ಇಲ್ಲ ಅಭದ್ರತೆ

ಉಳಿತಾಯದಿಂದ ಲಾಭವೇನು? ಇಂದು ನಾವು ಉಳಿಸುವುದು ನಾಳೆ ನಮ್ಮ ತಲೆ ಕಾಯುತ್ತದೆ.
ಇಲ್ಲ ಅಭದ್ರತೆ
Updated on: 

ಉಳಿತಾಯದಿಂದ ಲಾಭವೇನು? ಇಂದು ನಾವು ಉಳಿಸುವುದು ನಾಳೆ ನಮ್ಮ ತಲೆ ಕಾಯುತ್ತದೆ. ಹಾಗಂತ ನಾವು ಸಂಪಾದಿಸುವ ಹಣದಲ್ಲಿ ಸ್ವಲ್ಪವನ್ನು ಹಾಗೇ ಒಂದು ಕಡೆ ಕೂಡಿಡುವುದಲ್ಲ. ಅದು ಜಾಣ್ಮೆಯೂ ಅಲ್ಲ. ಹನಿ ಹನಿ ಗೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ಬಳ್ಳ ಎಂಬ ಮಾತಿನಂತೆ ನಾವು ಅಲ್ಪ ಸ್ವಲ್ಪ ಕೂಡಿಡುವ ಹಣ ಮುಂದೆ ದೊಡ್ಡ ಮೊತ್ತವಾಗಿ ನಮ್ಮ ಕೈ ಸೇರುವ ಹಾಗೆ ಹಣ ಹೂಡಿಕೆ ಮಾಡುವುದೇ ಜಾಣತನ. ಚಿಟ್ ಫಂಡ್, ಚೀಟಿ ವ್ಯವಹಾರ, ಹಣ ದುಪ್ಪಟ್ಟಾಗುವುದು ಮೊದಲಾದ ಸ್ಕೀಂಗಳಲ್ಲಿ ಹಣ ಹೂಡುವುದು ಕ್ಷೇಮವಲ್ಲ. ಉಳಿತಾಯದ ಒಳ್ಳೆಯ ಹಾದಿ ಎಂದರೆ ವಿಮೆ ಮಾಡಿಸುವುದು.
ವಿಮೆ ಕೇವಲ ಉಳಿತಾಯ ಮಾತ್ರವಲ್ಲ, ಅನಿಶ್ಚಿತ ನಷ್ಟ ಎಂಬ ಗಂಡಾಂತರದ ವಿರುದ್ಧ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ರೂಪಿಸುವ ಅಪಾಯ ನಿರ್ವಹಣೆಯ ಉಪಾಯ ಎನ್ನುತ್ತಾರೆ ಅರ್ಥ ಶಾಸ್ತ್ರಜ್ಞರು.  
ವಿಮೆಗಳಲ್ಲೂ ಹಲವು ವಿಧಗಳಿವೆ. ಮುಖ್ಯವಾಗಿ ನಾವು ತಿಳಿದಿರಬೇಕಾದದ್ದು ಜೀವ ವಿಮೆ ಬಗ್ಗೆ.  ಜೀವನದ ಮೂಲಭೂತ ಅಗತ್ಯಗಳಲ್ಲಿ ಇದೂ ಒಂದು. ವೈಯಕ್ತಿಕ ಹಣಕಾಸು ಯೋಜನೆಗಳಲ್ಲಿ ತನ್ನದೇ ಆದ ಪಾತ್ರವನ್ನು ಜೀವ ವಿಮೆ ವಹಿಸುತ್ತಿದೆ. ಜನರಿಗೆ ತಮಗೆ ಬೇಕಾದ ಅಗತ್ಯಗಳನ್ನು ಇದು ಪೂರೈಸಲು ಸಹಕಾರಿ. ಆದರೆ, ಜೀವ ಮಿಮೆ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆಯಿಂದಿರಬೇಕು.

