ವೀಸಾ ಶುಲ್ಕ ಹೆಚ್ಚಳ ವಿಚಾರ: ಅಮೆರಿಕ ಅಧಿಕಾರಿಗಳ ಮುಂದೆ ಅರುಣ್ ಜೇಟ್ಲಿ ವಿಷಯ ಪ್ರಸ್ತಾಪ

ನವದೆಹಲಿ: ಅಮೆರಿಕ ಹೆಚ್-1ಬಿ ಮತ್ತು ಎಲ್ 1 ವೀಸಾ ಶುಲ್ಕವನ್ನು ಹೆಚ್ಚಿಸಿರುವ ಕ್ರಮಕ್ಕೆ ಎನ್ ಡಿಎ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಅಮೆರಿಕದ ವ್ಯಾಪಾರ ಪ್ರತಿನಿಧಿಗಳ ರಾಯಭಾರಿ ಮೈಕೆಲ್ ಫ್ರೋಮನ್ ಜೊತೆ ದ್ವಿಪಕ್ಷೀಯ ಸಭೆ ನಡೆಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಅಮೆರಿಕದ ಈ ಕ್ರಮ ತಾರತಮ್ಯದಿಂದ ಕೂಡಿದ್ದು ಇದು ಭಾರತದ ಐಟಿ ಕಂಪೆನಿಗಳನ್ನು ಗುರಿಯನ್ನಾಗಿಸಲಾಗಿದೆ ಎಂದು ಆರೋಪಿಸಿದ್ದಾರೆ. ಜೈಟ್ಲಿಯವರು ವಾಷಿಂಗ್ಟನ್ ನಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್ ನ ಸಭೆ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಅವರ ಜೊತೆ ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಮತ್ತು ಇತರ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.
ಭಾರತ ಮತ್ತು ಅಮೆರಿಕ ನಡುವೆ ನಿರಂತರ ಸೌಹಾರ್ದತೆ ಮತ್ತು ವ್ಯಾಪಾರ ಹಾಗೂ ಹೂಡಿಕೆಯಲ್ಲಿ ಸಹಭಾಗಿತ್ವ ದ್ವಿಪಕ್ಷೀಯ ಪ್ರಕ್ರಿಯೆಗೆ ಪ್ರಮುಖ ವಿಷಯಗಳಾಗಿವೆ. ಅಂದಾಜು ಪ್ರಕಾರ, ಕಳೆದ ದಶಕದಲ್ಲಿ ಅಮೆರಿಕದ ಸಾಮಾಜಿಕ ಭದ್ರತೆಗೆ ಭಾರತೀಯ ವೃತ್ತಿಪರರು 25 ಶತಕೋಟಿ ಡಾಲರ್ ಗೂ ಅಧಿಕ ಕೊಡುಗೆ ನೀಡಿದ್ದಾರೆ ಎಂದು ಜೇಟ್ಲಿ ಸಮರ್ಥಿಸಿಕೊಂಡಿದ್ದಾರೆ.
ವೀಸಾ ಶುಲ್ಕ ವಿಷಯಕ್ಕೆ ಸಂಬಂಧಪಟ್ಟಂತೆ ಟೆಕ್ ಮಹೀಂದ್ರ ವ್ಯವಸ್ಥಾಪಕ ನಿರ್ದೇಶಕ ಮತ್ತು ನಾಸ್ಕಾಮ್ ಅಧ್ಯಕ್ಷ ಸಿ.ಪಿ.ಗುರ್ನಾನಿ ಪ್ರತಿಕ್ರಿಯೆ ನೀಡಿ, ಕೈಗಾರಿಕೆಯ ಸಂಸ್ಥೆಯಾಗಿ ಹೆಚ್ -1ಬಿ ಮತ್ತು ಎಲ್ 1 ವೀಸಾ ಶುಲ್ಕ ಹೆಚ್ಚಳದ ಬಗ್ಗೆ ನಾವು ವ್ಯಾಪಾರ ಒಕ್ಕೂಟ ಮತ್ತು ಸೆನೆಟರ್ ಗೆ ಪತ್ರ ಬರೆದಿದ್ದೇವೆ. ಶುಲ್ಕ ಹೆಚ್ಚಳದಿಂದ ಭಾರತೀಯ ಐಟಿ ಕಂಪೆನಿಗಳ ಮೇಲೆ ಅನಗತ್ಯ ಹೊರೆ ಬೀಳಲಿದೆ ಎಂದರು.
