

ಮುಂಬೈ: ಕಳೆದ ಕೆಲವು ದಿನಗಳಿಂದ ಏರಿಕೆಯನ್ನು ಮುಂದುವರೆಸಿರುವ ಚಿನ್ನ ಮತ್ತು ಬೆಳ್ಳಿ ಬುಧವಾರವೂ ಹೂಡಿಕೆದಾರರನ್ನು ಹೆಚ್ಚು ಆಕರ್ಷಿಸಿದೆ. ಇಲ್ಲಿನ ಚಿನಿವಾರ ಪೇಟೆಯ ವಹಿವಾಟಿನಲ್ಲಿ ಪ್ರತಿ ಹತ್ತು ಗ್ರಾಂ ಸ್ಟಾಂಡರ್ಡ್ ಚಿನ್ನದ ದರ ರು.285 ಏರಿಕೆ ಕಂಡು ರು.26,730ಕ್ಕೆ ತಲುಪಿತು.
ಬೆಳ್ಳಿ ಪ್ರತಿ ಕೆಜಿ ದರ ರು.620 ಏರಿಕೆಯೊಂದಿಗೆ ರು.35,385ಕ್ಕೆ ತಲುಪಿತು. ರುಪಾಯಿ ಮೌಲ್ಯ ದಿನೇ ದಿನೇ ಇಳಿಮುಖ ಕಾಣುತ್ತಿರುವುದರಿಂದ ಮತ್ತು ಬರಲಿರುವ ಮದುವೆ ಸೀಸನ್ ನಲ್ಲಿ ಹೆಚ್ಚಿನ ಬೇಡಿಕೆ ಬರಲಿದೆ ಎಂಬ ನಿರೀಕ್ಷೆಗಳ ಮೇರೆಗೆ ದಾಸ್ತಾನುಗಾರರು ಹೆಚ್ಚು ಖರೀದಿಯಲ್ಲಿ ತೊಡಗಿದ್ದರು. ಪ್ರಸಕ್ತ ವರ್ಷದ ಆರಂಭದಿಂದಲೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಪೇಟೆಯಲ್ಲಿ ತೊಡಗಿಸಿದ್ದ ಬಂಡವಾಳ ಹಿಂಪಡೆಯುತ್ತಿರುವುದರಿಂದ ವಹಿವಾಟು ಭಾರಿ ಏರಿಳಿತದಿಂದ ಕೂಡಿದೆ.
ಇದರಿಂದ ಭೀತಿಗೊಂಡಿರುವ ದೇಶೀಯ ಹೂಡಿಕೆದಾರರು ಚಿನಿವಾರು ಪೇಟಿಯತ್ತ ಮುಖ ಮಾಡಿದ್ದಾರೆ. ಚಿನ್ನ ಮತ್ತು ಬೆಳ್ಳಿ ದರಗಳು ನಿರಂತರವಾಗಿ ಏರಿಕೆ ಕಾಣುತ್ತಿರುವುದು ಸ್ಥಳೀಯ ಹೂಡಿಕೆದಾರರಲ್ಲಿ ಭರವಸೆ ತುಂಬಿದೆ. ಇದರಿಂದ ಅವರು ಸಣ್ಣ ಸಣ್ಣ ಪ್ರಮಾಣದಲ್ಲಿ ಲೋಹವನ್ನು ಶೇಖರಿಸಿಡುವಲ್ಲಿ ತೊಡಗಿದ್ದಾರೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.