ಯಾರಿಗೆ ವಿಮೆ ಬೇಕು?
ಕುಟುಂಬದಲ್ಲಿ ಯಾರು ವಿಮೆ ಮಾಡಿಸಬೇಕು ಎಂಬ ಪ್ರಶ್ನೆ ಮೂಡುವುದು ಸಹಜ. ವಿಮೆ ರಕ್ಷಣೆಯನ್ನು ಯಾರು ಬೇಕಾದರೂ ಪಡೆಯಬಹುದು. ಅದಕ್ಕೆ ಬಡವ, ಶ್ರೀಮಂತ ಎಂಬ ಭೇದ ಭಾವ ಇಲ್ಲ.  ಅದರೆ, ಕುಟುಂಬದ ಹಣಕಾಸು ಅಗತ್ಯಗಳನ್ನು ಪೂರೈಸುವ ಆಧಾರಸ್ತಂಭ ಅರ್ಥಾತ್ ಕುಟುಂಬದ ಯಜಮಾನ ಜೀವ ವಿಮೆ ಮಾಡಿಸುವುದು ಉತ್ತಮ. ಇದು ಇಡೀ ಕುಟುಂಬವನ್ನು ರಕ್ಷಿಸುತ್ತದೆ. ಹಣಕಾಸು ವಿಚಾರದಲ್ಲಿ ಅಭದ್ರತೆ ಉಂಟಾಗಬಾರದೆಂಬ ಉದ್ದೇಶವಿದ್ದರೆ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಜೀವ ವಿಮೆ ಮಾಡಿಸಬೇಕು ಎನ್ನುತ್ತಾರೆ ಆರ್ಥಿಕ ತಜ್ಞರು.

ವಿಮೆ ವ್ಯಾಪ್ತಿ
ವಿಮೆ ಪಾಲಿಸಿಗೆ ಕೊಡುವ ಕಂತು ಹಣ ಸೆಕ್ಷನ್ 80(ಸಿ) ಅಡಿಯಲ್ಲಿ ಒಂದು ಲಕ್ಷ ರುಪಾಯಿವರೆಗೆ  ತೆರಿಗೆ ವಿನಾಯಿತಿಗೆ ಅರ್ಹವಾಗಿರುತ್ತದೆ. ಹಾಗೆಯೇ ಯೋಜನೆಯ ಮೂಲಕ ಸಿಗುವ ಆದಾಯವೂ ಸೆಕ್ಷನ್ 10(10ಡಿ) ಅಡಿಯಲ್ಲಿ ತೆರಿಗೆ ಮುಕ್ತವಾಗಿರುತ್ತದೆ. ಕಳೆದ ವರ್ಷದ ನಿಯಮಾವಳಿಯಲ್ಲಿ  ಕೆಲವೊಂದು ಬದಲಾವಣೆ ಮಾಡಲಾಗಿದ್ದು,  ತೆರಿಗೆಯ ಲಾಭ ಪಡೆಯಬೇಕಾದರೆ ವಿಮೆ ಪರಿಹಾರ ವ್ಯಾಪ್ತಿ ವಾರ್ಷಿಕ ಕಟ್ಟುವ ಪ್ರೀಮಿಯಂನ ಕನಿಷ್ಠ 10 ಪಟ್ಟು ಹೆಚ್ಚಿಗೆ ಇರಬೇಕು. ಇಲ್ಲದಿದ್ದರೆ ತೆರಿಗೆ ಕಡಿತ ಸೌಲಭ್ಯ ದೊರಕುವುದಿಲ್ಲ.

ಅವಧಿ ಮುಖ್ಯ
ವಿಮೆಯ ಅವಧಿಯೂ ಅಷ್ಟೇ ಮುಖ್ಯ. ವಿಮೆ ಅವಧಿ 10 ವರ್ಷಕ್ಕಿಂತ ಕಡಿಮೆ ಇದ್ದರೆ, ನಿರೀಕ್ಷಿಸುವಷ್ಟು ಆದಾಯ (Returns) ದೊರೆಯುವುದಿಲ್ಲ. ಸಾಂಪ್ರದಾಯಿಕ (Traditional) ಪಾಲಿಸಿಗಳಲ್ಲಿ ಕನಿಷ್ಠ 15 ವರ್ಷ ಅವಧಿಯ ವಿಮೆ ಮಾಡಿಸುವುದು ಒಳ್ಳೆಯದು. ಇನ್ನೂ ಹೆಚ್ಚಿನ ಆದಾಯ ನಿರೀಕ್ಷಿಸುತ್ತಿದ್ದರೆ 20 ವರ್ಷ ಮೇಲ್ಪಟ್ಟ ಅವಧಿ ಮಾಡಿಸುವುದು ಉತ್ತಮ. ಅವಧಿ ಹೆಚ್ಚಾದಷ್ಟೂ ಆದಾಯ ಹೆಚ್ಚಿರುತ್ತದೆ. ಜತೆಗೆ ನೀವು ಕಟ್ಟುವ ಪ್ರೀಮಿಯಂ ದರವೂ ಕಡಿಮೆ ಇರುತ್ತದೆ.
ಎಷ್ಟು ಮೊತ್ತದ ವಿಮೆ ಮಾಡಿಸಬೇಕು?
ವಿಮೆ ಮೊತ್ತ ನಮ್ಮ ವಾರ್ಷಿಕ ಆದಾಯಕ್ಕಿಂತ 8 ರಿಂದ 10 ಪಟ್ಟು ಹೆಚ್ಚಿಗೆ ಇರಬೇಕು. ಉದಾ: ವ್ಯಕ್ತಿಯ ವಾರ್ಷಿಕ ಆದಾಯ 1,00,000 ಇದ್ದರೆ,  ಆತ ಕನಿಷ್ಠ 8 ಲಕ್ಷಕ್ಕೆ ಮಾಡಿಸಿರಬೇಕು. ಆಗಷ್ಟೇ ಏನಾದರೂ ಅನಾಹುತ ಸಂಭವಿಸಿದರೆ, ಆತನ ಕುಟುಂಬ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಧ್ಯ.  ಆದಾಯ ಹೆಚ್ಚಾದಂತೆಲ್ಲ ಹೊಸದಾಗಿ ವಿಮೆ ಮಾಡಿಸಬೇಕು. ಏಕೆಂದರೆ ಇಂದಿನ 1 ಲಕ್ಷದ ಮೊತ್ತ 20 ವರ್ಷ ಆದ ಮೇಲೆ 10 ಸಾವಿರಕ್ಕೆ ಸಮವಾಗಿರುತ್ತದೆ. ಹಾಗಾಗಿ ಆದಾಯ ಹೆಚ್ಚಾದಂತೆಲ್ಲ ಕನಿಷ್ಠ ಶೇ.10ರಷ್ಟು ಹಣ ತೊಡಗಿಸಿದರೆ ಸಾಕು ಮುಂದೆ ಅನಿಶ್ಚಿತತೆಯಿಂದ ಸಂಭವಿಸಬಹುದಾದ ಆರ್ಥಿಕ ಸಂಕಷ್ಟದಿಂದ ಕುಟುಂಬವನ್ನು ಪಾರು ಮಾಡಬಹುದು.

