

ಮುಂಬಯಿ: ಸೆಬಿ ಸಂಸ್ಥೆ ಪಿಎಸಿಎಲ್ ಲಿ. ಸಂಸ್ಥೆಗೆ ಭಾರೀ ದಂಡವನ್ನು ಹೇರಿದ್ದು , 7295.5 ಕೋಟಿ ದಂಡವನ್ನು ಪಾವತಿ ಮಾಡುವಂತೆ ಸೂಚಿಸಿದೆ. ಪಿಎಸಿಎಲ್ ಸಂಸ್ಥೆ ಮತ್ತು ಅದರ ನಾಲ್ವರು ನಿರ್ದೇಶಕರು ಸಾರ್ವಜನಿಕರಿಂದ ಅಕ್ರಮವಾಗಿ ಮತ್ತು ಮೋಸದಿಂದ ನಿಧಿ ಸಂಗ್ರಹ ಮಾಡಿದ್ದಾರೆಂದು ಸೆಬಿ ಆರೋಪಿಸಿದೆ.
ಜನಸಾಮಾನ್ಯರಿಗೆ ದೊಡ್ಡ ಪ್ರಮಾಣದಲ್ಲಿ ವಂಚಿಸಿದ ಕಂಪನಿಗೆ ಗರಿಷ್ಠ ದಂಡಕ್ಕೆ ವಿಧಿಸುವುದಕ್ಕೆ ಅರ್ಹತೆ ಪಡೆದಿದೆ ಎಂದು ಸೆಬಿ ಹೇಳಿದೆ. ಕಳೆದ ವರ್ಷ ಸೆಬಿ ಪಿಎಸಿಎಲ್ ಸಂಸ್ಥೆ 15 ವರ್ಷಗಳ ಅವಧಿಯಲ್ಲಿ ಸಂಗ್ರಹಿಸಿದ 49, 100 ಕೋಟಿ ಹಣವನ್ನು ರೀಫಂಡ್ ಮಾಡುವಂತೆ ಆದೇಶಿಸಿತ್ತು.
ಪಿಎಸಿಎಲ್ ಸಂಸ್ಥೆ ಅಪೀಲು ಸಲ್ಲಿಸಿದ್ದರಿಂದ ಸೆಕ್ಯೂರಿಟೀಸ್ ಅಪೀಲು ನ್ಯಾಯಮಂಡಳಿ ಕಳೆದ ತಿಂಗಳು ರೀಫಂಡ್ ಆದೇಶಕ್ಕೆ ತಡೆ ವಿಧಿಸಿತ್ತು. ಸೆಬಿ ಮಂಗಳವಾರ ನೀಡಿದ ಇತ್ತೀಚಿನ ಆದೇಶದಲ್ಲಿ ಪಿಎಸಿಎಲ್ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಹಣ ಸಂಗ್ರಹಿಸಿದ್ದು, ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ 2423 ಕೋಟಿ ಲಾಭ ಗಳಿಸಿದೆ. ಇಡೀ ಸತ್ಯಾಂಶಗಳನ್ನು ಮತ್ತು ಸಂದರ್ಭಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಗರಿಷ್ಠ ದಂಡಕ್ಕೆ ಅರ್ಹವಾದ ಪ್ರಕರಣ ಎಂದು ತಿಳಿಸಿದೆ.