ಮೋದಿ ಹೆಸರಿನಲ್ಲಿ ರಿಂಗಣ ಕುಣಿತ

ಚುನಾವಣಾ ಸಮೀಕ್ಷಾ ವರದಿಗಳು ಬಿಜೆಪಿ ಹಾಗೂ ನರೇಂದ್ರ ಮೋದಿ ಅವರ ವಿಜಯದ ಸಂಭವವನ್ನು...
ಮೋದಿ ಹೆಸರಿನಲ್ಲಿ ರಿಂಗಣ ಕುಣಿತ
Updated on: 

ಚುನಾವಣಾ ಸಮೀಕ್ಷಾ ವರದಿಗಳು ಬಿಜೆಪಿ ಹಾಗೂ ನರೇಂದ್ರ ಮೋದಿ ಅವರ ವಿಜಯದ ಸಂಭವವನ್ನು ಅನುಮಾನವೇ ಇಲ್ಲದ ರೀತಿಯಲ್ಲಿ ಗುರ್ತಿಸುತ್ತಿರುವಂತೆಯೇ ಸಹಜವಾಗಿ ಪೇಟೆಯಲ್ಲಿ ಚೇತರಿಕೆ ಮೂಡಿತ್ತು. ಪೇಟೆಯ ದಿಕ್ಕಿನಲ್ಲಿ ಓಡಾಡುವುದನ್ನೇ ಬಿಟ್ಟಿದ್ದ ಸಾಮಾನ್ಯರು ಮತ್ತೆ ಆ ಕಡೆ ನೋಡುವಂತಾಗಿದೆ.
ನರೇಂದ್ರ ಮೋದಿ ಅವರ ಪ್ರಚಂಡ ವಿಜಯದ ಕಹಳೆ ಮೊಳಗಿದಂತೆಯೇ ಪೇಟೆಯಲ್ಲೂ ನಿರೀಕ್ಷೆಯಂತೆಯೇ ರಿಂಗಣ ಕುಣಿತ ಆರಂಭ. ಸೂಚ್ಯಂಕಗಳು ಸಾರ್ವಕಾಲಿನ ದಾಖಲೆಯನ್ನು ಸ್ಥಾಪಿಸಲು ಹೊರಟವು. ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ದೈನಿಕ ವ್ಯವಹಾರದ ಮೌಲ್ಯ ಸುಮಾರು 15,000 ಕೋಟಿ ರುಪಾಯಿಗಳನ್ನು ಮುಟ್ಟಿತ್ತು. ಇದೆಲ್ಲವೂ ಪೇಟೆಯ ಜನ ಚುನಾವಣೆ ಫಲಿತಾಂಶಕ್ಕೆ ಸಕ್ರಿಯವಾಗಿ ಪ್ರತಿಕ್ರಿಯೆ ನೀಡಿದ್ದಾರೆನ್ನುವುದಕ್ಕೆ ಸೂಚನೆ.
ನಿಜ. ನರೇಂದ್ರ ಮೋದಿ, ನಿರ್ದಿಷ್ಟವಾಗಿ ತಮ್ಮ ಆರ್ಥಿಕ ನೀತಿಯನ್ನು ಇನ್ನೂ ಮಂಡಿಸಿಲ್ಲ. ಈಗಾಗಲೇ 'ಚಿಂತನೆ ಮಾಡಿರುವುದು' ನಿಜ. ಅದು ಸ್ಪಷ್ಟವಾಗಿ, ಅಧಿಕೃತವಾಗಿ ಬೆಳಕಿಗೆ ಬರಬೇಕಾದರೆ ಮುಂದಿನ ಜೂನ್‌ವರೆಗೂ ಕಾಯಬೇಕು.
ಆದರೆ ಅಲ್ಲಿಯವರೆಗೆ ಏನೂ ಆಗಲ್ಲ ಎಂದೇನೂ ಅಲ್ಲ. ನೂತನ ಸರ್ಕಾರದ ನೀತಿಯನ್ನು ಊಹಿಸಿರುವ ಅಧಿಕಾರಿಗಳು ಕೆಲಸವನ್ನು ಆರಂಭಿಸಿದ್ದಾರೆ. ಅದರ ಪರಿಣಾಮವಾಗಿಯೇ ಬಿಡಿ ಹೂಡಿಕೆದಾರರು (ಸಾಮಾನ್ಯರು, ರೀಟೇಲರ್ಸ್) ಪೇಟೆಯತ್ತ ತಿರುಗಲು ಸಿದ್ಧವಾಗುತ್ತಿರುವುದು. ಅವರೂ ತಮ್ಮ ಹಣಕಾಸು ವ್ಯವಸ್ಥೆಯನ್ನು ನೋಡಿಕೊಳ್ಳಬೇಕಲ್ಲ.
ಬರಲಿವೆ... ಐಪಿಓಗಳು
