

ಮುಂಬೈ: ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿರುವಂತೆಯೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಚೇತೋಹಾರಿ ವಹಿವಾಟು ನಡೆಯುತ್ತಿದ್ದು, ಬುಧವಾರವೂ ಸಹ ಮಾರುಕಟ್ಟೆ ಆರಂಭದಲ್ಲೇ ಸೆನ್ಸೆಕ್ಸ್ 176 ಅಂಕಗಳ ಏರಿಕೆ ಕಂಡಿದೆ.
ಮಧ್ಯಾಹ್ನದ ಹೊತ್ತಿಗೆ ಸೆನ್ಸೆಕ್ಸ್ 176.99 ಅಂಕಗಳ ಏರಿಕೆಯೊಂದಿಗೆ 27,552.57 ಅಂಕಗಳಿಗೇರಿದ್ದು, ನಿಫ್ಟಿ ಕೂಡ 75.50 ಅಂಕಗಳ ಏರಿಕೆಯೊಂದಿಗೆ 8,551.30 ಅಂಕಗಳಿಗೆ ಏರಿಕೆಯಾಗಿದೆ. ಪ್ರಮುಖವಾದಿ ಏಷ್ಯನ್ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ವಹಿವಾಟು ಮುಂದುವರಿಕೆಯೇ ಭಾರತೀಯ ಷೇರುಮಾರುಕಟ್ಟೆ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದ್ದು, ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಭಾರತೀಯ ಮಾರುಕಟ್ಟೆಯಲ್ಲಿ ಚೇತೋಹಾರಿ ವಹಿವಾಟು ಕಂಡುಬರುತ್ತಿದೆ.
ನಿಫ್ಟಿ ಮತ್ತು ಸೆನ್ಸೆಕ್ಸ್ ಎರಡೂ ಏರಿಕೆಯಾಗುವುದರೊಂದಿಗೆ 11 ತಿಂಗಳ ಹಿಂದಿನ ಗರಿಷ್ಟ ಮಟ್ಟಕ್ಕೆ ಮಾರುಕಟ್ಟೆ ತಲುಪಿದೆ. ಇನ್ನು ಇಂದಿನ ವಹಿವಾಟಿನಲ್ಲಿ ಅಲ್ಟ್ರಾಟೆಕ್ ಸಿಮೆಂಟ್, ಐಡಿಯಾ ಸೆಲ್ಯುಲಾರ್ ಸಂಸ್ಥೆ ಮತ್ತು ಟಾಟಾ ಪವರ್ ಸಂಸ್ಥೆಗಳಿಗೆ ಹೆಚ್ಚಿನ ಲಾಭಾಂಶ ಕಂಡುಬಂದಿದೆ. ಇದಲ್ಲದೆ ಎಚ್ ಡಿಎಫ್ ಸಿ, ಟಾಟಾ ಸ್ಟೀಲ್, ಎಕ್ಸಿಸ್ ಬ್ಯಾಂಕ್, ಅದಾನಿ ಸಮೂಹ ಮತ್ತು ಒಎನ್ ಜಿಸಿ ಸಂಸ್ಥೆಗಳ ಷೇರುಗಳ ಮೌಲ್ಯ ಏರಿಕೆಯಾಗಿದ್ದು, ಭಾರ್ತಿ ಏರ್ಟೆಲ್, ರಿಲಯನ್ಸ್, ವಿಪ್ರೊ ಮತ್ತು ಇನ್ಫೋಸಿಸ್ ಸಂಸ್ಥೆಗಳ ಷೇರುಗಳ ಮೌಲ್ಯದಲ್ಲಿ ಕುಸಿತವಾಗಿದೆ.