

ಕಳೆದ ಫೆಬ್ರವರಿ ಮಧ್ಯಭಾಗದಿಂದಲೇ ಷೇರು ಬಜಾರಿನಲ್ಲಿ ಮಧ್ಯಮ ಹಾಗೂ ಸಣ್ಣ ಪ್ರಮಾಣದ ಗಟ್ಟಿ ಉದ್ಯಮಿಗಳ ಷೇರು ಬೆಲೆಗಳು ಏರುತ್ತಲೇ ಹೋಗಿವೆ. ಈ ಲೆಕ್ಕವನ್ನು ಗಮನಿಸಿದರೆ, ಕೆಲವು ಕಂಪನಿಗಳ ಷೇರುಗಳ ಬೆಲೆ ಶೇ. 20-50ರ ವರೆಗೂ ಏರಿರಬಹುದು.
ಚುನಾವಣೆ ಪ್ರಚಾರದ ಬಿರುಸಿನ ದಿನಗಳಲ್ಲೂ ಏರಿಕೆ ಜೋರಾಗಿತ್ತು. ಆದರೆ ಇದ್ದಕ್ಕಿದ್ದಂತೆ, ವಿಚಿತ್ರ ರೀತಿಯಲ್ಲಿ ಸಂಭವನೀಯ ಚುನಾವಣೆ ಫಲಿತಾಂಶ ಷೇರುದಾರರಲ್ಲಿ ಕಂಪನವನ್ನು ಹುಟ್ಟಿಸಿದೆ. ಈಗ ಸಿಕ್ಕಿದಷ್ಟೇ ಲಾಭ ಎನ್ನುವಂತೆ, ಷೇರುಗಳ ಭರಾಟೆಯ ಮಾರಾಟ ಆರಂಭವಾಗಿದೆ. ಹಲವು ತಜ್ಞರ ಪ್ರಕಾರ ಇದೇ ಜಾಣ ನೀತಿ. ಈಗ ಬಂದಷ್ಟು ಲಾಭವನ್ನು ಗಟ್ಟಿ ಮಾಡಿಕೊಂಡು ಹೊಸ ಸರ್ಕಾರ ಬಂದ ಅನಂತರವೇ ಮುಂದಿನ ವ್ಯಾಪಾರಕ್ಕೆ ಸಜ್ಜಾಗುವುದೇ ಸೂಕ್ತ.
ಎಲ್ಲಿವೆ ಹೊಸ ಷೇರುಗಳು?
ಭಾರತೀಯ ಷೇರು ಬಜಾರಿನಲ್ಲಿ ಬೃಹತ್ ಪ್ರಮಾಣದಲ್ಲಿ ಹೊಸ ಷೇರುಗಳ ಮಾರಾಟದ ಪ್ರಕ್ರಿಯೆ ಸ್ಥಗಿತವಾಗಿ ಈಗ ಹೆಚ್ಚೂಕಡಿಮೆ ಒಂದು ದಶಕವೇ ಕಳೆದಿದೆ. ಸೋನಿಯಾ ಗಾಂಧಿ ಮಾರ್ಗದರ್ಶನದ, ಪ್ರಧಾನಿ ಮನಮೋಹನ ಸಿಂಗ್ ಅವರು ನೇತೃತ್ವ ವಹಿಸಿದ್ದ ಸಂಯುಕ್ತ ಪ್ರಗತಿಪರ ಕೂಟ ಸರ್ಕಾರದ ಅವಧಿಯಲ್ಲಿ ಒಂದು ದೊಡ್ಡ ಹೊಸ ಷೇರೂ ಪೇಟೆಗೆ ಬರಲಿಲ್ಲ.
ಇಂಥ ಸನ್ನಿವೇಶದಲ್ಲಿ, ಪೇಟೆಯಲ್ಲಿ ಏನಿದ್ದರೂ ಹಳೇ ಷೇರುಗಳಲ್ಲೇ ವ್ಯವಹಾರ ನಡೆಯಬೇಕು. ಆ ಪೇಟೆಯಲ್ಲಿ ಭರಾಟೆ ಮೂಡುವುದು ಸುಲಭವಲ್ಲ. ಅದಕ್ಕೆ ಆರ್ಥಿಕ ಸ್ಥಿತಿ ಗತಿಯ ಸುಧಾರಣೆ ಕುರಿತ ದೊಡ್ಡ ಸುದ್ದಿ ಬೇಕು. ಅಂಥ ಸುದ್ದಿ ಈಗ ಎಲ್ಲೂ ಕಂಡುಬರುತ್ತಿಲ್ಲ.
