

ನವದೆಹಲಿ: ಐಫೋನ್ 6 ಪ್ಲಸ್ ಖರೀದಿಸಿದವರಿಗೆಲ್ಲ ಹೊಸ ಸಮಸ್ಯೆ ಕಾಡಲಾರಂಭಿಸಿದೆ. ಅದೇನು ಗೊತ್ತೇ?. ಅದನ್ನು ಕಿಸೆಯಲ್ಲಿಟ್ಟುಕೊಂಡು ಓಡಾಡಿದ ಕೂಡಲೇ ಅದು ಕೊಂಚ ಬಾಗಿದಂತಾಗುತ್ತದಂತೆ. ಅದಕ್ಕೆ ಪೂರಕವಾಗಿ ಯೂಟ್ಯೂಬ್‌ನಲ್ಲಿ ಹರಿದಾಡುತ್ತಿರುವ ವಿಡಿಯೋ ಕೂಡಾ ಐಫೋನ್ 6 ಖರೀದಿ ಮಾಡಿದವರ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆಯಂತೆ. ಏಕಾಏಕಿ ಇಂಥ ಒಂದು ಬೆಳವಣಿಗೆಯಾಗಿರುವುದು ಐಫೋನ್ ಪ್ರಿಯರಿಗೆ ಬರಸಿಡಿಲು ಬಂದಂತಾಗಿದೆ. ಕೆಲವರ ಅನುಭವ ಹೇಗಿದೆಯೆಂದರೆ ಬಾಗಿದ ಫೋನ್ ಅನ್ನು ಮತ್ತೆ ದುರಸ್ತಿ ಮಾಡಲು ಸಾಧ್ಯವಾಗದಂಛ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳುತ್ತಿದ್ದಾರೆ. ಟ್ವಿಟರ್ ಮತ್ತು ಇತರ ಸಾಮಾಜಿಕ ಜಾಲತಾಣದಲ್ಲಿ ಕೂಡ ಇದೇ ವಿಚಾರದ ಬಗ್ಗೆ ಚರ್ಚೆಯಾಗುತ್ತಿದೆ. ವೆಬ್‌ಸೈಟ್ ಒಂದರಲ್ಲಿ ಹಾಕಲಾಗಿರುವ ಪೋಸ್ಟ್ ಪ್ರಕಾರ ಗ್ರಾಹಕರೊಬ್ಬರು ಖರೀದಿಸಿದ ಐಫೋನ್ 6 ಪ್ಲಸ್ ಎರಡು ದಿನಗಳ ಬಳಿಕ ಕೊಂಚ ಬಾಗಿದ್ದು ಕಂಡುಬಂತು ಎಂದು ಹೇಳಿದ್ದಾರೆ. ಐಫೋನ್‌ನ ಚೇಸಿಸ್ ಅಲ್ಯುಮಿನಿಯಂನಿಂದ ತಯಾರಿಸಲಾಗಿದೆ. ಅದನ್ನು ಹೇಗೆ ತಯಾರಿಸಲಾಗಿದೆ ಎಂಬುದು ಅತ್ಯಂತ ರಹಸ್ಯವಾಗಿಡಲಾಗಿದೆ. ಫೋನ್‌ಗಳ ಬಾಗುವಿಕೆಯ ದೂರು ಸೋನಿ ಎಕ್ಸ್‌ಪಿರಿಯಾ ಜೆಡ್ 1 ಫೋನ್‌ನಲ್ಲಿಯೂ ಕಂಡುಬಂದಿದೆಯಂತೆ.