ಮುಂಬೈ: ಪ್ರಸಕ್ತ ವಾರದ ಕೊನೆ ವಹಿವಾಟು ದಿನವಾದ ಶುಕ್ರವಾದ ಷೇರುಪೇಟೆ, ಚಿನಿವಾರ ಪೇಟೆ ಗಣನೀಯವಾಗಿ ನಷ್ಟ ಕಂಡಿವೆ. ಆದರೆ ಫಾರೆಕ್ಸ್ ವಹಿವಾಟಿನಲ್ಲಿ ಮಾತ್ರ ಡಾಲರ್ ಎದುರು ರುಪಾಯಿ ತುಸು ಚೇತರಿಕೆ ಕಂಡಿದೆ.
ಕೇಂದ್ರ ಅಂಕಿಅಂಶ ಸಂಸ್ಥೆ ಗುರುವಾರ ಬಿಡುಗಡೆ ಮಾಡಿದ ದೇಶದ ಆರ್ಥಿಕ ಪ್ರಗತಿ ಕುರಿತ ಅಂಕಿಅಂಶಗಳು ಪೇಟೆ ಮೇಲೆ ಪರಿಣಾಮ ಬೀರಿತು. ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಕುಸಿಯುವುದರ ಜೊತೆಗೆ ಹಣದುಬ್ಬರ ಪ್ರಮಾಣ ಏರಿಕೆ ಕಂಡಿದ್ದು ದೇಶದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದೆ ಎಂಬುದನ್ನು ತೋರಿಸಿತು. ಈ ಅಂಕಿಅಂಶಗಳಿಂದ ವಿಚಲಿತಗೊಂಡ ಹೂಡಿಕೆದಾರರು ಶುಕ್ರವಾರ ಹೆಚ್ಚಿನ ಮಾರಾಟದಲ್ಲಿ ತೊಡಗಿದ್ದರು.
ಇದರಿಂದ ಸೆನ್ಸೆಕ್ಸ್ 256.42 ಅಂಕ ನಷ್ಟದೊಂದಿಗೆ 25,610.53ಕ್ಕೆ ಕುಸಿದರೆ, ನಿಫ್ಟಿ 62.75 ಅಂಕ ಕುಸಿತದೊಂದಿಗೆ 7,762.25ಕ್ಕೆ ಇಳಿಯಿತು. ಸೆನ್ಸೆಕ್ಸ್‍ನ ಹಂತ ಕಳೆದ ಎರಡು ತಿಂಗಳಲ್ಲೇ ಕನಿಷ್ಠ ಮಟ್ಟದ್ದಾಗಿದೆ. ದೇಶೀಯ ಷೇರುಪೇಟೆ ಸತತ ಮೂರನೆ ವಾರ ನಷ್ಟದೊಂದಿಗೆ ಅಂತ್ಯಕಂಡಿದೆ.
ಈ ವಾರದಲ್ಲಿ ಸೆನ್ಸೆಕ್ಸ್ 654.71 ಅಂಕ ಕಳೆದುಕೊಂಡರೆ, ನಿಫ್ಟಿ 192.05 ಅಂಕ ಕಳೆದುಕೊಂಡಿದೆ. ಈ ವಾರದಲ್ಲಿ ಮೂರು ಪೂರ್ಣ ದಿನ ವಹಿವಾಟು ನಡೆಯಿತು. ದೀಪಾವಳಿ ಅಂಗವಾಗಿ ನಡೆದ ಮುಹೂರ್ತ್ ವಹಿವಾಟು ಏರಿಕೆಯೊಂದಿಗೆ ಮುಕ್ತಾಯವಾದರೂ ಕುಸಿತದೊಂದಿಗೆ ವಾರಾಂತ್ಯ ಕಂಡಿದೆ. ಕಳೆದ ಏಳು ವಹಿವಾಟು ಅವಧಿಗಳಲ್ಲಿ ಶುಕ್ರವಾರದ ಕುಸಿತ ಐದನೆಯದಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಆರ್ಥಿಕ ಪ್ರಗತಿ ಮಂದಗತಿಯಲ್ಲಿ ಸಾಗಿರುವುದು ಮತ್ತು ಉತ್ಪನ್ನಗಳ ದರಗಳು ಹಲವು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿರುವುದು ಪೇಟೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರೊಟ್ಟಿಗೆ ಏಷ್ಯಾ ಮತ್ತು ಯೂರೋಪ್ ಮಾರುಕಟ್ಟೆಗಳಲ್ಲಿನ ಹೂಡಿಕೆ ದಾರರು ಭಾರಿ ಮಾರಾಟದಲ್ಲಿ ತೊಡಗಿದ್ದು ದೇಶಿ ಹೂಡಿಕೆದಾರರನ್ನು ಮಾರಾಟ ಒತ್ತಡಕ್ಕೆ ಸಿಲುಕಿಸಿತು.
ಮುಂದಿನ ತಿಂಗಳು ಅಮೆರಿಕದ ಫೆಡರಲ್ ಬ್ಯಾಂಕ್ (ಭಾರತದಲ್ಲಿ ಆರ್‍ಬಿಐ ಇದ್ದಂತೆ) ಹಣಕಾಸು ನೀತಿ ಪರಿಶೀಲನಾ ಸಭೆ ನಡೆಯಲಿದ್ದು ಬಡ್ಡಿದರಗಳನ್ನು ಹೆಚ್ಚಿಸಲಿದೆ ಎಂಬ ಭೀತಿ ಹೂಡಿಕೆದಾರರಲ್ಲಿ ಮೂಡಿರುವುದು ಕುಸಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.
ಚೀನಾ ಷೇರುಪೇಟೆ ಸೂಚ್ಯಂಕ ಕುಸಿತ ಕಂಡಿದ್ದು ಏಷ್ಯಾದ ಇತರ ಮಾರುಕಟ್ಟೆಗಳ ಮೇಲೂ ಪ್ರಭಾವ ಬೀರಿತು. ಹಾಂಕಾಂಗ್, ಜಪಾನ್, ಸಿಂಗಾಪುರ, ದಕ್ಷಿಣ ಕೊರಿಯಾ, ತೈವಾನ್ ಸೂಚ್ಯಂಕಗಳು ನಷ್ಟ ಕಂಡವು. ಜರ್ಮನಿ, ಫ್ರಾನ್ಸ್, ಬ್ರಿಟನ್ ಷೇರುಗಳು ಕುಸಿದವು.