗತ್ಯವಿದೆಯೋ ಅದಕ್ಕೆ ವೆಚ್ಚ ಮಾಡುವುದು ಎಂಬರ್ಥ. ಉದಾಹರಣೆಗಾಗಿ ಪ್ರತಿದಿನ ಏನಾದರೂ ಒಂದು ವಸ್ತುವನ್ನು ಮನೆಗೆ ಖರೀದಿಸುವುದಕ್ಕಿಂತ ವಾರದಲ್ಲಿ ಒಂದು ದಿನ ದಿನಸಿ ವಸ್ತುಗಳ ಖರೀದಿಗಾಗಿ ಮೀಸಲಿಡುವುದು ಉತ್ತಮ.

ಬಂಡವಾಳ ಹೂಡುವಿಕೆ
ಹೊಸ ಮನೆಯನ್ನು ಖರೀದಿಸಬೇಕೆಂದಿದ್ದ ವ್ಯಕ್ತಿಗೆ ಪ್ರಸಕ್ತ ವರ್ಷ ಅದು ಕೋಟಿ ರು. ಖರ್ಚು ತರುವ ಸಾಧ್ಯತೆ ಇರಬಹುದು. ಒಂದುವೇಳೆ ಆ ವ್ಯಕ್ತಿ ಅದೇ ಮನೆಯನ್ನು ಐದು ವರ್ಷದ ಹಿಂದೆ ಖರೀದಿಸಿದ್ದರೆ ಖರ್ಚು ಕೊಂಚ ಕಡಿಮೆಯಾಗುತ್ತಿತ್ತು. ಹೀಗಾಗಿ, ಹಣದ ಉಳಿತಾಯವೆಂದರೆ ಕೇವಲ ಒಂದು ಡಬ್ಬದಲ್ಲಿ ಕೂಡಿಡುವುದಲ್ಲ. ಅದರ ಬದಲಾಗಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವುದು.

ಇರಬೇಕು ಆಪದ್ಧನ
ಜೀವನದ ಎಂದರೆ ಹಾಗೆಯೇ. ಕೆಲವೊಂದು ಬಾರಿ ಅನಿರೀಕ್ಷಿತ ಆಘಾತಗಳು ಬರುತ್ತವೆ. ಅದನ್ನು ಎದುರಿಸಲಿಕ್ಕಾಗಿಯೇ ಪ್ರತಿಯೊಬ್ಬರ ಬಳಿ ನಿಗದಿತ ಮೊತ್ತ ಇರಲೇಬೇಕು. ಕನಿಷ್ಠವೆಂದರೆ ಮೂರು ತಿಂಗಳ ವರೆಗಿನ ಖರ್ಚು ವೆಚ್ಚ ನಿಭಾಯಿಸುವ ಪರಿಸ್ಥಿತಿ ಇರಬೇಕು.

ಸಾಲದ ವ್ಯವಸ್ಥೆ
ಕೆಲವೊಂದು ಬಾರಿ ಜೀವನದಲ್ಲಿ ಎಷ್ಟೇ ಯೋಜನೆ, ಸಿದ್ಧತೆ ಮಾಡಿಕೊಂಡಿದ್ದರೂ ಸಾಲ ತೆಗೆದುಕೊಳ್ಳದೇ ಇರಲು ಆಗುವುದಿಲ್ಲ. ಮದುವೆ, ಮನೆಯ ದುರಸ್ತಿ/ ನಿರ್ಮಾಣ... ಇದಕ್ಕಾಗಿಯೇ ಚಿನ್ನಾಭರಣ ಅಥವಾ ಆಸ್ತಿಯ ಮೇಲೆ ಸಾಲ ಕೊಡುವ ವ್ಯವಸ್ಥೆ ಉಂಟು. ಸರ್ಕಾರಿ ಮತ್ತು ಖಾಸಗಿ ರಂಗ ಬ್ಯಾಂಕ್‌ಗಳು ಹಾಗೂ ಯುಎಇ ಎಕ್ಸ್‌ಚೇಂಜ್‌ನಂಥ ನಂಬಿಕಸ್ಥ ಹಣಕಾಸು ಸಂಸ್ಥೆಗಳು ಇಂಥ ಸೇವೆ ನೀಡುತ್ತವೆ. ಕ್ರಮಬದ್ಧವಾಗಿ ಸಾಲ ಮರುಪಾವತಿಸಿದರೆ ಅದರಿಂದ ಸಂಸ್ಥೆಗೂ, ಗ್ರಾಹಕರಿಗೂ ಅನುಕೂಲ.

ಯೋಜನೆ ಸಿದ್ಧಗೊಳಿಸಿ...

ವೈಯಕ್ತಿಕ ಹಣಕಾಸು ಯೋಜನೆ ಹೊಂದುವುದು ಅತ್ಯಂತ ಅಗತ್ಯವಾಗಿದೆ. ಒಂದು ವೇಳೆ ವಿದೇಶದಲ್ಲಿದ್ದರೆ ಅಲ್ಲಿನ ವ್ಯವಸ್ಥೆ ನಮ್ಮನ್ನು ಮರಳುಗೊಳಿಸಬಹುದು. ಅದೆಲ್ಲದರ ಹೊರತಾಗಿಯೂ ನಾವು ನಮ್ಮ ಇತಿಮಿತಿಯಲ್ಲಿ ಖರ್ಚು ಮಾಡಿಕೊಂಡಿದ್ದರೆ ಅನುಕೂಲ. ಇದರಿಂದ ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿಯೂ ಗೌರವ ಹೆಚ್ಚುತ್ತದೆ.

- ಪ್ರಮೋತ್ ಮಂಗತ್
ಯುಎಇ ಎಕ್ಸ್‌ಚೇಂಜ್‌ನ ಜಾಗತಿಕ ವ್ಯವಹಾರಗಳ ಉಪಾಧ್ಯಕ್ಷ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com