ನ್ಯೂಯಾರ್ಕ್: ಸಾಮಾಜಿಕ ಅಂತರ್ಜಾಲ ಮಾಧ್ಯಮ ದೈತ್ಯ ಫೇಸ್ಬುಕ್ ಮೂರನೇ ತ್ರೈಮಾಸಿಕದಲ್ಲಿ 7 ಬಿಲಿಯನ್ ಡಾಲರ್ ಆದಾಯ ಘೋಷಿಸಿದೆ. ಸೆಪ್ಟೆಂಬರ್ 2016 ರ ವೇಳೆಗೆ ದಿನಂಪ್ರತಿ ಬಳಕೆದಾರವೂರ ಸಂಖ್ಯೆ 1.18 ಬಿಲಿಯನ್ ಇದ್ದು, ವರ್ಷದಿಂದ ವರ್ಷಕ್ಕೆ ಇದು 17% ವೃದ್ಧಿಸಿದೆ ಎಂದು ತಿಳಿಸಿದೆ.
ಮೂರನೇ ತ್ರೈಮಾಸಿಕದ ಒಟ್ಟು ಆದಾಯದಲ್ಲಿ ಮೊಬೈಲ್ ಜಾಹಿರಾತಿನ ಪಾಲೇ 84% ಇದೆ ಎಂದು ಸಂಸ್ಥೆ ತಿಳಿಸಿದೆ. ಇದು 2015 ರ ಮೂರನೇ ತ್ರೈಮಾಸಿಕದಲ್ಲಿ 78% ಇತ್ತು.
"ನಾವು ಮತ್ತೊಂದು ಒಳ್ಳೆಯ ತ್ರೈಮಾಸಿಕವನ್ನು ಕಂಡಿದ್ದೇವೆ. ನಮ್ಮ ಆಪ್ ಗಳಲ್ಲಿ ವಿಡಿಯೋ ಮುಂಚೂಣಿಗೆ ತರುವ ಕೆಲಸದಲ್ಲಿ ಪ್ರಗತಿ ಕಾಣುತ್ತಿದ್ದೇವೆ ಮತ್ತು 10 ವರ್ಷದ ತಂತ್ರಜ್ಞಾನದ ನೀಲಿನಕ್ಷೆಯನ್ನು ಸರಿಯಾಗಿ ನಿರ್ವಹಿಸುತ್ತಿದ್ದೇವೆ" ಎಂದು ಫೇಸ್ಬುಕ್ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಝಕರ್ಬರ್ಗ್ ಹೇಳಿಕೆ ನೀಡಿದ್ದಾರೆ.
"ಈ ಉತ್ತಮ ಆದಾಯದ ಹೊರತಾಗಿಯೂ ಫೇಸ್ಬುಕ್ ಷೇರು ಮೌಲ್ಯ 7.6% ಕುಸಿತ ಕಂಡಿದೆ" ಎಂದು ತಂತ್ರಜ್ಞಾನ ಮಾಧ್ಯಮವೊಂದು ಗುರುವಾರ ವರದಿ ಮಾಡಿದೆ.