ಯಾವಾಗ ವಿಮೆ ಮಾಡಿಸಬೇಕು?
ವಿಮೆಯನ್ನು 21ರಿಂದ 30 ವರ್ಷದೊಳಗೆ ಮಾಡಿಸುವುದು ಅತ್ಯುತ್ತಮ. ಕಟ್ಟುವ ಪ್ರೀಮಿಯಂ ಮೊತ್ತ ಕಡಿಮೆ ಇರುತ್ತದೆ. ಮಿಗಿಲಾಗಿ 40-45 ವರ್ಷ ವಯಸ್ಸಿಗೆ ದೊಡ್ಡ ಮೊತ್ತದ ಹಣ ಕೈ ಸೇರುತ್ತದೆ. ಮಕ್ಕಳ ಶಿಕ್ಷಣಕ್ಕೋ, ಮದುವೆಗೋ, ಮನೆ ಕಟ್ಟಲೋ ನೆರವಿಗೆ ಬರುತ್ತದೆ.

ಆಯ್ಕೆಗಳು ಹಲವು
ಇತ್ತೀಚಿನ ದಿನಗಳಲ್ಲಿ ವಿಮಾ ಹೂಡಿಕೆಗಳಲ್ಲಿ, ನಮಗೆ ಹಲವಾರು ಆಯ್ಕೆಗಳಿವೆ. ಅದರಿಂದ ಹಲವಾರು ಲಾಭಗಳಿವೆ. ವಿಮೆಯ ಉದ್ದೇಶ ವ್ಯಕ್ತಿಗೆ ಹಠಾತ್ ಪರಿಣಾಮಕ್ಕೆ ಸಹಕಾರಿಯಾಗುವುದಲ್ಲದೆ, ಬಹಳಷ್ಟು ಉಪಯೋಗವಿದೆ. ಈ ಹೂಡಿಕೆಗಳಲ್ಲಿ ಹೂಡುವಾಗ ಕೆಲವು ವಿಚಾರಗಳನ್ನು ನಾವು ತಿಳಿದುಕೊಂಡಿರಬೇಕು.  ಈ ವಿಚಾರಗಳನ್ನು ತಿಳಿದುಕೊಂಡ ಮೇಲೆ ವಿಮಾ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು.
-ಈ ಹೂಡಿಕೆಗಳು ದೀರ್ಘಕಾಲೀನವಾದದ್ದು.
-ಹೂಡಿಕೆಗಳನ್ನು ಶಿಸ್ತಿನಿಂದ ಮಾಡಬೇಕು.
-ಲಾಭಾಂಶದ ಅತಿ ಆಸೆ ಇರಬಾರದು.
-ಕನಿಷ್ಠ ಅವಧಿಯ ಪ್ರೀಮಿಯಂ ಪಾವತಿ ಮಾಡಲೇಬೇಕು.

-ಶಿವಕುಮಾರ್ ಆರ್.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com