ಮುಂಬೈ: ಸೈರಸ್ ಮಿಸ್ತ್ರಿ ಅವರನ್ನು ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಿದ್ದ ಟಾಟಾ ಸನ್ಸ್, ಇದೀಗ ಟಾಟಾ ಗ್ರೂಪ್ ನ ನಿರ್ದೇಶಕ ಹುದ್ದೆಯಿಂದಲೂ ವಜಾಗೊಳಿಸಲು ಫೆಬ್ರವರಿ 6ರಂದು ಷೇರುದಾರರ ಸಭೆ ಕರೆದಿದೆ.
ಟಾಟಾ ಸನ್ಸ್ ಅಕ್ಬೋಬರ್ 24ರಂದು ಸೈರಸ್ ಮಿಸ್ತ್ರಿ ಅವರನ್ನು ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಿತ್ತು. ಅಲ್ಲದೆ ಟಾಟಾ ಮೊಟಾರ್ಸ್ ಹಾಗೂ ಟಿಸಿಎಸ್ ಸೇರಿದಂತೆ ಟಾಟಾ ಗ್ರೂಪ್ ಇತರೆ ಕಂಪನಿಗಳಿಂದಲೂ ಮಿಸ್ತ್ರಿ ಅವರನ್ನು ಹೊರಹಾಕುವಂತೆ ಕೇಳಿಕೊಂಡಿತ್ತು. ಇದರ ಬೆನ್ನಲ್ಲೇ ಮಿಸ್ತ್ರಿ ಅವರು ಟಾಟಾ ಗ್ರೂಪ್ ನ ಆರು ಕಂಪನಿಗಳಿಗೆ ರಾಜಿನಾಮೆ ನೀಡಿದ್ದರು. ಆದರೆ ಟಾಟಾ ಸನ್ಸ್ ಮತ್ತು ಅದರ ಮಧ್ಯಂತರ ಅಧ್ಯಕ್ಷ ರತನ್ ಟಾಟಾ ಅವರ ವಿರುದ್ಧ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಮೆಟ್ಟಿಲೇರಿದ್ದಾರೆ.
ರತನ್ ಟಾಟಾ ಅವರ ವಿರುದ್ಧ ಎಂಟು ವಾರಗಳ ಕಾಲ ಬೋರ್ಡ್‌ರೂಂ ಸಮರದಲ್ಲಿ ತೊಡಗಿದ್ದ ಟಾಟಾ ಸೈರಸ್ ಮಿಸ್ತ್ರಿ ಅವರು ಕಳೆದ ಸೋಮವಾರ ಟಾಟಾ ಮೋಟಾರ್ಸ್ ಮತ್ತು ಇಂಡಿಯನ್ ಹೋಟೆಲ್ಸ್ ಸೇರಿದಂತೆ ಟಾಟಾ ಗ್ರೂಪ್ ನ ಆರು ಕಂಪನಿಗಳಿಗೆ ರಾಜಿನಾಮೆ ನೀಡಿ, ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದರು.
ಇದೇ ವೇಳೆ ತಮ್ಮನ್ನು ಪದಚ್ಯುತಗೊಳಿಸಿದ ನಂತರ ಮಧ್ಯಂತರ ಅಧ್ಯಕ್ಷರಾಗಿ ಮರಳಿ ಬಂದಿರುವ ರತನ್ ಟಾಟಾ ಅವರ ಯತ್ನವು ‘ಕಾನೂನುಬಾಹಿರ ಕ್ರಾಂತಿ’ ಎಂದು ಮಿಸ್ತ್ರಿ ಟೀಕಿಸಿದ್ದರು.