

ಹೈದರಾಬಾದ್: ಗುತ್ತಿಗೆ ಆಧಾರಿತ ಸ್ವಚ್ಛತಾ ವಲಯ ಇದೀಗ ಭಾರತದಲ್ಲಿ ನೂತನ ಉದ್ಯೋಗ ಮೂಲವಾಗಿ ಮಾರ್ಪಡುತ್ತಿದ್ದು, ಗುತ್ತಿಗೆ ಆಧಾರಿತ ಸ್ವಚ್ಛತಾ ವಲಯ ಪ್ರತೀ ವರ್ಷ ಶೇ.30ರಷ್ಟು ಪ್ರಗತಿ ಸಾಧಿಸುತ್ತಿದೆ. ಮೂಲಕ ಲಕ್ಷಾಂತರ ವಿದ್ಯಾವಂತ ಮತ್ತು ಅವಿಧ್ಯಾವಂತ ನಿರುದ್ಯೋಗಿಗಳಿಗೆ ಹೊಸ ಭರವಸೆಯಾಗಿ ಕಾಣಲಾರಂಭಿಸಿದೆ.
ಭಾರತದ ಅತ್ಯಂತ ವೇಗದ ಅಭಿವೃದ್ಧಿ ಹೊಂದಿರುವ ಔದ್ಯಮಿಕ ವಲಯಗಳಲ್ಲಿ ಗುತ್ತಿಗೆ ಆಧಾರಿತ ಸ್ವಚ್ಛತಾ ವಲಯ ಕೂಡ ಒಂದಾಗಿದ್ದು, ಮಾಲ್ ಗಳಲ್ಲಿ, ಕಚೇರಿಗಳಲ್ಲಿ, ಇತರೆ ವಾಣಿಜ್ಯ ಕಟ್ಟಡಗಳಲ್ಲಿ ಗುತ್ತಿಗೆ ಆಧಾರಿತ ಸ್ವಚ್ಛತಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎಂಬಂತಾಗಿದ್ದು, ಗುತ್ತಿಗೆ ಆಧಾರಿತ ಸ್ವಚ್ಛತಾ ವಲಯ ಇದೀಗ ಹೊಸ ಟ್ರೆಂಡ್ ಆಗಿ ಬದಲಾಗುತ್ತಿದೆ.
ಮೊದಲು ಶಾಪಿಂಗ್ ಮಾಲ್ ಗಳಿಗೆ ಸೀಮಿತವಾಗಿದ್ದ ಈ ಗುತ್ತಿಗೆ ಆಧಾರಿತ ಸ್ವಚ್ಛತಾ ಮಾದರಿ ಇದೀಗ ಕಚೇರಿಗಳಲ್ಲಿ, ವಾಣಿಜ್ಯ ಕಟ್ಟಡಗಳಲ್ಲಿ ಅಷ್ಟೇ ಏಕೆ ದೇಶದ ಪ್ರಮುಖ ದೇವಾಲಯಗಳಲ್ಲೂ ಸಾಮಾನ್ಯವಾಗಿ ಬಿಟ್ಟಿದೆ. ಅಂತೆಯೇ ಐಟಿ-ಬಿಟಿ ವಲಯ, ಅತಿಥಿ ಗೃಹಗಳು, ರೆಸ್ಟೋರೆಂಟ್ ಗಳು, ಅಂತಾರಾಷ್ಚ್ರೀಯ ಹೊಟೆಲ್ ಗಳು, ಆರೋಗ್ಯ, ಕೈಗಾರಿಕೆಗಳು ಮತ್ತು ಸರ್ಕಾರ ವಲಯದಲ್ಲೂ ಗುತ್ತಿಗೆ ಆಧಾರಿತ ಸ್ವಚ್ಛತಾ ಕಾರ್ಮಿಕರಿಗೆ ಭಾರಿ ಬೇಡಿಕೆ ಬರುತ್ತಿದೆ. ಇತ್ತೀಚೆಗೆ ಸರ್ಕಾರಿ ಕಚೇರಿಗಳ ಶುದ್ಧೀಕರಣಕ್ಕೂ ಹೊರಗುತ್ತಿಗೆ ಮೂಲಕ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಇದೂ ಕೂಡ ಹೊಸ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಈ ನೂತನ ಮಾದರಿಯಿಂದ ಲಕ್ಷಾಂತರ ಮಂದಿ ವಿದ್ಯಾಂವತ ಮತ್ತು ಅವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತಿದ್ದು, ಗುತ್ತಿಗೆ ಆಧಾರಿತ ಸ್ವಚ್ಛತಾ ವಲಯ ಇದೀಗ ನೂತನ ಉದ್ಯೋಗ ಮೂಲವಾಗಿ ಬದಲಾಗಿದೆ.