ಬಂಡವಾಳ ಪೇಟೆಯಲ್ಲಿ ಸಾಮಾನ್ಯರಿಗೂ ಅವಕಾಶವಿರುವ ಹೊಸ ಷೇರುಗಳ ಮಾರಾಟ (ಇನಿಷಿಯಲ್ ಪಬ್ಲಿಕ್ ಆಫರ್-ಐಪಿಓ) ಈಗ ಎರಡು ವರ್ಷಗಳಿಂದಲೂ ಸ್ಥಗಿತವಾಗಿದೆ. ಪೇಟೆಯಲ್ಲಿ ಚೈತನ್ಯ ಮೂಡಲು ಐಪಿಓಗಳು ಬರಬೇಕು- ಬರುತ್ತವೆ.
ಇದುವರೆಗೆ ಉದ್ಯಮಿಗಳು ಬಂಡವಾಳ ಹೂಡಿಕೆಗೆ ಸಾಲದ ಪೇಟೆಯನ್ನೇ ಅವಲಂಬಿಸಬೇಕಾಗಿತ್ತು. ಅದು ದುಬಾರಿ. ಈಗ ಸಾವಿರಕ್ಕೂ ಹೆಚ್ಚು ಕಂಪನಿಗಳು ಒಳ್ಳೆಯ ಸ್ಥಿತಿಯಲ್ಲಿದ್ದರೂ ಸಾಲದ ಹೊರೆಯಿಂದ ತತ್ತರಿಸಿವೆ. ಅಂಥ ಸಂಸ್ಥೆಗಳಿಗೆ ಹೊಸ ಷೇರುಗಳನ್ನು ಮಾರಿ, ಬಂದ ಬಂಡವಾಳವನ್ನು ಹಿಂದಿನ ಸಾಲ ತೀರಿಸಲು ಒಳ್ಳೆಯ ದಾರಿ ಸಿಗಬಹುದು.
ಆದರೆ ಈ ನೆಪದಲ್ಲಿ ಪೇಟೆಗೆ ಭಾರಿ ಜಾಹೀರಾತುಗಳನ್ನು ಹೊತ್ತು ಬರುವ ಪೊಳ್ಳು ಕಂಪನಿಗಳ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದಲೇ ಇರಬೇಕು. ಹಿಂದೆ ಮಾಡಿದ ಸಾಲದಿಂದ ಸೃಷ್ಟಿಯಾದ 'ಆಸ್ತಿ' ಯಾವುದು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಈಗ ದೊಡ್ಡ ಉದ್ಯಮಗಳ ಸಾಲದ ಹೊರೆಯೇ 13.33 ಲಕ್ಷ ಕೋಟಿ ರುಪಾಯಿಗಳು.
ಡಾಲರ್ ಮೌಲ್ಯದ ವಿಚಾರ
ಡಾಲರ್ ಲೆಕ್ಕದಲ್ಲಿ ರುಪಾಯಿಯ ಬೆಲೆ 66ರ ಸಂಖ್ಯೆಯನ್ನು ಮುಟ್ಟಿದಾಗ ಪೇಟೆಯಲ್ಲಿ ಗಾಬರಿ. ವಿದೇಶಿ ವಸ್ತುಗಳ ಮಾಲು ವಿಪರೀತ ದುಬಾರಿಯಾಯಿತು. ಈಗ ಪೇಟೆಯಲ್ಲಿನ ನಿರೀಕ್ಷೆ, ರಿಸರ್ವ್ ಬ್ಯಾಂಕ್ ಕೈಗೊಂಡ ಸಕಾಲದ ಸೂಕ್ತ ಕ್ರಮಗಳು ರುಪಾಯಿಯ ಬೆಲೆಯನ್ನು ಡಾಲರ್‌ಗೆ 57.90 ಹಂತದಲ್ಲಿಟ್ಟಿವೆ. ಅದರ ನಿಜವಾದ ಈಗಿನ ಮೌಲ್ಯ ಸುಮಾರು 60 ರುಪಾಯಿಗಳು. ಹಿಂದೆ ವಿದೇಶಗಳಿಂದ ಮಾಲು ತರಿಸಿಕೊಂಡವರು ತೊಂದರೆಗೆ ಸಿಕ್ಕಿಬಿದ್ದರು. ಈಗ ವಿದೇಶಗಳಿಗೆ ಮಾಲು ಮಾರುವವರ ಸರದಿ, ಅದೇ ವ್ಯಾಪಾರ.
ಕೊನೆ ಮಾತು
ಇಷ್ಟು ದಿನವೇ ಆಯಿತಂತೆ, ಪೇಟೆ ಜನ ಜೂನ್ ಬಜೆಟ್‌ವರೆಗೂ ಕಾಯಲೇಬೇಕು.


-ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com