

ಮುಂಬೈ: ಬಜೆಟ್ ಮಂಡನೆ ಬಳಿಕ ಕುಸಿತಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ಚೇತರಿಸಿಕೊಂಡಿದ್ದು, ಸೆನ್ಸೆಕ್ಸ್ ಬರೊಬ್ಬರಿ 500 ಅಂಕಗಳ ಏರಿಕೆ ಕಂಡಿದೆ.
ನಿನ್ನೆ 2016 ಮತ್ತು 17 ನೇ ಸಾಲಿನ ಬಜೆಟ್ ಮಂಡಿಸಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಉದ್ಯಮ ವಲಯ ನಿರೀಕ್ಷಿಸಿದ ಮಟ್ಟದಲ್ಲಿ ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದ ಹಿನ್ನಲೆಯಲ್ಲಿ ಹಿನ್ನಡೆಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ಮತ್ತೆ ಚೇತರಿಸಿಕೊಂಡಿದ್ದು, ಬೆಳಗಿನ ವಹಿವಾಟಿನಲ್ಲಿ ಬರೊಬ್ಬರಿ 500 ಅಂಕಗಳ ಏರಿಕೆ ಕಂಡಿದೆ. ಆರ್ ಬಿಐ ದರ ಕಡಿತ ನಿರೀಕ್ಷೆ ಮತ್ತು ಏಷ್ಯನ್ ಮಾರುಕಟ್ಟೆಯ ಸಕಾರಾತ್ಮಕ ವಹಿವಾಟು ಭಾರತೀಯ ಷೇರುಮಾರುಕಟ್ಟೆಯ ಹೂಡಿಕೆದಾರರ ಮೇಲೆ ಪರಿಣಾಮ ಬೀರಿದ್ದು, ಸೆನ್ಸೆಕ್ಸ್ ಏರಿಕೆಗೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬಜೆಟ್ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಹೂಡಿಕೆದಾರರು ಇದೀಗ ಅದೇ ನಿರೀಕ್ಷೆಯನ್ನು ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಮೇಲೆ ಇಟ್ಟಿದ್ದು, ಮುಂದೆ ಅವರು ಪ್ರಕಟಿಸಲಿರುವ ವಿತ್ತೀಯ ನೀತಿ ಕುರಿತು ಈಗಾಗಲೇ ಸಾಕಷ್ಚು ನಿರೀಕ್ಷೆಗಳು ಗರಿಗೆದರಿವೆ. ಇದೇ ನಿರೀಕ್ಷೆಯಲ್ಲಿ ಇಂದು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಸಕಾರಾತ್ಮಕವಾಗಿ ಸ್ಪಂದಿಸಿದ ಪರಿಣಾಮ ಸೆನ್ಸೆಕ್ಸ್ 500 ಅಂಕಗಳ ಏರಿಕೆ ಕಾಣುವ ಮೂಲಕ 23,400ನ್ನು ಮೀರಿ ವಹಿವಾಟು ಮಾಡುತ್ತಿದೆ.
ಇನ್ನು ನಿಫ್ಟಿಯಲ್ಲಿ ಕೂಡ 134 ಅಂಕಗಳ ಏರಿಕೆ ಕಂಡುಬಂದಿದ್ದು, 7 ಸಾವಿರ ಗಡಿ ದಾಟಿ ಪ್ರಸ್ತುತ 7,100 ಅಂಕಗಳ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಪ್ರಮುಖವಾಗಿ ಬ್ಯಾಂಕಿಂಗ್ ವಲಯ, ಐಟಿ, ರಿಯಾಲಿಟಿ ವಲಯ, ತಂತ್ರಜ್ಞಾನ ಮತ್ತು ಬಂಡವಾಳ ಸರಕುಗಳ ವಲಯದ ಷೇರುಗಳ ಮೌಲ್ಯದಲ್ಲಿ ಶೇ.3.39ರಷ್ಟು ಏರಿಕೆ ಕಂಡುಬಂದಿದೆ.