ಮುಂಬೈ: ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ತಮ್ಮ ಕೊನೆಯ ವಿತ್ತೀಯ ನೀತಿ ಘೋಷಣೆಯಲ್ಲಿ ರೆಪೊ ದರವನ್ನು ಬದಲಾಯಿಸದೆ ಯಥಾಸ್ಥಿತಿ ಕಾಯ್ದುಕೊಂಡಿದ್ದಾರೆ.
ರೆಪೊ ದರ ಪ್ರಸ್ತುತ ಶೇಕಡಾ 6.5ರಷ್ಟಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಆರ್ ಬಿಐ ಹೊಂದಾಣಿಕೆ ಮುಂದುವರಿಯಲಿದೆ. ಬ್ಯಾಂಕ್ ಗಳಿಗೆ ಪಾವತಿಸುವ ಹಣ ರಿವರ್ಸ್ ರೆಪೊ ದರವನ್ನು ಶೇಕಡಾ 6ರಷ್ಟು ಮತ್ತು ಕ್ಯಾಶ್ ರಿಸರ್ವ್ ದರವನ್ನು ಶೇಕಡಾ 4ರಷ್ಟು ಕಾಯ್ದುಕೊಳ್ಳಲಾಗಿದೆ.
''ಈ ನಿರ್ದಿಷ್ಟ ಸಂದರ್ಭದಲ್ಲಿ ನೀತಿ ಕ್ರಮಕ್ಕೆ ಕಾಯುತ್ತಿರುವಾಗ ರೆಪೊ ದರವನ್ನು ಬದಲಾಯಿಸದೆ ಇರುವುದು ಒಳ್ಳೆಯದು. ಹಣಕಾಸು ನೀತಿಗೆ ಹೊಂದಾಣಿಕೆ ಮುಂದುವರಿಯುತ್ತಿದ್ದು, ಲಿಕ್ವಿಡಿಟಿ ಹರಿಯುವಿಕೆಗೆ ಸಾಧ್ಯತೆಯಿರಬೇಕು ಎಂದು ರಘುರಾಮ್ ರಾಜನ್ ಹೇಳಿದರು.
ಬೆಲೆ ಏರಿಕೆ ಮತ್ತು 7ನೇ ವೇತನ ಆಯೋಗದಲ್ಲಿ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳದಿಂದಾಗಿ ಮುಂದಿನ ವರ್ಷ ಮಾರ್ಚ್ 2017ರಲ್ಲಿ ಹಣದುಬ್ಬರ ಶೇಕಡಾ 5ಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ರಘುರಾಮ್ ರಾಜನ್ ಎಚ್ಚರಿಕೆ ನೀಡಿದ್ದಾರೆ.
ರಘುರಾಮ್ ರಾಜನ್ ಅವರ ಅಧಿಕಾರಾವಧಿ ಸೆಪ್ಟೆಂಬರ್ 4ಕ್ಕೆ ಕೊನೆಗೊಳ್ಳಲಿದೆ. ಮುಂದಿನ ಗವರ್ನರ್ ಅವರ ಹೆಸರನ್ನು ಸರ್ಕಾರ ಇನ್ನೂ ಘೋಷಿಸಿಲ್ಲ.