ಒಂದು ಮೂಲದ ಪ್ರಕಾರ ಗುತ್ತಿಗೆ ಆಧಾರಿತ ಸ್ವಚ್ಛತಾ ವಲಯ ಪ್ರತೀ ವರ್ಷ ಸುಮಾರು 2 ಸಾವಿರ ಕೋಟಿ ರು.ಗಳಷ್ಟು ವಹಿವಾಟು ನಡೆಸುತ್ತಿದೆಯಂತೆ. ದೇಶಾದ್ಯಂತ ಈ ವಲಯದಲ್ಲಿ ಸುಮಾರು 10 ಮಿಲಿಯನ್ ಗೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇಷ್ಟು ಸಾಲದ ಎಂಬಂತೆ ಇನ್ನು ಲಕ್ಷಾಂತರ ಕಾರ್ಮಿಕರಿಗೆ ಬೇಡಿಕೆ ಬರುತ್ತಿದೆ. ಈ ಅಂಕಿ ಅಂಶವೇ ಈ ವಲಯದ ಅಭಿವೃದ್ಧಿಗೆ ಹಿಡಿದ ಕನ್ನಡಿಯಾಗಿದ್ದು, ಸ್ವಚ್ಛತಾ ವಲಯದ ಪ್ರಸ್ತುತತೆಯನ್ನು ವಿವರಿಸುತ್ತದೆ.
ಈ ಬಗ್ಗೆ ಮಾತನಾಡಿರುವ ಮೆಕ್ಲೀನ್ ಸಂಸ್ಥೆಯ ವ್ಯಾಪಾರ ಅಭಿವೃದ್ಧಿ ವ್ಯವಸ್ಥಾಪಕ ಮೂರ್ತಿ ಎ ಎಲ್ ಎನ್ ಅವರು, ಇತ್ತೀಚಿನ ದಿನಗಳಲ್ಲಿ ಸ್ವಚ್ಛತಾ ಕಾರ್ಯಕ್ಕಾಗಿ ಓರ್ವ ಕಾರ್ಮಿಕನನ್ನು ನೇಮಿಸಿಕೊಳ್ಳುವುದು ನಿಜಕ್ಕೂ ಕಷ್ಟದ ಕೆಲಸವೇ ಸರಿ..ಇದೇ ಕಾರಣಕ್ಕೆ ಮಾಲ್ ಗಳು, ಕಚೇರಿಗಳು ಮತ್ತು ಇತರೆ ವಾಣಿಜ್ಯ ಕಟ್ಟಡಗಳ ಮಾಲೀಕರು ಹೊರಗಡೆಯಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ಕರೆತರುತ್ತಾರೆ. ಕಚೇರಿಯ ಸಂಪೂರ್ಣ ಸ್ವಚ್ಛತಾ ಕಾರ್ಯ ಗುತ್ತಿಗೆ ಸ್ವಚ್ಛತಾ ಕಾರ್ಮಿಕರ ಜವಾಬ್ದಾರಿಯಾಗಿದ್ದು, ಅದಕ್ಕೆ ಬೇಕಾಗುವ ಎಲ್ಲ ರೀತಿಯ ಪರಿಕರಗಳನ್ನು ಕಾರ್ಮಿಕರ ಸಂಸ್ಥೆಯೇ ನೀಡಬೇಕಾಗುತ್ತದೆ. ಇದರಿಂದ ಕಟ್ಟಡದ ಮಾಲೀಕರ ದೊಡ್ಡ ತಲೆನೋವು ತಪ್ಪುತ್ತದೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲ ಕಟ್ಟಡ ಮಾಲೀಕರು ಹಾಗೂ ಕಚೇರಿಗಳು ಹೊರ ಗುತ್ತಿಗೆ ಮೂಲಕ ಸ್ವಚ್ಛತಾ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಗುತ್ತಿಗೆ ಆಧಾರಿತ ಸ್ವಚ್ಛತಾವಲಯ ಹೊಸ ಔದ್ಯಮಿಕ ಮೂಲವಾಗಿ ಮಾರ್ಪಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೆಕ್ಲೀನ್ ಸಂಸ್ಥೆ ಗೂಗಲ್, ಟಿಸಿಎಸ್, ನೋವೊಟೆಲ್ ಹೊಟೆಲ್ ಸಮೂಹ, ಐಟಿಸಿ ಹೊಟೆಲ್ ಸಮೂಹ, ಡಾ.ರೆಡ್ಡೀಸ್ ಹಾಗೂ ಇತರೆ ಪ್ರಮುಖ ಸಂಸ್ಥೆಗಳಿಗೆ ಹೊರ ಗುತ್ತಿಗೆ ಮೂಲಕ ಸ್ವಚ್ಛತಾ ಕಾರ್ಮಿಕರನ್ನು ಪೂರೈಕೆ ಮಾಡುತ್ತಿದೆ.
ಒಟ್ಟಾರೆ ಕೆಲಸ ಇಲ್ಲ...ನಾನು ಅವಿದ್ಯಾವಂತ ಎಂದು ನೊಂದು ಕೊಳ್ಳುವ ಮಂದಿಗೆ ಸ್ವಚ್ಛತಾ ವಲಯ ಕೈಬೀಸಿ ಕರೆಯುತ್ತಿದೆ. ಕೆಲಸ ಮಾಡುವ ಮನಸಿದ್ದರೆ ಸಾಕು.. ಕೆಲಸ ಯಾವುದಾದರೇನು..?
Advertisement