

ರಾಯಲ್ ಬ್ಯಾಂಕ್ ಆಫ್ ಸ್ಕಾಟ್ ಲ್ಯಾಂಡ್(ಆರ್ಬಿಎಸ್) ಇನ್ಫೋಸಿಸ್ ಜತೆಗಿನ ಪ್ರಮುಖ ಗುತ್ತಿಗೆ ಒಪ್ಪಂದವನ್ನು ರದ್ದುಗೊಳಿಸಿದ್ದು, ಇದರಿಂದ ಭಾರತದಲ್ಲಿನ ಮೂರು ಸಾವಿರ ಇನ್ಫೋಸಿಸ್ ಉದ್ಯೋಗಿಗಳ ಕೆಲಸಕ್ಕೆ ಸಂಚಕಾರ ಬರುವ ಸಾಧ್ಯತೆಗಳಿವೆ.
ಇನ್ಫೋಸಿಸ್ ಟೆಕ್ಕಿಗಳ ಕೆಲಸಕ್ಕೆ ಸಂಚಕಾರದ ಜತೆಗೆ ಸಂಸ್ಥೆಯ ಆದಾಯದ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಒಪ್ಪಂದ ರದ್ದತಿಯಿಂದಾಗಿ ಇನ್ಫೋಸಿಸ್ ವಾರ್ಷಿಕ 4 ರಿಂದ 5 ಕೋಟಿ ಡಾಲರ್ ಆದಾಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.
2013ರ ಸೆಪ್ಟೆಂಬರ್ ನಲ್ಲಿ ಐಬಿಎಂ ಮತ್ತು ಇನ್ಫೋಸಿಸ್ ಕಂಪನಿಗಳು ಆರ್ಬಿಎಸ್ ಜತೆ ಒಪ್ಪಂದ ಮಾಡಿಕೊಂಡಿದ್ದವು. ಕಂಪ್ಯೂಟರ್ ಸಿಸ್ಟಮ್ ಅಭಿವೃದ್ಧಿ ಪಡಿಸುವ ಸಂಬಂಧ 2.500 ಕೋಟಿ ರುಪಾಯಿ ಮೊತ್ತದ ಯೋಜನೆಯನ್ನು ಪಡೆದಿದ್ದವು. ಇದರಲ್ಲಿ ಇನ್ಫೋಸಿಸ್ ಸಂಸ್ಥೆ ಅಗ್ರಪಾಲು ಪಡೆದಿತ್ತು.
ಇನ್ನು ಇನ್ಫೋಸಿಸ್ ನ ಪ್ರಮುಖ ಗ್ರಾಹಕ ಆರ್ಬಿಎಸ್ ದೂರವಾಗಿರುವುದು ಇನ್ಫೋಸಿಸ್ ಷೇರುಗಳ ಮೇಲೆ ಮಂಗಳವಾರ ನಕಾರಾತ್ಮಕ ಪ್ರಭಾವ ಬೀರಿವೆ.