

ಗಾಂಧಿನಗರ: ಭಾರತದ ಮೊದಲ ಗೃಹ ಮಂತ್ರಿ, ಸ್ವಾತಂತ್ರ ಹೋರಾಟಗಾರ ಸರದಾರ್ ವಲ್ಲಭಾಯ್ ಪಟೇಲ್ ಅವರ ಪ್ರತಿಮೆ - ನರೇಂದ್ರ ಮೋದಿಯವರ ಕನಸಿನ ಕೂಸು ಎಂದೇ ಬಣ್ಣಿಸಲಾಗುವ ವಿಶ್ವದ ಅತಿ ದೊಡ್ಡ "ಐಕ್ಯತೆಯ ಪುತ್ತಳಿ"ಯ ಕಾರ್ಯಯೋಜನೆಯನ್ನು ಲಾರ್ಸೆನ್ ಅಂಡ್ ಟೂಬ್ರೊ (ಎಲ್&ಟಿ) ಸಂಸ್ಥೆ ಗುಜರಾತ್ ರಾಜ್ಯ ಸರ್ಕಾರದಿಂದ ಟೆಂಡರ್ ನಲ್ಲಿ ಪಡೆದುಕೊಂಡಿದೆ.
೧೮೨ ಮೀಟರ್ ಉದ್ದದ ಸರದಾರ್ ಪಟೇಲ್ ಅವರ ಈ ಪ್ರತಿಮೆಯನ್ನು ೨೯೭೯ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಗುಜರಾತ್ ನ ಮುಖ್ಯಮಂತ್ರಿ ಆನಂದಿ ಪಟೇಲ್ ತಿಳಿಸಿದ್ದಾರೆ.
"ಈ ಬೃಹತ್ ಪ್ರತಿಮೆಯನ್ನು ನಾಲ್ಕು ವರ್ಷಗಳಲ್ಲಿ ೨೯೭೯ ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತೇವೆ. ಇದರ ಗುತ್ತಿಗೆಯನ್ನು ದೇಶದ ಪ್ರಮುಖ ಮೂಲಸೌಕರ್ಯ ನಿರ್ಮಾಣ ಸಂಸ್ಥೆ ಎಲ್&ಟಿ ಗೆ ನೀಡಲಾಗಿದೆ" ಎಂದು ಪಟೇಲ್ ತಿಳಿಸಿದ್ದಾರೆ.
ಈ ೧೮೨ ಮೀಟರ್ ಉದ್ದದ "ಐಕ್ಯತಾ ಪುತ್ತಳಿ" ನ್ಯೂಯಾರ್ಕಿನ "ಸ್ಟಾಚ್ಯೂ ಆಫ್ ಲಿಬರ್ಟಿ" ಗಿಂತ ದುಪ್ಪಟ್ಟು ದೊಡ್ಡದಾಗಿರುತ್ತದೆ ಎಂದು ಪಟೇಲ್ ತಿಳಿಸಿದ್ದಾರೆ.