
ಬೆಂಗಳೂರು: ಹೆಸರಾಂತ ಸಾಫ್ಟ್ವೇರ್ ಕಂಪನಿ ಇನ್ಫೋಸಿಸ್ ನ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ತಪ್ಪು ಮಾಡಿದೆ ಎಂದು ಸಂಸ್ಥೆಯ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.
ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಹೇಳಿಕೊಂಡಿರುವ ನಾರಾಯಣ ಮೂರ್ತಿ ಅವರು, "2014ರಲ್ಲಿ ಕಂಪನಿಯನ್ನು ಬಿಡುವಾಗ ನನ್ನ ಜತೆಗಿದ್ದ ಸಹ ಸಂಸ್ಥಾಪಕರು ತಾವು ಕಂಪನಿ ಬಿಡುವುದನ್ನು ಸುತರಾಂ ಒಪ್ಪಿರಲಿಲ್ಲ. ಕಂಪನಿ ಅಧ್ಯಕ್ಷ ಸ್ಥಾನವನ್ನು ಸದ್ಯಕ್ಕೆ ಬಿಟ್ಟುಕೊಡಬೇಡಿ ಎಂದು ಆಗ ಕೋರಿದ್ದರು. ಆದರೆ ಆ ಸಂದರ್ಭದಲ್ಲಿ ನಾನು ಅವರ ಮಾತು ಕೇಳಿರಲಿಲ್ಲ. ಆದರೆ ಈಗ ನಾನು ಅವರ ಮಾತನ್ನು ಕೇಳಬೇಕಿತ್ತು. ಮತ್ತೊಂದಷ್ಟು ವರ್ಷಗಳ ಸಂಸ್ಥೆಯಲ್ಲಿ ಮುಂದುವರೆಯಬೇಕಿತ್ತು ಎಂದು ಹೇಳಿದ್ದಾರೆ.
"ಸ್ವಾಭಾವಿಕವಾಗಿ ನಾನೊಬ್ಬ ಭಾವನಾತ್ಮಕ ಜೀವಿ. ನನ್ನ ನಿರ್ಣಯಗಳು ಸಿದ್ಧಾಂತಗಳ ಆಧರಿತವಾಗಿರುತ್ತವೆ. ಬಹುಶಃ ನಾನು ಅಂದು ಅವರ ಮಾತು ಕೇಳಿದ್ದರೆ ಚೆನ್ನಾಗಿರುತ್ತಿತ್ತು" ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.
2014ರಲ್ಲಿ ಕಂಪನಿಯ ಅಧ್ಯಕ್ಷರಾಗಿ ಸ್ಥಾನನವನ್ನು ತ್ಯಜಿಸಿದ ನಾರಾಯಣ ಮೂರ್ತಿ ಅಕಾಲಿಕವಾಗಿ ಕಂಪನಿಯನ್ನು ತೊರೆದಿದ್ದರು. ಆದರೆ ಆ ಬಗ್ಗೆ ಕೇಳಿದಾಗಲೆಲ್ಲಾ ತನಗೆ ಯಾವುದೇ ಪಶ್ಚಾತಾಪವಿಲ್ಲ. ಯುವಪಡೆ ಕಟ್ಟಬೇಕು. ಯುವ ಪಡೆ ಮುಂಚೂಣಿಗೆ ಬರಬೇಕು ನಾರಾಯಣ ಮೂರ್ತಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಸಂಸ್ಥೆ ಸ್ಥಾಪನೆಯಾದ ದಿನದಿಂದ ಸುಮಾರು 33 ವರ್ಷ ಕಾಲ ಇನ್ಫೋಸಿಸ್ ಸಾಫ್ಟ್ವೇರ್ ಕಂಪನಿಯಲ್ಲಿ ಸೇವೆ ಸಲ್ಲಿಸಿದ್ದ ಮೂರ್ತಿ ಅವರ ರಾಜಿನಾಮೆ ವಿಚಾರ ವಾಣಿಜ್ಯ ಕ್ಷೇತ್ರದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಇನ್ಫೋಸಿಸ್ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ರಿತಿಕಾ ಸೂರಿ ರಾಜಿನಾಮೆ
ಏತನ್ಮಧ್ಯೆ ಇನ್ಫೋಸಿಸ್ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ರಿತಿಕಾ ಸೂರಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಸಂಸ್ಥೆಯ ಮುಖ್ಯಸ್ಥ ವಿಶಾಲ್ ಸಿಕ್ಕಾ ಅವರೊಂದಿಗೇ ಇನ್ಫೋಸಿಸ್ ಸಂಸ್ಥೆ ಸೇರಿಕೊಂಡ ರಿತಿಕಾ ಸೂರಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಸಂಸ್ಥೆಯಲ್ಲಿ ಕಾರ್ಯನಿರ್ವಾಹಕ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದ ರಿತಿಕಾ ಸೂರಿ ಅವರು ವಾರ್ಷಿಕ 5.1 ಕೋಟಿ ವೇತನ ಪಡೆಯುತ್ತಿದ್ದರು.
Advertisement