ಹೆಚ್ -1ಬಿ ಮತ್ತು ಎಲ್ -1 ವೀಸಾ ಹೆಚ್ಚಳ ಶಾಸನಕ್ಕೆ ಕಳೆದ ಡಿಸೆಂಬರ್ ನಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅನುಮೋದನೆ ನೀಡಿದ್ದರು. ಇದು ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಕಂಪೆನಿಗಳ ನೌಕರರಿಗೆ ಮಾತ್ರ ಅನ್ವಯವಾಗುತ್ತದೆ. ಹೆಚ್ -1ಬಿ ವೀಸಾ ಶುಲ್ಕವನ್ನು 4 ಸಾವಿರ ಡಾಲರ್ ಗೆ ಹೆಚ್ಚಳ ಮಾಡಿದ್ದರೆ ಎಲ್ -1 ವೀಸಾ ಬೆಲೆಯನ್ನು 4 ಸಾವಿರದ 500 ಡಾಲರ್ ಗೆ ಹೆಚ್ಚಿಸಲಾಗಿದೆ.
''ನಾವು ಪ್ರಮುಖ ಪೂರೈಕೆದಾರರಾಗಿದ್ದು, ನಮ್ಮ ಮೇಲೆ ಹೊರೆ ಬೀಳುತ್ತದೆ ಎಂದು ಸಿ.ಪಿ.ಗುರ್ನಾನಿ ತಿಳಿಸಿದ್ದಾರೆ.
ಅಮೆರಿಕದ ಕಂಪೆನಿಗಳಿಗೆ ಸ್ಥಳೀಯ ಮಟ್ಟದಲ್ಲಿ ಪ್ರತಿಭಾವಂತ ಕೆಲಸಗಾರರು ಸಿಗದಿದ್ದರೆ ವಿದೇಶಗಳಿಂದ ಅತ್ಯುತ್ತಮ ಕುಶಲ ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಅವಕಾಶವನ್ನು ಹೆಚ್-1ಬಿ ವೀಸಾ ನೀಡಿದರೆ, ಕಂಪೆನಿ-ಕಂಪೆನಿಗಳ ನಡುವೆ ಕೆಲಸಗಾರರ ವರ್ಗಾವಣೆಗೆ ಎಲ್ -1 ವೀಸಾ ನೆರವಾಗುತ್ತದೆ.
ಎನ್ ಡಿಎ ಸರ್ಕಾರದ ಈ ಕ್ರಮ ಧನಾತ್ಮಕ ಪ್ರಯತ್ನವಾಗಿದ್ದು ನಾವಿದನ್ನು ಸ್ವಾಗತಿಸುತ್ತೇವೆ ಕ್ವಟ್ರೋ ಗ್ಲೋಬಲ್ ಸರ್ವಿಸ್ ನ ವ್ಯವಸ್ಥಾಪಕ ನಿರ್ದೇಶಕ ರಮನ್ ರಾಯ್ ತಿಳಿಸಿದ್ದಾರೆ. ಭಾರತದಲ್ಲಿ ವ್ಯವಹಾರ ಹೊರಗುತ್ತಿಗೆ ಉದ್ಯಮದ ಮುಂಚೂಣಿಯಲ್ಲಿ ರಮಣ್ ರಾಯ್ ಅವರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