ಹೊಸ ಬ್ಯಾಂಕ್ಗಳು
ಎರಡು ಬೃಹತ್ ಪ್ರಮಾಣದ ಹೊಸ ಬ್ಯಾಂಕ್ಗಳ ಸ್ಥಾಪನೆಗೆ ಈಗ ಕೇಂದ್ರ ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್ ಅನುಮತಿ ನೀಡಿವೆ. ಈ ಹೊಸ ಬ್ಯಾಂಕ್ಗಳು ಆರಂಭವಾಗುವುದರಿಂದ ಈಗೀಗ ಬ್ಯಾಂಕ್ಗಳ ಸ್ಥಿತಿಗತಿ ಏನಾಗಬಹುದು?
ಈ ವಿಚಾರದಲ್ಲಿ ಅಧ್ಯಯನ ಕೈಗೊಂಡಿರುವ ತಜ್ಞರ ಪ್ರಕಾರ, ಯಾವ ಬದಲಾವಣೆಯೂ ಆಗಲಿಕ್ಕಿಲ್ಲ. ಯಾಕೆಂದರೆ ಈಗ ಯಾವುದೇ ಹೊಸ ಬ್ಯಾಂಕ್ ಬಂದರೂ, ಅದು ಭದ್ರವಾಗಿ ತಳವೂರಲು ಸುಮಾರು 8-10 ವರ್ಷಗಳು ಬೇಕು. ಆದರೆ ಹೊಸ ಬ್ಯಾಕ್ ಆಗಲಿ, ಹಳೇ ಬ್ಯಾಂಕ್ ಆಗಲಿ, ದೊಡ್ಡ ರೀತಿಯಲ್ಲಿ ಸಾಮಾನ್ಯರ ಉಳಿತಾಯವನ್ನು ಆಕರ್ಷಿಸಬೇಕಾದರೆ ಸೇವಿಂಗ್ಸ್ ಬ್ಯಾಂಕ್ ಬಡ್ಡಿದರವನ್ನು ಶೇಕಡಾ ಆರಕ್ಕೇರಿಸಬೇಕು. ಅದು ನಿಯಂತ್ರಣ ಸಂಸ್ಥೆಗಳಿಗೆ ಪಥ್ಯವಿಲ್ಲದ ವಿಚಾರ.
ಗಮನಿಸಬೇಕಾದ ವಿಚಾರ...
ಚುನಾವಣೆ ಅನಂತರ ಆರ್ಥಿಕ ಪರಿಸ್ಥಿತಿ ಸುಧಾರಿಸಿದರೆ, ಅದರ ಲಾಭವನ್ನು ಪಡೆಯಲು ಐಸಿಐಸಿಐ- ಏಕ್ಸಿಸ್ ಹಾಗೂ ಎಚ್ಡಿಎಫ್ಸಿ ಬ್ಯಾಂಕ್ಗಳು ಸಿದ್ಧವಾಗಿವೆ. ಸರ್ಕಾರಿ ಬ್ಯಾಂಕ್ಗಳಲ್ಲಿ ಈ ವಿಚಾರದಲ್ಲಿ ಮಾತಿಲ್ಲ.
ಕೊನೆ ಮಾತು
ಭಾರತೀಯ ಟೆಲಿಕಾಮ್ ಪೇಟೆಗೆ ಮುಂದಿನ ವರ್ಷ 46,000 ಕೋಟಿ ರುಪಾಯಿಗಳ ಸಾಧನೋಪಕರಣಗಳು ಬೇಕಂತೆ. ಅದರಲ್ಲಿ ಶೇ.90ರಷ್ಟು ವಿದೇಶಗಳಿಂದ, ಪ್ರಧಾನವಾಗಿ ಯೂರೋಪಿನಿಂದ ಬರಬೇಕು.
ಇಂತಹ ಉದ್ಯಮದ ಆರೋಗ್ಯ ಹೇಗಿರಬಹುದು?
-ಸತ್ಯ